ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶ್ರೀ ಬ್ರಹ್ಮಣ್ಯತೀರ್ಥರು: ಶ್ರೀ ನರಸಿಂಹನ ಅನುಗ್ರಹದಿಂದ ಜನಿಸಿ. ಶ್ರೀ ಪುರುಷೋತ್ತಮತೀರ್ಥರಿಂದ ಯತ್ಯಾಶ್ರಮ ಪಡೆದ ಮಹಾತ್ಮ ಧನ್ಯಯತಿಗಳು. ಶ್ರೀ ವ್ಯಾಸರಾಜರ ಜನನಕ್ಕೆ ನಿಮಿತ್ತರಾಗಿ ದ್ವೈತವೇದಾಂತ ಸಾಮ್ರಾಜ್ಯ ಸಿಂಹಾಸನದ ವೀರಕೇಸರಿ ಶ್ರೀವ್ಯಾಸರಾಜರ ಗುರುಗಳು. ಸಾಧಕರ ಸಾಧನೆಗೆ ಬೇಕಾದ ಆರೋಗ್ಯವನ್ನು ಕರುಣಿಸುವ ಭಾಸ್ಕರಾಂಶರೆಂದೇ ಪ್ರಖ್ಯಾತರಾದರು. ಸಿದ್ಧಾಂತ ಪ್ರಸಾರ, ವಾದಿ ಪರಾಜಯ. ಕೆರೆ ನಿರ್ಮಾಣದಂತಹ ಕಾರ್ಯಗಳಿಂದ ತತ್ವಜ್ಞಾನ ಕ್ಷೇತ್ರ, ಕೃಷಿ ಕ್ಷೇತ್ರಗಳೆರಡಕ್ಕೂ ನೀರೆರೆದ ಮಹನೀಯರು.
ಮಾಧ್ವ ಯತಿಪರಂಪರೆಯಲ್ಲಿ ಶ್ರೇಷ್ಠರೆನಿಸಿದ ಬ್ರಹ್ಮಣ್ಯತೀರ್ಥರ ಆರಾಧನೆ ಮೇ — ರಂದು ನಡೆಯಲಿದೆ. ಅವರ ಜೀವನ-ಪವಾಡಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.
ಕಂಸಧ್ವಂಸಿಪದಾಂಭೋಜ ಸಂಸಕ್ತೋ ಹಂಸಪುಂಗವಃ |
ಬ್ರಹ್ಮಣ್ಯಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||
(ಶ್ರೀ ವ್ಯಾಸರಾಜರು- ತಾತ್ಪರ್ಯಚಂದ್ರಿಕಾ)
ಜ್ಞಾನಮಂಟಪವೆಂದು ಪ್ರಸಿದ್ಧವಾದ ಅಬ್ಬೂರಿನ ಭವ್ಯ ಬೃಂದಾವನದಲ್ಲಿ ವಿರಾಜಮಾನರಾಗಿರುವ ಭಾಸ್ಕರಾಂಶ ಸಂಭೂತರಾದ ಶ್ರೀಬ್ರಹ್ಮಣ್ಯತೀರ್ಥರ ಸಿದ್ಧಿ ಸಾಧನೆಗಳು ಅಪೂರ್ವವಾದುದು, ಸನ್ಯಾಸಿಗಳು ಹೇಗಿರಬೇಕೆಂದು ತಮ್ಮ ಬದುಕಿನ ಮೂಲಕ ತಿಳಿಸಿಕೊಟ್ಟ ಅವರು ಸನ್ಯಾಸ ಕುಲಕ್ಕೆ ಕಾಂತಿಯುತ ದೀಪದಂತೆ ಬೆಳಗಿದ ಯತಿವರೇಣ್ಯರು. ಕರ್ನಾಟಕ ವಿದ್ಯಾಸಿಂಹಾಸನಾಧೀಶ್ವರರಾದ ಶ್ರೀವ್ಯಾಸರಾಜರಂತಹ ಸೀಮಾಪುರಷರನ್ನು ಆಧ್ಯಾತ್ಮ ಜಗತ್ತಿಗೆ ಬಳುವಳಿಯಾಗಿ ಕೊಟ್ಟ ಹಿರಿಮೆ ಅವರದು.
ಆಚಾರ್ಯ ಮಧ್ವರ ಪರಂಪರೆಯಲ್ಲಿ ಶ್ರೀ ಪದ್ಮನಾಭತೀರ್ಥ, ನರಹರಿತೀರ್ಥ, ಮಾಧವತೀರ್ಥ ಮತ್ತು ಅಕ್ಷೋಭ್ಯತೀರ್ಥ, ಅನಂತರ ಜಯತೀರ್ಥ, ವಿದ್ಯಾಧಿರಾಜರು, ರಾಜೇಂದ್ರತೀರ್ಥ, ಜಯಧ್ವಜತೀರ್ಥರ ಅನಂತರ ಪುರುಷೋತ್ತಮತೀರ್ಥರಿಂದ ಆಶ್ರಮ ಸ್ವೀಕರಿಸಿದ ಮಹಾನುಭಾವರೇ ಬ್ರಹ್ಮಣ್ಯತೀರ್ಥರು.
ಬ್ರಹ್ಮಣ್ಯತೀರ್ಥರ ಕಾಲ 1443 ರಿಂದ 1467. ನರಸಿಂಹನೆಂಬ ಜನ್ಮನಾಮದಿಂದ ಅಬ್ಬೂರಿನಲ್ಲಿ ಜನಿಸಿ, 8ನೇ ವಯಸ್ಸಿನಲ್ಲಿ ಉಪನಯನಗೊಂಡು, ಶ್ರೀಪುರುಷೋತ್ತಮತೀರ್ಥರಿಗೆ ಸ್ವಪ್ನಸೂಚಿತವಾಗಿ ಅದರಂತೆ ಅವರು ನರಸಿಂಹನಿಗೆ ಸನ್ಯಾಸವನ್ನು ನೀಡಿದರು; ಇವರೇ ಮುಂದೆ ಬ್ರಹ್ಮಣ್ಯತೀರ್ಥರೆಂದು ಪ್ರಸಿದ್ಧರಾದರು.
