ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಾಧನೆಯ ಹಾದಿ ಹತ್ತಿಯ ಹಾಸೂ ಅಲ್ಲ ಹೂವಿನ ಹಾಸಿಗೆಯೂ ಅಲ್ಲ. ಅದು ಕಲ್ಲು ಮುಳ್ಳುಗಳು ತುಂಬಿದ ಅಂಕು ಡೊಂಕುಗಳ ಓಣಿ ಕಣಿವೆಗಳು. ಎಲ್ಲ ಏಳುಬೀಳುಗಳನ್ನು ಎತ್ತರ ತಗ್ಗುಗಳನ್ನು ಸಮರ್ಥವಾಗಿ ದಾಟಿ ಬರಿಗಾಲಿನಿಂದ ಬಣ್ಣದ ಪಾದುಕೆಗಳವರೆಗೆ, ಬರಿ ಕೈಯಿಂದ ಚಿನ್ನದ ಪದಕಗಳವರೆಗೆ, ಬರಿ ಹೊಟ್ಟೆಯಿಂದ ಅನ್ನದಾನದವರೆಗೆ ಯಾರು ಮುಟ್ಟುತ್ತಾನೋ ಅವನೇ ಸಾಧಕ. ಸಾಧನೆಯೂ ಸಿರಿವಂತರ ಸೊತ್ತೂ ಅಲ್ಲ. ಯಾರೊಬ್ಬರ ಸ್ವಂತವೂ ಅಲ್ಲ. ತನ್ನ ಗುರಿಯೆಡೆಗೆ ತಾನು ನೆಟ್ಟ ನೋಟದಿಂದ ಎಲ್ಲವನ್ನೂ ಮೀರಿ, ಎಲ್ಲರನ್ನೂ ಮೀರಿಸಿ ಹೋಗಿ ನಿಲ್ಲುವುದೇ ಸಾಧನೆ.
ನಾವಿಲ್ಲಿ ಪರಿಚಯಿಸ ಹೊರಟಿರುವುದು ಅಂತದೇ ಓರ್ವ ಸಾಧಕಿಯನ್ನು. ಪ್ರಚಾರ ಬಯಸದೆ, ಪ್ರಶಸ್ತಿ ಸನ್ಮಾನಗಳ ಹಿಂದೆ ಓಡದೆ, ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ವೃತ್ತಿ ಪ್ರವೃತ್ತಿಗಳನ್ನು ಸಮವೃತ್ತದಲ್ಲಿ ಸರಿದೂಗಿಸಿಕೊಂಡು ಹೋಗುತ್ತಿರುವ ಜೀವದ ಸೆಳೆ ಜೀವಶಾಸ್ತ್ರ ಉಪನ್ಯಾಸಕಿ ಕೈರಂಗಳದ ವಿನುತಾ ಕೆ ಗಟ್ಟಿಯವರು ದಿವಂಗತ ಶಿವರಾಮ ಗಟ್ಟಿ ಹಾಗೂ ಜಯಲಕ್ಷ್ಮಿಯವರ ಸುಪುತ್ರಿ. ತನ್ನ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಸರಕಾರಿ ಕನ್ನಡ ಮಾಧ್ಯಮದಲ್ಲಿ ಪೂರೈಸಿದ ವಿನುತಾರವರು ಎಂಎಸ್’ಸಿ ಪದವೀಧರೆಯಾದ್ದಾರೆ. ಜೊತೆಗೆ ಬಿಎಡ್ ಮಾಡಿರುವ ವಿನುತಾ ಜೀವಶಾಸ್ತ್ರ ಪ್ರಾಧ್ಯಾಪಕಿಯಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

2006ರಲ್ಲಿ ಮೊದಲ ಬಾರಿಗೆ ಪಂಜಜನ ಮೋಕ್ಷದ ಶ್ರೀಕೃಷ್ಣನಾಗಿ ಯಕ್ಷರಂಗ ಏರಿದರು. ಆ ಬಳಿಕ ಆನೆಗುಂಡಿ ಗಣಪತಿ ಭಟ್, ನಾಗೇಶ್ ಆಚಾರ್ಯ ಕೈರಂಗಳ, ಭಾಗವತರಾದ ರಾಜಾರಾಮ ಹೊಳ್ಳರಂತ ಹಲವು ದಿಗ್ಗಜರ ಶಿಷ್ಯೆಯಾಗಿ ಶ್ರೀಗೋಪಾಲಕೃಷ್ಣ ಯಕ್ಷಗಾನ ಸಂಘದಲ್ಲಿ ನಾಟ್ಯಾಭ್ಯಾಸವನ್ನು ಮಾಡಿದರು.
