ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವಿಷ್ಣು ಪ್ರಾಧಾನ್ಯ ನಿರೂಪಣೆ ಇದರ ಉದ್ದೇಶ. ಇದರ ಆರು ಖಂಡಗಳಲ್ಲಿ ವಸಿಷ್ಠನ ಮೊಮ್ಮಗನಾದ ಪರಾಶರ ತನ್ನ ಶಿಷ್ಯನಾದ ಮೈತ್ರೇಯನಿಗೆ ಸೃಷ್ಟ್ಯಾದಿ ವಿವಿಧ ವಿಷಯಗಳನ್ನು ತಿಳಿಸುತ್ತಾನೆ. ಮೊದಲು ವಿಷ್ಣು ಸ್ತುತಿ ಬರುತ್ತದೆ. ಆಮೇಲೆ ಸರ್ವಸಾಧಾರಣವಾದ ಪೌರಾಣಿಕ ರೀತಿಯ ಸೃಷ್ಟಿ ವಿವರಣೆ, ಸಾಂಖ್ಯತತ್ತ್ವ ವಿಚಾರ, ವಿವಿಧ ದೇವದಾನವ ಕಥೆಗಳು, ಹಳೆಯ ರಾಜರ ಮತ್ತು ಋಷಿಗಳ ವೃತ್ತಾಂತಗಳು ಬರುತ್ತದೆ. ಸಮುದ್ರ ಮಥನ, ಲಕ್ಷ್ಮಿಯ ಉದಯ, ಧ್ರುವೋಪಾಖ್ಯಾನ, ಪ್ರಹ್ಲಾದನ ಕತೆ ಮೊದಲಾದುವು ಕತೆಗಳಲ್ಲಿ ಗಣ್ಯ.
ಎರಡನೆಯ ಖಂಡದ ಮೊದಲ ಅಧ್ಯಾಯಗಳಲ್ಲಿ ಭೂವಿವರಣೆಯ ಕಲ್ಪನಾವಿಲಾಸ ಕಾವ್ಯಮಯವಾಗಿ ಬಂದಿವೆ. ನಾಗ, ನಾಕ, ನರಕ ಲೋಕಗಳ ವೈಚಿತ್ರ್ಯವನ್ನೂ ಇಲ್ಲಿ ಕಾಣಬಹುದು. ಕಲ್ಪನಾಭೃಂಗದ ಬೆನ್ನೇರಿ ಗುಹ್ಯ, ನಕ್ಷತ್ರ, ಗ್ರಹಲೋಕಗಳಿಗೂ ಹೋಗಬಹುದು. ಒಂದು ತಾತ್ತ್ವಿಕ ಸಂವಾದಕ್ಕೆ ಉಪೋದ್ಘಾತರೂಪ ವಾಗಿ ಜಡಭರತಮುನಿಯ ಕತೆ, ಋಭು ಮತ್ತು ನಿಠಾಪುರ ಕತೆ ಬಂದಿದೆ. ಮೂರನೆಯ ಖಂಡದಲ್ಲಿ ಮನು, ಮನ್ವಂತರಗಳ ವಿವರಗಳೂ ಚತುರ್ವೇದ ವಿಚಾರವೂ ಅಷ್ಟಾದಶಪುರಾಣಗಳ ಮತ್ತು ವಿವಿಧ ಶಾಸ್ತ್ರಗಳ ಉಲ್ಲೇಖ ತುಂಬಿದೆ.
ಇಷ್ಟಲ್ಲದೆ ಯಮ, ಯಮದೂತರ ಒಂದು ಸುಂದರ ಸಂವಾದ, ವರ್ಣಾಶ್ರಮಧರ್ಮ, ಶ್ರಾದ್ಧಕರ್ಮ, ಜೈನ, ಬೌದ್ಧಮತ ವಿಡಂಬನೆಗಳು ಯಥೇಚ್ಛವಾಗಿವೆ. ನಾಲ್ಕನೆಯ ಖಂಡದಲ್ಲಿ ಪ್ರಸಿದ್ಧ ಪ್ರಾಚೀನ ರಾಜರ ವಂಶಾವಳಿ, ದಕ್ಷ, ಇಳೆ, ಇಕ್ಷ್ವಾಕು, ರೈವತ, ರೇವತಿ, ಯೌವನಾಶ್ವ, ಮಾಂಧಾತೃ, ಸೌಭರಿ, ಪುರೂರವ, ಊರ್ವಶಿ, ಯಯಾತಿ, ರಾಮ, ಪಾಂಡವ, ಕೃಷ್ಣ-ಮುಂತಾದವರ ಕಥೆಗಳು ಮತ್ತು ಮುಂದಿನ ಮಗಧರಾಜರಾದ ಶೈಶುನಾಗ, ನಂದ, ಮೌರ್ಯ, ಸುಂಗ, ಕಾಣ್ವಾಯನ, ಆಂಧಭೃತ್ಯ, ಮ್ಲೇಚ್ಛ, ಕಲ್ಕಿಗಳ ವೃತ್ತಾಂತಗಳು ನಿವೃತವಾಗಿವೆ.
