ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭಾಷೆ ಮಾನವ ಸಂಸ್ಕೃತಿಯ ಪ್ರತಿಬಿಂಬ. ಭಾಷೆ ಮಾನವನಿಗೆ ಮಾತ್ರ ನಿಲುಕುವ ಒಂದು ಸಂಕೀರ್ಣ ಸಂವಹನ ಮಾಧ್ಯಮ. ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳೂ ಶಬ್ದೋತ್ಪಾದನೆ ಮಾಡುತ್ತವೆ. ಇದನ್ನು ಸಂವಹನ ಎಂದು ಕರೆಯಬಹುದಾದರೂ ಭಾಷೆ ಎನ್ನಲಾಗುವುದಿಲ್ಲ. ಭಾಷೆ ಹೇಗೆ ಚಿಂತನಶೀಲವೂ ಹಾಗೆಯೇ ಚಲನಶೀಲವಾದುದು. ಪ್ರಪಂಚದಲ್ಲಿ ಸುಮಾರು ಏಳು ಸಾವಿರ ಭಾಷೆಗಳಿವೆ ಎಂದು ಭಾಷಾ ವಿಜ್ಞಾನಿಗಳು ಅಂದಾಜಿಸುತ್ತಾರೆ. ಇವುಗಳಲ್ಲಿ ಹಲವು ಸಹಸ್ರ ಭಾಷೆಗಳು ಕೇವಲ ಬಾಯಿಮಾತಿನ ಭಾಷೆಗಳಾಗಿ ಉಳಿದಿವೆ. ಎಷ್ಟೋ ಭಾಷೆಗಳು ಸ್ವಂತದಾದ ಲಿಪಿಯನ್ನು ಹೊಂದಿಲ್ಲ.
ಉದಾಹರಣೆಗೆ ಜಗತ್ತಿನಾದ್ಯಂತ ವ್ಯಾವಹಾರಿಕ ಭಾಷೆಯಾಗಿರುವ ಇಂಗ್ಲಿಷ್ ಸ್ವಂತ ಲಿಪಿಯನ್ನು ಹೊಂದಿಲ್ಲ. ಇಂಗ್ಲಿಷ್ ಭಾಷೆಯನ್ನು ರೋಮನ್ ಲಿಪಿಯಲ್ಲಿ ಬರೆಯಲಾಗುತ್ತದೆ. ಭಾರತೀಯ ಭಾಷೆಗಳಾದ ಸಂಸ್ಕೃತ, ಹಿಂದಿ, ಮರಾಠಿ, ಭೋಜಪುರಿ, ನೇಪಾಲಿ, ಮೈಥಿಲಿ ಮುಂತಾದ ಭಾಷೆಗಳಿಗಳೂ ಸ್ವಂತ ಲಿಪಿಯನ್ನು ಹೊಂದಿಲ್ಲ. ಈ ಎಲ್ಲ ಭಾಷೆಗಳನ್ನು ದೇವನಾಗರಿ ಲಿಪಿಯಲ್ಲಿ ಬರೆಯಲಾಗುತ್ತದೆ. ಭಾರತೀಯ ಉಪಖಂಡದ ಭಾಷಾ ಕುಟುಂಬಗಳಲ್ಲಿ ಮೂಲ ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಮುಖ್ಯ ಭಾಷೆಗಳಲ್ಲಿ ತುಳು ತನ್ನ ಸ್ವಂತದಾದ ಲಿಪಿಯನ್ನು ಹೊಂದಿದೆ. ತುಳು ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ ಎಂದು ಭಾಷಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ತುಳು ಲಿಪಿಯ ಪುನರುತ್ಥಾನಕ್ಕಾಗಿ ಬಹಳಷ್ಟು ಕಾರ್ಯಕ್ರಮಗಳು ತುಳುನಾಡು ಮಾತ್ರವಲ್ಲದೆ ದೇಶ ವಿದೇಶಗಳಲ್ಲಿ ನಡೆಯುತ್ತಿವೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನಮ್ಮ ತುಳುನಾಡ್ ಟ್ರಸ್ಟ್ (ರಿ) ಹಾಗೂ ಅನೇಕ ತುಳುಕೂಟ ಸಂಸ್ಥೆಗಳು ನಿರಂತರ ಕಾರ್ಯ ನಿರ್ವಹಿಸುತ್ತಿವೆ. ತುಳು ಭಾಷೆ, ಲಿಪಿಗಾಗಿ ಬಹಳಷ್ಟು ಮಹತ್ವದ ಸಂಶೋಧನೆ ಮಾಡಿದವರು ದಿವಂಗತ ಡಾ. ಪುಂಡೂರು ವೆಂಕಟರಾಜ ಪುಣಿಂಚತ್ತಾಯರು. ಅವರ ಅನಂತರ ತುಳು ಭಾಷೆಯ ಉನ್ನತಿಗಾಗಿ ಹಲವು ವ್ಯಕ್ತಿಗಳು ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿಯೂ ತುಳು ಭಾಷೆಯನ್ನೇ ಉಸಿರಾಡುತ್ತ ದುಡಿಯುತ್ತಿದ್ದಾರೆ. ಆ ಪಂಕ್ತಿಯಲ್ಲಿ ಎದ್ದು ಕಾಣುವ ಹೆಸರುಗಳಲ್ಲಿ ವಿದ್ಯಾಶ್ರೀ ಎಸ್. ಉಳ್ಳಾಲ ಅವರದ್ದು.
