ಇದು ಜಾತ್ಯಾತೀತ ರಾಷ್ಟ್ರ. ಒಪ್ಪಿಕೊಳ್ಳೋಣ ಅಥವಾ ಒಪ್ಪಿಕೊಂಡಿದ್ದೇವೆ. ಆದರೆ ಎಲ್ಲಾ ಕಡೆಯೂ it is not applicable.
ಈಗ ನಾವು ಹಿಂದೂ ದೇವಸ್ಥಾನಗಳ ವಿಚಾರ ನೋಡೋಣ. ಭಾರತೀಯ ವೇದೋಕ್ತ ಸಾಂಪ್ರದಾಯಿಕತೆಯ ದೇವ ಮಂದಿರಗಳು Museum ಆಗಲು ಸಾಧ್ಯವಿಲ್ಲ. ಇದಕ್ಕೆ ಆಗಮೋಕ್ತ ಪ್ರಾಕಾರಗಳು, ನಮಸ್ಕಾರ ಮಂಟಪ, ಗರ್ಭಗುಡಿ, ಪಾಣಿಪೀಠ, ದೇವರ ಬಿಂಬ ಇತ್ಯಾದಿಗಳ ರಚನೆಗಳಿವೆ. ಇಲ್ಲಿಗೇ ಇದು ದೇವಸ್ಥಾನವಾಗುವುದಿಲ್ಲ.
ದೇವಾಲಯಕ್ಕೆ ದೈವ ಸಾನ್ನಿಧ್ಯ ಬೇಕು
ದೇವಸ್ಥಾನ ಆಗಬೇಕಿದ್ದರೆ ದೇವ ಸಾನ್ನಿಧ್ಯ ಇರಬೇಕು. ದೇವಸಾನ್ನಿಧ್ಯ ಇರಬೇಕಾದರೆ ಆಗಮೋಕ್ತ ಪ್ರತಿಷ್ಠಾ ನಿಯಮಗಳಿವೆ. ಇದರಲ್ಲಿ ಬಿಂಬ ಶುದ್ಧಿ, ತತ್ವ ಹೋಮಾದಿಗಳ ಕಾರ್ಯಗಳೆಲ್ಲ ಆದ ನಂತರ ಮಹಾ ಬ್ರಹ್ಮ ಕಲಶಾಭಿಷೇಕ ಆಗುತ್ತದೆ. ಇಲ್ಲಿಗೇ ಈ ಪ್ರಕ್ರಿಯೆ ಮುಗಿಯುವುದೂ ಇಲ್ಲ. ನಲವತ್ತೆಂಟು ದಿನಗಳ ಬಳಿಕ ದೃಢಕಲಶಾಭಿಷೇಕ ಆದ ನಂತರ ಇದು ದೇವ ಸಾನ್ನಿಧ್ಯ ಇರುವ ದೇವಸ್ಥಾನ ಆಗುತ್ತದೆ. ಯಾರೋ ವಿಚಾರ ವಾದಿಗಳು ದೇವರು ಎಲ್ಲೆಲ್ಲಿಯೂ ಇದ್ದಾನೆ ಎಂದು ವಾದಿಸಬಹುದು.(ಹಾಗಾದರೆ ದೇವಸ್ಥಾನಕ್ಕೇ ಬರಬೇಕಾಗಿಯೂ ಇಲ್ಲ ಬಿಡಿ. ಸಂತೆ ಮಾರುಕಟ್ಟೆಗೂ ಹೋಗಿ ದೇವರನ್ನು ಕಾಣಿರಿ ಎಂದು ಹೇಳಿದರೆ ತಪ್ಪಾಗದು) ಹೌದು ದೇವರು ಎಲ್ಲೆಲ್ಲಿಯೂ ಇರುವುದು ಸಹಜ. ಆದರೆ ಅದಕ್ಕೂ ಒಂದು ಕೇಂದ್ರ ಬಿಂದುಗಳೂ ಇವೆ.