ಮಧುಕರ ವೃತ್ತಿ
ಶ್ರೀ ಬ್ರಹ್ಮಣ್ಯತೀರ್ಥರು ಪ್ರತಿದಿನ ಕಣ್ವನದಿಯಲ್ಲಿ ತಮ್ಮ ಶಿಷ್ಯರು ಮಧುಕರವೃತ್ತಿಯಿಂದ ತರುತ್ತಿದ್ದ ಪಕ್ವಾನ್ನವನ್ನು ಶ್ರೀನರಸಿಂಹದೇವರಿಗೆ ಅರ್ಪಿಸಿ ಶಿಷ್ಯರೊಂದಿಗೆ ಭೋಜನ ಮಾಡುತ್ತಿದ್ದರು. ಹೀಗೆ ಅವರ ತಪಸ್ಸು ಅವಿಚ್ಛಿನ್ನವಾಗಿತ್ತು. ಅವರು ಶಿಷ್ಯರು ತಂದ ಭಿಕ್ಷಾನ್ನವನ್ನು ಪ್ರೋಕ್ಷಿಸಿದಾಗ ಅದು ಮತ್ತೆ ಆಗ ತಾನೆ ಪಕ್ಷಗೊಂಡ ಅನ್ನದಂತೆ ಬಿಸಿಯಾಗುತ್ತಿದ್ದಿತಂತೆ. ಅವರು ಕಲಶಪೂಜೆ ಮಾಡಿದ ಮೇಲೆ ಅದರಲ್ಲಿ ಉಂಟಾಗುತ್ತಿದ್ದ ದೇವತಾ ಸಾನ್ನಿದ್ಧ್ಯದಿಂದಾಗಿ ಅವರ ಶಿಷ್ಯರಿಗೆ ಅದನ್ನು ಎತ್ತಲು ಅಸಾಧ್ಯವಾಗುತ್ತಿದ್ದಿತು ಎಂದು ಪ್ರತೀತಿ.
ಶ್ರೀ ವ್ಯಾಸರಾಜರ ಜನ್ಮ
ಒಮ್ಮೆ ಶ್ರೀ ಬ್ರಹ್ಮಣ್ಯತೀರ್ಥರು ಬನ್ನೂರು ಪ್ರಾಂತ್ಯದಲ್ಲಿ ಸಂಚಾರದಲ್ಲಿದ್ದಾಗ, ರಾಮಾಚಾರ್ಯನೆಂಬುವವ ಸಪತ್ನೀಕನಾಗಿ ಗಂಗಾಸ್ನಾನಕ್ಕೆ ತೆರಳುವಾಗ ಬ್ರಹ್ಮಣ್ಯತೀರ್ಥರು ನೆಲೆಸಿದ್ದ ಸ್ಥಳದ ಬಳಿ ಬರುವ ವೇಳೆಗೆ ವಿಚಿತ್ರ ಜ್ವರವೊಂದರಿಂದ ನಿಧನನಾದನು. ಗಂಡನ ವಿರಹವೇದನೆಯನ್ನು ತಾಳಲಾರದೆ ಅವನ ಪತ್ನಿ, ಪತಿಯೊಂದಿಗೆ ಸಹಗಮನವನ್ನು ಮಾಡಲು ನಿಶ್ಚಯಿಸಿ, ಗುರುಗಳ ಅಪ್ಪಣೆ ಪಡೆಯಲು ಬ್ರಹ್ಮಣ್ಯತೀರ್ಥರಲ್ಲಿಗೆ ಬಂದಳು. ಆದರೆ ಅವಳು ಬಂದು ನಮಸ್ಕರಿಸಿದಾಗ ತಪೋನಿಧಿಯಾದ ಬ್ರಹ್ಮಣ್ಯತೀರ್ಥರ ಮುಖಾರವಿಂದದಿಂದ ಬಂದ ಅನುಗ್ರಹವೆಂದರೆ `ದೀರ್ಘಸುಮಂಗಲೀ ಭವ’. ಅಲ್ಲಿದ್ದವರಿಗೆಲ್ಲ ಆಶ್ಚರ್ಯ. ಗಂಡ ನಿಧನರಾಗಿರುವಾಗ ಗುರುಗಳು ಹೀಗೇಕೆ ಆಶೀರ್ವದಿಸಿದ್ದಾರೆಂದು. ಆಗ ಗುರುಗಳು `ಇದು ನಮ್ಮ ಮಾತಲ್ಲ, ನಮ್ಮ ಆರಾಧ್ಯಮೂರ್ತಿಯಾದ ಭಗವಂತನ ಅನುಗ್ರಹ. ಅದೆಂದೂ ಸುಳ್ಳಾಗದು. ನಿನ್ನ ಪತಿ ಬದುಕುವನು, ಶತಾಯುಷಿಯಾಗುವನೆಂದರು. ಅವನಿಗೆ ಎರಡು ಮಕ್ಕಳಾಗುವುದು’ ಎಂದರು. ಶ್ರೀಗಳು ನೀಡಿದ ಮಂತ್ರೋದಕವನ್ನು ಸ್ವೀಕರಿಸಿ, ಅದನ್ನು ತನ್ನ ಪತಿಯ ಮತೃದೇಹದ ಮೇಲೆ ಪ್ರೋಕ್ಷಿಸಿದಳು. ಆ ಬ್ರಾಹ್ಮಣ ನಿದ್ರೆಯಿಂದೆದ್ದವನಂತೆ ಎದ್ದು ಕುಳಿತನಂತೆ. ಅವನು ಕಾಶೀಯಾತ್ರೆಯನ್ನೂ ಮುಗಿಸಿದನಂತೆ. ಅವನ ಪತ್ನಿ ಗರ್ಭಿಣಿಯಾಗಿ ಸಕಾಲದಲ್ಲಿ ಗಂಡು ಮಗುವನ್ನು ಹಡೆದಳು. ಹೀಗೆ ಜನಿಸಿದ ಮಗುವಿಗೆ ಶ್ರೀಗಳು ಭೂಸ್ಪರ್ಶವಾಗದಂತೆ ಸ್ವರ್ಣಪಾತ್ರೆಯನ್ನೇ ನೀಡಿದರು. ಆ ಮಗುವನ್ನು ತಮ್ಮ ಬಳಿ ತರಿಸಿಕೊಂಡ ಶ್ರೀಗಳು ತಮ್ಮ ಸ್ವಹಸ್ತದಿಂದಲೇ ಕಣ್ವನದಿಯಲ್ಲಿ ತೊಳೆದು, ಭಗವಂತನಿಗೆ ಅಭಿಷೇಕಿಸಿದ ಕ್ಷೀರವನ್ನು ಪಾನ ಮಾಡಿಸುತ್ತ ಪೋಷಿಸಿದರು. ಹಾಗೆ ಆ ಮಗುವನ್ನು ತೊಳೆದ ಸ್ಥಳ `ಶ್ವೇತಶಿಲಾಹ್ರದ’ (ಬಿಳಿಕಲ್ಲುಮಡು) ಎಂಬ ಹೆಸರಿನಿಂದ ಇಂದಿಗೂ ಪ್ರಸಿದ್ಧವಾಗಿದೆ. ಆ ಮಗುವೇ ಮಧ್ವಮತವನ್ನು ಉತ್ತುಂಗಕ್ಕೇರಿಸಿದ, ಸಕಲ ಅನ್ಯಮತಸ್ಥರಿಗೆ ಸಿಂಹಸ್ವಪ್ನರಾದ, ಆನೆಗೊಂದಿ ಕ್ಷೇತ್ರದಲ್ಲಿ ವೃಂದಾವನಸ್ಥರಾದ, ಪ್ರಹ್ಲಾದಾವತಾರರಾದ ಶ್ರೀ ವ್ಯಾಸರಾಜರು.
