ಭದ್ರಾವತಿ: ಪ್ಲೆಕ್ಸ್ ಹಾವಳಿಯಿಂದಾಗಿ ಚಿತ್ರಕಲೆ ಹಾಗೂ ಚಿತ್ರ ಕಲಾವಿದರ ಬದುಕು ಅತಂತ್ರವಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ತನ್ನ ಚಿತ್ರಕಲೆಯ ಮೂಲಕ ಗಮನಸೆಳೆಯುತ್ತಿರುವ ಪ್ರತಿಭೆ ಭದ್ರಾವತಿಯ ವಿಷ್ಣು ಕುಮಾರ್.
ಯುವ ಜನತೆ ಇಂದು ಕೇವಲ ಐಟಿ, ಬಿಟಿಗಳ ಕಡೆ ಒಲವು ತೋರುತ್ತಿರುವ ಸಂದರ್ಭದಲ್ಲಿ ಚಿತ್ರಕಲೆಯ ಮೂಲಕವೇ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಯುವ ಪ್ರತಿಭೆ ವಿಷ್ಣುಕುಮಾರ್.
ಭದ್ರಾವತಿ ಕಾಗದನಗರದ ನಿವಾಸಿಗಳಾದ ಚಂದ್ರಶೇಖರ್ ಹಾಗೂ ಸರಸ್ವತಿ ದಂಪತಿಗಳ ದ್ವಿತೀಯ ಪುತ್ರನಾಗಿರುವ ವಿಷ್ಣುಕುಮಾರ್ ತನ್ನ ಕಿರಿಯ ವಯಸ್ಸಿನಲ್ಲಿಯೇ ಕಲೆಯ ಆಸಕ್ತಿ ಬೆಳೆಸಿಕೊಂಡ ಪ್ರತಿಭೆ. ಪ್ರೌಢಶಾಲಾ ಶಿಕ್ಷಣದ ನಂತರ ಶಿವಮೊಗ್ಗದ ಖ್ಯಾತ ಕಲಾವಿದರುಗಳಾದ ಜ್ಞಾನೇಶ್ವರ್ ಹಾಗೂ ಪ್ರವೀಣ್ ಕವಟೇಕರ್ ಬಳಿ ತರಬೇತಿ ಪಡೆದರು.
ಇದೀಗ ಭದ್ರಾವತಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಕಲೆಯ ಮೂಲಕ ಉತ್ತಮವಾಗಿ ಬೆಳೆಯುತ್ತಿರುವ ಯುವ ಕಲಾವಿದರಾಗಿದ್ದಾರೆ. ನಾಮ ಫಲಕಗಳು, ಭಾವಚಿತ್ರಗಳ ರಚನೆ, ಆಧುನಿಕ ಕಲಾಕೃತಿಗಳ ರಚನೆ, ಮಣ್ಣಿನ ಮೂರ್ತಿಗಳ ತಯಾರಿಕೆ ಹಾಗೂ ಸಿಮೆಂಟ್ ಮೂರ್ತಿಗಳ ತಯಾರಿಕೆಯಲ್ಲಿ ಈ ಪ್ರತಿಭೆ ಭರವಸೆಯನ್ನು ಮೂಡಿಸಿದ್ದಾರೆ.
ಇವರ ಸಾಧನೆಯನ್ನು ಕಂಡು ಶಿವಮೊಗ್ಗ ಜಿಲ್ಲೆಯ ಅನೇಕ ಸಂಘ, ಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ. ಫ್ಲೆಕ್ಸ್ ಹಾವಳಿಗಳ ನಡುವೆಯೂ ಎದೆಗುಂದದೆ ತನ್ನ ಪ್ರತಿಭೆಯ ಮೂಲಕ ಬದುಕುಕಟ್ಟಿಕೊಳ್ಳಲು ಹಾತೊರೆಯುತ್ತಿರುವ ಕಲಾವಿದನಿಗೆ ಮತ್ತಷ್ಟು ಪ್ರೋತ್ಸಾಹ ಹಾಗೂ ಅವಕಾಶಗಳ ಒದಗಬೇಕಿದೆ.
