ಬಹಳ ನೋವಿನಿಂದ ಇದನ್ನು ಬರೆಯುತ್ತಿದ್ದೀನಿ…
ಸ್ನೇಹಿತರೆ ಪುತ್ತೂರಿನಲ್ಲಿ ನಡೆದ ಅತ್ಯಾಚಾರ ಕೃತ್ಯದ ವೀಡಿಯೋ ಹಾಗೂ ಅಪರಾಧಿಗಳ ಜೊತೆ ಆ ಹುಡುಗಿಯ ಫೋಟೋಗಳನ್ನು ಎಲ್ಲಾ ಕಡೆಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಆ ಹುಡುಗಿಯ ಸ್ಥಾನದಲ್ಲಿ ನಮ್ಮ ಮನೆಯ ಹೆಣ್ಮಕ್ಕಳು ಇದ್ದಿದ್ದರೆ ಇದೇ ರೀತಿ ಕಂಡ ಕಂಡ ಗ್ರೂಪ್’ಗಳಲ್ಲಿ ಶೇರ್ ಮಾಡುತ್ತಿದ್ದೀರಾ? ಕನಿಷ್ಠ ಆ ಹುಡುಗಿಯ ಮುಖವನ್ನು Blur ಮಾಡ್ಬೇಕು ಅನ್ನೋ ಸಾಮಾನ್ಯ ಪ್ರಜ್ಞೆಯು ನಿಮಗಿಲ್ಲವೇ?
ಇನ್ನೂ ವಿಪರ್ಯಾಸವೆಂದರೆ ಇಂತಹ ಕೃತ್ಯದ ವಿಚಾರವಾಗಿ ಸಾಕಷ್ಟು ಜನ ಇದು ಅತ್ಯಾಚಾರವೋ ಅಥವಾ ಸ್ವಇಚ್ಛೆಯಿಂದ ನಡೆದ ಕೃತ್ಯವೋ ಎನ್ನುವ ಚರ್ಚೆಯಲ್ಲಿ ಬ್ಯುಸಿ (ಬೇಸರವೆಂದರೆ ಇದರಲ್ಲಿ ಕೆಲವು ಹೆಣ್ಮಕ್ಕಳೆ ಇದನ್ನು ಅತ್ಯಾಚಾರವಲ್ಲ ಎಂದು ವಾದಿಸುತ್ತಿರುವುದು ನಮ್ಮ ದುರಾದೃಷ್ಟವೋ ಎನ್ನಿಸುತ್ತಿದೆ).
ಅದರಲ್ಲೂ ಇನ್ನೂ ಕೆಲವರು ಅದಕ್ಕೆ ಜಾತಿ, ಧರ್ಮದ ಲೇಪನವನ್ನು ಬಳಿದು ತಮ್ಮ ಜಾತಿ, ಧರ್ಮದ ಬೇಳೆ ಬೇಯಿಸಿಕೊಳ್ಳಲು ಆರಂಭಿಸಿ ಆಗಿದೆ.
ಸರಿ ಬನ್ನಿ ನನ್ನದೊಂದಷ್ಟು ಪ್ರಶ್ನೆಗಳು ನಿಮಗೆ:
1. ಅಲ್ಲಿ ನಡೆದದ್ದು ಅತ್ಯಾಚಾರ ಎಂದಾಗ ಕೆಲವರು ನನಗೆ ಕೇಳದ ಪ್ರಶ್ನೆ ನೀವು ವೀಡಿಯೋವನ್ನು ಸರಿಯಾಗಿ ನೋಡಿದ್ದೀರ ಅಂತ. ಹೌದು ಸ್ವಾಮಿ ನೋಡಿದ್ದೇನೆ. ಏನಿದೆ..? ನನಗೆ ಕಂಡದ್ದು ಅಲ್ಲಿ ಒಂದು ಅಮಲಿನಲ್ಲಿದ್ದ ಹೆಣ್ಣಿನ ಮೇಲೆ ರಣಹದ್ದುಗಳಂತೆ ಬಿದ್ದ 3, 4 ಗಂಡು ಮಕ್ಕಳು, ಮತ್ತೆ ಅವರ ಮದವೇರಿದ ಕಾಮ ಮಾತ್ರ ಕಾಣಿಸಿತು. ದೌರ್ಜನ್ಯವಂತು ಖಂಡಿತ ನಡೆದಿದೆ (ಅತ್ಯಾಚಾರ ಅಲ್ಲವೆಂದು ವಾದಿಸುವವರು ಒಮ್ಮೆ ಪ್ರಯತ್ನಿಸಿ ನೋಡಿ ಗಾಂಜಾನೋ, ಡ್ರಕ್ಸೋ ಬೇಡ ಒಂದು ಫುಲ್ ಬಾಟಲ್ ಸಾರಾಯಿಯನ್ನು ಕುಡಿಯಿರಿ ಸಾಕು ನಿಮ್ಮ ದೇಹದ ಸ್ಥಿತಿ ಹೇಗಿರುತ್ತೆ ಅನ್ನೋದು ಅರಿವಾದೀತು).
