ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ವ್ಯಕ್ತಿಯೊಬ್ಬನು ಯಾವಾಗ ಜನಿಸಿದನು, ಎಲ್ಲೆಲ್ಲಿ ಓಡಾಡಿದನು, ಯಾವ ಹುದ್ದೆಯನ್ನು ಅಲಂಕರಿಸಿದನು, ಯಾವ ಬಿರುದು ಬಾವಲಿ ಪ್ರಶಸ್ತಿ ಹಾರ ತುರಾಯಿಗಳಿಗೆ ಜೋತು ಬಿದ್ದು ಜಗತ್ಪ್ರಸಿದ್ಧನಾದನೆಂಬುದು ಮುಖ್ಯವಲ್ಲ. ಇದ್ದಷ್ಟು ದಿನಗಳಲ್ಲಿ ಹೇಗೆ ಬದುಕಿದನು? ಜಗತ್ತಿಗಾಗಿ ಏನು ಮಾಡಿದನು? ಜನತೆಗೆ ಏನನ್ನು ಶಾಶ್ವತ ಕೊಡುಗೆಯಾಗಿ ನೀಡಿ ಹೋದನೆಂಬುದೇ ಅವರ ಜೀವನಗಾಥೆಯಾಗುತ್ತದೆ.
ಆಧುನಿಕ ಜಗತ್ತಿನ ನವೀನ ಜೀವನ ಶೈಲಿಯ ಇಂದಿನ ಜನ ತಮ್ಮೆಲ್ಲ ಜಂಜಾಟಗಳಿಗೆ ಪರಿಹಾರ ಹುಡುಕುವಲ್ಲಿ ನೆನೆಯ ಬೇಕಾದ ಪ್ರಾತಃಸ್ಮರಣೀಯರು ಯಾರು ಎಂಬ ಪ್ರಶ್ನೆಗೆ ನಿಸ್ಸಂದೇಹವಾದ ಉತ್ತರ ‘‘ರಾಷ್ಟ್ರಪಿತ ಮಹಾತ್ಮ ಗಾಂಧಿ’’.
ಶರವೇಗದಲ್ಲಿ ಮುನ್ನುಗ್ಗುತ್ತಿರುವ ತನ್ನೊಳಗೆ ತುಂಬಿಕೊಳ್ಳುತ್ತಿರುವ ದುರಾಸೆ, ಅಸತ್ಯ, ಭ್ರಷ್ಟಾಚಾರ, ಮೋಸ, ವಂಚನೆ ಮೊದಲಾದವುಗಳ ಸುಳಿಯಲ್ಲಿ ಸಿಲುಕಿ ಜಗತ್ತಿನಾದ್ಯಂತ ಎಲ್ಲೆಲ್ಲೂ ಅಶಾಂತಿ ತಲೆದೋರುತ್ತಿದೆ. ಜನತೆ ಸ್ವೇಚ್ಛಾಚಾರವೆಂಬ ಮಾಯಾಜಿಂಕೆಯನ್ನು ಬೆನ್ನು ಹತ್ತಿದ್ದಾರೆ. ಇಂತಹ ನೂರಾರು ಸಮಸ್ಯೆಗಳಿಗೆ ಇಂದಿಗೂ ಕಾಣುವ ಪರಿಹಾರ ‘‘ಗಾಂಧಿ ಮಾರ್ಗ’’. ಆದ್ದರಿಂದಲೇ ಇಂದು ಗಾಂಧಿ ತತ್ವಗಳು ಕೇವಲ ಭಾರತದ ಜನರಿಗಷ್ಟೆ ಅಲ್ಲ ಜಗತ್ತಿನಾದ್ಯಾಂತ ಕೋಟ್ಯಾಂತರ ಜನರ ಬದುಕಿನ ಆಶಾಕಿರಣವಾಗಿ ಕಾಣುತ್ತಿವೆ. ವಿಶ್ವದ ದೊಡ್ಡಣ್ಣ ಅಮೇರಿಕಾದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ‘‘ನಾನು ಇಂದು ಇಂತಹ ಉನ್ನತ ಹುದ್ದೆ ಅಲಂಕರಿಸಲು ಮಹಾತ್ಮ ಗಾಂಧೀಜಿಯವರ ತತ್ವಗಳೇ ಪ್ರೇರಣೆ’’ ಎಂದು ಹೇಳಿರುವ ಮಾತು. ಇತ್ತೀಚಿನ ತಮ್ಮ ಭಾರತದ ಭೇಟಿಯ ಸಮಯದಲ್ಲಿ ನಮ್ಮ ಸಂಸತ್ತಿನಲ್ಲಿ ಗಾಂಧೀಜಿಯವರ ಬಗ್ಗೆ ಆಡಿರುವ ಮಾತುಗಳು ಪ್ರಸ್ತುತ ಗಾಂಧಿ ವಿಚಾರಗಳ ಮಹತ್ವವನ್ನು ತೋರಿಸುತ್ತವೆ.