ರಸ್ತೆಯ ಇಕ್ಕೆಲಗಳಲ್ಲಿ ವಿದ್ಯುತ್ ಪ್ರವಹಿಸುವ ತಂತಿ ಇದ್ದ ಮಾತ್ರಕ್ಕೆ ಬೆಳಕು ಬರಬಹುದೇ. ಅದಕ್ಕೆ ಅದಕ್ಕೆ ತಕ್ಕಂತಹ ತಾಂತ್ರಿಕತೆ ಇದ್ದಾಗ ಫ್ಯಾನು, ಬಲ್ಬು, ರೆಫ್ರಿಜರೇಟರ್’ಗಳು ಕೆಲಸ ಮಾಡಬಹುದಷ್ಟೆ. ಅದೇ ರೀತಿ ಗಾಳಿ ಸರ್ವ ವ್ಯಾಪಿಯಾದರೂ ಗಾಳಿಯ ಅನುಭವ ನೇರವಾಗಿ ಪಡೆಯಬೇಕಾದರೆ ಫ್ಯಾನುಗಳು ಬೇಕಾಗುತ್ತದೆ. ಸರ್ವವ್ಯಾಪಿ ಭಗವಂತನಿಗೂ ಒಂದೊಂದು ಸಾನ್ನಿಧ್ಯ ಇರುತ್ತದೆ. ಅದನ್ನು ಕಲ್ಪಿಸುವವರು ನಾವೇ ಆದರೂ, ಅದೆಲ್ಲ ಒಂದು ನಿಯಮದ ಮೂಲಕವೇ ಇರುತ್ತದೆ.
ಗರ್ಭಗುಡಿಗೆ ದಿಕ್ಪಾಲಕ ಸಾನ್ನಿಧ್ಯ ಅಗತ್ಯ
ದೇವಸ್ಥಾನದ ದೇವರ ಗರ್ಭಗುಡಿಗೆ ಅಷ್ಟ ದಿಕ್ಕುಗಳಲ್ಲಿ ದಿಕ್ಪಾಲಕ ಸಾನ್ನಿಧ್ಯ ಇರಬೇಕಾಗುತ್ತದೆ. ಇದು ಕೇಂದ್ರದ ಶಕ್ತಿಯ ರಕ್ಷಣೆಗಾಗಿ, ಬಲ ವರ್ಧನೆಗಾಗಿಯೇ ಇರುವಂತದ್ದು. ಇಂತಹ ದೇವಸ್ಥಾನಗಳ ಸಾನ್ನಿಧ್ಯದ ರಕ್ಷಣೆ, ಪಾವಿತ್ರ್ಯತೆಯ ರಕ್ಷಣೆ ಕೇವಲ ಅಲ್ಲಿ ನೇಮಕಗೊಂಡ ಸಿಬ್ಬಂದಿಗಳ ಕೆಲಸ ಮಾತ್ರವೇ ಅಲ್ಲ. ಬಿಂಬ ಸಾನ್ನಿಧ್ಯ ರಕ್ಷಣೆಗೆ, ವೃದ್ಧಿಗೆ ಅರ್ಚಕರು ಬೇಕು. ವ್ಯಾವಹಾರಿಕ ರಕ್ಷಣೆ, ವೃದ್ಧಿಗಾಗಿ ಕರಣೀಕರು, ಶಾನುಭೋಗರು ಇತ್ಯಾದಿ ಸಹಾಯಕರು ಇರುತ್ತಾರೆ. ಶುಚಿತ್ವವೂ ಸಾನ್ನಿಧ್ಯ ರಕ್ಷಣೆ, ವೃದ್ಧಿಗೂ ಬೇಕು. ಅದಕ್ಕಾಗಿ ಶುಚಿತ್ವ ಮಾಡುವ ಜನರೂ ಇರುತ್ತಾರೆ.
