ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಯುಗದ ಹಿಂದೆ ಉದಿಸಿದ ಗೀತೆಯೆಂಬ ಕೌತುಕ ಇಂದೂ ಜಗದ ಗಮನವನ್ನು ತನ್ನತ್ತ ಸೆಳೆಯುತ್ತಲೇ ಇದೆ. ಅಧ್ಯಾತ್ಮದಿಂದ ಆರಂಭಿಸಿ ಇಂದಿನ ಜೀವಿಕಾಕ್ಷೇತ್ರದ ಹಲವು ಘಟ್ಟಗಳವರೆಗೆ ಅದರ ವ್ಯಾಪ್ತಿ. ಹಲವು ಕ್ಷೇತ್ರದ ಗಣ್ಯ-ಮಹನೀಯರು ಅದನ್ನು ನೆಚ್ಚಿದ್ದಾರೆ, ಮೆಚ್ಚಿದ್ದಾರೆ. ಆದರೆ ನಾವಿನ್ನೂ ಅದರ ಆಳಕ್ಕೆ ಇಳಿದಿಲ್ಲ. ಅದರ ಕುರಿತು ಭಾರತೀಯರಿಗೆ ಆದರವಿದೆಯಾದರೂ ಬದುಕಿನಲ್ಲಿ ಅದನ್ನು ಅಳವಡಿಸಿಕೊಂಡಿಲ್ಲ. ಅದರ ಮಾರ್ಗದರ್ಶನವನ್ನು ಪಡೆದುಕೊಂಡಿಲ್ಲ. ಅದನ್ನು ನಮ್ಮದಾಗಿಸಿಕೊಂಡಿಲ್ಲ. ನಮ್ಮೊಳಗೆ ಇಳಿಸಿಕೊಂಡಿಲ್ಲ. ಮತ್ತೆ ಬಂದ ಗೀತಾ ಜಯಂತಿ ತನ್ನಿರವನ್ನು ನಮಗೆ ನೆನೆಪಿಸುತ್ತಿದೆ. ‘‘ನಿಮ್ಮ ನೋವನ್ನು ನಿವಾರಿಸಲು, ನಲಿವನ್ನು ಉದ್ದೀಪಿಸಲು ನಾನು ಸಿದ್ಧ, ಸನ್ನದ್ಧ’’ ಎಂದದು ಸಾರುತ್ತಿದೆ. ನಾವದನ್ನು ಕೇಳಿಸಿಕೊಳ್ಳಬೇಕಿದೆ.
ಗೀತೆ ಮನೆಮನೆಯ ಯಶೋಗಾಥೆಗೆ ಕಾರಣವಾಗಬೇಕು. ಅದಕ್ಕೆ ಕಾರಣವಾಗಲು ಗೀತೆ ಸಿದ್ಧ. ಕಾರಣವಾಗಿಸಿಕೊಳ್ಳಲು ನಾವು ಸಿದ್ಧರೇ?
ಸತ್ಯಕಾಮರು ನುಡಿಯುತ್ತಾರೆ-
ಗೀತೆಯನ್ನು ನಾವು ನಮ್ಮೊಳಗೆ ಬಿಟ್ಟರೆ ಅದು ಮಾಡಬೇಕಾದದ್ದನ್ನು ಮಾಡಿಯೆ ಬಿಡುತ್ತದೆ. ಕೃಷ್ಣನಿಗಿಂತ ದೊಡ್ಡವರ ಮೇಲೆ ಅದು ಏನೂ ಪರಿಣಾಮ ಮಾಡಲಿಕ್ಕಿಲ್ಲ. ಆದರೆ ಯಾರು ತನ್ನೊಳಗೆ ಅದನ್ನು ಸೇರಿಸಿಬಿಡುತ್ತಾರೋ ಅವರಿಗೆ ಪರಿಣಾಮ ಇಲ್ಲ ಎನ್ನುವುದು ಸಾಧ್ಯವೇ ಇಲ್ಲ.
ಅನುಪಮ ಸಂಗಾತಿ
ಹಿಂದಿನ ಕಾಲದಲ್ಲಿ ವೇದಾಂತದಲ್ಲಿ ಆಸಕ್ತಿ ಇದ್ದವರಷ್ಟೆ ಭಗವದ್ಗೀತೆಯ ಅಧ್ಯಯನ ಮಾಡುತ್ತಿದ್ದರು. ಆದರೆ ಈಚಿನ ಕಾಲದಲ್ಲಿ ದೈನಂದಿನ ಜೀವನದ ಎಲ್ಲ ಸನ್ನಿವೇಶಗಳಿಗೂ ಭಗವದ್ಗೀತೆಯಿಂದ ಮಾರ್ಗದರ್ಶನ ಲಭ್ಯವಿದೆ ಎಂಬುದು ಎಲ್ಲರ ಅನುಭವಕ್ಕೆ ಬಂದಿದೆ. ರಾಜಕಾರಣಿಗಳಿರಲಿ, ಉದ್ಯಮಪತಿಗಳಿರಲಿ, ವರ್ತಕರಿರಲಿ, ಸಂನ್ಯಾಸಿಗಳಿರಲಿ, ಅಧ್ಯಾತ್ಮ ಸಾಧಕರಿರಲಿ, ವಿದ್ಯಾರ್ಥಿಗಳಿರಲಿ, ಗೃಹಸ್ಥರಿರಲಿ – ಎಲ್ಲರಿಗೂ ಗೀತೆಯಿಂದ ಲಾಭವಿದೆ. ಏಕೆಂದರೆ ಗೀತೆಯು ಜ್ಞಾನಪ್ರದಾಯಿನಿಯಾದದ್ದು. ಜ್ಞಾನಶಕ್ತಿಯಿಂದಲೇ ಇಚ್ಛಾಶಕ್ತಿಯೂ, ಕ್ರಿಯಾಶಕ್ತಿಯೂ ಹುಟ್ಟುವುದು. ಗೀತೆಯ ವಾಕ್ಯಗಳು ಅವೇ ಇದ್ದರೂ ನಮ್ಮ ಮನಸ್ಸಿನ ಯೋಗ್ಯತೆ ಹೆಚ್ಚಿದ ಹಾಗೆಲ್ಲ ಗೀತೆಯಲ್ಲಿ ಹೊಸ ಹೊಸ ಅರ್ಥಗಳು ನಮಗೆ ತೋರುತ್ತಾ ಹೋಗುತ್ತವೆ. ಇದು ಗೀತೆಯ ವಿಶೇಷ. ಒಂದು ಸಾಮಾನ್ಯ ಕಥೆಯೋ, ನಾಟಕವೋ ಒಂದು ಸಲ ಓದಿದರೆ ಮುಗಿಯಿತು. ಭಗವದ್ಗೀತೆಯದರೋ ಇಡೀ ಜೀವಮಾನ ನಮ್ಮ ಜೊತೆಯಲ್ಲಿ ಸ್ನೇಹಿತನ ಹಾಗೆ ಇರುತ್ತದೆ.
ಅಹಂಕಾರ ಅತಿಯಾಗಿ ಬೆಳೆಯುವುದರಿಂದಲೇ ವ್ಯಕ್ತಿಜೀವನವೂ, ಸಾಮಾಜಿಕ ಜೀವನವೂ ಅವ್ಯವಸ್ಥಿತವಾಗುವುದು. ಆದ್ದರಿಂದ ಅಹಂಕಾರವನ್ನು ನಿಯಂತ್ರಣ ಮಾಡಿಕೊಳ್ಳುವ ವಿಧಾನಗಳನ್ನು ತಿಳಿಸಿ ಗೀತೆ ಹೇಳಿವೆ. ಎಲ್ಲರೂ ತಮ್ಮ ಅಹಂಕಾರಗಳಿಗೆ ಒಂದಷ್ಟು ಕಡಿವಾಣ ಹಾಕಿಕೊಂಡರೆ ಜಗತ್ತಿನಲ್ಲಿ ವ್ಯಕ್ತಿ- ವ್ಯಕ್ತಿ ಸಂಬಂಧ ಉದಾತ್ತ ರೀತಿಯದಾಗುತ್ತದೆ, ಜಗತ್ತು ಸುಂದರವಾಗುತ್ತದೆ, ಶಾಂತಿಮಯವಾಗುತ್ತದೆ. ಎಲ್ಲರೂ ಅವರವರಿಗೆ ವಿಹಿತವಾದ ಕರ್ತವ್ಯಗಳನ್ನು ಪೂರ್ಣ ಮನಸ್ಸಿಟ್ಟು ದಕ್ಷತೆಯಿಂದ ಮಾಡಬೇಕು ಎಂದು ಗೀತೆ ಹೇಳಿದೆ: ‘‘ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ’’
ಇಡೀ ಸಮಾಜದಲ್ಲಿ ಇಂತಹ ಕರ್ತವ್ಯಪ್ರಜ್ಞೆ ದೃಢವಾಗಿ ಇದ್ದ ಕಾಲದಲ್ಲಿ ಈಗ್ಗೆ ಇನ್ನೂರು-ಮುನ್ನೂರು ವರ್ಷ ಹಿಂದೆ-ಸರಕಾರಗಳಿಗೆ ಬಹಳ ಕಡಿಮೆ ಕೆಲಸ ಇರುತ್ತಿತ್ತು.
ವೇದಗಳೂ, ಉಪನಿಷತ್ತುಗಳೂ ಎಲ್ಲರಿಗೂ ಅರ್ಥವಗುವಂಥವಲ್ಲ. ಅವುಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪಂಡಿತರ ಸಹಾಯ ಅನಿವಾರ್ಯ. ಆದರೆ ಗೀತೆಯನ್ನು ಆಸಕ್ತರು ಯಾರು ಓದಿದರೂ ಒಂದಷ್ಟು ಅರ್ಥ ಆಗುತ್ತದೆ; ಮನನ-ಚಿಂತನೆ ಮಾಡಿದ ಹಾಗೆಲ್ಲ ಹೆಚ್ಚು ಹೆಚ್ಚು ಸೂಕ್ಷ್ಮ ಅರ್ಥಗಳು ಮನವರಿಕೆಯಾಗುತ್ತವೆ. ಆದ್ದರಿಂದಲೇ ಗೀತೆಯನ್ನು ‘‘ಪ್ರಪನ್ನಪಾರಿಜಾತಾಯ’’ ‘‘ಶರಣಾಗರಿಗೆ ಕಲ್ಪವೃಕ್ಷ’’ ಎಂದೆಲ್ಲ ಧ್ಯಾನಶ್ಲೋಕಗಳಲ್ಲಿ ವರ್ಣಿಸಿದ್ದಾರೆ.
