ಮಕರ ರಾಶಿಯ ಪ್ರಥಮ ದ್ರೇಕ್ಕಾಣ ಫಲ-
ರೋಮಚಿತೋ ಮಕರೋ ಪರಮ ದಂಷ್ಟ್ರಃ ಸೂಕರ ಕಾಯಃ ಸಮಾನ ಶರೀರಃ
ಯೋಕ್ತ್ರಕ ಚಾಲಕ ಬಂಧನಾರಿ ರೌದ್ರಮುಖೋ ಮಕರ ಪ್ರಥಮಮಧ್ಯೇ॥
ಈ ದ್ರೇಕ್ಕಾಣಕ್ಕೆ ನೀಗಳ, ಬಂಧನ, ಶೃಂಖಲ, ಸಂಕೋಲೆ ಎಂಬ ಹೆಸರಿದೆ. ಮೂವತ್ತು ವರ್ಷಕ್ಕೊಮ್ಮೆ ಈ ದ್ರೇಕ್ಕಾಣದ ಉತ್ತರಾಷಾಢ ನಕ್ಷತ್ರದಲ್ಲಿ ಶನಿ ಸಂಚರಿಸುತ್ತಾನೆ. ಶನಿಗೆ ಒಂದು ರಾಶಿಯನ್ನು (30°) ಕ್ರಮಿಸಲು ಹೆಚ್ಚು ಕಡಿಮೆ(ಒಂದೆರಡು ದಿನ ವ್ಯತ್ಯಾಸ ಇರಬಹುದು. ವಕ್ರನಾದರೆ, ಸ್ಥಂಭನಾದರೆ ಇನ್ನೂ ಹೆಚ್ಚು ಸಮಯ ಬೇಕು) 913 ದಿನಗಳು ಬೇಕು. ಅದರಲ್ಲಿ ಈ ಮೊದಲ ಹತ್ತು ಡಿಗ್ರಿ ದಾಟಲು 300 ದಿನ ಬೇಕಾಗುತ್ತದೆ. ಈ ಬಂಧನ ದ್ರೇಕ್ಕಾಣದಲ್ಲೇ ಉತ್ತರಾಷಾಢ ನಕ್ಷತ್ರ ಇರುವುದು. ಈ ಸಲದ ಸಂಚಾರದಲ್ಲಿ ಶನಿಗೆ ರುದ್ರ ಮುಖ. ರುದ್ರನೇ ಕಾಲ. ಹಾಗಾಗಿಯೇ ಈ ವಾತಾವರಣ ನಿರ್ಮಾಣವಾಗಿದೆ.
ಈಗ ಗ್ರಹಚಾರಕ್ಕೆ ಶನಿಗೆ ವಕ್ರತೆ ಇರುವುದರಿಂದ ಈ ದ್ರೇಕ್ಕಾಣ ದಾಟಲು ಹೆಚ್ಚು ಕಾಲ ತೆಗೆದುಕೊಳ್ಳುತ್ತಾನೆ. 2020 ಜನವರಿ 24 ರಿಂದ 300 ದಿನಗಳ ಬಳಿಕ ಈ ಹತ್ತು ಡಿಗ್ರಿ ದಾಟುವ ಬದಲು, ವಕ್ರತೆ ಬಂದುದರಿಂದ ಮತ್ತೆ ಹಿಂದೆ ಸರಿಯುತ್ತಾನೆ. ಹಾಗಾಗಿ ಈ 10° ದಾಟುವುದು 2021 ಜನವರಿ 22 ಕ್ಕೆ ಉತ್ತರಾಷಾಢ ನಕ್ಷತ್ರ ಬಿಟ್ಟು ಮಕರದ 11°ಯಲ್ಲಿ ಮಕರದ ಎರಡನೆಯ ಸ್ತ್ರೀ ದ್ರೇಕ್ಕಾಣಕ್ಕೆ ಪ್ರವೇಶಿಸುತ್ತಾನೆ. ಈ ದ್ರೇಕ್ಕಾಣದ ಅಧಿಪತಿ ಶುಕ್ರ. ಈ 10 ಡಿಗ್ರಿಯ ಅವಧಿಯು ಹೇಗಿರುತ್ತದೆ ಎಂದು ಮೇಲಿನ ಶ್ಲೋಕವೇ ತಿಳಿಸುತ್ತದೆ.