ತುಳುನಾಡಿನ ಚಾರಿತ್ರಿಕ ಹಾಗೂ ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಕ್ಷೇತ್ರ ಪಡುಮಲೆಯಲ್ಲಿ ಹುಟ್ಟಿ ಬೆಳೆದವರು. ವೀರ ರಾಣಿ ಅಬ್ಬಕ್ಕನ ನಾಡು ಉಳ್ಳಾಲಕ್ಕೆ ಪರಿಣಯದ ಮೂಲಕ ಪಯಣ ಮಾಡಿದವರು ವಿದ್ಯಾಶ್ರೀ. ಪಡುಮಲೆಯ ಸೇನೆರೆಮಜಲು ಲಕ್ಷ್ಮೀ ನಾರಾಯಣ ರೈ ಹಾಗೂ ಯಶೋಧ ರೈ ದಂಪತಿಗಳ ಪ್ರಥಮ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬಡಗನ್ನೂರು ಹಾಗೂ ಕುಂಬ್ರದ ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಪೂರೈಸಿದವರು. ಬೆಂಗಳೂರಿನ ವಿಜ್‌ಟೂನ್ಜ್ ಕಾಲೇಜ್ ಆಫ್ ಮೀಡಿಯಾ ಆಂಡ್ ಡಿಸೈನ್ ಎಂಬ ಸಂಸ್ಥೆಯಲ್ಲಿ ಬಿ.ಎಸ್.ಸಿ. ಇನ್ ಮಲ್ಟಿ ಮೀಡಿಯಾ ಟೆಕ್ನಾಲೊಜಿ ಸ್ನಾತಕ ಪದವಿಯನ್ನು ಪಡೆದವರು. ತುಳು ಭಾಷೆಯ ಮೇಲಿನ ಆಸ್ಥೆಯಿಂದಾಗಿ ಬೆಂಗಳೂರಿನ ಉದ್ಯೋಗವನ್ನು ಬಿಟ್ಟು ತುಳುನಾಡಿಗೆ ಹಿಂತಿರುಗಿದ ವಿದ್ಯಾಶ್ರೀ ಇವರದ್ದು ಅವಿರತ ಸಾಧನೆ ಎನ್ನುವುದಕ್ಕಿಂತಲೂ ಸಾಹಸ ಎನ್ನಬಹುದು. ಡಾ.ಎಸ್.ಆರ್. ವಿಘ್ನರಾಜ್ ಅವರ ಮಾರ್ಗದರ್ಶನದಲ್ಲಿ ತುಳು ಲಿಪಿಯ ಅಧ್ಯಯನವನ್ನು ಕೈಗೊಂಡು ಒಂದೆರಡು ದಿನಗಳಲ್ಲಿಯೇ ನಿರರ್ಗಳವಾಗಿ ಓದಲು ಬರೆಯಲು ಕಲಿತವರು. ಅನ್ಯರಿಗೆ ಕಲಿಸುವ ಸದುದ್ದೇಶದಿಂದ ತುಳುನಾಡಿನ ಅನೇಕ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಲಿಕಾ ಕಾರ್ಯಗಾರಗಳನ್ನು ನಡೆಸುತ್ತ ಬಂದರು.