ಶ್ರೀಬ್ರಹ್ಮಣ್ಯತೀರ್ಥರ ಬೃಂದಾವನವಿರುವುದು ಬೆಂಗಳೂರು ಸಮೀಪದ ಮೈಸೂರು ಹೆದ್ದಾರಿಯ ರಾಮನಗರ ತಾಲ್ಲೂಕು ಚನ್ನಪಟ್ಟಣದಿಂದ ಸುಮಾರು 5 ಕಿ.ಮೀ. ದೂರದ ಸುಂದರ ಪ್ರಾಕೃತಿಕ ನೆಲೆಯಾದ ಅಬ್ಬೂರು ಸಾತ್ವಿಕ ಪರಿಸರದ ದೈವಿಕ ಗ್ರಾಮ. ಚಾರಿತ್ರಿಕವಾಗಿ ಪೌರಾಣಿಕವಾಗಿ ಪ್ರಾಮುಖ್ಯತೆ ಪಡೆದಿರುವ ಅಬ್ಬೂರು ಈ ಹಿಂದೆ ಚಿಕ್ಕಗಂಗವಾಡಿ ಅರಸು ಮನೆತನದ ರಾಜಧಾನಿಯಾಗಿತ್ತು. ಚೋಳರ ಕಾಲದಲ್ಲಿ ಈ ಸ್ಥಳ ಅಪ್ಪಿಯೂರು ಎಂದು ಕರೆಯಲ್ಪಟ್ಟು, ತಮಿಳು ಭಾಷೆಯ ಈ ಅಪ್ಪಿಯೂರು ಕನ್ನಡದಲ್ಲಿ ಅಭಿಯೂರಾಗಿ ನಂತರ ಅಬ್ಬೂರಾಗಿದೆ.
ಮಳೂರು ಕ್ಷೇತ್ರ
ಒಮ್ಮೆ ಚಿಕ್ಕಗಂಗವಾಡಿ ಅರಸು ಮನೆತನದ ತಿಮ್ಮರಸು ಎಂಬ ರಾಜನಿಗೆ ಸಾರಂಗಧರ ಎಂಬ ಪುತ್ರನಿದ್ದನು. ಅವನ ತಾಯಿ ಅವನ ಬಾಲ್ಯದಲ್ಲೇ ಮೃತಳಾದ್ದರಿಂದ ರಾಜನು (ಮುದುಕನಾಗಿದ್ದರೂ ಕೂಡ) ಮತ್ತೊಬ್ಬ ರಾಜಕುಮಾರಿಯನ್ನು ವಿವಾಹವಾದನು. ಆದರೆ ಆ ರಾಜಕುಮಾರಿಯಾದರೋ ತನ್ನ ಮಗನಾದ (ಸವತಿಯ ಮಗ), ಸಾರಂಗಧರನನ್ನೇ ಕಾಮಿಸಿದಾಗ, ಆ ರಾಜಕುಮಾರನು ತಿರಸ್ಕರಿಸಲು, ಆ ರಾಜಕುಮಾರಿಯು ಅವನ ಮೇಲಿನ ಸಿಟ್ಟಿನಿಂದ ರಾಜನ ಬಳಿ ಹೋಗಿ ರಾಜಕುಮಾರನು ತನ್ನ ಮಾನಭಂಗಕ್ಕೆ ಪ್ರಯತ್ನಿಸಿದನೆಂದು ಹೇಳಿದಳು. ಆ ರಾಜನಾದರೋ ವಿವೇಕರಹಿತನಾಗಿ ಅವಳ ಮಾತನ್ನು ನಂಬಿ ತನ್ನ ಭಟರಿಗೆ ರಾಜಕುಮಾರನ ಕೈಕಾಲು ಕತ್ತರಿಸಿ, ಕಣ್ವನದಿಯಲ್ಲಿ ಬಿಸಾಡಲು ಆಜ್ಞಾಪಿಸಿದನು. ಅದರಂತೆ ಭಟರು ಮಾಡಿದರು. ಅಲ್ಲಿಯ ನದೀತೀರಕ್ಕೆ ಅಂದಿನ ಆಹ್ನೀಕಕ್ಕೆಂದು ತೆರಳಿದ್ದ ಶ್ರೀಬ್ರಹ್ಮಣ್ಯತೀರ್ಥರ ದೃಷ್ಟಿ ಬಿದ್ದಿತು. ಕೂಡಲೇ ಅವರು ನದಿಯ ಮೃತ್ತಿಕೆಯನ್ನು ಅಭಿಮಂತ್ರಿಸಿ, ಅವನ ಮೈಗೆ ಸ್ವತಃ ಲೇಪಿಸಿದರು. ಆಗ ಅವನ ಕೈಕಾಲುಗಳು ಮೊಳೆತು ಪುನಃ ಮೊದಲಿನಂತಾದನು. ಇದು ನಡೆದದ್ದು ಮಳೂರು ಎಂಬ ಪ್ರಸಿದ್ಧ ಕ್ಷೇತ್ರ. ಈ ಕಾರಣದಿಂದಲೇ ಆ ಕ್ಷೇತ್ರಕ್ಕೆ ಮಳೂರು (ಕೈಕಾಲುಗಳು ಮತ್ತೆ ಮೊಳೆತ ಊರು) ಎಂಬ ಹೆಸರಿರುವ ಪ್ರತೀತಿ ಇದೆ. ಇದೇ ಸ್ಥಳದಲ್ಲೇ ಮುಂದೆ ಶ್ರೀ ವ್ಯಾಸರಾಜರು ಅತ್ಯಂತ ಮನೋಹರವಾದ ಅಪ್ರಮೇಯ ಎಂಬ ಹೆಸರಿನ ಬಾಲಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದರು, ಮುಂದೆ ಅದು ಪವಿತ್ರ ಯಾತ್ರಾ ಸ್ಥಳವಾಯಿತು, `ಮಳೂರುಕೃಷ್ಣ’ನೆಂದು. ಪುರಂದರದಾಸರು `ಜಗದೊದ್ಧಾರನ ಆಡಿಸಿದಳೆಶೋದೆ’ ಎಂಬ ಕೀರ್ತನೆಯನ್ನು ಈ ಮೂರ್ತಿಯನ್ನು ನೋಡೆ ರಚಿಸಿದರೆಂದು ಪ್ರತೀತಿ.