ಎಂಎಸ್’ಸಿ ಮಾಡುವಾಗ ಮಂಗಳೂರು ವಿಶ್ವವಿದ್ಯಾನಿಲಯದ ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಹಲವಾರು ವೇಷ ಮಾಡಿರುವ ಇವರು ಅಲ್ಲಿ ಹೆಚ್ಚಿನ ಹೆಜ್ಜೆಗಾರಿಕೆಯನ್ನು ಕಲಿತೆ ಎನ್ನುತ್ತಾರೆ. ಅಲ್ಲಿಯ ಮುಖ್ಯ ಗುರುಗಳಾದ ಸದಾಶಿವ ಶೆಟ್ಟಿಗಾರ್ ಹಾಗೂ ಶರತ್ ಪೂಜಾರಿ ಅವರನ್ನು ಮರೆಯುವಂತಿಲ್ಲ ಎನ್ನುತ್ತಾರೆ.

ನರಕಾಸುರವಧೆ, ಪಂಚಜನ ಮೋಕ್ಷ, ಕೃಷ್ಣಲೀಲೆ ಪ್ರಸಂಗಗಳಲ್ಲಿ ಕೃಷ್ಣನಾಗಿ ಆ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವವರಲ್ಲಿ ವಿನುತಾರದೇ ಮೇಲುಗೈ.
ಇನ್ನು ತರಣಿಸೇನ ಪ್ರಸಂಗದ ತರಣಿಸೇನ, ಗುರುದಕ್ಷಿಣೆಯ ಏಕಲವ್ಯ ಸೇರಿದಂತೆ ಮದಿರಾಕ್ಷ, ರೂಕ್ಷ, ಸತ್ಯಭಾಮೆ, ಮಾಲಿನಿ, ಶಬರಿ, ಸುದರ್ಶನ, ಚಿತ್ರಾಂಗದೆ, ತ್ರಿಲೋಕ ಸುಂದರಿ, ದೇವೇಂದ್ರ ಹೀಗೆ ಹಲವಾರು ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದ ಕೀರ್ತಿಯೂ ಇವರದು.
ಕಲೆಯನ್ನು ಆರಾಧಿಸುವ ವ್ಯಕ್ತಿಯಾದ ನಾನು ಯಾವುದೇ ಪ್ರಚಾರಕ್ಕಾಗಲಿ, ನೇಮ್ ಫೇಂಗಾಗಿ ಯಕ್ಷಗಾನ ಮಾಡುತ್ತಿರುವವಳಲ್ಲ. ಕೂಡು ಕುಟುಂಬ ಆದ ನಮ್ಮ ಮನೆಯಲ್ಲಿ ಸಂಪೂರ್ಣ ಸಹಕಾರ ಇದ್ದುದರಿಂದ ಇಲ್ಲಿಯವರೆಗೆ ಯಕ್ಷಗಾನ ಸೇವೆ ಮಾಡಿಕೊಂಡು ಬಂದಿದ್ದೇನೆ. ನನ್ನ ಮುಂದಿನ ಜೀವನದಲ್ಲಿ ಅವಕಾಶ ಸಿಕ್ಕರೆ ಖಂಡಿತ ಮುಂದುವರಿಸುತ್ತೇನೆ. ಒಂದು ವೇಳೆ ಅವಕಾಶ ಸಿಗದಿದ್ದರೆ ಯಕ್ಷಗಾನ ನೋಡಿ ಸಂತಸ ಪಡುತ್ತೇನೆ ಎನ್ನುವ ವಿನುತಾ ಗಟ್ಟಿಯವರು ಎಲೆಯ ಮರೆಯ ಕಾಯಿಯಂತೆ ಉಳಿದಿದ್ದಾರೆ. ಯಾವುದೇ ಪ್ರಶಸ್ತಿ ಸನ್ಮಾನಗಳು ಇವರನ್ನು ಅರಸಿ ಬರಲಿಲ್ಲ. ಆದರೆ ಸಂಪಾಜೆ ಯಕ್ಷೋತ್ಸವ ಸ್ಪರ್ಧೆಯಲ್ಲಿ ವಿನುತಾರವರ ವಿಭೀಷಣನ ಪಾತ್ರಕ್ಕೆ ತೃತೀಯ ಬಹುಮಾನ ಲಭಿಸಿದ್ದು, ಇದು ತನ್ನ ಯಕ್ಷಗಾನದ ಜರ್ನಿಯಲ್ಲಿ ಅವಿಸ್ಮರಣೀಯ ಎನ್ನುತ್ತಾರೆ.
