ಅಮರರಾದರು ಅಟಲ್ ಜೀ…!
ಜನರ ಜೀವನದಲ್ಲಿ ಅಬ್ಬರದಿಂದ ಬರುವ ಅಲೆಯೊಂದಿದೆ,ಪ್ರವಾಹ ಬಂದಾಗ ಆ ಅಲೆಯನ್ನೇರಿ ಬಂದಾತ ಒಳ್ಳೆಯ ಅದೃಷ್ಟವನ್ನು ತಲುಪುತ್ತಾನೆ(There is a tide in the affairs of men.which taken at the floods, leads on to fortune)ಎಂದು ಶೇಖ್‌ಸ್ಪಿಯರ್ ತನ್ನ ‘‘ಜೂಲಿಯಸ್ ಸೀಜರ್’’ ಎಂಬ ನಾಟಕದಲ್ಲಿ ಹೇಳಿದ್ದಾನೆ.
ಹಾಗೆಯೇ ಸಮನ್ವಯತೆಯ ಅಲೆಯೇರಿ ಬಂದ ಶಾಂತಿಧೂತರೊಬ್ಬರು ಹಲವು ದಶಕಗಳ ಕಾಲ ಎರಡು ರಾಷ್ಟ್ರಗಳ(ಭಾರತ-ಪಾಕಿಸ್ಥಾನ) ನಡುವೆ ಹೆಪ್ಪುಕಟ್ಟಿದ್ದ ದ್ವೇಷವನ್ನು ಕರಗಿಸುವ ಕೈಂಕರ್ಯಕ್ಕೆ ನಾಂದಿ ಹಾಡಿದರು. ಇಡೀ ವಿಶ್ವಕ್ಕೆ ಸ್ನೇಹಹಸ್ತ ಚಾಚಿ, ಆಲಂಗಿಸಿಕೊಳ್ಳುವ ಉತ್ಸಾಹವಿತ್ತು ಅವರಲ್ಲಿ. ಅದೇ ಉತ್ಸಾಹದಲ್ಲಿ ನೆರೆರಾಷ್ಟ್ರದೊಂದಿಗೆ ಸ್ನೇಹ ಬಯಸಿ, ಭಾರತ-ಪಾಕ್ ಸಂಬಂಧಗಳ ಸುಧಾರಣೆಗಾಗಿ ಸಂಝೋತಾ ರೈಲು ಪ್ರಯಾಣ, ಲಾಹೋರ್ ನಿಂದ ದೆಹಲಿಯವರೆಗೆ ಬಸ್ ಸಂಚಾರ, ಅಲ್ಲದೆ ವಿಮಾನಯಾನವನ್ನೂ ಪ್ರಾರಂಭಿಸಿಬಿಟ್ಟರು ಶಾಂತಿಧೂತ ಅಟಲ್‌ಜೀ.
ಕೆಲವರು ಇತಿಹಾಸವನ್ನು ಓದುತ್ತಾರೆ, ಕೆಲವರು ಇತಿಹಾಸವನ್ನು ಬರೆಯುತ್ತಾರೆ, ಕೆಲವರು ಇತಿಹಾಸವನ್ನು ತಿರುಚುತ್ತಾರೆ, ಆದರೆ ಕೆಲವರು ಮಾತ್ರ ಇತಿಹಾಸವನ್ನು ನಿರ್ಮಿಸುತ್ತಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಇವರದೇ ಒಂದು ಅಪೂರ್ವ ಅಧ್ಯಾಯ ಸುವರ್ಣಾಕ್ಷರಗಳಿಂದ ರಚಿಸಲ್ಪಟ್ಟಿದೆ ಎಂದರೆ ಅತಿಶಯೋಕ್ತಿಯೆನಿಸದು.
ಅಟಲ್‌ಜೀ ಅವರ ಉದಾರ ತತ್ವಗಳನ್ನು ಮೆಚ್ಚಿಕೊಂಡಿದ್ದ ಪಾಕಿಸ್ಥಾನದ ಅಂದಿನ ವಾರ್ತಾಮಂತ್ರಿ ಶೇಖ್ ರಶೀದ್ Vajapayee is the only leader who can take bold steps to solve Indo-pak issues. Other than him, I think its all darkness’’ಎಂದು ಹೇಳಿದ್ದರು.