ಇದೆಲ್ಲವೂ ಆಗಮೋಕ್ತ ಅದೃಶ್ಯ ದಿಕ್ಪಾಲಕರ ಕೆಲಸದಂತೆಯೇ ಕಣ್ಣಿಗೆ ಕಾಣುವ ಮನುಷ್ಯ ರೂಪಿಗಳು. ಇದಲ್ಲದೆ ಭಕ್ತರು ಕೂಡಾ ಭಕ್ತಿಶ್ರದ್ಧೆಯ ಮೂಲಕ, ಶುಚಿರ್ಭೂತರಾಗಿ, ನಿತ್ಯ ವೃತ ನಿಯಮದಲ್ಲಿ ಬಂದು ಹೋಗುತ್ತಾರೆ ಮತ್ತು ನೆಮ್ಮದಿಯನ್ನೂ, ದೇವತಾನುಗ್ರಹವನ್ನೂ ಪಡೆಯುತ್ತಿರುವುದರಿಂದ ಸಹಸ್ರಾರು ವರ್ಷಗಳಿಂದಲೂ ದೇವಸ್ಥಾನಕ್ಕೆ ಹೋಗುವ ಪರಿಪಾಠ ನಿರಂತರ ನಡೆದುಬಂದಿದೆ. ಇಂತಹ ಪರಿಪಾಠಗಳು ನಿತ್ಯ ನಿಯಮಗಳುಳ್ಳ ವೇದೋಕ್ತ ಸಂಪ್ರದಾಯದವರಿಗೆ ಮಾತ್ರ ಸಾಧ್ಯ. ಅಂದರೆ ಹಿಂದುಗಳಿಗೆ. ಇಲ್ಲಿ ಯಾವ ಜಾತಿಯ ಹಿಂದುಗಳೇ ಆಗಿರಲಿ, ಅವರ ಎಲ್ಲಾ ಸಂಪ್ರದಾಯಗಳೂ ವೇದೋಕ್ತವಾಗಿಯೇ ಇರುತ್ತದೆ. ಆಯಾಯ ಜಾತಿಗನುಸಾರವಾಗಿ ಸಂಪ್ರದಾಯ ವ್ಯತ್ಯಾಸಗಳಿದ್ದರೂ ಅದೆಲ್ಲವೂ ವೇದೋಕ್ತವೆ. ಇದನ್ನು ವ್ಯಾಕರಣದ ತತ್ಸಮ-ತದ್ಭವ ರೂಪ ಎನ್ನಬಹುದು. ಇಂತಹ ಭಕ್ತರು ಮಂದಿರ ಪ್ರವೇಶಿಸಿದರೆ ಮಂದಿರ ಮಲಿನವಾಗದು. ಹಿಂದು ದೇವಸ್ಥಾನಗಳ ತತ್ವ ಪರಿಜ್ಞಾನ ಇರುವ ಭಕ್ತರಿಗೆ Negative energy ಕೂಡಾ ಬರುವುದಿಲ್ಲ. ಕೆಲವೊಮ್ಮೆ ಕೆಲವೇ ಕೆಲವರಿಗೆ ದೇವಸ್ಥಾನಕ್ಕೆ ಹೋದ ತಕ್ಷಣ ತಲೆ ಸುತ್ತುವುದು, ವಿಚಿತ್ರ ಚೇಷ್ಟೆಗಳು(ನಡುಕ, ಅರಚುವುದು ಇತ್ಯಾದಿ) ಬರುವುದನ್ನು ಕಾಣಬಹುದು. ಇದು ನಿತ್ಯಾನುಷ್ಠಾನ ದೋಷದಿಂದಲೇ ಬರುವಂತದ್ದು. ಇದೂ ಒಂದು ರೀತಿಯ ರೋಗ ಬಾಧೆಯೇ ಆಗುತ್ತದೆ. ಅದರ ನಿವಾರಣೆಗೆ ಕೆಲ ವೇದೋಕ್ತ ಪರಿಹಾರಗಳೂ ಇವೆ.
ಎಲ್ಲಿ ದೋಷೋತ್ಪತ್ತಿ ಆಗುತ್ತದೆ?
ಮುಟ್ಟಾಗಿದ್ದು ಗೊತ್ತಾಗದಿದ್ದಾಗ ಅಥವಾ ಅದರ ಆಚರಣೆ ಮಾಡದಿದ್ದರೆ, ಸೂತಕಾದಿಗಳು ಇದ್ದರೆ ಇಂತಹ ಸಮಸ್ಯೆ ಬರುತ್ತದೆ. ಯಾಕೆಂದರೆ ಆ ದೇವಸ್ಥಾನವು ಪೂರ್ಣ Positive energy ತುಂಬಿದ್ದಾಗ Negative energy ಇರುವವರಿಗೆ ಬಾಧೆಯೇ ಆಗುತ್ತದೆ. ಯಾರಿಗೆ ಕನಿಷ್ಟವಾದರೂ ನಿತ್ಯಾಹ್ನಿಕ(ಮನೆಯಲ್ಲಿ ದೇವರಿಗೆ ದೀಪ ಇಡುವಂತದ್ದೋ, ಕೈ ಮುಗಿಯುವಂತದ್ದೋ, ದೇವರ ಪರಿಕಲ್ಪನೆ ಇರುವಂತದ್ದೋ ಇರಬೇಕಾಗುತ್ತದೆ) ಇರುವವರಿಗೆ ಸಮಸ್ಯೆ ಬರಲಾರದು.
ಯಾರಿಗೆ ಈ ದೇವಸ್ಥಾನ ಬಾಧೆಯೇ ಆಗುತ್ತದೆ?