ಐದನೆಯ ಖಂಡದಲ್ಲಿ ಕೃಷ್ಣನ ಜೀವನೇತಿಹಾಸ ವಿಸ್ತಾರವಾಗಿ ವರ್ಣಿತವಾಗಿದೆ. ಕೊನೆಯ ಖಂಡ ಕೃತ, ತ್ರೇತ, ದ್ವಾಪರ, ಕಲಿಯುಗಗಳ ಹಾಗೂ ಪ್ರಳಯದ ವಿವರಗಳಿಂದಲೂ ಸಂಸಾರಚಕ್ರದ ಕ್ಲೇಶಗಳಿಂದಲೂ ಮುಕ್ತಿಯ ಪ್ರಾಶಸ್ತ್ಯದಿಂದಲೂ ಅದಕ್ಕೆ ಅಗತ್ಯವಾದ ಯೋಗದ ವಿವರಣೆಯಿಂದಲೂ ಇಡೀ ಪುರಾಣದ ವಿಷಯಗಳ ಪುನಃಸ್ಮರಣೆ ಮತ್ತು ವಿಷ್ಣುಸ್ತುತಿಗಳಿಂದಲೂ ಕೂಡಿದೆ. ಪುರಾಣದ ಶ್ಲೋಕ ಸಂಖ್ಯೆ 23,000 ಎಂಬ ಹೇಳಿಕೆಯಿದ್ದರೂ ಸದ್ಯ ಕಂಡುಬರುವುದು 7,000 ಶ್ಲೋಕಗಳು ಮಾತ್ರ. ಕಾಲ ಪ್ರ.ಶ. 3ನೆಯ ಶತಮಾನ ಎನ್ನುತ್ತಾರೆ.
ವಿಷ್ಣುಪುರಾಣದ ಸೃಷ್ಟಿಕ್ರಮದ ವಿವರಣೆ ಹೆಚ್ಚು ಸ್ಥೂಲವಾಗಿ ಹೀಗಿದೆ: ವಿಷ್ಣು ಮೊದಲು ಪುರುಷನಾದ. ಅವ್ಯಕ್ತ ವ್ಯಕ್ತ ಮತ್ತು ಕಾಲಗಳು ಅವನ ಆಮೇಲಿನ ಮೂರು ಆವಿರ್ಭಾವಗಳು. ಅವ್ಯಕ್ತ, ಪ್ರಕೃತಿ ಅಥವಾ ಪ್ರಧಾನ ಎಂಬುದು ಸದಸದಾತ್ಮಕ ಮತ್ತು ತ್ರಿಗುಣಯುಕ್ತ. ಪುರುಷ, ಪ್ರಕೃತಿಗಳನ್ನು ಸೃಷ್ಟಿಕಾಲದಲ್ಲಿ ಕೂಡಿಸುವ ಮತ್ತು ಲಯಕಾಲದಲ್ಲಿ ಬಿಡಿಸುವ ಕಾಲದ ಅಸ್ತಿತ್ವ ವಾಸ್ತವಿಕ ಮತ್ತು ಅನಾದಿ. ಬ್ರಹ್ಮನುವಿಷ್ಣುವಿನ ವ್ಯಕ್ತರೂಪ. ಮೂಲಕಾರಣನಾದ ವಿಷ್ಣು ಶುದ್ಧ ಅಸ್ತಿತ್ವದ ರೂಪದಲ್ಲಿರುವುದರಿಂದ ವಾಸುದೇವ ಎನ್ನಿಸುತ್ತಾನೆ.
