ಚಳ್ಳಕೆರೆ: ಒಂದನೊಂದು ಕಾಲದಲ್ಲಿ ಎರಡನೆಯ ಬಾಂಬೆ ಎಂದೇ ಪ್ರಖ್ಯಾತಿ ಹೊಂದಿ ನೂರಾರು ಎಣ್ಣೆ ಮಿಲ್ಲುಗಳನ್ನು ಹೊಂದಿದ್ದ ಚಳ್ಳಕೆರೆ ಸತತ ಬರಗಾಲದಿಂದ ಬಳಲಿ ಬೆಂಡಾಗಿದೆ.
ಕಳೆದ ವರ್ಷದಂತೆ ಈ ಬಾರಿಯು ಈ ಭಾಗದಲ್ಲಿ ಇಳೆ ಭೂಮಿಗೆ ಬಿಳದೆ ಬರದ ಛಾಯೆ ಎದ್ದು ಕಾಣುತ್ತಿದೆ.
ಬಯಲುಸೀಮೆ ಮಳೆಯಾಶ್ರಿತವಾಗಿ ಈ ಭಾಗದ ರೈತರು ವಾಣಿಜ್ಯ ಬೆಳೆಯನ್ನಾಗಿ ಶೇಂಗಾವನ್ನು ಬೆಳೆಯುತ್ತಿದ್ದರು. ಆದರೆ ಭೀಕರ ಬರಗಾಲದಿಂದ ರೈತರು ತತ್ತರಿಸುತ್ತಿದ್ದಾರೆ. ಕಾರಣ ಮಳೆ ಬಿಳದೆ ಭೂಮಿಯನ್ನು ಹಸನು ಮಾಡಿಕೊಂಡು ಕೃಷಿ ಇಲಾಖೆ ನೀಡುತ್ತಿರುವ ಶೇಂಗಾವನ್ನು ತಂದು ಬೀಜ, ರಸಗೊಬ್ಬರ ಸಿದ್ಧಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ.
ಕಳೆದ ಮೂರು ದಿನದಿಂದ ತಾಲೂಕಿನ ಅಲ್ಲಲ್ಲಿ ಒಂದಿಷ್ಟು ಭೂಮಿಯ ಮೇಲ್ಭಾಗ ಮಾತ್ರ ಹಸಿಯಾಗಿದ್ದು ಬಿದ್ದ ಮಳೆಗೆ ರೈತರು ಒಣಭೂಮಿಗೆ ಬೀಜವನ್ನು ಬಿತ್ತನೆ ಮಾಡುತ್ತಿದ್ದಾರೆ.
ಈಗಾಗಲೆ ತಾಲೂಕಿನದ್ಯಾಂತ ನಾಯಕನಹಟ್ಟಿ, ತಳಕು, ಪರಶುರಾಂಪುರ, ಕಸಬಾ ಹೋಬಳಿಗಳಲ್ಲಿ ಸುಮಾರು 85 ಸಾವಿರ ಹೆಕ್ಟೇರ್ ಪ್ರದೇಶ ಗುರಿಯನ್ನು ಹೊಂದಿದ್ದು ಮಳೆಯ ಅಭಾವದ ಕಾರಣ 8634 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆದಿದೆ.