2. ಅಲ್ಲಿ ಆ ಹುಡುಗಿ ಏನಾದರೂ ಅ ಕೃತ್ಯಕ್ಕೆ ಪ್ರಚೋದನೆಯೋ ಅಥವಾ ಅತ್ಯಾಚಾರಕ್ಕೆ ಸ್ಪಂದಿಸುತ್ತಿದ್ದಳು ಅಂತ ನಿಮಗೆ ಅನ್ನಿಸಿದ್ರೆ ಖಂಡಿತವಾಗಿ ನಿಮ್ಮ ಕಣ್ಣಿಗೆ ಕಟ್ಟಿದ ಪೊರೆಯನ್ನು ಬದಲಾಯಿಸಿಕೊಳ್ಳಿ. ಅಮಲಿನಲ್ಲಿ ಆ ಹುಡುಗಿ ಆ ಹುಡುಗನನ್ನು ತನ್ನ ಕೈಯಲ್ಲಿ ಹಿಡಿದುಕೊಂಡ ರೀತಿ ನಿಮಗೆ ಅವಳು ಅಲ್ಲಿ ಅವರಿಗೆ ಸರಿಯಾಗಿ ಸ್ಪಂದಿಸುತ್ತಿದ್ದಾಳೆ ಅನ್ನಿಸಿರಬಹುದು. (ಇದಕ್ಕೂ ಮೇಲೆ ಹೇಳಿದಂತೆ ಕಂಠ ಪೂರ್ತಿ ಕುಡಿದು ನೋಡಿ ಅಮಲು ಅಂದ್ರೆ ಏನು ಅಂತ ಅರ್ಥವಾಗಬಹುದು.)
3. ಹಾಗೆ ಇದು ಅತ್ಯಾಚಾರವೋ – ಅಥವಾ ಸ್ವಇಚ್ಛೆಯಿಂದ ನಡೆದ ಕೃತ್ಯವೋ ಎಂದು ದೀರ್ಘ ಚರ್ಚೆಯಲ್ಲಿ ಮುಳುಗಿರುವವರೇ, ಇದೆ ಅವಸ್ಥೆ ನಿಮ್ಮ ಮನೆಯ ಹೆಣ್ಣಿಗಾಗಿದ್ದರೆ ಹೀಗೆ ಚರ್ಚೆ ಮಾಡುತ್ತ ಕುಳಿತುಕೊಳ್ಳುತ್ತಿದ್ದಿರಾ?
4. ಹಾಗೆ ಇದಕ್ಕೆ ಜಾತಿ, ಧರ್ಮದ ಲೇಪನ ನೀಡಿತ್ತಿರುವ ಅವಕಾಶವಾದಿಗಳೇ, ನಿಮಗೂ ಇದೆ ಪ್ರಶ್ನೆ ನಿಮ್ಮ ಮನೆ ಹೆಣ್ಣು ಮಗುವಿಗೆ ಹೀಗೆ ಆಗಿದ್ದರೆ, ನೀವೂ ಇದೇ ರೀತಿ ಜಾತಿ, ಧರ್ಮದ ಬೇಳೆ ಬೇಯಿಸಿಕೊಳ್ಳುತ್ತಿದ್ದಿರಾ?
5. ಹಾಗೆ ಬೆಳಿಗ್ಗೆಯಿಂದ ಇದರ ವೀಡಿಯೋ ಹಾಗೂ ಆ ಹೆಣ್ಣಿನ ಫೂಟೋವನ್ನು ಕಂಡ ಕಂಡಲ್ಲಿ ಶೇರ್ ಮಾಡುತ್ತಿರುವವರೆ ನಿಮಗೂ ಅಷ್ಟೇ ನಿಮ್ಮ ಮನೆ ಹೆಣ್ಣಿಗೆ ಹೀಗೆ ಆಗಿದ್ದರೆ ಇವಳೆ ಆ ವೀಡಿಯೋದಲ್ಲಿರುವ ಹುಡುಗಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಿರಾ?
ಘಟನೆಯಲ್ಲಿ ಆಕೆ ತಪ್ಪು ಮಾಡಿದ್ದಾಳೋ ಅಥವಾ ಇಲ್ಲವೋ ಎಂಬುದನ್ನು ಆಕೆಯ ಆತ್ಮಸಾಕ್ಷಿ ಹಾಗೂ ಕಾನೂನು ನಿರ್ಧರಿಸುತ್ತದೆ. ಇದಕ್ಕಾಗಿಯೇ ನಮ್ಮ ದಕ್ಷಿಣ ಕನ್ನಡದ ದಕ್ಷ ಪೊಲೀಸ್ ಇಲಾಖೆಯಿದೆ. ಆದರೆ, ನೈತಿಕತೆಯಿರುವ ಯಾರೂ ಸಹ ಇಂತಹ ವೀಡಿಯೋ ಅಥವಾ ಫೋಟೋ ಶೇರ್ ಮಾಡುವುದಿಲ್ಲ.
ನಮ್ಮ ಮನೆಯವರಾಗಲಿ, ಇನ್ಯಾರದೋ ಮನೆಯವರಾಗಲಿ, ಹೆಣ್ಣು ಹೆಣ್ಣೆ…. ಆ ಹುಡುಗಿಯ ತಂದೆ, ತಾಯಿ, ಸಂಬಂಧಿಕರ, ಅವರ ಮರ್ಯಾದೆಯ ಬಗ್ಗೆಯು ಯೋಚಿಸಿ.
ದಯವಿಟ್ಟು ಆ ವೀಡಿಯೋ ಅಥವಾ ಫೋಟೋಗಳನ್ನು ಶೇರ್ ಮಾಡ್ಬೇಡಿ. ಅಪ್ಪಿತಪ್ಪಿ ನಿಮಗೆ ಯಾರಾದರೂ ಕಳುಹಿಸಿದರೆ ಮುಂದೆ ಯಾರಿಗೂ ಕಳುಹಿಸದಂತೆ ಮನವಿ ಮಾಡಿಕೊಳ್ಳಿ.
ಇಂತಿ ನಿಮ್ಮವ
ಪ್ರದೀಪ್ ಪುತ್ರನ್ ಕೋಟ
Discussion about this post