ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಅರ್ಜುನ ಶ್ರೀಕೃಷ್ಣನನ್ನು ಕುರಿತು ಕೇಳುವ ಪ್ರಶ್ನೆ ಹೀಗಿದೆ. ನೀನು ನನಗೆ ಯುದ್ಧವನ್ನು ಮಾಡು ಎಂಬುದಾಗಿ ನನ್ನನ್ನು ಯುದ್ಧದಲ್ಲಿ ನಿಯೋಜಿಸುತ್ತಿದ್ದೀಯಾ. ಆದರೆ ವಿವೇಕಸಹಿತವಾಗಿ ಯೋಚಿಸಿದರೆ, ಈ ಯುದ್ಧದಲ್ಲಿ ಲಕ್ಷಾಂತರ ಪುರುಷರು ಮರಣವನ್ನು ಹೊಂದುತ್ತಾರೆ. ಆಗ ಆ ಎಲ್ಲ ಸೈನಿಕರ ಮನೆಗಳು ಒಡೆಯರಿಲ್ಲದಂತಾಗುತ್ತದೆ. ಅನೇಕ ಮಂದಿ ಅನಾಥರಾಗುತ್ತಾರೆ.
ಇಷ್ಟೇ ಅಲ್ಲದೇ, ಆ ಎಲ್ಲ ಪುರುಷರ ಮಡದಿಯರು ಗಂಡಂದಿರಿಂದ ದೂರರಾದವರಾಗಿ, ಧರ್ಮದ ಹಾದಿಯನ್ನು ತಪ್ಪುವ ಅಪಾಯವೂ ಇದೆ. ಇಷ್ಟೆಲ್ಲಾ ಕೆಟ್ಟ ಫಲವನ್ನು ನೀಡುವ ಈ ಯುದ್ಧದಲ್ಲಿ ನಮ್ಮನ್ನು ಏಕೆ ತೊಡಗಿಸುತ್ತಿದ್ದೀಯಾ ಎಂಬುದಾಗಿ ನಮಗೆ ಬರುವ ಸಂಶಯವನ್ನೇ ಅರ್ಜುನ ಪ್ರಶ್ನೆಯ ರೂಪದಲ್ಲಿ ಶ್ರೀಕೃಷ್ಣನನ್ನು ಕುರಿತು ಕೇಳುತ್ತಾನೆ.
ಇದಕ್ಕೆ ಕೃಷ್ಣನು ಕೊಡುವ ಉತ್ತರವನ್ನು ನಾವೆಲ್ಲರೂ ಅವಶ್ಯವಾಗಿ ತಿಳಿದು, ಜೀವನದಲ್ಲಿ ನಾವು ಧರ್ಮದ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕು.
ಕೃಷ್ಣನು ಹೇಳುತ್ತಾನೆ-“ ನಾವು ಯಾವುದಾದರೊಂದು ಒಳ್ಳೆಯ ಉದ್ದೇಶವನ್ನಿಟ್ಟುಕೊಂಡು, ಒಂದು ಕಾರ್ಯವನ್ನು ಆರಂಭಿಸಿದರೆ, ಖಂಡಿತವಾಗಿಯೂ ನಮಗೆ ಒಳ್ಳೆಯ ಫಲವೇ ದೊರೆಯುತ್ತದೆ. ಅದೇ ನಾವು ಕೆಟ್ಟ ಉದ್ದೇಶದಿಂದ ಕಾರ್ಯಾರಂಭವನ್ನು ಮಾಡಿದರೆ, ಅದಕ್ಕೆ ಕೆಟ್ಟ ಫಲವೇ ದೊರೆಯುತ್ತದೆ.
ಪ್ರಕೃತ ನೀನು(ಅರ್ಜುನ) ಅಧರ್ಮದಿಂದ ಕೂಡಿದ ಈ ದುರ್ಯೋಧನಾದಿಗಳನ್ನು ಸಂಹರಿಸುವ ಒಳ್ಳೆಯ ಉದ್ದೇಶದಿಂದ ಯುದ್ಧವನ್ನು ಆರಂಭಿಸಿದ್ದೀಯಾ. ಇದರಿಂದ ನಿನಗಷ್ಟೇ ಅಲ್ಲ. ಈ ರಾಜ್ಯದ ಪ್ರಜೆಗಳು ಕೂಡ ಸುಭಿಕ್ಷರಾಗಿರುತ್ತಾರೆ. ಇಂತಹ ಒಳ್ಳೆಯ ಉದ್ದೇಶದಿಂದ ಪ್ರಾರಂಭ ಮಾಡಿದ ಈ ಯುದ್ಧವು ಖಂಡಿತವಾಗಿಯೂ ಒಳ್ಳೆಯ ಫಲವನ್ನೇ ನೀಡುತ್ತದೆ ಹೊರತು ಕೆಟ್ಟ ಫಲವನ್ನು ಕೊಡುವುದಿಲ್ಲ. ಹೀಗಾಗಿ ನೀನು ಅವಶ್ಯವಾಗಿ ಯುದ್ಧವನ್ನು ಮಾಡಲೇಬೇಕು” ಎಂಬುದಾಗಿ ಉತ್ತರಿಸುತ್ತಾನೆ.
(ನಾಳಿನ ಲೇಖನ: ಶ್ರೀ ಕೃಷ್ಣನು ಅಣುವಿಗಿಂತ ಅಣು, ಮಹತ್ತಿಗಿಂತ ಮಹತ್)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post