ಯಾರು ದೇವತಾರಾಧನೆಯ ಅಂಗವಾದ ಗೋವನ್ನು ಭಕ್ಷಣೆ ಮಾಡುತ್ತಾರೋ ಅವರಿಗೆ ಪ್ರವೇಶ ನಿಷಿದ್ಧ. ಯಾರು ಹೆಂಡ ಕುಡಿದು ಬರುತ್ತಾರೋ ಅವರಿಗೆ ಪ್ರವೇಶ ನಿಷಿದ್ಧ. ಯಾರು ದೇವಸ್ಥಾನಕ್ಕೆ ಹೋಗುವ ದಿನ ಮಾಂಸಾಹಾರ ಮಾಡಿರುತ್ತಾರೋ ಅವರಿಗೆ ನಿಷಿದ್ಧ. ಸಾಮಾನ್ಯವಾಗಿ ನೀವು ಕೇಳಬಹುದು. ಇದನ್ನು ಹೇಗೆ ಪತ್ತೆ ಹಚ್ಚುವಿರಿ ಎಂದು. ಖಂಡಿತ ಸಾಧ್ಯವಿಲ್ಲ. ಆದರೆ ನಿತ್ಯಾನುಷ್ಟಾನ ಇರುವ ಹಿಂದುಗಳಿಗೆ ಈ ವಿಚಾರ ತಿಳಿದಿರುತ್ತದೆ ಮತ್ತು ಅವರು ಹೋಗುವುದಿಲ್ಲ ಅಥವಾ ಹೋಗಲು ಭಯ ಪಡುತ್ತಾರೆ. ಒಂದು ವೇಳೆ ಅಹಂಕಾರದಿಂದ ಹೋದರೆ ಅನಿಷ್ಟಗಳನ್ನು ಪಡೆಯುತ್ತಾರೆ. ಪಡೆಯಲಿ ಬಿಡಿ, ನಮಗೇನು? ನಾವು ತಿಳಿಸದಿದ್ದರೆ ಅದು ನಮ್ಮ ತಪ್ಪಾಗುತ್ತದೆ. ಆದರೆ ಹಿಂದುಗಳು ಅಂತಹ ಅಹಂಕಾರ ಕೃತ್ಯಕ್ಕೆ ಇಳಿಯುವುದು ಬಹಳ ವಿರಳ.
ಮುಸ್ಲಿಂ-ಕ್ರಿಶ್ಚಿಯನ್ನರಿಗೆ ದೇಗುಲ ಪ್ರವೇಶ ನಿಷಿದ್ಧ
ಇತರ ಮುಸ್ಲಿಂ, ಕ್ರಿಶ್ಚಿಯನ್ನರಿಗೆ ದೇವಸ್ಥಾನ ಪ್ರವೇಶ ಕೊಡುವುದು ತಪ್ಪಾಗುತ್ತದೆ. ಅವರ ಮೇಲಿನ ದ್ವೇಷದಲ್ಲಿ ಹೇಳ್ತಾ ಇಲ್ಲ. ಹಿಂದೂ ದೇವರ ತತ್ವಾನುಷ್ಟಾನ ಇಲ್ಲದ ಇವರಿಗೆ, ಹಿಂದೂ ದೇಗುಲ ಪ್ರವೇಶಿಸಿ ತೊಂದರೆಯಾಗಬಾರದು ಎಂಬ ಉದ್ಧೇಶದಿಂದ ಹೇಳುವುದಷ್ಟೆ. ಇಲ್ಲಿಯೂ ಯಾರು ಮುಸ್ಲಿಂ, ಯಾರು ಕ್ರಿಶ್ಚಿಯನ್ ಎಂದು ಹೇಳಲು ಸಾಧ್ಯವೇ? ಅದಕ್ಕಾಗಿ ಇಂತವರಿಗೆ ಪ್ರವೇಶ ಇಲ್ಲ ಎಂಬ ಎಚ್ಚರಿಕೆ ಫಲಕ ಹಾಕಬೇಕು. ಯಾಕೆಂದರೆ ಅವರ ಸಂಪ್ರದಾಯಗಳು ದೇವಸ್ಥಾನ ಪ್ರವೇಶಕ್ಕೆ ಹೇಳಿದುದಲ್ಲ. ಆದರೂ ಅವರೊಳಗೂ ದೇವರಿದ್ದಾನೆ. ಅವರನ್ನು ಒಳ ಬರದಂತೆ ತಡೆಯುವುದಕ್ಕೆ ನಾವು ದೇವರಿಗಿಂತಲೂ ತಿಳಿದವರಲ್ಲ ಮತ್ತು ಆ ಹಕ್ಕೂ ನಮಗಿಲ್ಲ. ಆದರೆ ನಾವಿಟ್ಟ ಆ ಮೂರ್ತಿಯ ಸಾನ್ನಿಧ್ಯವು ಹಾಳಾದರೆ ನಮ್ಮ ಕ್ರಿಯಾ ಲೋಪವಾಗುತ್ತದೆ. ಅದಕ್ಕಾಗಿ ದೇವಸ್ಥಾನದ ಪ್ರವೇಶ ದ್ವಾರದಲ್ಲೇ ದೇವರ ಅಭಿಷೇಕ ತೀರ್ಥ ಮತ್ತು ಪಂಚಗವ್ಯ ತೀರ್ಥ ನೀಡಿ ಕುಂಕುಮವೋ, ಅರಶಿಣವೋ, ಭಸ್ಮವೋ, ಗಂಧ ಪ್ರಸಾದವನ್ನೋ ಕೊಡುವ ನಿಯಮ ಮಾಡಬೇಕು. ಇದು ಪ್ರಥಮ ಶುದ್ಧೀಕರಣ.
ಒಳಗಿನ ವ್ಯವಸ್ಥೆ(ತೀರ್ಥ ಪ್ರಸಾದ) ದೇವತಾನುಗ್ರಹದ್ದಾದರೆ, ಪ್ರವೇಶದ್ವಾರದ ವಿತರಣೆಯು ಶುದ್ಧೀಕರಣದ ಕ್ರಿಯೆಯಾಗುತ್ತದೆ. ಆಯಾಯ ದೇವಸ್ಥಾನದಲ್ಲಿ ಇರುವ ಸಂಪ್ರದಾಯ ಪ್ರಕಾರ ಹಣೆಯ ತಿಲಕದೊಂದಿಗೇ ಪ್ರವೇಶಿಸಬೇಕು. ಇಷ್ಟ ಇದ್ದವರು ಬರಲಿ. ಇಲ್ಲದವರು ಹೋಗಲಿ. ದೇವಸ್ಥಾನಕ್ಕೆ ಕೈಬೀಸಿ ಕರೆಯಬಾರದು. ಯಾವ ಭಕ್ತರನ್ನೂ ಬರಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಆದರೆ ಸಂಪ್ರದಾಯಾನುಸಾರವೇ ಬರಬೇಕು, ಹೋಗಬೇಕು.
ಹರಿದ ಚಡ್ಡಿ(ಜೀನ್ಸ್) ಟೀ ಷರ್ಟು, ಪ್ಯಾಂಟ್, ಬನಿಯನ್, ಮುಡಿಕಟ್ಟದೆ ಕೂದಲು ಬಿಟ್ಟು ಬರುವಂತದ್ದು ಲೆಗ್ಗಿನ್ ಹಾಕಿ ಬರುವಂತದ್ದು ಎಲ್ಲವೂ ನಿಷೇಧಿತವೇ. ಗಂಡಸರಿಗೆ ದೋತಿ, ಪಂಚೆ, ಶಲ್ಯವಾದರೆ, ಹೆಂಗಸರಿಗೆ ಸೀರೆ, ಚೂಡಿದಾರ ಇತ್ಯಾದಿ ಧರಿಸಿಯೇ ಬರಬೇಕು ಎಂಬ ನಿಯಮ ರಚಿಸಬೇಕು. ಅದು ಆಗಲ್ಲ ಎಂದರೆ ಬರುವುದೇ ಬೇಡ. ದೇವಸ್ಥಾನವು ಪ್ರದರ್ಶನಾಲಯವಲ್ಲ. ದೇವಸ್ಥಾನವು ದೇವರ ದರ್ಶನಾಲಯ. ಇಲ್ಲಿ ದೇವತಾನುಗ್ರಹ, ನೆಮ್ಮದಿ ಇರಬೇಕು.
ಹೀಗೆ ನಿಯಮ ಮಾಡಿದರೆ ದೇವತಾ ಸಾನ್ನಿಧ್ಯವೂ ವೃದ್ಧಿಯಾಗುತ್ತದೆ, ಭಕ್ತರ ಮನದಿಚ್ಛೆಯೂ ಈಡೇರುತ್ತದೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post