ಅನೇಕ ಯತಿವರೇಣ್ಯರ ಜಪ, ತಪ, ಅನುಷ್ಠಾನಗಳಿಂದ ಪುನೀತವಾಗಿರುವ ಈ ಸುಂದರ ಪ್ರದೇಶ ಪುರಾಣದಲ್ಲಿ ಜ್ಞಾನಮಂಟಪವೆಂದೇ ಪ್ರಸಿದ್ಧ. ಮುಗಿಲೆತ್ತರಕ್ಕೆ ಹೋಗಿ ನಿಂತಿರುವ ತೆಂಗಿನ ಮರಗಳು, ಸುತ್ತ ಮುತ್ತ ಹಚ್ಚ ಹಸಿರಿನಿಂದ ಕಂಗೊಳಿಸುತ್ತದೆ ಅಬ್ಬೂರು ಮಠ. ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ತೆರಳಿ ಅಲ್ಲಿಂದ ಬಸ್ ಅಥವಾ ಆಟೋದಲ್ಲಿ ಹೋಗಬಹುದು.
ಅಬ್ಬೂರು ಪ್ರದೇಶವನ್ನು ಬ್ರಹ್ಮಾಂಡಪುರಾಣದ ಶ್ರೀಅಪ್ರಮೇಯ ಮಹಾತ್ಮ್ಯೆಯಲ್ಲಿ “ಜ್ಞಾನಮಂಟಪ” ವೆಂದು ಕರೆಯಲಾಗಿದೆ. ಜೀವನದಲ್ಲಿ ಮುಂದಿನ ನೆಲೆಗಾಣದೆ ಹತಾಶವಾಗಿರುವ ಹೃದಯಗಳಲ್ಲಿ ಚೈತನ್ಯದ ಛಾಪು ಮೂಡಿಸಿ, ಅಜ್ಞಾನ ಅಂಧಕಾರದಲ್ಲಿ ತೊಳಲುತ್ತಿರುವ ಸಹಸ್ರಾರು ಜೀವಿಗಳಿಗೆ ಆಧ್ಯಾತ್ಮದ ಅರಿವಿತ್ತು ಪೋಷಿಸುವ ಜ್ಞಾನಮಂಟಪ. ಈ ಕ್ಷೇತ್ರ ಕೇವಲ ಜ್ಞಾನ ಮಂಟಪವಷ್ಟೇ ಅಲ್ಲದೆ ಜ್ಞಾನಿವರೇಣ್ಯರಾದ ಪುರುಷೋತ್ತಮ ತೀರ್ಥರು, ಬ್ರಹ್ಮಣ್ಯ ತೀರ್ಥರು, ಶ್ರೀಪಾದರಾಜರು, ವ್ಯಾಸರಾಜರು ಮೊದಲಾದ ಯತಿಪುಂಗವರು ಮಂಟಪದ ಸ್ಥಂಭಗಳಂತೆ ನಿಂತು, ಸಾಧನೆ ಮಾಡಿ ಸಿದ್ಧಿ ಪಡೆದಿದ್ದರಿಂದ ಇದು ಜ್ಞಾನಿಗಳ ಮಂಟಪವಾಗಿಯೂ ಶೋಭಿಸುತ್ತದೆ. ಜ್ಞಾನಾಕಾಂಕ್ಷಿಗಳಾಗಿ ಬರುವವರಿಗೆ ಮಂಟಪದಂತೆ ಆಶ್ರಯವಿತ್ತು ವಿನೀತಗುರುಗಳ ಗುರುತನ್ನು ತೋರಿ, ಜ್ಞಾನಾರ್ಜನೆಗೆಂದು ಮಾರ್ಗದಲ್ಲಿ ಎದುರಾಗುವ ಸಕಲ ಸಂಕಷ್ಟಗಳನ್ನು ನಿವಾರಿಸಿ, ಜ್ಞಾನಗಮ್ಯನ ದಿವ್ಯದರ್ಶನವೀಯುವ ಜ್ಞಾನಧನವನ್ನು ಗಳಿಸಬೇಕೆಂಬ ಹೆಬ್ಬಯಕೆ ಮೂಡಿಸುವ ಜ್ಞಾನದೇಗುಲವೂ ಆಗಿದೆ ಈ ಅಬ್ಬೂರು.ಇಲ್ಲಿಯ ಮಣ್ಣಿನಲ್ಲಿ ಅನಘ್ರ್ಯ ರತ್ನಗಳೇ ತುಂಬಿದೆ ಎಂದರೆ ತಪ್ಪಾಗಲಾರದು ಈ ತಪೋಭೂಮಿಯು ಬೂದಿಮುಚ್ಚಿದ ಕೆಂಡದಂತೆಯೂ, ಮೋಡಮುಸುಕಿದ ಸೂರ್ಯ ಚಂದ್ರರಂತೆ ಇದ್ದು, ಭಕ್ತಿ ಜ್ಞಾನ ವೈರಾಗ್ಯಗಳ ನೆಲೆವೀಡಾಗಿದೆ.