‘‘ಗೀತಾ ಜ್ಞಾಮನಯೀ ಗಂಗಾ, ಪುನಾತಿ ಭುವನತ್ರಯಮ್’’ ‘‘ಗೀತೆಯು ಉದಾತ್ತ ಜ್ಞಾನದ ಗಂಗಾನದಿ. ಇದು ಎಲ್ಲ ಲೋಕವನ್ನೂ ಪಾವನಗೊಳಿಸುತ್ತದೆ.
ಕೃಷ್ಣಾವತಾರ
ಶ್ರೀಕೃಷ್ಣನದು ಪೂರ್ಣಾವತಾರವೆಂದು ನಮ್ಮ ಪಾರಂಪರಿಕ ವಿಶ್ವಾಸವಿದೆ. ಮನುಷ್ಯ ಪ್ರವೃತ್ತಿ ವಿಕಟತೆಗಳ ಎದುರಿನಲ್ಲಿ ಅತ್ಯಂತಿಕಧರ್ಮದ ಸಂಸ್ಥಾಪನೆ ಒಬ್ಬ ಅವತಾರಪುರುಷನಿಂದ ಹೇಗೆ ಆಯಿತು ಎನ್ನುವುದನ್ನು ಶ್ರೀಕೃಷ್ಣಚರಿತ್ರೆಯಲ್ಲಿ ಕಾಣುತ್ತೇವೆ. ಭಾಗವತದಲ್ಲಿ ಶ್ರೀಕೃಷ್ಣನದೇ ಮಾತಿದೆ:
ಬ್ರಹ್ಮನ್ ಧರ್ಮಸ್ಯ ವಕ್ತಾಹಂ ಕರ್ತಾ ತದನುಮೋದಿತಾ
ತಚ್ಛಕ್ಷಯಂಲ್ಲೋಕಮಿಮಂ ಆಸ್ಥಿತಃ ಪುತ್ರ ಮಾ ಖಿದಾ॥
‘‘ಜನರಿಗೆ ಶಿಕ್ಷಣ ಕೊಡುವುದಕ್ಕಾಗಿಯೇ ನಾನು ನಿಂತಿದ್ದೇನೆ’’ ಎಂದು ಶ್ರೀಕೃಷ್ಣನು ನಾರದರಿಗೆ ಹೇಳುತ್ತಾನೆ. ಆ ಶಿಕ್ಷಣವಷ್ಟೂ ಹರಳುಗಟ್ಟಿರುವುದು ಭಗವದ್ಗೀತೆಯಲ್ಲಿ. ಅವನ ಜೀವನದ ಮಿಕ್ಕೆಲ್ಲ ಸಾಧನೆಗಳನ್ನು ಪಕ್ಕಕ್ಕಿಟ್ಟರೂ ಅವನಿಗೆ ಅತ್ಯುಜ್ವಲ ದೀಪಧಾರಿಯ ಸ್ಥಾನವನ್ನು ದೃಢಪಡಿಸುವುದಕ್ಕೆ ಭಗವದ್ಗೀತೆಯೊಂದೇ ಸಾಕಾಗುತ್ತದೆ. ‘‘The Gita is the heart’s heart of the Mahabharatha’’ ಭಗವದ್ಗೀತೆಯನ್ನು ಲೋಕಕ್ಕೆ ಕೊಡುವುದಕ್ಕಾಗಿ ಮಹಾಭಾರತದ ರಚನೆಯಾಯಿತು ಎಂದರೆ ತಪ್ಪಾಗಲಾರದು.
ಶ್ರೀಕೃಷ್ಣ ಎಂದು ಸಂಬೋಧನೆಗೊಂಡಿರುವುದು ಸ್ವಯಂ ಪರಮಾತ್ಮನೇ. ಅರ್ಜುನನ ಸಂದಿಗ್ಧತೆಯನ್ನು ನಿಮಿತ್ತ ಮಾಡಿಕೊಂಡು ಲೋಕೋದ್ಧಾರಕ್ಕಾಗಿ ಜಗಜ್ಜೀವನದ ಮೂಲಭೂತ ಪ್ರಶ್ನೆಗಳಿಗೆ ಶ್ರೀಕೃಷ್ಣನು ಸಮಾಧಾನ ನೀಡಿದ್ದಾನೆ. ಅದನ್ನು ಮನಸ್ಸು-ಆತ್ಮದ ನಡುವಣ ಸಂವಾದವೆಂದು ಬೇಕಾದರೂ ಭಾವಿಸಬಹುದು. ಈ ಸಾರ್ವಕಾಲಿಕತೆ ಇರುವುದರಿಂದಲೇ ಈಚಿನ ದಿನಗಳಲ್ಲಿ ಅರ್ಥಶಾಸ್ತ್ರ, ವ್ಯವಸ್ಥಾಪನಾಶಾಸ್ತ್ರ ಮೊದಲಾದ ಕ್ಷೇತ್ರಗಳಿಗೆ ಭಗವದ್ಗೀತೆಯ ಸೂತ್ರೀಕರಣಗಳನ್ನು ಅನ್ವಯಿಸುವ ಪ್ರಯತ್ನಗಳಾಗಿವೆ.
ಭಗವದ್ಗೀತೆಯ ಒಂದು ಪ್ರಸಿದ್ಧ ಧ್ಯಾನಶ್ಲೋಕ ಇದು:
ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
ಶಲ್ಯಗ್ರಾಹವತೀ ಕೃಪೇಣ ವಹನೀ ಕರ್ಣೇನ ವೇಲಾಕುಲಾ
ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ॥
‘‘ಈ ಮಹಾನದಿಗೆ ಭೀಷ್ಮದ್ರೋಣರು ದಡಗಳು. ಜಯದ್ರಥನೇ ನೀರು. ಗಾಂಧಾರರಾಜನೇ ನೀಲಕಮಲ. ಶಲ್ಯನೇ ತಿಮಿಂಗಲ. ಕೃಪನೇ ಸೆಳವು. ಕರ್ಣನೇ ಮೇರೆಮೀರುವಿಕೆ. ಅಶ್ವತ್ಥಾಮ ವಿಕರ್ಣರೇ ಭೀಕರ ಮೊಸಳೆಗಳು. ದುರ್ಯೋಧನನೇ ಸುಳಿ. ಈ ದುರ್ಗಮ ನದಿಯನ್ನು ಪಾಂಡವರು ದಾಟಿದರು. ಅವರನ್ನು ದಾಟಿಸಿದವನು ಶ್ರೀಕೃಷ್ಣ.’’
ಕುರುಕ್ಷೇತ್ರಯುದ್ಧದ ಪಾತ್ರಗಳೆಲ್ಲ ವಿವಿಧ ಮನಃಪ್ರವೃತ್ತಿಗಳ ಮೂರ್ತೀಕರಣಗಳೆಂದು ಈ ವರ್ಣನೆಯಲ್ಲಿ ಧ್ವನಿತವಾಗಿದೆ. ಮಹಾಭಾರತವು ಕೇವಲ ಒಂದು ಯುದ್ಧಕಥನವಲ್ಲವೆಂದೂ ಬಹು ವಿಶಾಲವಾದ ಉದ್ದೇಶವನ್ನುಳ್ಳದ್ದೆಂದೂ ಆ ವಾಙ್ಮಯದ ವಿಸ್ತಾರದಿಂದಲೂ ಸಂಕೀರ್ಣತೆಯಿಂದಲೂ ಸ್ಫುಟಗೊಂಡಿದೆ.
ಸಾಂತ್ವನದ ಸ್ರೋತ
ಭಗವದ್ಗೀತೆಯನ್ನು ಹಿಂದಿನವರು ಪ್ರಮುಖವಾಗಿ ಪರಮಾರ್ಥಗ್ರಂಥವಾಗಿ ಕಂಡಿದ್ದರು. ಆ ಯುಗದಲ್ಲಿ ನೆಮ್ಮದಿಯನ್ನು ಕದಡುವ ವಿಕ್ಷೇಪಗಳು ಅಷ್ಟಾಗಿ ಇರದಿದ್ದುದೂ ಇದಕ್ಕೆ ಕಾರಣವಾಗಿದ್ದೀತು. ಆದರೆ ಶತಮಾನಗಳು ಕಳೆದಂತೆ ಗೀತಾಬೋಧನೆಯ ಹೆಚ್ಚಿನ ಆಯಾಮಗಳು ಅರಿವಿಗೆ ಬಂದವು. ಕಳೆದ ನೂರೈವತ್ತು-ಇನ್ನೂರು ವರ್ಷಗಳಲ್ಲಿ ದೀರ್ಘಕಾಲದಿಂದದ್ದ ನಂಬಿಕೆಗಳು ಶಿಥಿಲಗೊಂಡಿರುವುದರಿಂದಲೂ ಅವಶ್ಯವೆನಿಸಿರುವ ಸಾಂತ್ವನ-ಭರವಸೆಗಳ ಸೋತ್ರವಾಗಿ ಗೀತೆ ಜನರಿಗೆ ಕಂಡಿದೆ. ಇದರ ಲಭ್ಯತೆ ಗೀತೆಯಲ್ಲಿ ಹಿಂದಿನಿಂದ ಇದ್ದದ್ದೇ; ಪರಿವರ್ತನೆಯಾಗಿರುವುದು ಜನರ ಮನಃಸ್ಥಿತಿಯಲ್ಲಿ, ಅಷ್ಟೇ. ಗೀತೆಯ ಸಾಮಗ್ರ್ಯದೃಷ್ಟಿಯೂ ದೇಶಕಾಲಾತೀತತೆಯೂ ಎಷ್ಟೋ ಹಿಂದೆಯೇ ಸಿದ್ಧಗೊಂಡಿವೆ. ಒಂದೊಂದು ಯುಗಕ್ಕೂ ಹೊಸಹೊಸ ಅರ್ಥವೈಶಿಷ್ಟ್ಯಗಳನ್ನು ಹೊಳೆಯಿಸುವುದು ಶ್ರೇಷ್ಠವಾಙ್ಮಯದ ಲಕ್ಷಣ. ಹಿಂದೆ ಮೋಕ್ಷ ಶಾಸ್ತ್ರವೆನಿಸಿದ್ದುದು ಈಗ ನಿತ್ಯ ಜೀವನಶಾಸ್ತ್ರವಾಗಿ ಹೊಮ್ಮಿರುವುದು ಈ ಭೂಮಿಕೆಯಲ್ಲಿ.
