ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ನಡುವೆಯೇ ಇಂದು ರಾಜ್ಯ ಸಚಿವ ಸಂಪುಟದ ಮಹತ್ವದ ಸಭೆ ನಡೆದಿದ್ದು, ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿದ್ದು, ಈಗಾಗಲೇ ಮಳೆ ಪ್ರಾರಂಭವಾಗಿದ್ದು ರಾಜ್ಯದಲ್ಲಿ ಎಲ್ಲಿಯೂ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳ ಕೊರತೆ ಆಗದಂತೆ ಕ್ರಮವಹಿಸಿ ಸರಿಯಾದ ರೀತಿಯಲ್ಲಿ ವಿತರಣೆ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಸೂಚಿಸಲಾಗಿದೆ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಭತ್ತದ ಬೆಳೆಯ ಹಾನಿಯಾಗಿದ್ದು ಈ ಬಗ್ಗೆ ಕೃಷಿ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ವಾಸ್ತವಿಕ ಬೆಳೆಹಾನಿಯ ಬಗ್ಗೆ ವರದಿಯನ್ನು ನೀಡುವಂತೆ ಸೂಚಿಸಲಾಗಿದೆ ಎಂದಿದ್ದಾರೆ.
ಹೊಲದಲ್ಲಿ ಬೆಳೆದಿರುವ ಹೂ ಗಳು ಮಳೆಯಿಂದ ಹಾನಿಯಾಗಿದ್ದು ಈ ಬಗ್ಗೆಯೂ ಜಿಲ್ಲಾಧಿಕಾರಿಯವರಿಂದ ವರದಿಯನ್ನು ಪಡೆದು ಸೂಕ್ತ ಪರಿಹಾರ ನೀಡುವ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಡೆಸಲು ಸೂಚಿಸಲಾಗಿದೆ. ಈಗಾಗಲೇ ಶೇಕಡಾ 50ರಷ್ಟು ಪಡಿತರ ವಿತರಣೆಯನ್ನು ಮಾಡಲಾಗಿದ್ದು, ಇನ್ನುಳಿದ ಪಡಿತರ ವಿತರಣೆಯನ್ನು ಇನ್ನು ಎರಡು ಮೂರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತೀರ್ಮಾನಿಸಲಾಗಿದೆ ಎಂದರು.
ಕೇಂದ್ರ ಸರ್ಕಾರದ ಪಡಿತರ ವ್ಯವಸ್ಥೆಯನ್ನು ಕೂಡಲೇ ವಿತರಿಸಲಾಗುವುದು. ಎರಡುವರೆ ಲಕ್ಷ ಕುಟುಂಬದವರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ್ದರೂ ವಿವಿಧ ಕಾರಣಗಳಿಗೆ ಸಿಕ್ಕಿಲ್ಲವೆಂದು ದೂರು ಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಹಾಗೂ ಸದ್ಯ ಅವರಿಗೆ ತಾತ್ಕಾಲಿಕವಾಗಿ ಪಡಿತರ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ -19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಇನ್ನು 15 ದಿನಗಳವರೆಗೆ ಲಾಕ್‌ಡೌನ್ ಮುಂದುವರೆಸಬೇಕು ಎನ್ನುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಒಕ್ಕೊರಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಧಾನಮಂತ್ರಿಯವರೊಂದಿಗೆ ಎಪ್ರಿಲ್ 11ರಂದು ನಡೆಯುವ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚಿಸಿ ಕ್ರಮ ವಹಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಮಾಡಲಾಗುವುದು ಎಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು ಈ ಕೆಳಗಿನಂತಿವೆ:
- ಶಾಸಕರು ಹಾಗೂ ಸಚಿವರ ವೇತನದಲ್ಲಿ ಶೇ.30 ರಷ್ಟು ಕಡಿತಗೊಳಿಸಲು ನಿರ್ಧಾರ. ಇದರಿಂದ ಉಳಿತಾಯವಾಗುವ 15 ಕೋಟಿ 36 ಲಕ್ಷಕ್ಕೂ ಹೆಚ್ಚಿನ ಹಣ ಕೊರೊನಾ ನಿಧಿಗೆ ನೀಡಲು ತೀರ್ಮಾನ. ಸುಗ್ರೀವಾಜ್ಞೆ ಮೂಲಕ ಈ ಆದೇಶ ಜಾರಿ.
- ಜಿಎಸ್’ಟಿ ಪಾವತಿ ಅವಧಿಯನ್ನು ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಸಮೀಕ್ಷೆ ನಡೆಸಿ ತೀರ್ಮಾನ ಮಾಡಲಾಗುವುದು.
- ಕುಡಿಯುವ ನೀರಿಗಾಗಿ 49 ಬರಪೀಡಿತ ತಾಲೂಕುಗಳಿಗೆ ತಲಾ 1 ಕೋಟಿ ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ ರೂ. ಬಿಡುಗಡೆ ಮಾಡಲು ತೀರ್ಮಾನ.
- ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಬಾಕಿ ಇದ್ದವರಿಗೂ ಪಡಿತರ ನೀಡಲು ನಿರ್ಧಾರ.
- ಕರ್ನಾಟಕ ವಿಧಾನಮಂಡಲದ ವೇತನಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು ಮತ್ತು ಇತರ ಕೆಲವು ಕಾನೂನು (ತಿದ್ದುಪಡಿ) ಆಧ್ಯಾದೇಶ 2020ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
- ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) 2020ಕ್ಕೆ ಅನುಮೋದನೆ ನೀಡಲಾಯಿತು.
- ಕರ್ನಾಟಕ ಭೂ ಕಬಳಿಕೆ ನಿಷೇಧ (ತಿದ್ದುಪಡಿ) ಆಧ್ಯಾದೇಶ 2020ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
Get in Touch With Us info@kalpa.news Whatsapp: 9481252093
Discussion about this post