ಪಾಕ್‌ನೊಂದಿಗೆ ಸ್ನೇಹ ಬಯಸಿದ ಅಟಲ್‌ಜೀ ಅವರ ಮುತ್ಸದ್ದಿತನವನ್ನು ಪ್ರಪಂಚದ ಅಂದಿನ ರಾಜಕಾರಣಿಗಳೆಲ್ಲರೂ ಕೊಂಡಾಡಿದ್ದರು. ಆ ಕಾಲದಲ್ಲಿ ಜನಪ್ರಿಯತೆಯ ಅಲೆಯನ್ನೇರಿ ಕೀರ್ತಿಯ ಶಿಖರವನ್ನೇರಿದ್ದರು ಅಟಲ್‌ಜೀ.
ರಕ್ಷಣಾ ವಿಜ್ಞಾನದಲ್ಲಿ ಭಾರತ ಅದ್ಭುತ ಪ್ರಗತಿ ಸಾಧಿಸಿದ್ದು ಇವರ ಕಾಲದಲ್ಲೆ. 1998ರಲ್ಲಿ ಅಣ್ವಸ್ತ್ರಗಳ ಪರೀಕ್ಷೆ ನಡೆಸಿ ಭಾರತೀಯರಲ್ಲಿ ಆತ್ಮವಿಶ್ವಾಸ ಮೂಡಿಸಿದವರು ಇವರೇ. 1994ರಲ್ಲಿಯೆ ವಾಜಪೇಯಿರವರನ್ನು ಶ್ರೇಷ್ಠ ಸಂಸದೀಯ ಪಟು ಎಂದು ಸನ್ಮಾನಿಸಲಾಗಿತ್ತು.
ಅಟಲ್‌ಜೀ ಬರೀ ಪ್ರಭಾವಿ ವಕ್ತಾರರಾಗಿರಲಿಲ್ಲ, ಶುದ್ಧಮನಸ್ಸಿನ ಹಿರಿಯ ಚೇತನವಾಗಿದ್ದರು ಮತ್ತು ಯಾವುದೇ ಬಿಕಟ್ಟನ್ನು ಎದುರಿಸುವ ಮನೋಬಲವಿದ್ದ ಧೀಮಂತ ನಾಯಕರಾಗಿದ್ದರು. ‘‘ವಾಜಪೇಯಿರವರನ್ನು ರಾಜಕಾರಣಿಗಳೆಂದು ಭಾವಿಸುವುದಕ್ಕಿಂತಲೂ ಅವರನ್ನು ಮಾನವತಾವಾದಿಯೆಂದು ಭಾವಿಸುವುದು ಒಳಿತೆಂದು ವಿದೇಶಿಯರು ಗೌರವಿಸುತ್ತಿದ್ದರಂತೆ. ಲೋಕಪುರುಷರೆಂಬ ಬಿರುದು ಅವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.
ಬಿರುಗಾಳಿಯಾಗಲಿ, ಅಬ್ಬರದ ತೆರೆಗಳಾಗಲಿ, ಅವು ಸಮರ್ಥ ನಾಯಕನ ಪರವಾಗಿರುತ್ತವೆ ಎಂಬ ಮಾತಿದೆ.(The wind and waves are always on the sides of the best navigator)ಅಟಲ್ ಜೀರವರು ಸಮರ್ಥ ನಾವಿಕನಂತೆ ಬಿರುಗಾಳಿಯನ್ನು ಎದುರಿಸಿದ್ದಾರೆ, ಅಬ್ಬರದ ಅಲೆಗಳನ್ನು ಮೃದುಗೊಳಿಸಿದ್ದಾರೆ.
ಅವರಲ್ಲಿದ್ದ ಒಂದು ವಿಶೇಷವಾದ ಗುಣವೆಂದರೆ, ಅವರು ದೇಶದ ಪ್ರಧಾನಿಯಾದ ನಂತರವೂ ವಿರೋಧ ಪಕ್ಷಗಳ ಸದಸ್ಯರಿಗೆ ಉತ್ತರ ಕೊಡುವಾಗ ಗಂಭೀರವಾಗಿ, ಪ್ರಾಮಾಣಿಕತೆಯಿಂದ ವರ್ತಿಸುತ್ತಿದ್ದುದು. ಸಭೆಯ ಘನತೆಗೆ ಭಂಗತರುವ ಅಸಭ್ಯ ಭಾಷೆಯನ್ನು ಅವರು ಎಂದೂ ಉಪಯೋಗಿಸುತ್ತಿರಲಿಲ್ಲ ಎಂದರೆ ಅವರ ವ್ಯಕ್ತಿತ್ವ ತಿಳಿಯುತ್ತದೆ.