ಧರ್ಮಸಂಸ್ಥಾಪನೆಯೇ ಗೀತಾಬೋಧೆಯ ಹೃದ್ಭಾಗವಾಗಿರುವುದರಿಂದ ಸಹಜವಾಗಿಯೇ ಲೋಕಮಾನ್ಯತಿಲಕ್, ಶ್ರೀಅರವಿಂದರು ಮೊದಲಾದವರನ್ನು ಗೀತೆ ವಿಶೇಷವಾಗಿ ಆಕರ್ಷಿಸಿತು. ವಿದೇಶೀ ದಬ್ಬಾಳಿಕೆಯನ್ನು ವಿರೋಧಿಸುವುದು ವ್ಯಾವಹಾರಿಕ ಅನಿವಾರ್ಯತೆಯಾಗಿರುವಂತೆ ಧಾರ್ಮಿಕ ಕರ್ತವ್ಯವೂ ಆಗಿದೆ ಎಂಬ ಜಾಗೃತಿಯನ್ನು ಜನಮಾನಸದಲ್ಲಿ ಮೂಡಿಸಲು ಗೀತೆಯು ಉಪಸ್ತಂಭಕವಾಯಿತು.
ಭಗವದ್ಗೀತೆಯ ಉಗಮವಾದದ್ದು ರಣಾಂಗಣದಲ್ಲಿ ಎಂಬುದು ಆಕಸ್ಮಿಕವಲ್ಲ. ಅದಕ್ಕೆ ಚೋದಕವಾದದ್ದು ದೈವ-ಆಸುರ ಪ್ರವೃತ್ತಿಗಳ ನಡುವಣ ಸಂಘರ್ಷ. ಈ ಸಂಘರ್ಷವಾದರೋ ಎಲ್ಲ ಕಾಲದಲ್ಲಿಯೂ ಇರುವಂಥದು. ಆದ್ದರಿಂದ ಅದರ ನಿರ್ವಹಣೆಗೆ ಬೇಕಾದ ವಿವೇಕವನ್ನು ಸದಾ ಅರಸುತ್ತಿರಬೇಕಾಗುತ್ತದೆ. ಇದಕ್ಕೆ ಸ್ಫುಟವಾದ ಪಥದರ್ಶನ ಲಭ್ಯವಿರುವುದು ಭಗವದ್ಗೀತೆಯಲ್ಲಿ. ಇದರಿಂದಾಗಿ ಅದಕ್ಕೆ ಲಭಿಸಿರುವ ವಿಶೇಷ ಆದರಣೀಯತೆ.
ಗೀತೆಯ ಸಾಮಗ್ರ್ಯದೃಷ್ಟಿ
ಈಚೆಗೆ ವ್ಯಕ್ತಿತ್ವವಿಕಾಸ ಎಂಬ ಹೆಸರಿನಲ್ಲಿ ದೊಡ್ಡ ಉದ್ಯೋಗ ಪಡೆದುಕೊಳ್ಳುವುದು ಹೇಗೆ, ಬಡ್ತಿ ಪಡೆಯುವುದು ಹೇಗೆ ಇಂಥವನ್ನೆಲ್ಲ ಹೇಳಿಕೊಡುತ್ತಿದ್ದಾರೆ. ಅದು ತಪ್ಪೇನಿಲ್ಲ, ಆದರೆ ಸಮಗ್ರವಲ್ಲ. ನಿಜವಾದ ವ್ಯಕ್ತಿತ್ವ ವಿಕಾಸವೆಂದರೆ ದೈಹಿಕ, ಮಾನಸಿಕ, ಬೌದ್ಧಿಕ-ಹೀಗೆ ಸರ್ವಾಂಗೀಣ ಬೆಳವಣಿಗೆ. ಅದಕ್ಕೆ ಗೀತೆಯು ಮಾರ್ಗದರ್ಶನ ಮಾಡುತ್ತದೆ.
ಗೀತೆಯಲ್ಲಿ, ಸ್ವರ್ಗ-ನರಕ, ಜನ್ಮಾಂತರ, ಸ್ವಧರ್ಮ ಆಚರಣೆಯ ಶ್ರೇಷ್ಠತೆ, ಜ್ಞಾನ-ಕರ್ಮ ಸಂಬಂಧ, ಈಶ್ವರ ಸಾಕ್ಷಾತ್ಕಾರ ವಿಧಾನ, ಯೋಗಿಯ ಲೋಕ ಹಿತದೃಷ್ಟಿ, ಉಪಾಸನೆ ಅಥವಾ ಸಾಧನೆಯ ಬೇರೆ ಬೇರೆ ರೂಪಗಳು ಮೊದಲಾದ ಅಂಶಗಳಂತೂ ಇದ್ದೇ ಇವೆ. ಆದರೆ ನಿತ್ಯಜೀವನದಲ್ಲಿ ದಕ್ಷತೆಗೆ ಅವಶ್ಯಕವಾದ ಆಹಾರ-ವಿಹಾರ ನಿಯಮಗಳು ಜಗತ್ತಿನೊಡನೆ ಹೇಗೆ ವರ್ತಿಸಬೇಕೆಂಬ ನಯ-ಇಂಥ ಹತ್ತಾರು ಸಂಗತಿಗಳನ್ನೂ ನೇರವಾಗಿಯೇ ಗೀತೆಯು ಬೋಧಿಸಿದೆ. ಭೌತಿಕ ಉನ್ನತಿಯನ್ನು ಭಗವದ್ಗೀತೆ ತಿರಸ್ಕರಿಸಿಲ್ಲ. ಪ್ರತಿಯಾಗಿ ಭೌತಿಕ ಜೀವನವನ್ನು ಅಲಕ್ಷ್ಯ ಮಾಡುವುದನ್ನು ಖಂಡಿಸಿದೆ. ಗೀತೆ ಹೇಳಿರುವುದು ಎಲ್ಲ ಪ್ರಗತಿಯೂ ಧರ್ಮದ ಚೌಕಟ್ಟಿನಲ್ಲಿ ನಡೆಯಬೇಕು ಎಂದು. ಪಾಶ್ಚಾತ್ಯರಲ್ಲಿ ಭೌತಪ್ರಗತಿಯೂ ಧಾರ್ಮಿಕ ಚಿಂತನೆಯೂ ಪ್ರತ್ಯೇಕವಾಗಿ ಇದ್ದವು. ಆದ್ದರಿಂದ ಸಂಘರ್ಷ ತಲೆದೋರಿತು. ಭಗವದ್ಗೀತೆಯು ಬಾಹ್ಯಜೀವನ, ಅಂತರಂಗಜೀವನ ಎರಡನ್ನೂ ಸಮನ್ವಯ ಮಾಡಿದೆ. ಹೀಗೆ ಗೊಂದಲ ಇಲ್ಲ. ಜೀವನವಷ್ಟೂ ದೇವರ ಉಪಾಸನೆ ಎಂದುಕೊಂಡಾಗ ಜೀವನ ಹೆಚ್ಚು ಉದಾತ್ತವಾಗುತ್ತದೆ. ಹೆಚ್ಚು ದಕ್ಷವೂ ಆಗುತ್ತದೆ. ಹೀಗೆ ಭಗವದ್ಗೀತೆಯಿಂದ ನಮಗೆ ಸಿಗುವುದು ವೈರಾಗ್ಯದ ಬೋಧನೆಯಷ್ಟೆ ಅಲ್ಲ, ಸಾರ್ಥಕ ಜೀವನದ ರೀತಿಯ ಬೋಧನೆ, ಇದರಿಂದಾಗಿಯೇ ಗೀತೆ ಎಲ್ಲ ಚಿಂತನಧಾರೆಗಳವರಿಗೂ ಪ್ರಿಯವಾಗಿರುವುದು.
ಹಲವು ಸಾವಿರ ವರ್ಷಗಳ ಹಿಂದೆ ಶ್ರೀಕೃಷ್ಣನು ನೀಡಿದ ಬೋಧನೆ ಇವತ್ತಿಗೂ ಹೇಗೆ ಲಕ್ಷಾಂತರ ಜನರಿಗೆ ಸಾಂತ್ವನ ಕೊಡುತ್ತಿದೆ ಎಂಬುದಕ್ಕೆ ಮತ್ತೊಂದು ಈಚಿನ ಉದಾಹರಣೆ ನೋಡೋಣ.
ಈಗ್ಗೆ ಕೆಲವು ಕಾಲದ ಹಿಂದೆ ಬೆಂಗಳೂರಿನ ಒಂದು ಬಡಾವಣೆಯ ನಾರಾಯಣಮೂರ್ತಿ ಎಂಬ ದಂಪತಿಗಳ ಭೇಟಿ ಆಯಿತು. ಅವರು ಏನೇನೋ ಜಟಿಲ ಸಮಸ್ಯೆಗಳಲ್ಲಿ ಸಿಕ್ಕಿಕೊಂಡು ಹನ್ನೆರಡು-ಹದಿಮೂರು ವರ್ಷ ನರಳಿದ್ದರು. ಹತಾಶರಾಗಿ ಸಮಾಧಾನಕ್ಕಾಗಿ ಪ್ರತಿದಿನ ಶ್ರದ್ಧೆಯಿಂದ ಗೀತಾಪಾರಯಣ ಮಾಡತೊಡಗಿದರು. ಕಡೆಗೆ ಪವಾಡವೆಂಬಂತೆ ಅವರ ಸಮಸ್ಯೆ ಪರಿಹಾರವಾಗಿ ಶಾಂತಿ ದೊರೆಯಿತು. ಅವರಿಗೆ ಭಗವದ್ಗೀತೆಯಲ್ಲಿ ಶ್ರದ್ಧೆ ಇನ್ನೂ ಹೆಚ್ಚಾಯಿತು. ಅವರು ಅರ್ಥಸಹಿತ ಗೀತೆಯ ಸಾವಿರಾರು ಪ್ರತಿಗಳನ್ನು ಮುದ್ರಣ ಮಾಡಿ ನೂರಾರು ಜನ ಆಸಕ್ತರಿಗೆಲ್ಲ ಉಚಿತವಾಗಿ ಹಂಚುತ್ತಿದ್ದಾರೆ. ಇಂಥ ಅನುಭವಗಳು ಅನೇಕ ಇವೆ.