ಚಿತ್ರಕಲೆ ಕಲಿಕೆಯ ಆಸಕ್ತರಿಗೊಂದು ಸುವರ್ಣಾವಕಾಶ
ಅಪರೂಪ ಹಾಗೂ ಅಪ್ರತಿಮ ಕಲೆಯನ್ನು ಹೊಂದಿರುವ ಭದ್ರಾವತಿಯ ವಿಷ್ಣು ಕುಮಾರ್ ಅವರ ಮಾರ್ಗದರ್ಶನದಲ್ಲಿ ಚಿತ್ರಕಲೆಯನ್ನು ಕಲಿಯುವ ಅವಕಾಶ ಉಕ್ಕಿನ ನಗರಿಯ ಮಂದಿಗೆ ಒದಗಿಬಂದಿದೆ.
ವಿಷ್ಣು ಕುಮಾರ್ ಅವರು ಕಲಾ ಚಿತ್ತಾರ ಎಂಬ ಚಿತ್ರಕಲಾ ಶಾಲೆಯೊಂದನ್ನು ನಮ್ಮ ಭದ್ರಾವತಿಯಲ್ಲಿ ಆರಂಭಿಸಿದ್ದಾರೆ.
ಚಿತ್ರಕಲೆಯ ವಿವಿಧ ಆಯಾಮಗಳನ್ನು ಪರಿಚಯ, ಮಕ್ಕಳ ಸೃಜನಶೀಲತೆ ಹಾಗೂ ಕಲ್ಪನಾ ಶಕ್ತಿ ಹೆಚ್ಚಿಸುವುದರೊಂದಿಗೆ ಅದಕ್ಕೆ ಜೀವಂತಿಕೆ ನೀಡುವ ಉದ್ದೇಶವನ್ನು ಹೊಂದಿದ್ದು, ಮಕ್ಕಳ ಮಾನಸಿಕ ಬೇಸರ ಮರೆಸಿ, ತಾಳ್ಮೆ ಏಕಾಗ್ರತೆ ಹಾಗೂ ಮನೋಲ್ಲಾಸ ತುಂಬುವ ಜೊತೆಯಲ್ಲಿ ಬಣ್ಣಗಳ ಕುರಿತಾಗಿ ಅರಿವನ್ನೂ ಸಹ ಮೂಡಿಸುವ ಉದ್ದೇಶವನ್ನು ಹೊಂದಿದ್ದಾರೆ ವಿಷ್ಣು ಅವರು.
ಈ ಶಾಲೆಯಲ್ಲಿ ಬೇಸಿಕ್ ಡ್ರಾಯಿಂಗ್, ಸ್ಕೆಚ್ ಪ್ರಾಕ್ಟೀಸ್, ಚಿತ್ರರಚನೆ ಮತ್ತು ಕಲರಿಂಗ್, ಕ್ಯಾನ್ವಾಸ್ ಪೈಂಟಿಂಗ್, ಕ್ರಾಫ್ಟ್ ವರ್ಕ್, ಕ್ಲೇ ಮಾಡೆಲಿಂಗ್, ಕ್ಯಾಲಿಗ್ರಾಫಿ, ಗ್ಲಾಸ್ ಪೈಂಟಿಂಗ್ ಸೇರಿದಂತೆ ಹಲವು ರೀತಿಯ ಕಲೆಗಳನ್ನು ಹೇಳಿಕೊಡಲಾಗುತ್ತದೆ.
ಆಸಕ್ತರು ವಿಷ್ಣು ಕುಮಾರ್(9483237329, 8971308646)ಗೆ ಸಂಪರ್ಕಿಸಬಹುದು.
(ವಿಶೇಷ ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post