ಒಮ್ಮೆ ವಿರೋಧ ಪಕ್ಷದ ಸದಸ್ಯರೊಬ್ಬರು ‘‘ನೀವು ಚೆನ್ನಾಗಿದ್ದೀರಿ ಆದರೆ ನಿಮ್ಮ ಸಂಘಟನೆ(RSS) ಚೆನ್ನಾಗಿಲ್ಲ’’ ಎಂದು ಅಟಲ್‌ಜೀರವರನ್ನು ಪೇಚಿಗೆ ಸಿಕ್ಕಿಸುವ ನೀರಸ ಪ್ರಯತ್ನ ಮಾಡಿದ್ದರು. ಆಗ ಅಟಲ್‌ಜೀ ಫಲ ಚೆನ್ನಾಗಿದೆ, ಆದರೆ ಮರ ಚೆನ್ನಾಗಿಲ್ಲ ಎಂಬ ಮಾತು ಸಲ್ಲದು ಎಂದಾಗ ಪ್ರಶ್ನೆ ಕೇಳಿದಾತನ ಮುಖ ಬಿಳುಚಿಕೊಂಡಿತು.
ವಾಜಪೇಯಿರವರು ಕನಸುಗಾರರು ಮತ್ತು ವಾಸ್ತವಿಕ ಜಗತ್ತಿನಿಂದ ದೂರ ಎಂಬ ಆಪಾದನೆಗೆ ಉತ್ತರಿಸುತ್ತ ಮೇ ಸಪನೋಂಕಾ ಸೌದಗಾರ್ ನಹೀ ಹೂಂ. ಮೇರೆ ಪಾಂವ್ ಜಮೀನ್ ಪರ್ ರೀಕ್ ತರಹಸೇ ಜಮೇಹುವೇ ಹೈ(ನಾನು ಕನಸುಗಳ ಮಾರಾಟಗಾರನಲ್ಲ. ನನ್ನ ಕಾಲುಗಳು ಬಲವಾಗಿ ಭೂಮಿಯಲ್ಲಿ ನಿಂತಿವೆ) ಎಂದು ಹೇಳುವ ಮೂಲಕ ಪೊಳ್ಳು ಆಪಾದನೆಗಳಿಗೆ ಬ್ರೇಕ್ ಹಾಕಿದ್ದರು.
ಸರಳತೆ, ಸಜ್ಜನಿಕೆಯೇ ಮೂರ್ತರೂಪವೆತ್ತಿನಿಂತ ವ್ಯಕ್ತಿತ್ವವವರದು. ಅವರು ಸಂಸತ್ ಸದಸ್ಯರಾಗಿದ್ದಾಗ ಆಗಾಗ್ಗೆ ಗ್ವಾಲಿಯರ್ ನಗರಕ್ಕೆ ಹೋಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗ ಅವರು ಅಲ್ಲಿನ ಪಾನಿಪೂರಿ ತಿಂಡಿಯ ಚಿಕ್ಕ ಹೋಟೆಲ್ಲಿಗೆ ಹೋಗುವ ರೂಢಿಯಿತ್ತು. ಸಂಸತ್ ಸದಸ್ಯರಾದ ಮೇಲೂ ಆ ಹೋಟೆಲ್ಲಿಗೆ ಹೋಗಿ ಅದರ ಮಾಲೀಕನ ಜೊತೆ ಹರಟೆ ಹೊಡೆಯುತ್ತಾ ತಿಂಡಿ ತಿಂದು ಬರುತ್ತಿದ್ದರಂತೆ.