ಸೈನಿಕರಿಗೂ ದೀವಿಗೆ
1999ರಲ್ಲಿ ಹಿಮಾಲಯದ ಶಿಖರದಲ್ಲಿ ಕಾರ್ಗಿಲ್ ಯುದ್ಧ ಗೆದ್ದುಕೊಳ್ಳುವುದರಲ್ಲಿ ಟೊಲೋಲಿಂಗ್ ಎಂಬ ಆಯಕಟ್ಟಾದ ಪರ್ವತ ಪ್ರದೇಶವನ್ನು ಗೆದ್ದುಕೊಳ್ಳುವುದರಲ್ಲಿ ಅತ್ಯಂತ ಶೌರ್ಯವನ್ನು ಪ್ರದರ್ಶಿಸಿದವನು 31 ವರ್ಷದ ಮೇಜರ್ ಪದ್ಮಪಾಣಿ ಆಚಾರ್ಯ. ರಾಜಪುತಾನ ಸೈನಿಕ ಪಡೆಯುವನು. ಮೂರು ವರ್ಷ ಹಿಂದೆ ತಾನೆ ಮದುವೆಯಾಗಿದ್ದ. ಇನ್ನು ಮೂರು ತಿಂಗಳಲ್ಲಿ ತಂದೆ ಆಗುವವನಿದ್ದ. ಕಾರ್ಗಿಲ್ ಯುದ್ಧದಲ್ಲಿ ಪ್ರಾಣತೆತ್ತು ಆತ ವೀರಸ್ವರ್ಗ ಸೇರಿದ. ಮರಣಕ್ಕೆ ಒಂದು ವಾರ ಮುಂಚೆ ತಂದೆಗೆ ಬರೆದ ಪತ್ರದಲ್ಲಿ ಆತ ಹೇಳಿದ್ದ:
‘‘ಶತ್ರುಗಳ ಮೇಲೆ ಆಕ್ರಮಣಕ್ಕೆ ನಾವು ಸಿದ್ಧರಾಗುತ್ತಿದ್ದೇವೆ. ನೀವು ಯಾರೂ ಚಿಂತೆ ಮಡುವುದು ಬೇಡ. ಯುದ್ಧದಲ್ಲಿ ಏನು ಆಗುತ್ತದೆ ಎಂಬುದು ನಮ್ಮ ಕೈಗಳಿಗೆ ಮೀರಿದ್ದು. ಆದರೆ ನಾವು ಸತ್ತರೂ ಉದಾತ್ತ ಗುರಿಗೋಸ್ಕರ ತಾನೆ! ಭಗವದ್ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳಿಯೇ ಇದ್ದಾನಲ್ಲ ಹತೋ ವಾ ಪ್ರಾಪ್ಸ್ಯಸಿ ಸ್ವರ್ಗಂ, ಜಿತ್ವಾ ವಾ ಭೋಕ್ಷ್ಯಸೇ ಮಹೀಮ್ ತಸ್ಮಾದುತ್ತಿಷ್ಠ ಕೌಂತೇಯ, ಯುದ್ಧಾಯ ಕೃತನಿಶ್ಚಯಃ ಎಂದು. ಸತ್ತರೆ ಸ್ವರ್ಗ; ಗೆದ್ದರೆ ಕೀರ್ತಿ, ರಾಜ್ಯ ಹೀಗಿರುವಾಗ ಮನಸ್ಸಿಗೆ ಚಿಂತೆ ಏಕೆ?’’
ಪ್ರಾಣವನ್ನು ಪಣವಾಗಿಟ್ಟು ಯುದ್ಧದಲ್ಲಿ ಹೋರಾಡುವ ಸೈನಿಕರಿಗೂ ಆತ್ಮವಿಶ್ವಾಸವೂ, ಶೌರ್ಯವಂತಿಕೆಯೂ ಭಗವದ್ಗೀತೆಯಿಂದ ಲಭ್ಯವಾಗುತ್ತಿರುವುದನ್ನು ನೋಡಿಯಾದರೂ ನಾವು ಭಗವದ್ಗೀತೆಯನ್ನು ಗೌರವಿಸೋಣ.
ಭಾರತೀಯ ಸಂಸ್ಕೃತಿಯ ಪರಿಚಾಯಕ
ಜಗತ್ತಿನ ಇತರ ಚಿಂತನಧಾರೆಗಳು ಕಷ್ಟಪಟ್ಟು ಕಂಡುಕೊಳ್ಳಲು ಯತ್ನಿಸುತ್ತಿರುವ ಜೀವನತಥ್ಯಗಳನ್ನು ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಭಗವದ್ಗೀತೆ ನಮಗೆ ತಿಳಿಸಿಕೊಟ್ಟಿದೆ.
ಯಾವುದಾದರೂ ದೇಶದ ಅಥವಾ ಜನಾಂಗದ ಪರಿಚಯ ಹೇಳಬೇಕಾದಾಗ ಅದರ ಭೌತಿಕಸಾಧನೆ, ಸಮಾಜವ್ಯವಸ್ಥೆ, ಸಾಹಿತ್ಯ, ಕಲೆ ಮೊದಲಾದ ಅಂಶಗಳನ್ನು ಪ್ರಸ್ತಾವಿಸುವುದಾಗುತ್ತದೆ. ಆದರೆ ಇಂತಹ ಅಂಶಗಳಲ್ಲಿ ಮೇಲ್ಮೈ ಸಾಧಿಸಿದ್ದರೂ ಯಾವುದೋ ಒಂದು ನಾಗರಿಕತೆ ಉಳಿಯುತ್ತದೆ ಎಂಬ ಭರವಸೆ ಇಲ್ಲ. ಕಳೆದ ಐದಾರು ಸಾವಿರ ವರ್ಷಗಳಲ್ಲಿ ನಷ್ಟವಾಗಿಹೋಗಿರುವ ನಾಲ್ಕಾರು ನಾಗರಿಕತೆಗಳು ಭೌತಮಟ್ಟದಲ್ಲಿ ಉನ್ನತಿ ಸಾಧಿಸಿದ್ದವೇ, ಆದರೆ ಅವು ಯಾವುದೂ ಉಳಿದಿಲ್ಲ. ಆದರೆ ಅರಣ್ಯಗಳಲ್ಲಿ ಕುಳಿತು ಉದಾತ್ತ ಚಿಂತನೆ ಮಾಡುತ್ತಿದ್ದ ಋಷಿಮುನಿಗಳು ರೂಪಿಸಿದ ಭಾರತೀಯ ಸಂಸ್ಕೃತಿ ಹತ್ತು ಸಾವಿರ ವರ್ಷಗಳಾದ ಮೇಲೂ ನಷ್ಟವಾಗದೇ ಉಳಿದಿದೆ. ಇದಕ್ಕೆ ಕರಣ ವೇದ-ಉಪನಿಷತ್ತುಗಳು ಮತ್ತು ಅವುಗಳ ಸಾರ ರೂಪವಾದ ಭಗವದ್ಗೀತೆ.
ಈಗ್ಗೆ ಏಳು ವರ್ಷ ಹಿಂದೆ (2007) ಕಾಶಿಯ ಒಂದು ದೇವಸ್ಥಾನಕ್ಕೆ ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ತೀರ್ಪು ನೀಡುತ್ತಾ ಅಲಹಾಬಾದ್ ಹೈಕೊರ್ಟಿನ ನ್ಯಾಯಾಧೀಶ ಶ್ರೀವಾಸ್ತವ ಎಂಬುವರು ಪ್ರಾಸಂಗಿಕವಾಗಿ ನಮ್ಮ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ ಮೊದಲಾದ ಲಾಂಛನಗಳಿರುವಂತೆ ಭಗವದ್ಗೀತೆಯನ್ನು ರಾಷ್ಟ್ರೀಯ ಧರ್ಮಶಾಸ್ತ್ರ ಗ್ರಂಥವೆಂದು ಪರಿಗಣಿಸಬೇಕು ಎಂದು ಅಭಿಪ್ರಾಯ ಕೊಟ್ಟಿದ್ದಾರೆ. ಆ ಸಲಹೆಯನ್ನು ಸರ್ಕಾರ ಮಾನ್ಯ ಮಾಡಲಿ ಬಿಡಲಿ, ಜನಮಾನಸದಲ್ಲಂತೂ ಗೀತೆಗೆ ಮೂರ್ಧನ್ಯಸ್ಥಾನ ಸಾವಿರಾರು ವರ್ಷಗಳಿಂದ ಹಿಂದೆಯೇ ಬಂದುಬಿಟ್ಟಿದೆ ಬಗೆದಷ್ಟು ಹೆಚ್ಚು ಹೆಚ್ಚು ಬೆಳಕು ಗೀತೆಯಿಂದ ಹೊಮ್ಮುತ್ತದೆ.
ಗೀತಾ ಜಯಂತಿಗೂ ಮುನ್ನ ಗೀತೆ ಇರಲಿಲ್ಲವೇ?
