ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್’ಗೆ ಸಂಬಂಧಿಸಿದಂತೆ ನಮ್ಮ ಜಿಲ್ಲೆ ಗ್ರೀನ್ ಝೋನ್’ನಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲವೊಂದು ಸಡಿಲಿಕೆಗೆ ಅವಕಾಶ ಕಲ್ಪಿಸಿದ್ದು, ಲಾಕ್ ಡೌನ್ ಪೂರ್ಣ ತೆರವುಗೊಂಡಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ವ್ಯವಸ್ಥೆ, ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಹಾಗೂ ಜನರ ಸಹಕಾರದಿಂದಾಗಿ ನಮ್ಮ ಜಿಲ್ಲೆ ಇಂದು ಗ್ರೀನ್ ಝೋನ್’ನಲ್ಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಆರ್ಥಿಕತೆಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಸರ್ಕಾರ ನಮಗೆ ಕೆಲವೊಂದು ಅವಕಾಶಗಳನ್ನು ನೀಡಿದೆ. ಆದರೆ, ಲಾಕ್ ಡೌನ್ ಹಿಂಪಡೆದಿಲ್ಲ ಅಥವಾ ಸಡಿಲಿಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಅಗತ್ಯ ಸೇವೆಗಳು ಹಾಗೂ ವಸ್ತುಗಳ ಖರೀದಿಗೆ ಎಂದಿನಂತೆ ನಿಗದಿತ ಅವಧಿಯಲ್ಲಿ ಅವಕಾಶ ಕಲ್ಪಿಸಿದ್ದು, ಕೈಗಾರಿಕೆ ಸೇರಿ ಕೆಲವು ಸ್ಥಳೀಯ ಚಟುವಟಿಕೆ, ಅಂಗಡಿಗಳ ತೆರೆಯುವಿಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ವ್ಯವಹಾರಗಳ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಅಲ್ಲದೇ, ಸರ್ಕಾರದ ಸಹಾಯಗಳನ್ನು ಪಡೆಯುವುದು, ಸರ್ಕಾರಿ ಕೆಲಸಕ್ಕೆ ತೆರಳುವುದು, ಸರ್ಕಾರಿ ಸಿಬ್ಬಂದಿಗಳು ಕಚೇರಿಗೆ ತೆರಳುವುದಕ್ಕೆ ಯಾವುದೇ ತೊಂದರೆಯಿರುವುದಿಲ್ಲ. ಆದರೆ ಯಾವುದೇ ಉದ್ದೇಶವಿಲ್ಲದೇ ಯಾರೂ ಸಹ ಅನಾವಶ್ಯಕವಾಗಿ ರಸ್ತೆಯಲ್ಲಿ ಓಡಾಡುವಂತಿಲ್ಲ. ಅನಾವಶ್ಯಕವಾಗಿ ಯಾರಾದರೂ ಓಡಾಡುವುದು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗತ್ಯತೆಗಳಿಗಾಗಿ ನಗರದಲ್ಲಿ ಸಂಚರಿಸುವ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಮುಖಕ್ಕೆ ಮಾಸ್ಕ್ ಧರಿಸಬೇಕು. ಕೈಗವಸು ಹಾಕಿಕೊಳ್ಳುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅವರು ಸೂಚಿಸಿದ್ದಾರೆ.
ಕೃಷಿ ಚಟುವಟಿಕೆ, ರಸಗೊಬ್ಬರ-ಬೀಜಗಳ ಮಾರಾಟ ಮತ್ತು ಸಾಗಾಣಿಕೆಗೆ ಯಾವುದೇ ನಿಬಂಧ ಇರುವುದಿಲ್ಲ. ಕೃಷಿಕರು ತಮ್ಮ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮತ್ತು ಊರಿಂದೂರಿಗೆ ಸಾಗಾಟ ಮಾಡಬಹುದಾಗಿದೆ ಎಂದರು.
ಕೆಲಸವನ್ನರಸಿ ಶಿವಮೊಗ್ಗ ಜಿಲ್ಲೆಗೆ ಬಂದಿದ್ದ ಹೊರರಾಜ್ಯಗಳ 400ಕ್ಕೂ ಹೆಚ್ಚಿನ ಕಾರ್ಮಿಕರು ಇದ್ದು, ಅವರುಗಳನ್ನು ಅವರ ಮೂಲಸ್ಥಳಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ತಲುಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ನಾಳೆಯೊಳಗಾಗಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಕೆ. ಶಾಂತರಾಜು ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿ-ಸಿಬ್ಬಂಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಯ ಕಲಾವಿದರು ಭಾಗವಹಿಸಿದ್ದರು.
Get in Touch With Us info@kalpa.news Whatsapp: 9481252093
Discussion about this post