ಎಲ್ಲವೂ ವಿಷ್ಣುವೇ, ಎಲ್ಲದಕ್ಕೂ ಅವನೇ ಒಡೆಯ. ಸೃಷ್ಟಿಕಾಲದಲ್ಲಿ ಕೋಭ್ಯರೆನ್ನಿಸುವ ಪುರುಷ ಪ್ರಕೃತಿಗಳೂ ಸ್ವಸಂಕಲ್ಪದಿಂದ ಆಗ ಅವರಲ್ಲಿ ಹೋಗುವ ಕ್ಷೋಭನೂ ಅವನೇ ಆಗಿದ್ದಾನೆ. ಪ್ರಕೃತಿಯಿಂದ ಮಹತ್ತು ಹುಟ್ಟಿ ಆವೃತವಾಗುತ್ತದೆ. ಆವರಣ ಬಲದಿಂದ ಅದು ಸಾತ್ತ್ವಿಕ, ರಾಜಸ, ತಾಮಸ ಎಂದು ಮೂರು ವಿಧವಾಗಿ ವಿಂಗಡಗೊಳ್ಳುತ್ತದೆ. ತ್ರಿವಿಧವಾದ ಈ ಮಹತ್ತತ್ತ್ವದಿಂದ ವೈಕಾರಿಕ, ತೈಜಸ ಭೂತಾದಿ ಎಂಬ ಮೂರು ಬಗೆಯ ಅಹಂಕಾರಗಳು ಉದಯಿಸುತ್ತವೆ.
ಮಹತ್ತಿನಿಂದ ಆವೃತವಾದ ಭೂತಾದ್ಯಹಂಕಾರದಿಂದ ಶಬ್ದತನ್ಮಾತ್ರವೂ ಅದರಿಂದ ಆಕಾಶವೂ ಜನಿಸುತ್ತವೆ. ಭೂತಾದಿಯಿಂದ ಆವೃತವಾಗಿ ಆ ಮೂಲಕ ಶಬ್ದತನ್ಮಾತ್ರದಿಂದ ಭಿನ್ನವಾದ ಆಕಾಶ ಸ್ಪರ್ಶತನ್ಮಾತ್ರವನ್ನೂ ಅದು ವಾಯುವನ್ನೂ ಹೊಡೆಯುತ್ತವೆ. ಇದೇ ಮೇರೆಗೆ ವಾಯುವಿನಿಂದ ರೂಪ (ಬಣ್ಣ) ತನ್ಮಾತ್ರ, ಅದರಿಂದ ಜ್ಯೋತಿಯಿ (ಕಾವು, ಬೆಳಕು), ಜ್ಯೋತಿಯಿಂದ ರಸತನ್ಮಾತ್ರ, ಅದರಿಂದ ಜಲ, ಜಲದಿಂದ ಗಂಧತನ್ಮಾತ್ರ, ಗಂಧತನ್ಮಾತ್ರದಿಂದ ಭೂಮಿ (ಮಣ್ಣು) ಉಂಟಾದುವು.
ತೈಜಸಾಹಂಕಾರದಿಂದ ಕರ್ಮ, ಜ್ಞಾನೇಂದ್ರಿಯಗಳ ದಶಕವೂ ವೈಕಾರಿಕಾಹಂಕಾರದಿಂದ ಮನಸ್ಸೂ (ಮನ+ಬುದ್ಧಿ+ಅಹಂಕಾರ+ಚಿತ್ತ) ಉದಯಿಸುತ್ತವೆ. ಜಗತ್ತನ್ನು ಹೊರಗಿನಿಂದ ಜಲ, ಅಗ್ನಿ, ವಾಯು, ಆಕಾರ, ಭೂತಾದಿ ಮಹದವ್ಯಕ್ತಗಳು ಅನುಕ್ರಮವಾಗಿ ಸುತ್ತುವರಿದಿವೆ. ಜಗತ್ತು ಅಥವಾ ಪ್ರಪಂಚವೆಂದರೆ ತೈಜಸಾಹಂಕಾರದಿಂದ ಹುಟ್ಟಿದ ದಶೇಂದ್ರಿಯ, ಮನ, ಪಂಚತನ್ಮಾತ್ರ, ಅಹಂಕಾರ ಮತ್ತು ಮಹತ್ತುಗಳ ಏಕೀಕೃತವೂ ಸಮನ್ವಿತವೂ ಆದ ಚರಾಚರಾತ್ಮಕ ಮೊಟ್ಟೆ. ಈ ಮೊಟ್ಟೆಯ ವಿಕಸಿತರೂಪವೇ ವಿಷ್ಣುವಿನ ಶರೀರವೆನ್ನಿಸುವ ಬ್ರಹ್ಮ. ಬ್ರಹ್ಮ-ವಿಷ್ಣು-ರುದ್ರಾತ್ಮಕನಾಗಿ ವಿಷ್ಣು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುತ್ತಾನೆ. ಅಂದರೆ ಆತ ಆದಿಕಾರಣನಾದ ಪರಬ್ರಹ್ಮ. ಈ ಬಗೆಯ ಸಾಂಖ್ಯವಿಚಾರಗಳು ವಿಷ್ಣುಪುರಾಣದಲ್ಲಿವೆ.
Get in Touch With Us info@kalpa.news Whatsapp: 9481252093
Discussion about this post