ಕುರುಕ್ಷೇತ್ರ ಯುದ್ಧದ ಏಕಾದಶೀ ದಿನ ಗೀತಾ ಜಯಂತಿ ಎಂದು ಗುರುತಿಸುವುದಾದರೆ ಅದಕ್ಕೆ ಮೊದಲು ಗೀತೆ ಇರಲಿಲ್ಲವೆ? ಹಾಗೆ ಇದ್ದುದಾದರೆ ಆ ಮೊದಲಿನ ದಿನ ಅದರ ಜಯಂತಿಯ ದಿನವಲ್ಲವೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಪೂರಕವಾಗಿ ಗೀತೆಯ ಜನ್ಮದಾತ ಶ್ರೀಕೃಷ್ಣನೇ ಅದರ ನಾಲ್ಕನೆಯ ಅಧ್ಯಾಯ ಜ್ಞಾನ ಕರ್ಮ ಸಂನ್ಯಾಸ ಯೋಗದಲ್ಲಿನ ಮೊದಲನೆಯ ಶ್ಲೋಕದಲ್ಲಿ ಹೇಳುವುದಾದರೂ ಏನನ್ನು:
ಇಮಂ ವಿವಸ್ವತೇ ಯೋಗಂ ಪ್ರೋಕ್ತವಾನಹಮವ್ಯಯಮ್
ವಿವಸ್ವಾನ್ ಮನವೇ ಪ್ರಾಹ ಮನುರಿಕ್ಷ್ವಾಕವೇಬ್ರವೀತ್॥
ಅವಿನಾಶಿಯಾದ ಈ ಯೋಗವನ್ನು ನಾನು ವಿವಸ್ವಾನ-ಅರ್ಥಾತ್ ಸೂರ್ಯನಿಗೆ ಹೇಳಿದೆನು. ಸೂರ್ಯನು ಅದನ್ನು ಸಕಲ ಮಾನವ ಕುಲದ ಮೂಲ ಪುರುಷ ಮನುವಿಗೆ ಹೇಳಿದನು; ಮನುವು ಇಕ್ಷ್ವಾಕುವಿಗೆ ಹೇಳಿದನು.
ಭಗವಂತನು ಮುಂದುವರಿದು ಹೀಗೆ ಹೇಳಿದನು.
ಏವಂ ಪರಂಪರಾಪ್ರಾಪ್ತಮಿಮಂ ರಾಜರ್ಷಯೋ ವಿದುಃ
ಸ ಕಾಲೇನೇಹ ಮಹತಾ ಯೋಗೋ ನಷ್ಟಃ ಪರಂತಪ॥
ಅರ್ಜುನ, ಈ ಗೀತೆಯು ಗುರು ಪರಂಪರೆಯಲ್ಲಿ ಮುಂದುವರಿದು ರಾಜರ್ಷಿಗಳ ಧರ್ಮವಾಯಿತು. ಕಾಲಕ್ರಮದಲ್ಲಿ ಈ ಪರಂಪರೆ ನಿಂತು ಹೋಯಿತು.
ಶ್ರೀಕೃಷ್ಣನ ಉವಾಚದಂತೆಯೇ ಭಗವದ್ಗೀತೆ ಬಹುಪ್ರಾಚೀನವಾದುದು. ಆದರೆ ಆ ಮಾತನ್ನು ಅರ್ಜುನ ನಂಬಬೇಕಲ್ಲ. ಅವನು ಮರುಪ್ರಶ್ನೆ ಹಾಕುತ್ತಾನೆ:
ಅಪರಂ ಭವತೋ ಜನ್ಮ ಪರಂಜನ್ಮ ವಿವಸ್ವತಃ
ಕಥಮೇತದ್ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ॥
ಸೂರ್ಯನಾದ ವಿವಸ್ವಾನನು ನಿನಗಿಂತ ಮುಂಚೆ ಹುಟ್ಟಿದವನು. ಅವನು ಹಿರಿಯ. ಅವನಿಗೆ ನೀನು ಇದನ್ನು ಬೋಧಿಸಿದೆ ಎಂದರೆ ಏನರ್ಥ?
ಶ್ರೀಕೃಷ್ಣಾರ್ಜುನರ ಕಾಲ ದ್ವಾಪರ ಯುಗ. ಸೂರ್ಯನಿಗೆ ಬೋಧನೆಯಾದ ಸಮಯ ಮನುಕುಲದ ಸೃಷ್ಟಿಗೆ ಮೊದಲು ಎಂದರೆ ತ್ರೇತಾಯುಗಕ್ಕೂ ಹಿಂದೆ. ಆಗ ಕೃಷ್ಣ ಇದ್ದನೆಂದು ಒಪ್ಪಬೇಕೆ? ಅದರಲ್ಲಿಯೂ ಕೃಷ್ಣ ಬೇರೆ ಯಾರೂ ಅಲ್ಲ, ತನ್ನ ಸಮಕಾಲೀನ ಹಾಗೂ ಸಖ. ಅರ್ಜುನನ ಸಂದೇಹ ನಿವಾರಣೆಗಾಗಿ ಕೃಷ್ಣ ಹೇಳುತ್ತಾನೆ, ‘‘ಪರಂತಪನೇ, ನೀನು ನಾನು ಅನೇಕ ಜನ್ಮಗಳನ್ನು ಕಳೆದಿದ್ದೇವೆ. ಆದರೆ ನನಗೆ ಮಾತ್ರ ಅದರ ನೆನಪಿದೆ. ನಿನಗೆ ಆ ನೆನಪಿಲ್ಲ. ಅದರಿಂದ ನೀನು ಸಂದೇಹಿಸುತ್ತಿದ್ದೀಯ. ವಾಸ್ತವವಾಗಿ ನನಗೆ ಹುಟ್ಟು ಎನ್ನುವುದೇ ಇಲ್ಲ. ನಾನು ಎಲ್ಲ ಜೀವಿಗಳ ಪ್ರಭು. ನನ್ನ ಧಾರ್ಮಿಕ ಶರೀರಕ್ಕೆ ಸಾವೆಂಬುದೇ ಇಲ್ಲ. ಆದರೂ ಪ್ರತಿ ಯುಗದಲ್ಲಿಯೂ ನಾನು ಮೂಲರೂಪದಲ್ಲಿ ಪದೇ ಪದೇ ಅವತರಿಸುತ್ತೇನೆ. ಆ ಸಮಯ ಯಾವುದೆಂದರೆ-
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್॥
ಭರತ ಕುಲದ ಸಂಜಾತನೆ, ಯಾವಾಗ ಎಲ್ಲೆಲ್ಲಿ ಧರ್ಮದ ಅವನತಿಯಾಗುತ್ತದೋ ಮತ್ತು ಅಧರ್ಮವು ವಿಜೃಂಭಿಸುತ್ತದೆಯೋ ಆಗ ನಾನು ಸ್ವಯಂ ಅವತಾರ ಮಾಡಿ ‘‘ದುಷ್ಟ ಸಂಹಾರ, ಶಿಷ್ಟ ರಕ್ಷಣೆ’’ ಮಾಡುತ್ತೇನೆ. ಅರ್ಜುನನ ಅನುಮಾನ ಪರಿಹಾರಕ್ಕಾಗಿ ಶ್ರೀಕೃಷ್ಣ ಪದೇ ಪದೇ ಹೇಳುವುದು- ‘‘ನಾನು ಸರ್ವಸ್ವ, ಅನಾದಿ. ಸೂರ್ಯನ ಬೆಳಕು, ನೀರಿನ ರುಚಿ, ವೇದದ ಓಂಕಾರ, ಆಕಾಶದ ಶಬ್ದ, ಹೂವಿನ ಪರಿಮಳ, ಅಗ್ನಿಯ ತೇಜಸ್ಸು. ಅಷ್ಟೇ ಅಲ್ಲ ಜಗತ್ತು ಯಾವುದನ್ನು ಪರಮ ಪದ ಎಂದೆನ್ನೆವುದೋ ಅದೇ ನಾನು’’.
ಶ್ರೀಕೃಷ್ಣನ ಯಾವ ಮಾತಿಗೂ ತೃಪ್ತಿ ಪಡೆಯದ ಅರ್ಜುನನನ್ನು, ಅವನ ಸಂದೇಹಗಳನ್ನು ಪರಿಹರಿಸಲು, ಗೀತಾಚಾರ್ಯನು ವಿಶ್ವ ರೂಪವನ್ನೇ ಪ್ರದರ್ಶಿಸಬೇಕಾಗುತ್ತದೆ. ಆ ವಿರಾಟ್ ಸ್ವರೂಪವನ್ನು ಕಂಡ ಮೇಲೆಯೆ ಅರ್ಜುನನಿಗೆ ಶ್ರೀಕೃಷ್ಣನ ಹಿರಿಮೆ ಅರ್ಥವಾದುದು. ಅವನು ಸಖ, ಸಾರಥಿ ಎಂಬ ಭಾವ ಹೋಗಿ ಅನಂತ ಎಂಬ ಅರಿವು ಮೂಡಿದುದು.
ಮಾರ್ಗಶಿರ ಏಕಾದಶಿಯನ್ನು ಶ್ರೀ ಗೀತಾ ಜಯಂತಿಯೆಂದು ಆಚರಿಸುವುದು ಕೇವಲ ಸಾಂಕೇತಿಕ ಮಾತ್ರ. ವರುಷದಲ್ಲಿ ಒಂದು ದಿನವಾದರೂ ಗೀತೆಯ ಸಂದೇಶವನ್ನು ನೆನೆದು ಬದುಕನ್ನು ಹಸನುಮಾಡಿಕೊಳ್ಳಲು. ಶ್ರೀ ಗೀತಾಚಾರ್ಯನ ಹಾಗೆ ಭಗವದ್ಗೀತೆಯೂ ಅನಾದಿ. ಅದನ್ನು ಕೇಳಿದುದರಲ್ಲಿ ಅರ್ಜುನ ಮೊದಲಿನವನೂ ಅಲ್ಲ- ಕೊನೆಯವನಂತೂ ಅಲ್ಲವೇ ಅಲ್ಲ. ಏಕೆಂದರೆ ಶ್ರೀಕೃಷ್ಣನ ಅನುಗ್ರಹವಿಲ್ಲದಿದ್ದರೆ ಗೀತೆ ಇಲ್ಲಿಯವರೆವಿಗೂ ಉಳಿದು ಬರುತ್ತಲೇ ಇಲ್ಲ.
ಗೀತೆಯ ಹೆಗ್ಗಳಿಕೆಯಾದರೂ ಏನು?