2013ರಲ್ಲಿ ಸುಮಾರು ಎಂಬತ್ತು ಕಿಲೋಮೀಟರ್ ದೂರದ ಪಡುಮಲೆಯಿಂದ ಮಂಗಳೂರಿನ ಲಾಲ್‌ಬಾಗ್‌ನಲ್ಲಿರುವ ತುಳು ಅಕಾಡೆಮಿಗೆ ಹಾಗೂ 2014ರಲ್ಲಿ ಉಳ್ಳಾಲದಿಂದ ಕಾರ್ಕಳಕ್ಕೆ ಬಂದು ಹೋಗುತ್ತ ತುಳು ಲಿಪಿಯನ್ನು ಕಲಿಸಿದ್ದಾರೆ. 2015 ರಲ್ಲಿ ತನ್ನ ಎರಡು ತಿಂಗಳ ಮಗುವನ್ನು ತನ್ನ ತಾಯಿಯ ಕೈಗೊಪ್ಪಿಸಿ ಹತ್ತು ವಾರದ ಕಾರ್ಯಾಗಾರವನ್ನು ನಡೆಸಿಕೊಟ್ಟ ದಿಟ್ಟೆ ವಿದ್ಯಾಶ್ರೀ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಾಗೂ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಕಾರ್ಯಾಗಾರ ನಡೆಸಿ ತುಳು ಲಿಪಿಯನ್ನು ಕಲಿಸಿದರು.
ಮೊತ್ತ ಮೊದಲಿಗೆ ತುಳು ಲಿಪಿಯಲ್ಲಿ ’ತುಳುವೆರೆನ ಕಾಲಕೊಂದೆ’ ಎನ್ನುವ ಕ್ಯಾಲೆಂಡರ್ ತಯಾರಿಸಿದ ಸಾಹಸಿ ಹಾಗೂ ಸಾಧಕಿ ವಿದ್ಯಾಶ್ರೀ. 2014 ಮತ್ತು 2015ರಲ್ಲಿ ಫೇಸ್ಬುಕಲ್ಲಿ ಹಾಕಿ, 2016 ರಿಂದ ಮುದ್ರಿಸಿ ತುಳುನಾಡಿಗೆ ಪಸರಿಸುವಂತೆ ಮಾಡಿದವರು. 2016ರಿಂದ ’ತುಳು ಲಿಪಿಟ್ ಎನ್ನ ಪುರ್ದ’ (ತುಳು ಲಿಪಿಯಲ್ಲಿ ನನ್ನ ಹೆಸರು) ಎಂಬ ಅಭಿಯಾನವನ್ನು ಪ್ರಾರಂಭಿಸಿದವರು. ಐದು ವರ್ಷದ ಮಕ್ಕಳಿಂದ ಎಂಬತ್ತೈದು ವರ್ಷದ ಹಿರಿಯರಿಗೆ ತುಳು ಲಿಪಿಯನ್ನು ಕಲಿಸಿದ ಕೀರ್ತಿ ವಿದ್ಯಾಶ್ರೀ ಅವರದ್ದು. ವಿದ್ಯಾಶ್ರೀ ಅವರು ನಡೆಸಿಕೊಟ್ಟ ’ತುಳು ಭಾಷೆದ ವೈವಿಧ್ಯೊಲು’ ಎಂಬ ಭಾಷಣ ಮಂಗಳೂರು ಆಕಾಶವಾಣಿಯಿಂದ ಬಿತ್ತರಗೊಂಡು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಅಪಾರ ಜನಮನ್ನಣೆ ಪಡೆದಿದೆ. ಕನ್ನಡ ಪ್ರತಿಲಿಪಿ ಎಂಬ ಸ್ವ ಪ್ರಕಾಶನ ಸಂಸ್ಥೆಯು ತನ್ನ ಡಿಜಿಟಲ್ ಆ್ಯಪ್‌ನಲ್ಲಿ ತುಳು ಭಾಷೆಗೆ ಹೊಸ ವಿಭಾಗವನ್ನು ಸೃಜಿಸಿಕೊಡುವಲ್ಲಿ ವಿದ್ಯಾಶ್ರೀ ಅವರ ದುಡಿತವಿದೆ. ನಮ್ಮ ತುಳುನಾಡ್ ಟ್ರಸ್ಟ್ (ರಿ) ಇದರ ಮಹತ್ವಾಕಾಂಕ್ಷೆಯ ಸಮಗ್ರ ತುಳುನಾಡ್ ದಾಖಲಿಕರಣ ಎಂಬ ಮಹತ್ವದ ಯೋಜನೆಯ ಮುಂದಾಳುತ್ವವನ್ನು ವಹಿಸಿಕೊಂಡು ಕಾರ್ಯನಿರತರಾದವರು ವಿದ್ಯಾಶ್ರೀ. ಈ ಯೋಜನೆಯ ಅಂಗವಾಗಿ ಪ್ರತಿಷ್ಠಿತ ತುಳುವರಾದ ಡಾ. ಬಿ.ಆರ್. ಶೆಟ್ಟಿ, ಡಾ. ಪಾಲ್ತಾಡಿ ರಾಮಕೃಷ್ಣ ಆರ್ಚಾ, ಡಾ. ಅಮೃತ ಸೋಮೇಶ್ವರ, ಹರಿಕೃಷ್ಣ ಪುನರೂರು, ಅಂಗಡಿಮಾರು ಕೃಷ್ಣ ಭಟ್, ಡಾ.ಬಿ.ಕೆ. ಗಣೇಶ್ ರೈ ಮುಂತಾದವರ ಸಂದರ್ಶನ ಮಾಡಿದ ನೆಗಳ್ತೆಗೆ ಪಾತ್ರರಾಗಿದ್ದಾರೆ. ತುಳು ಭಾಷೆ ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಎಂಬ ಹೋರಾಟದ ಮುಂಚೂಣಿಯಲ್ಲಿರುವವರು ವಿದ್ಯಾಶ್ರೀ. 2017 ರಿಂದ 2019ರವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ದುಡಿದ ಅನುಭವಿ.
