ಅದು 2001ರ ಡಿಸೆಂಬರ್ 13… ಭಾರತದ ಸಂಸತ್ ಇತಿಹಾಸದಲ್ಲೇ ಕರಾಳದಿನ.
ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳು ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ಸಂಸತ್ ಭವನದ ಆವರಣ ಪ್ರವೇಶಿಸಿ ಹಠಾತ್ ಗುಂಡಿನ ದಾಳಿ ನಡೆಸಲು ಶುರು ಮಾಡಿದ ಉಗ್ರರು ಸಂಸತ್ ಭವನದ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಹುತಾತ್ಮರನ್ನಾಗಿಸಿದ್ದರು.
ರಾಜ್ಯಸಭಾ ಹಾಗೂ ಲೋಕಸಭಾ ಅಧಿವೇಶನಗಳು ಮುಕ್ತಾಯವಾದ ಕೇವಲ 40 ನಿಮಿಷಗಳಲ್ಲಿ ಆ ದಾಳಿ ನಡೆದಿತ್ತು. ಆದ್ದರಿಂದ ಬಹುತೇಕ ಸಂಸದರು, ಮಂತ್ರಿಗಳು ಹಾಗೂ ಅಧಿಕಾರಿ ವರ್ಗದವರು ಸಂಸತ್ ಭವನದಲ್ಲಿ ಇರಲಿಲ್ಲ.
ಏಕಾಏಕಿ ದಾಳಿ ಮಾಡಿದ ಉಗ್ರರು ಎಕೆ 47, ಗ್ರೆನೇಡ್, ಪಿಸ್ತೂಲುಗಳನ್ನು ಹೊತ್ತು ದಾಳಿಗೆ ಬಂದಿದ್ದರು. ದಾಳಿ ನಡೆಸಿದಾಕ್ಷಣ ಎಚ್ಚೆತ್ತ ರಕ್ಷಣಾ ಪಡೆಗಳು ಸಂಸತ್ ಭವನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿಸಿ ಸತತ ಪ್ರಯತ್ನ ಪಟ್ಟು ಉಗ್ರರನ್ನು ಹೊಸಕಿ ಹಾಕಿದ್ದರು.
ಮುಂದೆ ಹತರಾದ ಅಷ್ಟೂ ಉಗ್ರರರು ಪಾಕಿಸ್ಥಾನಿ ಪ್ರಜೆಗಳು ಎಂಬುದು ಸಾಬೀತಾಯಿತು. ಪಾಕ್ ಸರ್ಕಾರ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿತಾದರೂ ಭಾರತದ ಗುಪ್ತಚರ ಇಲಾಖೆ ದಾಳಿಗೆ ಪಾಕಿಸ್ಥಾನದಲ್ಲೇ ಪಿತೂರಿ ನಡೆದಿತ್ತು ಹಾಗೂ ಅದರಲ್ಲಿ ಪಾಕ್ ಸರ್ಕಾರದ ಕೈವಾಡವೂ ಇರುವ ಬಗ್ಗೆ ಶಂಕೆ ವ್ಯಕ್ತಪಡಿಸಿತು. ಪ್ರಧಾನಿ ವಾಜಪೇಯಿ ಸೇನೆಯನ್ನು ಶೀಘ್ರ ವಿವಿಧ ಪ್ರದೇಶಗಳಲ್ಲಿ ನಿಯೋಜಿಸುವಂತೆ ಆದೇಶ ಹೊರಡಿಸಿದರು.
ಸುಮಾರು 5 ಲಕ್ಷ ಸೇನಾ ಸಿಬ್ಬಂದಿ ಪಂಜಾಬ್, ರಾಜಸ್ತಾನ, ಗುಜರಾತ್ ಹಾಗೂ ಜಮ್ಮು ಕಾಶ್ಮೀರ ಪ್ರಾಂತ್ಯಗಳ ಅಂತರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಂತರು. ಪಾಕ್ ಇದಕ್ಕೆ ಪ್ರತ್ಯುತ್ತರವೆಂಬಂತೆ ತನ್ನ ಸೈನಿಕರನ್ನು ಅಂತರಾಷ್ಟ್ರೀಯ ಗಡಿಯಲ್ಲಿ ತಂದು ನಿಲ್ಲಿಸಿತು. ಅದೇ ಸಮಯಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಆಗಾಗ ಕದನಗಳು ಮರುಕಳಿಸುತ್ತಲೇ ಇದ್ದವು.
ಸಂಸತ್ ಮೇಲೆ ನಡೆದ ದಾಳಿಯ ನಂತರ ಒಂದು ವೇಳೆ ಭಾರತವೇನಾದರೂ ನಮ್ಮ ಮೇಲೆ ಆಕ್ರಮಣ ಮಾಡಿದರೆ ಸುಮ್ಮನೆ ಕುಳಿತುಕೊಳ್ಳಲು ನಾವೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದು ಮುಷರಫ್ ಹೇಳಿದಾಗ, ನಮ್ಮ ಪಂಜಾನ್‌ನಲ್ಲಿ ಗಂಡಸರೂ ಬಳೆ ತೊಡುತ್ತಾರೆ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
Discussion about this post