ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಎರಡು ದಿನಗಳಿಂದ ಕೋಮಾ ಸ್ಥಿತಿಯಲ್ಲಿದ್ದ ಸ್ಯಾಂಡಲ್’ವುಡ್ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಈ ಕುರಿತಂತೆ ಅಧಿಕೃತ ಘೋಷಣೆ ಮಾಡಿರುವ ಅಪೋಲೋ ಆಸ್ಪತ್ರೆ ವೈದ್ಯರು, ನಾವು ವಿಜಯ್ ಅವರನ್ನು ಬದುಕಿಸಲು ಗರಿಷ್ಠ ಪ್ರಯತ್ನಗಳನ್ನು ಮಾಡಿದೆವು. ಆದರೆ, ಅವರ ಮೆದುಳು ತೀವ್ರ ಹಾನಿಯಾಗಿದ್ದ ಕಾರಣ ಯಾವುದೇ ರೀತಿಯ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎಂದಿದ್ದಾರೆ.
9.30ರ ನಂತರ ವಿಜಯ್ ಅವರ ಕಣ್ಣು, ಕಿಡ್ನಿ ಹಾಗೂ ಲಿವರ್ ದಾನ ಮಾಡಲಾಗಿದ್ದು, ಇದರ ಕಸಿ ನಂತರದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.
ಇನ್ನು, ಈ ಬಗ್ಗೆ ಮಾತನಾಡಿರುವ ಅವರ ಆಪ್ತ ಮನ್ಸೂರೆ ಹೇಳಿಕೆ ನೀಡಿದ್ದು, ನಾಳೆ ಬೆಳಗ್ಗೆ 8ರಿಂದ 10 ಗಂಟೆಯವರೆಗೂ ವಿಜಯ್ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಆನಂತರ ಅವರ ಹುಟ್ಟೂರು ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.
ಇಂದು ಮಧ್ಯಾಹ್ನದ ವೇಳೆಗೆ ವಿಜಯ್ ಅವರ ಮೃತಪಟ್ಟಿದ್ದರು ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಮಂತ್ರಿ ಮಹೋದಯರು, ಖ್ಯಾತ ನಟರಾದ ಪುನೀತ್ ರಾಜಕುಮಾರ್, ಸುದೀಪ್ ಸೇರಿದಂತೆ ಹಲವು ಕಲಾವಿದರು ಸಂತಾಪ ಸೂಚಿಸಿದ್ದರು.
ಮುಖ್ಯಮಂತ್ರಿಗಳು ಸಂತಾಪ ಸೂಚಿಸಿದ ಬೆನ್ನಲ್ಲೇ ಹೇಳಿಕೆ ನೀಡಿದ್ದ ಅಪೋಲೊ ಅಸ್ಪತ್ರೆ ವೈದ್ಯರು, ವಿಜಯ್ ಅವರ ಮಿದುಳು ಕಾರ್ಯನಿರ್ವಹಿಸುತ್ತಿಲ್ಲ ಆದರೆ, ಅವರ ಹೃದಯ ಬಡಿತ ಹಾಗೂ ಉಸಿರು ಇದೆ ಎಂದು ಸ್ಪಷ್ಟನೆ ನೀಡಿದ್ದರು.
ಇದರ ಬೆನ್ನಲ್ಲೇ ಚಿತ್ರರಂಗದ ಗಣ್ಯರು, ಕಲಾವಿದರು, ತಂತ್ರಜ್ಞರು ಆಸ್ಪತ್ರೆಗೆ ಭೇಟಿ ನೀಡಿ ವಿಜಯ್ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದರೆ, ಕೋಟ್ಯಂತರ ಕನ್ನಡಿಗರ ಪ್ರಾರ್ಥನೆ ಫಲಿಸದೇ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇಹಲೋಕ ತ್ಯಜಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post