ಕಲ್ಪ ಮೀಡಿಯಾ ಹೌಸ್
ನನಗೆ ನೆನ್ನೆಯವರೆಗೆ ಸಂಚಾರಿ ವಿಜಯ್ ಯಾರು ಅಂತ ಗೊತ್ತಿರಲಿಲ್ಲ. ಗೂಗಲ್ ಸರ್ಚ್ ಮಾಡಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಅಂತ ಗೊತ್ತಾಯ್ತು. ಒಂದಿನನೂ ಟಿವಿಲಿ ಪೇಪರ್ ಲಿ ಅವರನ್ನ ನೋಡಿಲ್ಲ. ಯೂಟ್ಯೂಬ್ ನಲ್ಲಿ ಅವರ ಕೆಲವು ಚಿತ್ರಗಳ ವೀಡಿಯೋ ನೋಡಿದೆ. ಒಳ್ಳೆಯ ಅಭಿನಯ. ಫೇಸ್ ಬುಕ್ ಲಿ ಅವರ ಕೆಲವು ಸಂದರ್ಶನ ನೋಡಿದೆ, ಮಾನವೀಯತೆ ತುಂಬಿದ ಹೃದಯ ಅನ್ನಿಸ್ತು. ಆತ್ಮವಿಮರ್ಶಕ ಅನ್ನಿಸ್ತು. ಸಮಾಜಮುಖಿ ಅಂತನೂ ತಿಳಿಯಿತು.
ಈಗ ಸೋಷಿಯಲ್ ಮೀಡಿಯಾದಲ್ಲಿ ಅವರನ್ನ ಪ್ರೀತಿಸುವ ಅವರಿಂದ ಪ್ರಭಾವಿತರಾದ ಇಷ್ಟೊಂದು ಜನರಿರೋದು ನೋಡಿ ಆಶ್ಚರ್ಯವಾಯಿತು. ಪಾಪ. ಖಂಡಿತಾ ಇಷ್ಟು ಬೇಗ ಸಾಯಬಾರದಿತ್ತು. ಏನೇನು ಕನಸುಗಳಿತ್ತೋ? ಆದರೆ ಈ ಮಾಧ್ಯಮದವರು ವರ್ತಿಸುತ್ತಿರುವ ರೀತಿ ನೋಡಿ ಹಾಸ್ಯಾಸ್ಪದ ಅನ್ನಿಸತ್ತೆ. ಮೀಡಿಯದವರು ಇಂಥವರನ್ನ ಬದುಕಿದ್ದಾಗ ತೊರ್ಸಲ್ಲ. ಅದೇ ಸತ್ತಾಗ ಇಡೀ ದಿನ ತೋರಿಸ್ತಾರೆ. ಸ್ಟಾರ್ ನಟರ ಮದುವೆ, ಅವರ ಮಕ್ಕಳ ನಾಮಕರಣ, ಬರ್ತ್ ಡೇ ಪಾರ್ಟಿನ ಇಡೀ ದಿನ ತೋರಿಸುವ ಚಾನೆಲ್ ಗಳಿಗೆ ಒಂದೇ ಒಂದು ದಿನ ಈ ರಾಷ್ಟ್ರ ಪ್ರಶಸ್ತಿ ವಿಜೇತ ನಟನ ಸಂದರ್ಶನ ಮಾಡಲಾಗದಿದ್ದುದು ವಿಪರ್ಯಾಸ. ಬಹುಶಃ ಅವರು ಬದುಕಿದ್ದಾಗ ಅವರಿಗೆ ಈ ಪ್ರೋತ್ಸಾಹ ಬೆಂಬಲ ಸಿಕ್ಕಿದ್ದಿದ್ರೆ ಅವರ ಒಳ್ಳೆಯ ಕನಸುಗಳು ನನಸಾಗ್ತಿದ್ವೋ ಏನೋ?!
ಸುಶಾಂತ್ ಸಿಂಗ್ ದೂ ಒಂಥರಾ ಇದೇ ಕಥೆ. ಸಮಾಜ ಹಾಗೇ ಅನ್ಸತ್ತೆ. ಒಳ್ಳೆಯವರನ್ನ ಪ್ರತಿಭಾನ್ವಿತರನ್ನ ತುಂಬಾ ಜಾಸ್ತಿ ಪರೀಕ್ಷೆ ಮಾಡತ್ತೆ. ಕೆಲವರು ತುಂಬಾ ತಾಳ್ಮೆಯಿಂದ ಪರೀಕ್ಷೆಯನ್ನು ಎದುರಿಸಿ ಪಾಸಾಗ್ತಾರೆ. ಕೆಲವರು ತಾಳ್ಮೆಗೆಟ್ಟು ದಾರಿಯನ್ನೇ ಬಿಡುತ್ತಾರೆ. ಇನ್ನು ಕೆಲವರು ಮಾರ್ಗವನ್ನೇ ಬದಲಿಸಿ ದಾರಿತಪ್ತಾರೆ! ಮತ್ತೆ ಕೆಲವರು ದಾರಿಯನ್ನು ಬಿಡದೇ ಕಾಯಲು ಸಾಧ್ಯವೂ ಆಗದೇ ಬದುಕನ್ನೇ ಬಿಟ್ಟು ಹೊರಟು ಹೋಗೇಬಿಡ್ತಾರೆ! ಅದಿಕ್ಕೆ ಒಳ್ಳೆಯವರನ್ನ ಟೆಸ್ಟ್ ಮಾಡ್ತಾನೇ ಇರ್ಬೇಡಿ. ಯಾರಿಗ್ಗೊತ್ತು ಯಾವತ್ತೋ ಒಂದು ದಿನ ಹೀಗೆ ಹೇಳ್ದೇ ಕೇಳ್ದೇ ಹೊರಟುಬಿಡ್ತಾರೆ! ಆಗ ಎಲ್ರೂ ಫೋಟೋ ಹಾಕ್ಕೊಂಡು ಅವನು ಒಳ್ಳೆಯವನು, ಹೃದಯವಂತ, ಕರುಣಾಮಯಿ, ಪ್ರತಿಭಾವಂತ, ಸಮಾಜಮುಖಿ, ಕನಸುಗಾರ ಅಂತೆಲ್ಲಾ ಪೇಚಾಡ್ತೀರಿ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸ ಭೋಜರಾಜನ ಚರಮಗೀತೆ ಹಾಡಿದಂತೆ! ಏನು ಪ್ರಯೋಜನ ಹೇಳಿ? ವ್ಯಕ್ತೀನೇ ಇರಲ್ವಲ್ಲ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post