ಕಳೆದ ವರ್ಷವಷ್ಟೇ ಲೈಫ್ 360 ಎಂಬ ಜರ್ನಿ ಕಥಾನಕ ಹೊಂದಿದ್ದ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ, ಚಿತ್ರಕ್ಕೆ ಆಕ್ಷನ್-ಕಟ್ ಕೂಡ ಹೇಳಿದ್ದ ಅರ್ಜುನ್ ಕಿಶೋರ್ ಚಂದ್ರ ಅವರು ಇದೀಗ ತಮ್ಮ ಸಹೋದರನ ಜೊತೆಗೂಡಿ ಸದ್ದಿಲ್ಲದೆ 2 ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ.
ಮಿಸ್ಟ್ರಿ, ಥ್ರಿಲ್ಲರ್ ಕಥಾನಕ ಹೊಂದಿರುವ ಜಾಲತ್ರಾಣ ಹಾಗೂ ಇನ್ ಮೈ ಲೈಫ್ ಎಂಬ ಶೀರ್ಷಿಕೆ ಹೊಂದಿದ ಈ ಎರಡು ಕಿರುಚಿತ್ರಗಳು ಮೊನ್ನೆಯಷ್ಟೇ ನಡೆದ ಸಾಹಸಸಿಂಹ ಡಾ.ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವದಲ್ಲಿ ನಡೆದ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ ಪ್ರದರ್ಶಿತಗೊಂಡು ಪ್ರಶಸ್ತಿಗೆ ಭಾಜನವಾಗಿವೆ.
ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ವಿಷ್ಣುವರ್ಧನ್ ರಾಷ್ಟ್ರೀಯ ಹಬ್ಬ ಕಾರ್ಯಕ್ರಮದ 2ನೆಯ ದಿನ ನಡೆಸಲಾದ ಕಿರುಚಿತ್ರೋತ್ಸವ ಸ್ಪರ್ಧೆಯಲ್ಲಿ 35 ಕಿರುಚಿತ್ರಗಳು ಪ್ರದರ್ಶನಗೊಂಡವು. ಅದರಲ್ಲಿ 5 ಶಾರ್ಟ್ ಫಿಲಂಗಳು ಫೈನಲ್ ಹಂತಕ್ಕೆ ತಲುಪಿದವು. ಆ ಫೈನಲಿಸ್ಟ್ನಲ್ಲಿ ಅರ್ಜುನ್ ಅವರ ನಿರ್ದೇಶನದ ಜಾಲತ್ರಾಣ ಹಾಗೂ ಅರ್ಜುನ್ರ ಸೋದರ ಅಭಿಷೇಕ್ ಚಂದ್ರ ಅವರ ನಿರ್ದೇಶನದ ಇನ್ ಮೈ ಲೈಫ್ ಚಿತ್ರಗಳೂ ಇದ್ದವು.
ನಂತರ ಆ ಐದು ಚಿತ್ರಗಳಲ್ಲಿ ಜಾಲತ್ರಾಣ ಕಿರು ಚಿತ್ರವು 2ನೇ ಅತ್ಯುತ್ತಮ ಕಿರುಚಿತ್ರವೆಂದೂ ಹಾಗೂ ಇನ್ ಮೈ ಲೈಫ್ ಕಿರು ಚಿತ್ರವು ಮೂರನೇ ಅತ್ಯುತ್ತಮ ಕಿರು ಚಿತ್ರ ಹಾಗೂ ಬೆಸ್ಟ್ ಸ್ಟೋರಿ ಅವಾರ್ಡ್ ಕೂಡ ಪಡೆದುಕೊಂಡಿತು. ಈ ಬಗ್ಗೆ ಖುಷಿ ವ್ಯಕ್ತಪಡಿಸುವ ಅರ್ಜುನ್ ಕಿಶೋರ್ ಚಂದ್ರ ಸದ್ಯದಲ್ಲೇ ಮತ್ತೊಂದು ಚಲನಚಿತ್ರವನ್ನು ಆರಂಭಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.
Discussion about this post