ತುಳು ನಾಡು ನುಡಿಯ ಸಲುವಾಗಿ ಹೋರಾಡಲು ’ಸ್ವತಂತ್ರ ತುಳುನಾಡು’ ಎಂಬ ಪಕ್ಷ ರಚಿಸಿ (ನೋಂದಾವಣೆ ಆಗದೇ ಇದ್ದ ಕಾರಣ) ಪಕ್ಷೇತರ ಅಭ್ಯರ್ಥಿಯಾಗಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದವರು. ಆ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಚುರುಕು ಮುಟ್ಟಿಸಿದವರು. ತುಳು ಭಾಷೆಯು ತನ್ನ ಸ್ವಂತ ಲಿಪಿಯಲ್ಲಿ ಸಾಹಿತ್ಯದ ತೇರನ್ನೇರಿ ಮೆರೆಯಬೇಕು. ಅದನ್ನು ನೋಡಿ ಧನ್ಯಳಾಗಬೇಕು ಎನ್ನುವ ವಿದ್ಯಾಶ್ರೀ ಅವರು ಸಾಹಿತ್ಯದ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸುತ್ತ ಬಂದವರು. ತುಳು, ಕನ್ನಡ, ತೆಲುಗು ಭಾಷೆಗಳಲ್ಲಿ ಕಥನ, ಕವನ, ನಾಟಕ, ಕಾದಂಬರಿಗಳನ್ನು ಬರೆದಿದ್ದಾರೆ. ’ಉಡಲ ದುನಿಪು’ ಎಂಬ ತುಳು ಕಾದಂಬರಿಯನ್ನು ರಚಿಸಿದ್ದಾರೆ. ಇದು ಪ್ರತಿಲಿಪಿಯಲ್ಲಿ ಪ್ರಕಟಗೊಂಡಿದೆ. ಫಾಲ್ಗುಣಿ, ದಂಡಯಾತ್ರೆ, ಅಮ್ಮನ ರೂಪು ಅತ್ತಿಗೆ (ಎಆರ್’ಎ) ಎಂಬ ಕಾದಂಬರಿಗಳನ್ನು ಬರೆಯುತ್ತಿದ್ದಾರೆ. ಸಾಹಿತಿ ಪ್ರಭಾಕರ್ ನೀರು ಮಾರ್ಗ ಅವರ ’ಕಾರ್ಣಿಕ’ ಕಾದಂಬರಿಯನ್ನು ತುಳುವಿಗೆ ಅನುವಾದಿಸಿದ್ದಾರೆ. ತೆಲುಗಿನಲ್ಲಿ ’ಗೋದಾವರಿ’ ಎಂಬ ಕಾದಂಬರಿ ಬರೆಯುತ್ತಿದ್ದಾರೆ. ತುಳು, ಕನ್ನಡ, ಮಲೆಯಾಳಿ, ಹಿಂದಿ, ಇಂಗ್ಲಿಷ್, ಸಂಸ್ಕೃತ, ತಮಿಳು, ತೆಲುಗು ಭಾಷೆಗಳಲ್ಲಿ ವ್ಯವಹರಿಸುವ ಪ್ರೌಢಿಮೆಯನ್ನು ರೂಢಿಸಿಕೊಂಡಿದ್ದಾರೆ. ವಿದ್ಯಾಶ್ರೀ ಅವರು ಹಲವು ಯೋಜನೆಗಳ ಕನಸನ್ನು ನನಸಾಗಿಸಲು ಅವಿರತ ದುಡಿಯುತ್ತಿದ್ದಾರೆ. ಡಿ.ವಿ.