ದುಬಾರಿ ಶೇಂಗಾ ಬೀಜ ಸುಲಿದುಕೊಂಡು ಜೊತೆಗೆ ರಸಗೊಬ್ಬರ ಖರೀದಿ ಮಾಡಿಕೊಂಡು ಬಿತ್ತನೆಗೆ ಕಾದಿದ್ದರು. ಬಿತ್ತನೆ ಅವಧಿ ಮುಗಿಯುತ್ತಾ ಬಂದರು ಮಳೆರಾಯನ ಆಗಮನವಿಲ್ಲದೆ ಈ ತಾಲೂಕಿನ ಹಲವು ಗ್ರಾಮಗಳಾದ ಸಾಣಿಕೆರೆ, ಕಾಪರಹಳ್ಳಿ, ಜಡೆಕುಂಟೆ, ಚೆನ್ನಮ್ಮ ನಾಗತಿಹಳ್ಳಿ, ಚಟ್ಟೆಕಂಬ, ಬೊಮ್ಮನಹಳ್ಳಿ, ವೃಂದವನ್ನಹಳ್ಳಿ, ರೇಣುಕಾಪುರ, ಓಬಳಾಪುರ, ಕಾಲುವೆಹಳ್ಳಿ, ಚೌಳೂರು, ಸೂರನಹಳ್ಳಿ ಗ್ರಾಮಗಳಲ್ಲಿ ಅಲ್ಪಮಟ್ಟದ ಬಿತ್ತನೆಯಾಗಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಗಿರೀಶ್.
ಸಕಾಲಕ್ಕೆ ಮಳೆ ಬಂದಲ್ಲಿ ಶೇಂಗಾ ಬೆಳೆ 90ರಿಂದ 100 ದಿನಕ್ಕೆ ಶೇಂಗಾ ಬೆಳೆ ಬರುವುದು. ಆದರೆ ಮಳೆ ಕಣ್ಣಾಮುಚ್ಚಲೆ ಆಟದಿಂದ ಬಿತ್ತನೆ ಕಾರ್ಯ ವಿಳಂಬವಾಗಿದೆ. ಈಗಾಗಲೇ ಬಿತ್ತನೆ ಶುರುವಾಗಿದ್ದು ಅದು ಅಣ್ಣನ ಹೊಲದಲ್ಲಿ ಮಳೆ ಬಂದರೆ ತಮ್ಮನ ಹೊಲದಲ್ಲಿ ಮಳೆ ಬಂದಿಲ್ಲ. ಅಣ್ಣ ಹೊಲದಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದರೆ, ತಮ್ಮ ಹೊಲದಲ್ಲಿ ನಿಂತು ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತ ಜಡೆಕುಂಟೆ ಸುರೇಶ್.
ಕಳೆದ ವರ್ಷದಂತೆ ಈ ಬಾರಿಯು ಮಳೆ ಬೀಳದೆ ಬಿತ್ತನೆ ಕಾರ್ಯ ನಡೆಯದಿದ್ದರೆ ಜಾನುವಾರುಗಳಿಗೆ ಮೇವಿನ ಕೊರತೆ ಹೆಚ್ಚಾಗಿ ಕಾಡುತ್ತದೆ. ಇರುವ ದನಕರುಗಳನ್ನು ಮಾರುವ ಪರಿಸ್ಥಿತಿ ನಿಮಾರ್ಣವಾಗುತ್ತಿದೆ ಎನ್ನುತ್ತಾರೆ ಗೊಲ್ಲರಹಟ್ಟಿ ವೀರೇಶ್.
ಈಗಾಗಲೇ ಶೇಂಗಾ ಬಿತ್ತನೆ ಮಾಡುವುದಕ್ಕೆ ಅವಧಿ ಮೀರಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಶೇಂಗಾ ಬಿತ್ತನೆ ಮಾಡದೆ ಇರುವವರು ಪರ್ಯಾಯ ಬೆಳೆಗಳಾದ ರಾಗಿ, ಸಜ್ಜೆ, ನವಣೆ, ಕೊರ್ಲೆ ಬೆಳಗಳಿಗೆ ಅದ್ಯತೆ ನೀಡಿದರೆ ಉತ್ತಮ ಎನ್ನುತ್ತಾರೆ ಕೃಷಿ ಅಧಿಕಾರಿ ಕಿರಣ್ ಕುಮಾರ್.
( ವಿಶೇಷ ವರದಿ: ಎಸ್. ಸುರೇಶ್ ಬೆಳಗೆರೆ, ಚಳ್ಳಕೆರೆ)
Discussion about this post