ಭಗವದ್ಗೀತೆಯನ್ನು ಓದಬೇಕೆಂದು ಯಾವ ಪುಸ್ತಕವನ್ನು ತೆಗೆದುಕೊಂಡರೂ ಅದರಲ್ಲಿ ಕಾಣಬರುವುದು, ಪೀಠಿಕೆಯಾಗಿ ಬರುವ ಧ್ಯಾನ ಶ್ಲೋಕಗಳು. ಈ ಶ್ಲೋಕಗಳು ಎಷ್ಟು ಪ್ರಚಲಿತವಾಗಿ, ಗೀತೆಯ ಅವಿಭಾಜ್ಯ ಅಂಗವಾಗಿವೆಯೆಂದರೆ ಅವು ಮಹಾಭಾರತದ ಮೂಲ ಗ್ರಂಥದಲ್ಲಿನ ಭಾಗದಂತೆ ಗೋಚರವಾಗುತ್ತವೆ. ಅವುಗಳ ಪಠಣ ಮಾಡದೆ ಗೀತೆಯನ್ನು ಓದಲಾರಂಭಿಸುವುದು ಸಂಕಲ್ಪ ಮಾಡದ ಪೂಜೆಯಂತೆ ನಿರರ್ಥಕವಾಗುತ್ತದೆ. ಈ ಶ್ಲೋಕಗಳು ಮಹಾಭಾರತದ ಭಾಗವಾಗಿರದೆ ಪ್ರಸಿದ್ಧ ಅದ್ವೈತಿ, ಗೀತಾ ಮಹಾ ಭಾಷ್ಯಕಾರ ಮಧುಸೂದನ ಸರಸ್ವತಿಯವರ ಕೊಡುಗೆ ಎಂದರೆ ಯಾರಿಗಾದರೂ ಅಚ್ಚರಿಯಾಗದಿರದು.
ಶತಮಾನದ ಅಗ್ರಗಣ್ಯ ವೇದಾಂತಿಯವರು ಶ್ರೀ ಭಗವದ್ಗೀತೆಗೆ ಬರೆದ ಭಾಷ್ಯವೇ ಗೂಡಾರ್ಥ ದೀಪಿಕೆ. ಈ ಶ್ಲೋಕಗಳು ಪ್ರಾರ್ಥನಾ ಪದ್ಯಗಳಾಗಿದ್ದು ಗೀತಾಚಾರ್ಯನಿಗೆ, ವ್ಯಾಸರಿಗೆ, ಗೀತೆಗೆ ಮತ್ತು ಸರಸ್ವತಿ ರೂಪಿ ಮಹಾಭಾರತಕ್ಕೆ ವಂದನೆ ಸಲ್ಲಿಸಿ ಮುಂದುವರಿಯಬೇಕೆಂದು ಹೇಳುತ್ತವೆ. ಗೀತಾ ಪಠಣದಲ್ಲಿ ಅದನ್ನು ಅರ್ಥೈಸುವುದರಲ್ಲಿ ವಿಘ್ನಗಳು ಬರಬಾರದೆಂಬುದೆ ಅವುಗಳ ಆಶಯ.
ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ
ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್
ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಂ
ಅಂಬ ತ್ವಾಮನುಸಂದಧಾಮಿ ಭಗವದ್‌ಗೀತೇ ಭವದ್ವೇಷಿಣೀಮ್॥
ಸ್ವಯಂ ನಾರಾಯಣನಿಂದಲೆ ಅರ್ಜುನನಿಗೆ ಉಪದೇಶಿಸಲ್ಪಟ್ಟು ಮಹರ್ಷಿ ವೇದವ್ಯಾಸರು ಸುರಿಸುವ ಮಹಾಭಾರತದಲ್ಲಿ ನಿರೂಪಿಸಿರುವ ಅದ್ವೈತ ಸುಧೆಯನ್ನು ಸುರಿಸುವ ಹದಿನೆಂಟು ಅಧ್ಯಾಯಗಳ ಭವವೆಂಬ ಮಿಥ್ಯೆಯ ಶತ್ರುವಾದ ಸರಸ್ವತಿಯೇ ಅಕ್ಷರ ರೂಪಿಯಲ್ಲಿ ಗೀತೆ ಎಂದು ಪ್ರಕಟವಾಗಿರುವ ನಿನಗೆ ನಮನ. ನನ್ನ ಜ್ಞಾನ ದಾಹವನ್ನು ತಣಿಸುವ ಮಾತೆಗೆ ನಮನ.
ಏಕಂ ಶಾಸ್ತ್ರಂ ದೇವಕಿಪುತ್ರಗೀತಂ
ಏಕೋ ದೇವೋ ದೇವಕೀ ಪುತ್ರ ಏವ
ಏಕೋ ಮಂತ್ರಸ್ತಸ್ಯ ನಾಮಾನಿ ಯಾನಿ
ಕರ್ಮಾಪ್ಯೇಕಂ ತಸ್ಯ ದೇವಸ್ಯ ಸೇವಾ ॥
ಶ್ರೀಕೃಷ್ಣನ ನಾಮಕ್ಕಿಂತ ಬೇರೆ ನಾಮವಿಲ್ಲ. ಅವನಿಗಿಂತ ಬೇರೆ ದೇವರಿಲ್ಲ. ಭಗವದ್ಗೀತೆಗಿಂತ ಮಿಗಿಲಾದ ಶಾಸ್ತ್ರವಿಲ. ಅವನ ಕೃಪೆಯೊಂದಿದ್ದರೆ-
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರೀಮ್
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಮ್॥
ಮೂಕನು ವಾಚಾಳಿಯಾಗುತ್ತಾನೆ. ಹೆಳವನು ಪರ್ವತವನುನ ಏರುತ್ತಾನೆ.
ಗೀತೆಗೆ ಭಾಷ್ಯ ಬರೆಯುವ ತತ್ತ್ವಜ್ಞಾನಿಗಳ್ಯಾರಿದ್ದಾರೆ. ಗೀತೆಯಲ್ಲಿ ದ್ವೈತವಿದೆಯೇ, ಅದ್ವೈತವಿದೆಯೇ ಅಥವಾ ವಿಶಿಷ್ಟಾದ್ವೈತವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುವ ಮಹರ್ಷಿ ಅರವಿಂದರು ಹೇಳುತ್ತಾರೆ:
‘‘ಗೀತೆಯ ವಿಚಾರಧಾರೆ ಶುದ್ಧ ಅದ್ವೈತವಲ್ಲ. ಅದರ ಪ್ರಣಾಳಿಕೆ ಮಾಯವಾದವಲ್ಲ. ಸನಾತನ ಪರಾ ಪ್ರಕೃತಿ ಈಶ್ವರನಲ್ಲಿ ನೆಲೆಸಿದೆಯೆಂದು ಒತ್ತಿ ಹೇಳಿದ್ದರೂ ಅದರ ವಿಚಾರ ವೇದಿಕೆ ವಿಶಿಷ್ಟಾದ್ವೈತವಲ್ಲ. ವಿವೇಚಿಸಿದ್ದರೂ ಅದರ ವಿಚಾರ ಸಾಂಖ್ಯಕ್ಕೆ ಹೊಂದುವಂತಹುದಲ್ಲ. ಗೀತೆಯು ವಿಶಿಷ್ಟ ಭಿನ್ನ ಪಂಥಗಳ ವಾದ-ವಿವಾದದಲ್ಲಿ ಬಳಸಬಲ್ಲ ಅಸ್ತ್ರವಲ್ಲ. ಅಧ್ಯಾತ್ಮಿಕ ಸತ್ಯ-ಅನುಭೂತಿಗಳ ಅಖಂಡ ವಿಶ್ವವನ್ನು ತೆರೆದು ತೋರುವ ಬಾಗಿಲಾದ ಗೀತೆಯು ಆ ಬ್ರಹ್ಮಾಂಡದಲ್ಲಿರುವ ಎಲ್ಲ ಪ್ರದೇಶಗಳ ದರ್ಶನವನ್ನು ನಮಗೆ ಮೂಡಿಸುತ್ತದೆ. ಅದು ದರ್ಶನದ ನಕ್ಷೆಯನ್ನು ರೂಪಿಸುತ್ತದಲ್ಲದೆ, ನಮ್ಮ ದೃಷ್ಟಿ ಸಂಕುಚಿತವಾಗುವಂತೆ ಗೋಡೆ ಕಟ್ಟುವುದಿಲ್ಲ. ಬೇಲಿ ಹಾಕುವುದಿಲ್ಲ, ಬಿಡಿಯಾಗಿ ತುಂಡು-ತುಣುಕು ಮಾಡುವುದಿಲ್ಲ.’’.‘‘ಅಂದಮೇಲೆ, ಗೀತಾಭ್ಯಾಸದಲ್ಲಿ ನಮ್ಮ ನಿಲುವು ಅದರ ವಿಚಾರಧಾರೆಯ ಶಾಸ್ತ್ರೀಯ ಅಥವಾ ಪಾಂಡಿತ್ಯಪೂರ್ಣ ವಿಶ್ಲೇಷಣೆಯಾಗಬೇಕಿಲ್ಲ. ತತ್ತ್ವಶಾಸ್ತ್ರೀಯ ತರ್ಕ-ವಿತರ್ಕಗಳ ಇತಿಹಾಸದಲ್ಲಿ ಅದರ ಸ್ಥಾನವನ್ನು ನಿರ್ಣಯಿಸುವುದೂ ಅಲ್ಲ. ಇಲ್ಲವೆ ವಿಶ್ಲೇಷಣಾತ್ಮಕ ತಾರ್ಕಿಕ ರೀತಿಯಲ್ಲಿ ಅದರ ವಿಚಾರಧಾರೆಯ ಪೃಥಕ್ಕರಣವನ್ನೂ ನಾವು ಮಾಡುವುದಿಲ್ಲ. ನಮ್ಮ ಆಧ್ಯಾತ್ಮಿಕ ಪಯಣದಲ್ಲಿ ಒದಗಬಲ್ಲ ಸಹಾಯ ಬೆಳಕಿಗಾಗಿ ನಮ್ಮ ಗೀತಾನು ಸಂಧಾನ.’’.