ವೃತ್ತಿಯಲ್ಲಿ ಪ್ರಾಧ್ಯಾಪಕಿ, ಪ್ರವೃತ್ತಿಯಲ್ಲಿ ಯಕ್ಷಬಾಲೆಯಾಗಿರುವ ವಿನುತಾರವರ ಹವ್ಯಾಸಗಳೆಂದರೆ ಓದುವುದು, ಯಕ್ಷಗಾನ ವಿಡಿಯೋಗಳನ್ನು ನೋಡುವುದು ಹಾಗೂ ಅಪರೂಪಕ್ಕೊಮ್ಮೊಮ್ಮೆ ಡಾನ್ಸ್ ಮಾಡುವುದು.
ಇಂದಿನ ದಿನಮಾನದಲ್ಲಿ ಪ್ರಶಸ್ತಿ, ಪ್ರಚಾರಕ್ಕಾಗಿ ಕಲೆಯನ್ನು ಅಪ್ಪಿಕೊಳ್ಳುವವರ ಮಧ್ಯೆ ಕಲೆಯನ್ನು ಒಪ್ಪಿಕೊಂಡು, ಆರಾಧಿಸುತ್ತಾ, ಗಂಡುಕಲೆ ಎಂದೇ ಪ್ರಸಿದ್ಧವಾದ ಯಕ್ಷಗಾನದಲ್ಲಿ ಭಾರವಾದ ಪೋಷಾಕುಗಳೊಂದಿಗೆ ಗಂಡಸರಂತೆಯೇ ಸಲೀಸಾಗಿ ಲೀಲಾಜಾಲವಾಗಿ ಕುಣಿಯುವ ವಿನುತಾರವರ ಸಾಧನೆಯ ಹಾದಿಗೆ ಅವರ ತಾಯಿ, ಕುಟುಂಬ, ಶಿಕ್ಷಕರು ಹಾಗೂ ಸ್ನೇಹವಲಯದ ಸ್ಫೂರ್ತಿ ಹಾಗೂ ಸಪೋರ್ಟ್ ಇದೆ ಎನ್ನುತ್ತಾರೆ. ಪ್ರಶಂಸೆಯನ್ನು ಹೃದಯಕ್ಕೂ, ದೂಷಣೆಯನ್ನು ತಲೆಗೂ ತೆಗೆದುಕೊಳ್ಳುವ ವಿನುತಾರವರು ಇನ್ನೊಬ್ಬರು ತಪ್ಪನ್ನು ಎತ್ತಿ ತೋರಿಸಿದಾಗ ತಮ್ಮನ್ನು ತಾವು ತಿದ್ದಿಕೊಂಡು ಸಾಗಲು ಸುಲಭ ಎನ್ನುವ ವಿನುತಾರವರ ಜೀವನ ಹಾಗೂ ಸಾಧನೆ ಇನ್ನಷ್ಟು ಎತ್ತರಕ್ಕೇರಲಿ ಎನ್ನುವ ಆಶಯ ನಮ್ಮದು.
Get in Touch With Us info@kalpa.news Whatsapp: 9481252093







Discussion about this post