ಶ್ರೀನರಸಿಂಹ ಧ್ವಜಸ್ತಂಭದ ಸ್ಥಾಪನೆ
ಒಮ್ಮೆ ಶ್ರೀಬ್ರಹ್ಮಣ್ಯತೀರ್ಥರು ಉತ್ತರಕರ್ನಾಟಕದ ಶಿರಸಿಯ ಬಳಿಯ ಬನವಾಸಿ ಎಂಬ ಗ್ರಾಮವನ್ನು ಸಂದರ್ಶಿಸಿದ್ದರು. ಅಲ್ಲಿ ನರಸಿಂಹಾಚಾರ್ಯ ಮತ್ತು ಕೃಷ್ಣಚಾರ್ಯ ಎಂಬ ಬ್ರಾಹ್ಮಣರ ಮನೆಯಲ್ಲಿ ಭಿಕ್ಷೆಯನ್ನು ಸ್ವೀಕರಿಸಿದ್ದರು. ಆಗ ತಮ್ಮೊಂದಿಗೆ ಬರಲು ಇಚ್ಚಿಸಿದ, ಖಾದ್ರಿ ನರಸಿಂಹನ ಆರಾಧಕರಾದ ಶ್ರೀಕೃಷ್ಣಾಚಾರ್ಯರನ್ನು ತಮ್ಮೊಂದಿಗೆ ಕರೆತಂದರು. ಒಮ್ಮೆ ಕೃಷ್ಣಾಚಾರ್ಯರು ಖಾದ್ರಿಯ ನರಸಿಂಹಸ್ವಾಮಿಯನ್ನು ಸಂದರ್ಶಿಸಲು ಆಪೇಕ್ಷಿಸಿದರು. ಆದರೆ ವೃದ್ಧಾಪ್ಯದಿಂದ ಚಿಂತಿತರಾದರು. ಅವರ ಭಕ್ತಿಗೆ ಮೆಚ್ಚಿದ ಸ್ವಾಮಿ ನರಸಿಂಹನು ಅವರಿಗೆ ಸ್ವಪ್ನದಲ್ಲಿ ದರ್ಶನವಿತ್ತು, ತಿರುವೇಂಗಳನಾಥಬೆಟ್ಟದ ಸ್ಥಳವೊಂದರಲ್ಲಿ ಸನ್ನಿಹಿತನಾಗಿರುವುದನ್ನು ಶ್ರೀಗಳಿಗೆ ತಿಳಿಸಿದರು. ಆಗ ಶ್ರೀಗಳು ಆ ಸ್ವಪ್ನನಿರ್ದೇಶಿತ ಸ್ಥಳಕ್ಕೆ ಧಾವಿಸಿದಾಗ, ಧ್ವಜಸ್ತಂಭದ ಮೇಲ್ಭಾಗದ ಚೌಕಾಕಾರದ ಕಲ್ಲೊಂದು ಕಾಣಿಸಿತು. ಶ್ರೀಗಳು ಕಂಬವೊಂದನ್ನು ನಿರ್ಮಿಸಿ ಅದರ ಪೂರ್ವಭಾಗದಲ್ಲಿ ಶಂಖಚಕ್ರಗಳನ್ನು, ದಕ್ಷಿಣದಲ್ಲಿ ಆಂಜನೇಯನನ್ನೂ, ಉತ್ತರದಲ್ಲಿ ಗರುಡನನ್ನೂ ಕೆತ್ತಿಸಿ, ಅದರ ಮೇಲೆ ಸ್ವಪ್ನಸೂಚಿತವಾಗಿದ್ದ ಸ್ಥಳದಲ್ಲಿ ದೊರೆತ ಧ್ವಜಸ್ತಂಭವನ್ನು ಕೂರಿಸಿ, ಆ ಬೆಟ್ಟದ ಮೇಲೆಯೇ ಸ್ಥಾಪಿಸಿ, ಪೂಜಾವ್ಯವಸ್ಥೆಯನ್ನು ಏರ್ಪಡಿಸಿದರು. ಅದರ ನಿತ್ಯಪೂಜೆಯನ್ನು ಶ್ರೀಕೃಷ್ಣಾಚಾರ್ಯರಿಗೇ ನೀಡಿದರು. ಅನಂತರ ತನ್ನ ತಪ್ಪಿನ ಅರಿವಾದ, ರಾಜನು ಮರುಗುತ್ತಿರಲು, ಸಾರಂಗಧರನು ಮರಳಿದನು. ಅವನಿಂದ ಶ್ರೀಬ್ರಹ್ಮಣ್ಯತೀರ್ಥರ ತಪೋಮಹಿಮೆಯನ್ನು ತಿಳಿದು, ಅವರಿಗೆ ತನ್ನ ಸಮಸ್ತ ರಾಜ್ಯವನ್ನು ಸಮರ್ಪಿಸಲು ಮುಂದಾದಾಗ, ವಿರಕ್ತಶಿರೋಮಣಿಗಳಾದ ಶ್ರೀಬ್ರಹ್ಮಣ್ಯತೀರ್ಥರು ಅದಕ್ಕೆ ಒಪ್ಪದೆ, ತಾವು ವಾಸವಿದ್ದ ಅಬ್ಬೂರು ಗ್ರಾಮವನ್ನು ಸ್ವೀಕರಿಸಿದರು.
ಬರ ಪರಿಹಾರ
ಒಮ್ಮೆ ತಮ್ಮ ಯಾತ್ರೆಯ ವೇಳೆ ಕರ್ನಾಟಕದ ರಾಜಧಾನಿಯಾದ ವಿಜಯನಗರವನ್ನು ತಲುಪಿದಾಗ, ಅಲ್ಲಿನ ದೇವಾಲಯದಲ್ಲಿ ಸ್ವರ್ಣಪೀಠದಲ್ಲಿ ಪೂಜೆಯನ್ನು ನೆರವೇರಿಸಿದರು. ಆ ವೇಳೆಗೆ ಅಲ್ಲಿನ ಜನರೆಲ್ಲ ಬಂದು `ಈ ಸ್ಥಳದಲ್ಲಿ ಹಲವಾರು ವರುಷಗಳಿಂದ ಅನಾವೃಷ್ಟಿಯಾಗಿದೆ. ನಾವು ಮಾಡಿದ ಜಪಹೋಮಾದಿಗಳೆಲ್ಲ ವ್ಯರ್ಥವಾಗಿದೆ. ಅದರ ಪರಿಹಾರಕ್ಕೋಸ್ಕರ ತಮ್ಮ ಕೃಪಾದೃಷ್ಟಿಯನ್ನು ಶಿಷ್ಯರಿಗೆ ಆದೇಶಿಸಿ, ಪರ್ಜನ್ಯಜಪವನ್ನು ಮಾಡಿಸಿದರು. ಜನಗಳಿಗೆ ಅಚ್ಚರಿಯೋ ಅಚ್ಚರಿ: ಹನಿನೀರೂ ಇಲ್ಲವಾಗಿದ್ದ ಆ ಸ್ಥಳದಲ್ಲಿ ಜಲಧಾರೆ ಸುರಿಯತೊಡಗಿತಂತೆ.
ಬ್ರಹ್ಮಣ್ಯಪುರ
ತನ್ನ ರಾಜ್ಯಕ್ಕೆ ಶ್ರೀಬ್ರಹ್ಮಣ್ಯತೀರ್ಥರಿಂದ ಆದ ಅನುಗ್ರಹದಿಂದ ರೋಮಾಂಚನಗೊಂಡ ಶ್ರೀಕೃಷ್ಣದೇವರಾಯನು, ಚನ್ನಪಟ್ಟಣದ ಬಳಿ ಇರುವ ಫಲಭರಿತವಾದ ಅನೇಕ ಗ್ರಾಮಗಳನ್ನು ಸಮರ್ಪಿಸಿದನು. ಶ್ರೀವ್ಯಾಸರಾಜರಾದರೋ ಆ ಗ್ರಾಮಗಳನ್ನೆಲ್ಲ ತಮ್ಮ ಶಿಷ್ಯವರ್ಗಕ್ಕೆ ಸೇರಿದ 32 ಜನ ಬ್ರಾಹ್ಮಣರಿಗೆ ದಾನ ಮಾಡಿದರು. ಆ ಸ್ಥಳವೇ `ಬ್ರಹ್ಮಣ್ಯಪುರ’. ಈಗ ಆ ಜಾಗವನ್ನು `ಬ್ರಹ್ಮಣಿಪುರ’ ಎಂದು ಕರೆಯುತ್ತಿದ್ದು, ಚನ್ನಪಟ್ಟಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಚನ್ನಪಟ್ಟಣ ಬಸ್ ನಿಲ್ದಾಣದಿಂದ 2ಕಿ.ಮೀ. ದೂರದ ಮುಖ್ಯ ರಸ್ತೆಯಿಂದ ಬಲಭಾಗದಲ್ಲಿದೆ.