ಗೀತೆಯ ಮಹಾತ್ಮೆಯನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಆಸಕ್ತಿಯಿಂದ, ನಿರ್ಲಿಪ್ತ ಮನೋಭಾವದಿಂದ ಓದಬೇಕು. ಅದು ಯಾವುದೇ ಪ್ರಾಂತಕ್ಕೆ, ಪಂಗಡಕ್ಕೆ, ಜನಾಂಗಕ್ಕೆ, ಭಾಷೆಗೆ, ಧರ್ಮಕ್ಕೆ, ಮತಕ್ಕೆ ಸೇರಿದ ಗ್ರಂಥವಲ್ಲ. ಒಂದು ತತ್ವದ ಪ್ರತಿಪಾದನೆಗಾಗಿಯಾಗಿಲಿ, ಒಂದು ಧರ್ಮದ ಹಿರಿಮೆಗಾಗಿಯಾಗಲಿ, ಒಂದು ದೇಶದ ಅಥವಾ ಜನಾಂಗದ ಒಳಿತಿಗಾಗಿಯಾಗಿ ಹೇಳಿದ ಅಥವಾ ವ್ಯಾಸರು ಮಹಾಭಾರತದಲ್ಲಿ ಬರೆದ ಪುಸ್ತಿಕೆ ಅದಲ್ಲ. ಸಂದಿಗ್ಧ ಸ್ಥಿತಿ-ಎಲ್ಲ ಮಾನವರ ಸಹಜ ಅನುಭವ. ಆ ಸ್ಥಿತಿ ಬದುಕಿನ ಯಾವುದೇ ಸಂದರ್ಭದಲ್ಲಾಗಲಿ, ವಯಸ್ಸಿನಲ್ಲಾಗಲಿ ಬರಬಹುದು. ಯಶಸ್ಸಿನ ಉನ್ನತ ಸಂದರ್ಭದಲ್ಲಿ ಖಿನ್ನತೆ ಬಂದ ಉದಾಹರಣೆಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಕಾಣುತ್ತೇವೆ. ಹಾಗೆಯೇ ಬದುಕಿನ ಅನೇಕ ಘಟ್ಟಗಳಲ್ಲಿ ದ್ವಂದ್ವ ಉಂಟಾಗಿ ಸರಿ ಯಾವುದು, ತಪ್ಪು ಯಾವುದು ಎಂಬ ಪೀಕಲಾಟ ಶುರುವಾಗಿ ಧರ್ಮದ ಹಾದಿ ಗೋಚರಿಸದೆ ಅಂಧಕಾರ ಕವಿಯುತ್ತದೆ. ಆಗ ನೆರವಿಗೆ ಬರುವುದು, ಗೀತೆಯ ಮಹಾ ಸಂದೇಶ- ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಈ ದೀಪ-ಎಂಬ ಕವಿವಾಣಿ. ಮಹಾಭಾರತದ ಕಥೆಯನ್ನು ಅವಲೋಕಿಸಿದಾಗ, ನಿಚ್ಚಳವಾಗಿ ಕಾಣುವ ಸತ್ಯ, ಶ್ರೀಕೃಷ್ಣ ಗೀತೆಯನ್ನು ಪ್ರಪ್ರಥಮವಾಗಿ ಸೂರ್ಯನಿಗೆ ಬೋಧಿಸಿದ ಎಂಬ ಅಂಶ. ಕರ್ಣ ಎಷ್ಟಾದರೂ ಸೂರ್ಯ ಪುತ್ರನಲ್ಲವೆ? ಸಹಜವಾಗಿಯೇ ಅವನನ್ನು ಗೀತಾ ಪಾರಂಗತನೆನ್ನಬೇಕು. ಏಕೆಂದರೆ ಭಾರತ ಕಥಾನಕದ ಯಾವುದೇ ಸಂದರ್ಭದಲ್ಲಿ ಶ್ರೀಕೃಷ್ಣಪ್ರಜ್ಞೆಯನ್ನು ಮರೆತವನು ಅವನಲ್ಲ. ಅವನ ಜೀವನವೇ ಒಂದು ದ್ವಂದ್ವ.
ಕುಂತಿಯ ಮೊದಲ ಮಗನಾದರೂ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಹೆಗ್ಗಳಿಕೆ ಅವನದಲ್ಲ. ಕರ್ಣಾರ್ಜುನರ ಯುದ್ಧದ ಸಮಯದಲ್ಲಂತೂ ಅವನ ಪರೀಕ್ಷೆ ಹೇಳತೀರದು. ಯುದ್ಧದ ಮುನ್ನಾ ದಿನ ಕುಂತಿ ಅವನಿಗೆ ಅವನ ಜನ್ಮ ರಹಸ್ಯವನ್ನು ತಿಳಿಸಿ ಪಾಂಡವರು ಅವನ ಸೋದರರೆಂಬ ಸತ್ಯವನ್ನು ತಿಳಿಸಿ ಅವನ ಮನಸ್ಸು ವಿಚಲಿತಗೊಳಿಸುತ್ತಾಳೆ. ಆದರೆ ಕರ್ತವ್ಯನಿಷ್ಠನಾದ ಕರ್ಣ ಸುಯೋಧನನ ಕೈ ಬಿಡುವುದಿಲ್ಲ. ಕರ್ಣಾರ್ಜುನರು ನೇರವಾಗಿ ಒಬ್ಬರನ್ನೊಬ್ಬರು ಎದುರಿಸಿದಾಗ ಭ್ರಾತೃ ಸಂಬಂಧದ ಎಳೆಯೊಂದು ಸತ್ಯ ಗೊತ್ತಿರದ ಅರ್ಜುನನ್ನು ಬಾಧಿಸಿ, ‘‘ಕೃಷ್ಣ, ನೀನ ಹೇಳು, ನಿಜವಾಗಿಯೂ ಕರ್ಣ ಯಾರು?’’ ಎಂದು ತನ್ನ ಸಾರಥಿಯನ್ನು ಅಂಗಲಾಚುತ್ತಾನೆ. ಅರ್ಜುನನ ವಿಚಲತೆ ಕರ್ಣನಿಗಿಲ್ಲ. ಏಕೆಂದರೆ ಅರ್ಜುನ ಆಗ ತಾನೆ ಗೀತೆಯನ್ನು ಕೇಳಿದ ವಿದ್ಯಾರ್ಥಿ. ಅದರ ಆಚರಣೆ-ಅನುಷ್ಠಾನ ಅವನಿಗೆ ಹೊಸದು. ಆದರೆ ಕರ್ಣನ ಗೀತಾ ಪರಿಣತಿ ಪಿತ್ರಾರ್ಜಿತವಾದುದು. ಅದರ ಅನುಷ್ಠಾನದಲ್ಲಿ ಅಪ್ರತಿಮ ಅವನು. ಕರ್ಣ ನೇರವಾಗಿ ಅರ್ಜುನನ್ನು ಎದುರಿಸಿದಾಗ ಅವನ ಧೀಮಂತಿಕೆ, ಗೀತಾ ಶ್ರೀಮಂತಿಕೆ ಎಂತಹುದು- ಅದನ್ನು ಕುಮಾರವ್ಯಾಸನ ಬಾಯಿಯಿಂದಲೆ ಕೇಳೋಣ.
ಒಳಗೆ ಹೃದಯಾಂಬುಜದ ಮಧ್ಯ
ಸ್ಥಳದೊಳಗೆ ಮುರ ವೈರಿಯನು ಹೊರ
ವಳಯದಲಿ ಫಲುಗುಣನ ಮಣಿರಥದಗ್ರ ಭಾಗದಲಿ ಹೊಳೆವ ಹರಿಯನು ಕಂಡನಿದು ಹೊರ
ಗೊಳಗೆ ಹರಿ ತಾನೆಂಬ ಭೇದವ
ತಿಳಿದು ನಿಜದೆಚ್ಚರ ಸಮಾಧಿಯೊಳಿರ್ದನಾ ಕರ್ಣ
ಕರ್ಣನ ಹೃದಯದಲ್ಲಿ ಶ್ರೀಕೃಷ್ಣ. ಮುಂದೆ ಅರ್ಜುನನ ರಥದ ಸಾರಥಿಯೂ ಅವನೇ. ಅದೇ ಶ್ರೀಕೃಷ್ಣ. ಆ ಕೃಷ್ಣನಿಗೂ ಈ ಕೃಷ್ಣನಿಗೂ ಭೇದವೇ ಇಲ್ಲ. ಹೊರಗೆ ಒಳಗೆ ಎಲ್ಲೆಲ್ಲೂ ಹರಿಯೇ ಹರಿಯೇ ತಾನು ಎಂಬ ಅಭೇದವನ್ನು ತಿಳಿದು ನಿಜದೆಚ್ಚರ ಸಮಾಧಿ ಅರ್ಥಾತ್ ಯೋಗ ನಿದ್ರೆಯಲ್ಲಿ ಮುಳುಗುತ್ತಾನೆ ಆ ಕರ್ಣ.
ಅವನ ಭಾವವಾದರೂ ಎಂತಹುದು? ಸಲಹಿದ ಒಡೆಯನ ಅನ್ನದ ಋಣ ಸಂದಾಯಕ್ಕಾಗಿ ತನ್ನ ಪ್ರಾಣವನ್ನೇ ಕೊಡುವುದು. ಅಲ್ಲದೆ ಮರಣ ಕಾಲದಲ್ಲಿ ಶ್ರೀ ಹರಿಯನ್ನು ಕಾಣುವ, ಅವನನ್ನು ಸ್ಮರಿಸುವ ಸುಕೃತ ಯಾರಿಗುಂಟು ಈ ಭಾಗ್ಯ.