ಉತ್ತರಾಷಾಢ ನಕ್ಷತ್ರ ಕಾರಕ-
ವಿಶ್ವೇಶ್ವರೇ ಮಹಾಮಂತ್ರಮಲ್ಲಕ
ಕರಿತುರಗದೇವತಾ ಭಕ್ತಾಃ
ಸ್ಥಾವರಯೋದ್ಧಾ ಭೋಗಾನ್ವಿತಶ್ಚ ಯೇ
ಚೌಜಸಯುಕ್ತಾಃ॥
ಕೃತ್ತಿಕಾ, ಉತ್ತರ, ಉತ್ತರಾಷಾಢ ನಕ್ಷತ್ರಗಳು ರವಿ ನಕ್ಷತ್ರ. ರವಿಯು ಆಡಳಿತಗಾರ. ಈಗ ಶನಿಯ ಜತೆಗೆ ಕುಜನೂ ಇದೇ ನಕ್ಷತ್ರದಲ್ಲಿ ನೈಸರ್ಗಿಕ ಕುಂಡಲಿ ಮೇಷ ರಾಶಿಗೆ ಅಷ್ಟಮಾಧಿಪತಿ, ರಾಶ್ಯಾಧಿಪತಿಯಾಗಿ ಕುಜನು ಶನಿಯೊಡನೆ ಯುದ್ಧ ಸ್ಥಿತಿಯಲ್ಲಿ ಇದ್ದಾನೆ. ಅರ್ಥಾತ್ ಆಡಳಿತಗಾರನಿಗೆ ಸರಿಯಾಗಿ ಆಡಳಿತ ಮಾಡಲು ಬಿಡ್ತಾ ಇಲ್ಲ. ನಾವು ಕಣ್ಣಾರೆ ನೋಡ್ತಾ ಇದ್ದೇವೆ ಇದನ್ನು. ಇದೇ ಮಾರ್ಚ್ ನಂತರ ಗುರುವೂ ಉತ್ತರಾಷಾಢ ನಕ್ಷತ್ರದಲ್ಲಿ ಮಕರ ರಾಶಿಗೆ ಬಂದಾಗ ಪ್ರಜೆಗಳಿಗೆ ಒಂದು ವಿವೇಚನೆ ಬರುತ್ತದೆ. ಆದರೆ ವಿವೇಚನಾ ರಹಿತ ಅನೇಕ ಪ್ರಜೆಗಳು ಸಮಸ್ಯೆ ಅನುಭವಿಸಲೂ ಇದ್ದಾರೆ. ಯಾರು ಪಾಪಿಗಳನ್ನು ಕ್ಷಮಿಸು ದೇವರೇ, ಪಾಪಿಗಳಿಗೆ ಸದ್ಬುದ್ಧಿ ಕೊಡು ಎಂದು ಪ್ರಾರ್ಥನೆ ಮಾಡದೆ, ಪಾಪಿಗಳನ್ನು ಕೊಂದು ಹಾಕಿ ಎಂಬ ಮಂತ್ರ ಜಪ ಮಾಡುತ್ತಾರೋ ಅವರಿಗೆ ಈ ಗುರುವು ಮಾರಕನಾಗುತ್ತಾನೆ. ಗುರುವು ರುದ್ರ ರೂಪ. ಮಕರದ ಈ ದ್ರೇಕ್ಕಾಣವೂ ರುದ್ರ ಮುಖ.
ನೀಗಡ ದ್ರೇಕ್ಕಾಣ ಎಂದರೆ ಬಂಧನ ಎಂದರ್ಥ. ಹನ್ನೆರಡು ರಾಶಿಗಳಲ್ಲಿ ಮಕರ ರಾಶಿಯಲ್ಲಿ ಹತ್ತು ಡಿಗ್ರಿಯಲ್ಲಿ ಮಾತ್ರ ಇದು ಇರೋದು. ಇಲ್ಲಿಗೆ ಶನಿ ಬಂದನೆಂದರೆ ಅದು ಬಂಧನ ಎಂದರ್ಥ.ಬಂಧನದ ರೂಪಗಳು ಅನೇಕ. ಒಟ್ಟಿನಲ್ಲಿ ನಾವು ಮಾಡಿಕೊಂಡ ಅಪರಾಧಕ್ಕೆ ಬಂಧಿಸಲ್ಪಡುವಿಕೆ. ಈಗ ಮನೆಯಿಂದ ಹೊರಗೆ ಹೋಗದಂತೆ ಸರಕಾರ ಆಜ್ಞೆ ಮಾಡಿದ್ದು ಬಂಧನವೆ. ಆದರೆ ಇದು ಎಚ್ಚರಿಕೆ, ಮುಂಜಾಗ್ರತೆಗಾಗಿ ಬಂಧನ.
ಹಾಗಾಗಿ, ಒಂದೆಡೆ ವಿವೇಚನೆ ಇರುವವರಿಗೆ ಕ್ಷೇಮವೂ, ಇಲ್ಲದವರಿಗೆ ಆಪತ್ತೂ ಬರಬಹುದು. ಯಾರಿಗೆ, ಯಾವ ರಾಶಿಯವರಿಗೆ ಉತ್ತಮ ಎಂದು ಕೇಳಬೇಡಿ. ಉತ್ತರ ಒಂದೆ. ವಿವೇಚನೆ ಇದೆಯೋ ಕ್ಷೇಮ. ಇಲ್ಲವೋ ಆಪತ್ತು ನಿಶ್ಚಿತ. ವಿವೇಚನೆ ಎಂಬುದು ಒಂದು ಪದ. ಅದನ್ನು ಪಾಪಿಗಳನ್ನು ಕೊಲ್ಲಿರಿ ಎಂಬಲ್ಲಿಗೂ ಉಪಯೋಗಿಸಬಹುದು, ಪಾಪ ಮಾಡುವವರನ್ನು ತಿದ್ದಿ, ಕ್ಷಮಿಸಿ ಎಂಬಲ್ಲಿಗೂ ಸೇರಿಸಬಹುದು. ಮೊದಲನೆಯದ್ದು ವಿವೇಚನೆಯ ಉದ್ವೇಗ, ಎರಡನೆಯದ್ದು ವಿವೇಚನೆ. ಪರಿಜ್ಞಾನ.