ವಿಠ್ಠಲ ಬೆಟ್ಟ
ಒಮ್ಮೆ ಭಗವಂತನು ಶ್ರೀಗಳಿಗೆ ಸ್ವಪ್ನದಲ್ಲಿ ಬಂದು ಅಬ್ಬೂರಿನ ಬಳಿಯಿರುವ ಬೆಟ್ಟವೊಂದರಲ್ಲಿ ಭೂಮಿಯೊಳಗೆ ಅಡಗಿರುವ ಮೂರ್ತಿಯನ್ನು ತೆಗೆದು ಪೂಜಿಸಬೇಕೆಂದು ಆಜ್ಞಾಪಿಸಿದನು. ಅದರಂತೆ ಹುಡುಕಿದ ಅವರಿಗೆ ಸುಂದರ ವಿಠಲಪ್ರತಿಮೆಯೂ ಲಭಿಸಿತು. ಅಂದಿನಿಂದ ಆ ಬೆಟ್ಟಕ್ಕೆ `ವಿಠ್ಠಲಬೆಟ್ಟ’ ಎಂಬ ಹೆಸರಾಯಿತು.
ಪ್ರಾಣವಿಗ್ರಹ ಪ್ರತಿಷ್ಠಾಪನೆ
ಅಬ್ಬೂರು ಸನಿಹದಲ್ಲೆ ಬ್ರಹ್ಮಣ್ಯಪುರವೆಂಬಲ್ಲಿ ಬ್ರಹ್ಮಣ್ಯತೀರ್ಥರು, ಶ್ರೀಪಾದರಾಜರು ಮತ್ತು ಶ್ರೀವ್ಯಾಸರಾಜರು ಸೇರಿ ಒಟ್ಟಾಗಿ ಪ್ರತಿಷ್ಠಾಪಿಸಿರುವ ಜಾಗೃತ ಸನ್ನಿಧಾನವುಳ್ಳ ಪ್ರಾಣಪತಿ (ಹನುಮಂತ) ದೇವಾಲಯವಿದೆ. ಅತ್ಯಂತ ಮನೋಹರವಾಗಿರುವ ಈ ವೀರಾಂಜನೇಯನ ಶಿರೋಭಾಗದಲ್ಲಿ ಸೀತಾಲಕ್ಷ್ಮಣ ಸಮೇತ ಶ್ರೀರಾಮಚಂದ್ರನು ಶಂಖ ಚಕ್ರಧಾರಿಯಾಗಿ ಕಿರೀಟದ ಮೇಲಿನ ಗೂಡಿನಲ್ಲಿ ಬ್ರಹ್ಮಣ್ಯ ತೀರ್ಥರಿಂದಲೇ ಪೂಜಿತ ನರಸಿಂಹ ಸಾಲಿಗ್ರಾಮವಿದೆ, ಮುಂದೆ ಶ್ರೀವ್ಯಾಸರಾಜರು ದೇಶಾದ್ಯಂತ 732 ಪ್ರಾಣದೇವರ ಪ್ರತಿಷ್ಠೆಗೆ ಇದು ಸ್ಫೂರ್ತಿಯುತ ಘಟನೆಯಾಗಿ ಪರಿಣಮಿಸಿತು.
ಶ್ರೀಬ್ರಹ್ಮಣ್ಯತೀರ್ಥರ ಮಹಿಮೆ
ಬ್ರಹ್ಮಣ್ಯತೀರ್ಥರು ದುಃಖ, ಹತಾಶೆ, ನೋವು, ಸಮಸ್ಯೆಗಳಿಗೆ ಸಿಲುಕಿರುವವರಿಗೆ ವರಪ್ರದಾಯಕರೆಂದು ಪ್ರತೀತಿ. ಬ್ರಹ್ಮಣ್ಯತೀರ್ಥರು ಬಾಲ್ಯದಿಂದಲೇ ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೊಂದಿದವರು. ಅವರ ಹಿನ್ನೆಲೆಯಲ್ಲಿಯೂ ಅದರ ಪ್ರಭಾವವಿತ್ತು. ಬ್ರಹ್ಮಣ್ಯತೀರ್ಥರು ಸೂರ್ಯಾಂಶ ಸಂಭೂತರೆನ್ನಲಾಗುತ್ತದೆ. ಜ್ಞಾನಮಂಟಪವೆಂದು ಪ್ರಸಿದ್ಧವಾದ ಅಬ್ಬೂರಿನಲ್ಲಿ ಹಿಂದೆ ರಾಮಾಚಾರ್ಯರೆಂಬುವವರಿದ್ದರು. ನರಸಿಂಹ ಉಪಾಸನೆಯ ಫಲವಾಗಿ ಬಹುದಿನದ ನಂತರ ಇವರು ಪಡೆದ ಪುತ್ರನೇ ಮುಂದೆ ಬ್ರಹ್ಮಣ್ಯತೀರ್ಥರಾದರು. ನರಸಿಂಹೋಪಾಸನೆಯಿಂದ ಜನಿಸಿದ ಕಾರಣ ನರಸಿಂಹ ನಾಮಾಂಕಿತನಾದ ಇವರು ಬಾಲ್ಯದಲ್ಲೇ ಬಲು ಚುರುಕು. ಗುರು ಪುರುಷೋತ್ತಮತೀರ್ಥರ ಬಳಿ ವಿದ್ಯಾಭ್ಯಾಸ ಮಾಡಿದ ನರಸಿಂಹ ಮುಂದೆ ಇದೇ ಗುರುಗಳಿಂದ ಯತ್ಯಾಶ್ರಮ ದೀಕ್ಷೆ ಪಡೆದರು. ಸೂರ್ಯನಂತೆ ತೇಜೋವಂತನಾಗಿದ್ದ ನರಸಿಂಹನಿಗೆ ಬ್ರಹ್ಮಣ್ಯತೀರ್ಥ ಎಂದು ನಾಮಕರಣ ಮಾಡಲಾಯಿತು.