ಇಷ್ಟು ಸಾಲದೆಂಬಂತೆ, ಕರ್ಣನ ಕಿವಿಯಲ್ಲಿ ಕುಂಡಲಗಳಿರುವವರೆಗೂ ಅವನ ಪ್ರಾಣ ಹೋಗದೆಂಬ ರಹಸ್ಯವನ್ನು ಅರಿತಿದ್ದ ಶ್ರೀಕೃಷ್ಣ, ಸಾರಥಿ ವೇಷ ಕಳಚಿ ಬ್ರಾಹ್ಮಣನ ರೂಪದಲ್ಲಿ ಬಂದು ದಾನ ಶೂರ ಬಿರುದಾಂಕಿತ ಕರ್ಣನ ಕುಂಡಲಕ್ಕಾಗಿ ಬೇಡುತ್ತಾನೆ. ಆಗ ಕರ್ಣ ಆ ದಾನ ನೀಡಲು ರಣರಂಗದಲ್ಲಿ ನೀರನ್ನೆಲ್ಲಿ ತರಲಿ ಎಂದಾಗ ನಿನ್ನ ಹೃದಯದ ಗಂಗಾ ಜಲದಿಂದಲೆ ಧಾರೆಯೆರೆದು ಕೊಡು ಎನ್ನಲು, ಕ್ಷಣ ಕಾಲವೂ ಯೋಚಿಸಿದ ಕರ್ಣ ಬಾಣದಿಂದ ತನ್ನ ಎದೆಯನ್ನು ಬಗೆದು, ಅಲ್ಲಿಂದ ಚಿಮ್ಮಿದ ರಕ್ತವನ್ನೆ ಉದಕವೆಂದು ಅನುಸಂಧಾನ ಮಾಡಿ ಕುಂಡಲಗಳನ್ನು ಧಾರೆಯೆರೆದು ಕೊಡುತ್ತಾನೆ. ರಣರಂಗದಲ್ಲಿ, ಶತ್ರುವಿನೊಂದಿಗೆ ಹೋರಾಡಿ ಬಸವಳಿದ ಸಮಯದಲ್ಲಿಯೂ ಯಾಚಿಸುವ ಬ್ರಾಹ್ಮಣ ಶ್ರೀಕೃಷ್ಣನೆಂಬ ಸತ್ಯ ತಿಳಿದಿದ್ದೂ ತನ್ನ ಪ್ರಾಣವನ್ನೇ ಕೃಷ್ಣಾರ್ಪಣ ಮಾಡಿದ ಕರ್ಣ ಶ್ರೀಭಗವದ್ಗೀತೆಯ ಅನುಷ್ಠಾನದ ಜೀವಂತ ಉದಾಹರಣೆಯಲ್ಲದಿದ್ದರೆ ಮತ್ತ್ಯಾರನ್ನು ಹೆಸರಿಸಬೇಕು. ಆ ದಾನದ ಸಮಯದಲ್ಲಿ ಅಮರ ಗಣ ಜಯಕಾರ ಮಾಡಿ ಕರ್ಣನನ್ನು ಹರಸುತ್ತದೆ. ಶ್ರೀಕೃಷ್ಣ ತನ್ನ ನಿಜ ರೂಪ ತೋರಿ ಕರ್ಣನಿಗೆ ಮುಕ್ತಿಯನ್ನು ಅನುಗ್ರಹಿಸುತ್ತಾನೆ. ಕರ್ಣನ ಕೃಷ್ಣ ಭಕ್ತಿಯನ್ನು, ಗೀತಾ ತತ್ತ್ವದ ಅನುಷ್ಠಾನವನ್ನು ಕಂಡ ಶ್ರೀ ರಾಮದೂತ ಚಿರಂಜಿವಿ ಹನುಮಂತ, ‘‘ನಿನ್ನ ಸರಿದೊರೆಯನ್ನು ತ್ರೇತಾಯುಗ ಹಾಗೂ ದ್ವಾಪರಯುಗ ಎರಡರಲ್ಲಿಯೂ ನಾನು ಕಾಣಲಿಲ್ಲ’’ ಎಂದು ಉದ್ಗರಿಸುತ್ತಾನೆ.
ಅಧ್ಯಾತ್ಮಿಕ ಮನೋಧರ್ಮದವರು ವೇದಗಳನ್ನಾಗಲಿ, ಉಪನಿಷತ್ತುಗಳನ್ನಾಗಲಿ ಅಥವಾ ಇನ್ಯಾವುದೇ ಧಾರ್ಮಿಕ ಗ್ರಂಥಗಳನ್ನಾಗಲಿ ಓದುವ ಅಗತ್ಯವಿಲ್ಲ. ಇಂದಿನ ಯಾಂತ್ರಿಕ ಯುಗದಲ್ಲಿ ಪ್ರಾಪಂಚಿಕ ಚಟುವಟಿಕೆಗಳಲ್ಲಿ ಅದು ಸಾಧ್ಯವೂ ಇಲ್ಲ. ಆದರೆ ಪ್ರತಿದಿನ ಶ್ರೀ ಭಗವದ್ಗೀತೆಯ ಒಂದು ಶ್ಲೋಕವನ್ನಾದರೂ ಓದಿ ಅದನ್ನು ಅರ್ಥಮಾಡಿಕೊಂಡು ಅನುಷ್ಠಾನಕ್ಕೆ ತಂದರೆ ಅದಕ್ಕಿಂತ ಮಿಗಿಲಾದ ಪುಣ್ಯಪ್ರದ ಕಾರ್ಯವಿಲ್ಲ. ಏಕೆಂದರೆ ಬದುಕಿನ ಬವಣೆಗಳಿಂದ, ದುಃಖದಿಂದ ಆತಂಕದಿಂದ ಮುಕ್ತರಾಗಲು ಇದಕ್ಕಿಂತ ಬೇರೆ ಸುಲಭ ಮಾರ್ಗವಿಲ್ಲ.
ಭಗವದ್ಗೀತೆ ಎರಡು ಬಾರಿ ಕೊನೆಗೊಳ್ಳುತ್ತದೆ. ಮೊದಲನೆಯದಾಗಿ ಶ್ರೀಕೃಷ್ಣ ಅರ್ಜುನನೊಂದಿಗೆ ನಡೆಸುವ ಸಂವಾದವನ್ನು ಪರಿಸಮಾಪ್ತಿಗೊಳಿಸುತ್ತಾನೆ. ಅದುವರೆಗಿನ ಸಂವಾದವನ್ನು ಕೇಳಿಸಿಕೊಂಡ ಸಂಜಯ ಅದನ್ನು ಮುಂದುವರೆಸುತ್ತಾನೆ. ಹೇ ಅರ್ಜುನ ರಹಸ್ಯಗಳಲ್ಲಿ ರಹಸ್ಯವಾದುದನ್ನು ನಾನು ಈಗಾಗಲೇ ನಿನಗೆ ತಿಳಿಸಿದ್ದೇನೆ. ಅದನ್ನು ನೀನು ಹೇಗೆ ಬೇಕಾದರೂ ಸ್ವೀಕರಿಸಬಹುದು. ನಿನಗೆ ನನ್ನಲ್ಲಿ ಪೂರ್ಣ ವಿಶ್ವಾಸವಿದ್ದರೆ ಬೇರೆಲ್ಲಾ ಮಾರ್ಗಗಳನ್ನು ಬದಿಗೊತ್ತು. ನಾನು ನಿನಗೆ ಮೋಕ್ಷವನ್ನು ನೀಡಬಲ್ಲೆ ಎಂಬುದನ್ನು ತಿಳಿದುಕೋ. ಆದರೆ ಈ ಜ್ಞಾನವನ್ನು ಡಂಭಾಚಾರಿಗಳು, ವಸ್ತುವಿಷಯಗಳನ್ನು ತುಚ್ಛವಾಗಿ ನೋಡುವವರು ಅಥವಾ ಅನಾಸಕ್ತರೊಂದಿಗೆ ಹಂಚಿಕೊಳ್ಳಬೇಡ. ಯಾರು ನನ್ನಲ್ಲಿ ದೃಢವಾದ ವಿಶ್ವಾಸವನ್ನಿಟ್ಟುಕೊಂಡು ಕೇಳುತ್ತಾರೋ ಅವರಿಗೆ ನಾನು ಸಂತೋಷವನ್ನು ಪ್ರಸಾದಿಸುತ್ತೇನೆ. ನಾನು ಏನು ಹೇಳಲು ಹೊರಟಿದ್ದೇನೆ ಎಂಬುದು ನಿನಗೆ ಈಗಾಗಲೇ ಅರ್ಥವಾಗಿರಬಹುದು. ಈ ಜ್ಞಾನದಿಂದ ನಿನ್ನೊಳಗಿನ ಎಲ್ಲಾ ಭ್ರಮೆಗಳು ನೇಪಥ್ಯಕ್ಕೆ ಸಂದಿವೆ ಎಂದು ನಾನು ಭಾವಿಸುತ್ತೇನೆ (ಭಗವದ್ಗೀತೆ: 18ನೇ ಅಧ್ಯಾಯ, 63-72). ಶ್ರೀಕೃಷ್ಣನ ಉಪದೇಶದಿಂದ ತನ್ನ ಮನದೊಳಗೆ ಕವಿದಿದ್ದ ಭ್ರಮೆಗಳಲ್ಲವೂ ದೂರಾಗಿವೆ ಎನ್ನುತ್ತಾನೆ ಅರ್ಜುನ. ತನ್ನ ಮನಸ್ಸಿನಲ್ಲೀಗ ದೃಢ ನಿಶ್ಚಯ ಬಂದಿದೆ ಮನದೊಳಗಿನ ಸಂದೇಹಗಳೆಲ್ಲವೂ ದೂರಾಗಿವೆ ಎಂದು ಪುನರುಚ್ಛರಿಸುತ್ತಾನೆ. ಕುರುಕ್ಷೇತ್ರ ರಣಭೂಮಿಯಲ್ಲಿ ಶ್ರೀಕೃಷ್ಣ ಮತ್ತು ಅರ್ಜುನರ ನಡುವೆ ನಡೆದ ಸಂವಾದವನ್ನು ಕೇಳುವ ಭಾಗ್ಯವನ್ನು ನೀಡಿದ್ದು ಹಾಗೂ ಶ್ರೀಕೃಷ್ಣನ ವಿರಾಟ್ ರೂಪವನ್ನು ನೋಡಲು ದಿವ್ಯದೃಷ್ಟಿಯನ್ನು ತನಗೆ ಪ್ರಸಾದಿಸಿದ್ದಕ್ಕಾಗಿ ಸಂಜಯನು ವ್ಯಾಸರಿಗೆ ಕೃತಜ್ಞತೆ ಅರ್ಪಿಸುತ್ತಾನೆ. ಅಂತಿಮವಾಗಿ ಭಗವದ್ಗೀತೆಯ ಅಂತ್ಯದಲ್ಲಿ ಶ್ರೀಕೃಷ್ಣನನ್ನು ಕುರಿತಂತೆ ತನ್ನ ವೈಯುಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾನೆ.
(ನಾಳೆ: ಕೃಷ್ಣನಿದ್ದಲ್ಲಿ ಗೆಲುವಿದೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post