ಇಲ್ಲಿ ಒಂದು ಅಭೂತ ಪೂರ್ವ ಗ್ರಹಸ್ಥಿತಿಯು ಅದೆಷ್ಟೋ ಸಹಸ್ರವರ್ಷಗಳ ಬಳಿಕ ಕಾಣ ಸಿಗುವಂತದ್ದು. ಕುಜನಿಗೂ ಉಚ್ಛ ಕ್ಷೇತ್ರ ಮಕರ. ಶನಿಗೂ ಸ್ವಕ್ಷೇತ್ರ ಮಕರ. ಗುರುವಿಗೆ ನೀಚ ಕ್ಷೇತ್ರ. ಅಂದರೆ ದೇವಸ್ಥಾನದಲ್ಲಿ ದೇವರ ಪೂಜೆಗಳೇ ನಿಂತು ಹೋದಾವು. ಮನೆ ಮನೆಯಲ್ಲಿ ನೈಜ ಭಕ್ತಿಯಿಂದ ಪೂಜೆ, ಧ್ಯಾನಗಳು ನಡೆದಾವು. ಯಾಕೆಂದರೆ ಅಷ್ಟು ಭಯದ ವಾತಾವರಣ ಸೃಷ್ಟಿಯಾಗಲಿದೆ. ಒಂದೇ ಗ್ರಹನಿಗೆ ಯುದ್ಧ ಸ್ಥಿತಿಯ ಎರಡು ಗ್ರಹರಿಂದ ನೀಚ ಭಂಗ ರಾಜ ಯೋಗ. ಅಂದರೆ ವಿವೇಚನೆ ಇರಲಿ ಎಂದು ಹೇಳುವವರು ಒಂದೆಡೆ, ವಿವೇಚನಾ ರಹಿತರ ಒತ್ತಡ ಇನ್ನೊಂದೆಡೆ. ಆಗ ವಿವೇಚನಾ ರಹಿತರು ಅಪಾಯಕ್ಕೊಳಗಾಗಿ ಎಲ್ಲವೂ ಶಾಂತವಾಗುತ್ತದೆ.
ಮೋದಿಯವರಿಗೆ ಒತ್ತಡ ಹೆಚ್ಚಬಹುದು. ನಮ್ಮ ಮುಖ್ಯಮಂತ್ರಿಗಳು ನಿಷ್ಕ್ರಿಯರೂ ಆಗಬಹುದು. ಆದರೆ ಮೋದಿಯವರ ಜಾತಕದಲ್ಲಿ ಬಲಿಷ್ಟ ಶನಿ ಇರೋದ್ರಿಂದ ನಿಭಾಯಿಸುತ್ತಾರೆ. ಕೊನೆಗೆ ವಿವೇಚನಾ ರಹಿತರೆಲ್ಲ ಪಶ್ಚಾತ್ತಾಪ ಪಟ್ಟುಕೊಂಡು ಮೋದಿಯವರ ಬೆನ್ನ ಹಿಂದೆ ನಿಲ್ಲುವುದಕ್ಕೆ ಈ ಕರೋನ ವ್ಯಾಧಿಯು ಒಂದು ಪೀಠಿಕೆಯಾಗಲಿದೆ.
2021 ಜನವರಿ ನಂತರ ಕರೋನ ಆರ್ಭಟವು ಮಾಯವಾಗಲಿದೆ. ನಂತರವೇ ಕ್ಷೇಮವಾಗುವುದು. ಮತ್ತೊಮ್ಮೆ ಈ ಲಾಕ್ ಮುಂದುವರೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಈ ದೇಶಕ್ಕೆ ದೇವಸೇನಾನಿಯ ಅನುಗ್ರಹ ಬಲಿಷ್ಠವಾಗಬೇಕಿದೆ. ಅದಕ್ಕಾಗಿ ಪ್ರಧಾನಮಂತ್ರಿಯವರು, ಆ ದೇವ ಸೇನಾನಿಯ ದರ್ಶನ ಮಾಡಿದರೆ ಎಲ್ಲವೂ ಸುಖಾಂತ್ಯವಾದೀತು. ದೇವ ಸೇನಾನಿಯೇ ಸ್ಕಂದ, ಸುಬ್ರಹ್ಮಣ್ಯ.
ಸುಬ್ರಹ್ಮಣ್ಯನಿಗೇ ಪ್ರಾರ್ಥಿಸೋಣ.
ಲೋಕಾ ಸಮಸ್ತಾ ಸುಖಿನೋ ಭವಂತು.
Discussion about this post