ಗುರುಗಳ ಕಾಲಾನಂತರ ಸಂಸ್ಥಾನದ ಜವಾಬ್ದಾರಿ ಹೊತ್ತ ಶ್ರೀಗಳು ಯತ್ಯಾಶ್ರಮ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಿದರು. ಮಧ್ವಶಾಸ್ತ್ರದ ಮುಕುಟಪ್ರಾಯರಾಗಿದ್ದ ಬ್ರಹ್ಮಣ್ಯತೀರ್ಥರು ಅನೇಕ ಪಂಡಿತರನ್ನು ವಾದದಲ್ಲಿ ಸೋಲಿಸಿದ್ದರು. `ವಿಷ್ಣು ಸರ್ವೋತ್ವಮತ್ವಂಚ ಸರ್ವದಾ ಪ್ರತಿಪಾದಯಾ’ ಎಂಬ ಮಧ್ವಾಚಾರ್ಯರ ಆದೇಶದಂತೆ ಶ್ರೀಹರಿಯ ಪಾರಮ್ಯವನ್ನು ಎತ್ತಿ ಹಿಡಿದವರು ಬ್ರಹ್ಮಣ್ಯತೀರ್ಥರು.
ಬ್ರಹ್ಮಣ್ಯತೀರ್ಥರ ಬಗೆಗೆ ಹಲವು ಪ್ರತೀತಿಗಳೀವೆ. ಅವರ ತಪಃಶ್ಯಕ್ತಿ ಅದ್ಭುತವಾದದ್ದು. ಯತಿಸಾರ್ವಭೌಮರಾದ ವ್ಯಾಸರಾಜರ ಪ್ರಕಾರ ಬ್ರಹ್ಮಣ್ಯತೀರ್ಥರು. ಭಕ್ತರ ಅಭೀಷ್ಟಗಳನ್ನು ಪೂರೈಸುವ ಚಿಂತಾಮಣಿ, ಅನುಗ್ರಹದ ಮಂದಹಾಸ ಬೀರುವ ವಂದನೀಯರು. ಇವರ ಬೃಂದಾವನದ ಸೇವೆಯಿಂದ ವಿದ್ಯಾಕಾಂಕ್ಷಿಗಳು ವಿದ್ಯಾಸುಖ ಪಡೆಯುವುದು ಖಚಿತ ಎಂಬುದು ಭಕ್ತರ ನಂಬಿಕೆ.
ಮಧ್ವಾಚಾರ್ಯರ ಮಹಾಸಂಸ್ಥಾನವಾದ ಪೂರ್ವಾದಿಮಠದ ಪೀಳಿಗೆಯಲ್ಲಿ ಬಂದು ಆಚಾರ್ಯರ ಕರಾರ್ಜಿತವಾದ ತಮ್ಮ ಸಂಸ್ಥಾನದ ಮೂರ್ತಿಗಳನ್ನು ನಿರಂತರ ಪೂಜಿಸಿ ಬ್ರಹ್ಮಣ್ಯತೀರ್ಥರು ಕ್ರಿ.ಶ. 1467, ಸರ್ವಜಿತು ಸಂವತ್ಸರದ ವೈಶಾಖ ಬಹುಳ ಏಕಾದಶಿಯಂದು ಬೃಂದಾವನಸ್ಥರಾದರು. ಇವರ ಬೃಂದಾವನದ ದರ್ಶನದಿಂದ ವ್ಯಕ್ತಿಯ ಸಮಸ್ತ ಪಾಪಗಳು ನಿಶ್ಯೇಷವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಭಕ್ತರ ವಿಶ್ವಾಸ, ಶ್ರೀಹರಿಯ ಮೋಕ್ಷಪಥ ಪಡೆಯುವುದಕ್ಕಾಗಿ ಗುರುಗಳ ಬೃಂದಾವನದ ಮುಂದೆ ಸಾಲುದೀಪಗಳನ್ನು ಹಚ್ಚುವವರು ಅನೇಕರು.
“ ಆರೋಗ್ಯಂ ಭಾಸ್ಕರಾದಿಚ್ಛೇತ್ ” ಎಂಬಂತೆ ಬ್ರಹ್ಮಣ್ಯತೀರ್ಥರನ್ನು ಸೇವಿಸುವವರು ಎಂತಹ ಕಠಿಣತರ ರೋಗಗಳಿಂದ ಬಳಲುತ್ತಿದ್ದರೂ ಸಹ ಅವರ ಕೃಪಾಶೀರ್ವಾದದಿಂದ ರೋಗಮುಕ್ತರಾಗಿ ಆರೋಗ್ಯ ಕಾಂತಿಯನ್ನು ಪಡೆದುಕೊಳ್ಳುತ್ತಿರುವ ನಿದರ್ಶನಗಳು ಸಾಕಷ್ಟಿವೆ.ಗುರುಗಳ ಬೃಂದಾವನದ ಮೇಲೆ ಛಾವಣಿಯಲ್ಲಿ ವಿಷ್ಣುಸಾನ್ನಿಧ್ಯವುಳ್ಳ ತುಳಸಿ ಗಿಡವಿದೆ, ಸೂರ್ಯಂಶರಾದುದರಿಂದ ಸೂರ್ಯನ ಕಿರಣಗಳು ಬೃಂದಾವನದ ಮೇಲೆ ನೇರವಾಗಿ ಬೀಳುತ್ತದೆ. ಸುಮಾರು ಆರು ದಶಕಗಳ ಐತಿಹ್ಯವಿರುವ ಈ ದಿವ್ಯ ಬೃಂದಾವನ ಸ್ವಲ್ಪ ವಾಲಿದಂತಿದ್ದರೂ ಈಗಲೂ ಸದೃಢವಾಗಿ ನಿಂತಿದೆ. ದರ್ಶನ ಮಾತ್ರದಿಂದಲೇ ಯಾವುದೋ ಉತ್ಸಾಹದ ಚಿಲುಮೆಯಲ್ಲಿ ಮಿಂದ ಸಂಭ್ರಮದೊಂದಿಗೆ ಭಕ್ತಿಯ ತರಂಗಗಳು ಭಾವುಕರ ಎದೆಯನ್ನು ಹಿತವಾಗಿ ಅಪ್ಪಿಹಿಡಿಯುತ್ತದೆ.