ಅಂದು ಡಿಸೆಂಬರ್ 26, 2003. ಜಗತ್ತಿನ ಕ್ಷೇಮ ಬಯಸುತ್ತಿದ್ದ ಕನಸುಗಾರರು(ಅಟಲ್‌ಜೀ) ಎಂಬತ್ತರ ವಸಂತ್ತಕ್ಕೆ ಕಾಲಿರಿಸಿದ್ದರು. ಆ ದಿನ ಅವರ ಅಭಿಮಾನಿಗಳು, ಸ್ನೇಹಿತರು, ಕುಟುಂದ ಸದಸ್ಯರು ಅವರಿಗೆ ಶುಭಾಶಯ ಕೋರಲು ಅವರ ಮನೆಗೆ ಧಾವಿಸಿದ್ದರು. ಎಲ್ಲರೂ ಅವರಿಗೆ ಶುಭಾಶಯವನ್ನು ಕೋರಿದಾಗ ಅಟಲ್ ಜೀರವರ ಹಾಸ್ಯಪ್ರವೃತ್ತಿ ಜಾಗೃತವಾಯಿತು.
‘‘ಅಸ್ಸೀ ಸಾಲ್ ಕೀ ವ್ಯಕ್ತಿ ಕೋ ಹ್ಯಾಪಿ ರಿಟನ್‌ಸ್ ಕಹನಾ ಸಾಹಸ ಕೀ ಕಾಮ್ ಹೈ’’(ಎಂಬತ್ತು ವರ್ಷದ ವ್ಯಕ್ತಿಗೆ ಜನ್ಮದಿನದ ಶುಭಾಶಯ ಕೋರುವುದು ಬಹಳ ಸಾಹಸದ ಮಾತಾಗಿದೆ)ಎಂದು ಹೇಳಿ ಎಲ್ಲರನ್ನು ನಗಿಸಿದ್ದರು. ಅವರ ಪ್ರತಿಯೊಂದು ಮಾತು ಕಾವ್ಯಮಯ; ಅವರ ಪ್ರತಿಯೊಂದು ಹೇಳಿಕೆಯೂ ನಾಣ್ಣುಡಿ.
ಅಟಲ್‌ಜೀ ರಾಷ್ಟ್ರದ ಪುರ್ನನಿರ್ಮಾಣಕ್ಕಾಗಿ ಜನ್ಮವೆತ್ತಿ ಬಂದ್ದಿದ್ದ ಮಹಾಪುರುಷರು. ಜನರ ಆಸೆ-ಆಕಾಂಕ್ಷೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಷ್ಟ್ರವನ್ನು ಉನ್ನತ ಆದರ್ಶಗಳತ್ತ ಮುನ್ನುಗಿಸಿದ ವ್ಯಕ್ತಿ. ಇಪ್ಪತ್ತೆರಡು ಪಕ್ಷಗಳಿಂದ ಕೂಡಿದ ಸಂಯುಕ್ತ ರಂಗ ಸರ್ಕಾರದ ಮುಖ್ಯಸ್ಥರಾಗಿ ಆಡಳಿತ ನಡೆಸಿದ್ದರು. ಭಿನ್ನ ಭಿನ್ನ ವಿಚಾರಗಳನ್ನು ಸಮನ್ವಯಗೊಳಿಸಿ, ಎಲ್ಲಾ ರಾಜಕೀಯ ಪಕ್ಷಗಳನ್ನು ಒಂದೇ ಗುರಿಯತ್ತ ಒಯ್ದಿದ್ದು ಅವರ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.
ದೇಶದ ಆರ್ಥಿಕ ಪ್ರಗತಿಯ ಕುರಿತು ಯೋಚಿಸುತ್ತಿದ್ದ ಅವರನ್ನು ವಿಕಾಸಪುರುಷನೆಂದರೆ ತಪ್ಪಾಗದು. ಅಂತಹ ಮಹಾನ್ ಚೇತನ ಅಮರವಾಯಿತು. ಬಿಂದು ಬಿಂದುವಿನಲ್ಲಿ ಸಿಂಧುವನ್ನು ಕಂಡವರು ಶಂಕರನೊಂದಿಗೆ ಸಮಾಗಮನ ನಡೆಸಲು ಹೊರಟುಬಿಟ್ಟರು. ಅಂತಹ ಅಜಾತಶತ್ರುವಿಗೆ ಈ ಅಕ್ಷರನಮನವನ್ನಲ್ಲದೆ ಇನ್ನೇನು ಅರ್ಪಿಸಲು ಸಾಧ್ಯ…
-ತೇಜಶ್ರೀ ವೆಂಕಟೇಶ್,
ಪತ್ರಿಕೋದ್ಯಮ ವಿದ್ಯಾರ್ಥಿನಿ,
ವಿವೇಕಾನಂದ ಕಾಲೇಜು, ಪುತ್ತೂರು
Discussion about this post