ಜಿ. ಅವರ ಮಂಕುತಿಮ್ಮನ ಕಗ್ಗ, ಅಬ್ದುಲ್ ಕಲಾಂ ಅವರ ವಿಂಗ್ಸ್ ಆಫ್ ಫೈರ್ ಕೃತಿಗಳನ್ನು ತುಳುವಿಗೆ ಭಾಷಾಂತರಿಸುವ ಯೋಜನೆಗಳನ್ನು ಹಾಕಿಕೊಂಡಿದ್ದಾರೆ. ಕೋವಿಡ್ 19ರ ಲಾಕ್ ಡೌನ್ ಸಮಯದಲ್ಲಿ ಬಲೇ ತುಳು ಲಿಪಿ ಕಲ್ಪುಗ ಅಭಿಯಾನವನ್ನು ಸಾದರಪಡಿಸಿದ ತಂಡದ ಸದಸ್ಯರಲ್ಲಿ ವಿದ್ಯಾಶ್ರೀ ಒಬ್ಬರು. ಕೊಲ್ಲಿ ರಾಷ್ಟ್ರದ ಮಸ್ಕತ್ ನಿಂದ ಹಿಡಿದು ನಮ್ಮ ದೇಶದ ಹಲವು ನಗರಗಳ ತುಳುವರಿಗೆ ವಾಟ್ಸಪ್ ಮೂಲಕ ಈ ಅಭಿಯಾನದಲ್ಲಿ ತುಳು ಲಿಪಿಯನ್ನು ಕಲಿಸಲಾಗಿದೆ.
ಕಂದಿಲು, ಸರವುದ ಪೊದಿಕೆ, ಪರಿಯಾಪ್ತ ಸೇರಿದಂತೆ ಹಲವು ತುಳು ಕನ್ನಡ ಕೃತಿಗಳ ಕರಡು ಪ್ರತಿಗಳನ್ನು ತಿದ್ದಿದ್ದಾರೆ. ತುಳು ಲಿಪಿಯ ಮಾದಿರ, ಪನಿಮುತ್ತುಮಾಲೆ ಕೃತಿಗಳ ಡಿಟಿಪಿಯನ್ನು ಮಾಡಿದ್ದಾರೆ. ವಿಶ್ವ ತುಳು ಸಮ್ಮೇಳನ ದುಬೈ ಇದರ ಸ್ಮರಣ ಸಂಚಿಕೆ ’ತುಳು ಐಸಿರಿ’ಯ ಯಶಸ್ಸಿನ ನೇಪಥ್ಯದಲ್ಲಿಯೂ ದುಡಿದಿದ್ದಾರೆ. ಪ್ರಕೃತಿ ಛಾಯಾಗ್ರಹಣ, ಪರಿಸರ ಪ್ರೇಮ, ಜ್ಯೋತಿಷ್ಯ ಶಾಸ್ತ್ರ ಕಲಿಕೆ ಮುಂತಾದವುಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ಸಾಧಿಸಿದ್ದು ಸಾಸಿವೆಯಷ್ಟು, ಸಾಧಿಸಲಿಕ್ಕಿರುವುದು ಸಾಗರದಷ್ಟು ಎಂದು ವಿನಮ್ರವಾಗಿ ನುಡಿಯುವ ವಿದ್ಯಾಶ್ರೀ ಅವರು ಭಾಷಾ ತಜ್ಞ, ಸಾಹಿತಿ ಕುದ್ಕಾಡಿ ವಿಶ್ವನಾಥ ರೈಗಳಿಂದ ಪ್ರೇರಿತಳಾದವಳು ಎಂದು ತಿಳಿಸುತ್ತಾರೆ.
ಪತಿ ಜಿ.ವಿ.ಎಸ್ ಉಳ್ಳಾಲ್ (ಸುಧಾಕರ್ ಶೆಟ್ಟಿ ಉಳ್ಳಾಲ್), ಮಗ ಧೃತೀಜ್ ಶೆಟ್ಟಿ ಅವರ ಸಂಪೂರ್ಣ ಸಹಕಾರವನ್ನು ನೆನೆಯುತ್ತಾರೆ. ಹೆತ್ತವರ ಆಶೀರ್ವಾದದಿಂದ ಈ ಎಲ್ಲ ಕಾರ್ಯಗಳು ಕೈಗೂಡಿವೆ ಎನ್ನುವ ವಿದ್ಯಾಶ್ರೀ ಅವರ ಮಹತ್ವದ ಯೋಜನೆಗಳೊಂದಿಗೆ ತುಳು ಭಾಷೆ ಸ್ವಂತ ಲಿಪಿಯಲ್ಲಿ ಗ್ರಂಥಸ್ಥವಾಗುವ ಕನಸು ನನಸಾಗಲಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post