ಶ್ರೀಮಧ್ವಾಚಾರ್ಯರ ಅನುಯಾಯಿಗಳಾದ ರಾಜೇಂದ್ರ ತೀರ್ಥರ ಪೂರ್ವಾದಿ ಮಠದ ಪರಂಪರೆಯಲ್ಲಿ ಬಂದ ಶ್ರೀಪುರುಷೋತ್ತಮ ತೀರ್ಥರು ಅಬ್ಬೂರಿನಲ್ಲಿ ಬಹುಕಾಲ ವಾಸಿಸಿದ ತಪೋನಿಧಿಗಳು ಆಚಾರ್ಯರ ನೇರ ಶಿಷ್ಯ ಶ್ರೀ ಅಕ್ಷೋಭ್ಯತೀರ್ಥರ ಕರಕಮಲ ಸಂಜಾತರಾದ ಟೀಕಾಚಾರ್ಯರೆನಿಸಿದ ಶ್ರೀ ಜಯತೀರ್ಥರಿಂದ ಪ್ರಯಾಗದಂತಹ ಪುಣ್ಯ ಕ್ಷೇತ್ರದಲ್ಲಿ ಟೀಕಾರಾಯರಿಂದ ಸನ್ಯಾಸ ದೀಕ್ಷೆಯನ್ನು ಪಡೆದ ವಿದ್ಯಾಧಿರಾಜರಿಗೆ ರಾಜೇಂದ್ರತೀರ್ಥ ಮತ್ತು ಕವೀಂದ್ರತೀರ್ಥ ರೆಂಬ ಇಬ್ಬರು ಶಿಷ್ಯರು, ಗುರುಗಳ ಆಜ್ಞೆಯಂತೆ ಉತ್ತರಭಾರತದಲ್ಲಿ ಅದರಲ್ಲೂ ತಾರ್ಕಿಕರಾದ ತವರೂರುರೆನಿಸಿದ ಬಂಗಾಳದಲ್ಲಿ ನೆಲೆಸಿ ದ್ವೈತ ದುಂದುಭಿಯನ್ನು ಸಮರ್ಥವಾಗಿ ಮೊಳಗಿಸಿದ ಹಿರಿಮೆ ರಾಜೇಂದ್ರತೀರ್ಥರದು. ಅವರ ಪ್ರಿಯ ಶಿಷ್ಯನಾಗಿ ವೇದಾಂತ ಸಾಮ್ರಾಜ್ಯವನ್ನು ಪಾಲಿಸಿದ ಮಹಾನುಭಾವರೇ ಶ್ರೀಪುರುಷೋತ್ತಮತೀರ್ಥರು. ಪಾಂಡಿತ್ಯದಲ್ಲಿ,ಹರಿಭಕ್ತಿ, ತಪಶಕ್ತ್ಯಿಯಲ್ಲಿ ಪುರುಷೋತ್ತಮತೀರ್ಥರಿಗೆ ಸಾಟಿ ಯಾರು ಇರಲಿಲ್ಲ. ಬ್ರಹ್ಮಣ್ಯತೀರ್ಥರು ಪುರುಷೋತ್ತಮ ತೀರ್ಥರ ಶಿಷ್ಯ ಶ್ರೇಷ್ಠರು ಮಠದ ಅಭಿಮುಖವಾಗಿ ಇರುವ ಬೆಟ್ಟದಲ್ಲಿ ಪುರುಷೋತ್ತಮ ತೀರ್ಥರು ಬದುಕಿ, ಸಾಧನೆಗೈದು, ಸಿದ್ಧಿಯ ಬೆಳಕನ್ನು ಕಂಡುಕೊಂಡ ಗುಹೆಯಿದೆ, ಪುರುಷೋತ್ತಮ ತೀರ್ಥರಿಗೆ ಬೃಂದಾವನವಿಲ್ಲ, ಬ್ರಹ್ಮಣ್ಯತೀರ್ಥರ ಬೃಂದಾವನಕ್ಕೆ ಹಸ್ತೋದಕ, ಮಂಗಳಾರತಿ ಮಾಡುವ ಮೊದಲು ಪುರುಷೋತ್ತಮ ತೀರ್ಥರ ಸನ್ನಿಧಾನಯುಕ್ತವಾದ ಗುಹಾದ್ವಾರವಿರುವ ಎದುರು ಬೆಟ್ಟಕ್ಕೆ ಹಸ್ತೋದಕ, ಮಂಗಳಾರತಿಯನ್ನು ಬ್ರಹ್ಮಣ್ಯತೀರ್ಥರ ಸನ್ನಿಧಾನದಿಂದಲೇ ಸಲ್ಲಿಸುವ ಸಂಪ್ರದಾಯ ಈ ಹೊತ್ತಿಗೂ ಬೆಳೆದುಕೊಂಡು ಬಂದಿದೆ.ಗುಹೆಯ ಬಳಿ ಸಂಚರಿಸುವ ಎಷ್ಟೋ ಮಂದಿ ಗೋಪಾಲಕರು ವೈಷ್ಣವ ಚಿಹ್ನೆಧರಿಸಿ, ಕಾಷಾಯ ವಸ್ತ್ರಗಳಿಂದ ಕಂಗೊಳಿಸುವ ವೃದ್ಧರನ್ನು ಕಂಡಿದ್ದಾಗಿ ಹೇಳುವುದುಂಟು “ಪುಣ್ಯಫಲಿಸಿದವರ ಕಣ್ಣಿಗೆ ಪುರುಷೋತ್ತಮರು ಕಾಣಿಸುವರು” ಎಂಬುದು ಒಂದು ನಾಣ್ನುಡಿಯಾಗಿ ಬಿಟ್ಟಿದೆ.
ಶ್ರೀವ್ಯಾಸರಾಜರ ನಂತರ ಶ್ರೀಧರ ತೀರ್ಥರ ಪರಂಪರೆಯಲ್ಲಿ ಬಂದ ಮಠವೇ ಇಂದಿನ ಕುಂದಾಪುರ ವ್ಯಾಸರಾಜ ಮಠ ಈ ಮಠಕ್ಕೆ ಅಬ್ಬೂರು ಮಠವೆಂದೂ ಕರೆಯುವ ವಾಡಿಕೆ ಇದೆ. ಈಗ ವಿರಾಜಮಾನರಾಗಿರುವ ಶ್ರೀಲಕ್ಷ್ಮೀಂದ್ರ ತೀರ್ಥ ಶ್ರೀಪಾದರು ಅಬ್ಬೂರು ಕ್ಷೇತ್ರ ಅಭಿವೃದ್ಧಿಗೊಳಿಸಿ ವಿಶಾಲಾವಾದ ಪೂಜಾ ಮಂದಿರ, ಪಾಠಶಾಲೆ ಇತ್ಯಾದಿಗಳನ್ನು ನಿರ್ಮಿಸಿ ಯಾತ್ರಾರ್ಥಿಗಳಿಗೆ ಸಕಲ ಸೌಕರ್ಯಗಳನ್ನು ಕಲ್ಪಿಸಿರುತ್ತಾರೆ. ಪ್ರತಿ ವರ್ಷ ವೈಶಾಖ ಬಹುಳ ದಶಮಿ-ದ್ವಾದಶಿ ಪರ್ಯಂತ ಬ್ರಹ್ಮಣ್ಯ ತೀರ್ಥ ಆರಾಧನೆ ಭಕ್ತಿ ಶ್ರದ್ಧೆಗಳಿಂದ ವಿಜೃಂಭಣೆಯಿಂದ ನೆರವೇಸಲ್ಪಡುತ್ತದೆ.
Get in Touch With Us info@kalpa.news Whatsapp: 9481252093
Discussion about this post