ಭಾರತ ಸ್ವತಂತ್ರ ರಾಷ್ಟ್ರವಾಗಿ ಹೊರ ಹೊಮ್ಮುವುದರಲ್ಲಿ ಅನೇಕ ಮಹನೀಯರ ಪಾತ್ರ ಇರುವುದಾದರೂ, ಅಚ್ಚಳಿಯದ ನೆನಪು ಮೂಡಿಸಿದವರು ಗಾಂಧೀಜಿಯವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಗಾಂಧಿಯಾಗಿ ಅಸಾಮಾನ್ಯ ವ್ಯಕ್ತಿತ್ವ ಗಳಿಸಿಕೊಂಡ ಪರಿ ಅದ್ಭುತ. ಅಹಿಂಸೆ, ತ್ಯಾಗ, ಸತ್ಯಾಗ್ರಹದಿಂದ ಬ್ರಿಟಿಷರನ್ನು ಭಾರತ ಬಿಟ್ಟು ಹೊರದೋಡಿಸಿದ್ದು ಸಣ್ಣ ಮಾತಲ್ಲ. ನಿರಂತರ ಹೋರಾಟದಿಂದ ಸ್ವಾತಂತ್ರ್ಯವೇನೋ ಬಂತು ಆದರೆ ಸ್ವತಂತ್ರ ಭಾರತದಲ್ಲಿ ಬಹುದಿನ ಬಾಳಲಿಲ್ಲ ಎಂಬುದೇ ಬೇಸರದ ಸಂಗತಿ.
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಎಲ್ಲರೂ ಸುಖವಾಗಿರಲಿ (ಸರ್ವೇ ಜನಾಃ ಸುಖಿನೋ ಭವಂತು) ಎಂಬ ತತ್ತ್ವ ಪ್ರತಿಪಾದಿಸಲ್ಪಟ್ಟಿದೆ. ನಾನು ಮಾತ್ರ ಸುಖವಾಗಿರಬೇಕು ಎಂಬ ತತ್ತ್ವಕ್ಕಿಂತ ಎಲ್ಲರೂ ಸುಖವಾಗಿರಬೇಕು ಎಂಬ ತತ್ತ್ವ ವಿಶಾಲ ತಳಹದಿಯನ್ನು ಹೊಂದಿದೆ. ಎಲ್ಲರ ಸುಖದಲ್ಲಿ ಏಕ ವ್ಯಕ್ತಿಯ ಸುಖ ಕೂಡ ಅಡಗಿರುತ್ತದೆ. ಇಡೀ ಜಗತ್ತು ಕ್ಷೋಭೆಗೊಂಡಿರುವಾಗ ಏಕ ವ್ಯಕ್ತಿ ಹೇಗೆ ಸುಖವನ್ನು ಅನುಭವಿಸಬಹುದು? ಇದನ್ನೆಲ್ಲ ಮನನ ಮಾಡಿದ್ದ ಬಾಪು ಸರ್ವೋದಯ ಎಂಬ ಪದವನ್ನು ಬಳಕೆಗೆ ತಂದರಲ್ಲದೇ ವ್ಯಕ್ತಿಯ ಸುಖಕ್ಕಿಂತ ಇಡೀ ಸಮಾಜದ, ಇಡೀ ರಾಷ್ಟ್ರದ, ಇಡೀ ಜಗತ್ತಿನ ಸುಖ ಅಮೂಲ್ಯವಾದದ್ದು ಮತ್ತು ಮುಖ್ಯವಾದದ್ದು ಎಂಬುದನ್ನು ಕೇವಲ ಭಾರತೀಯರಿಗಷ್ಟೇ ಅಲ್ಲದೇ ಜಗತ್ತಿಗೆ ತಿಳಿಸಿಕೊಡಲು ಪ್ರಯತ್ನಿಸಿದ್ದರು. ಬಾಪು ಮುಖ್ಯವಾಗಿ ಸರ್ವೋದಯ ತತ್ತ್ವವನ್ನು ವ್ಯಕ್ತಿಗೂ ಹಾಗೂ ಇಡೀ ಸಮಾಜಕ್ಕೂ ಬದುಕಿನ ವಿಧಾನವಾಗಿ ನಿರೂಪಿಸಲು ಪ್ರಯತ್ನಿಸಿದ ಮಹಾಪುರುಷರಾಗಿದ್ದಾರೆ.
ದುಡಿಮೆ ಯಾವುದೇ ಆಗಿರಲಿ ಅದನ್ನು ಮಾಡಿ ಜೀವನ ಸಾಗಿಸುವ ಆಧಿಕಾರ ಸಕಲರಿಗೂ ಇರುತ್ತದೆ. ಪ್ರಾಮಾಣಿಕವಾಗಿ ಮಾಡುವ ಎಲ್ಲ ಕೆಲಸಗಳೂ ಸಮನಾಗಿರುತ್ತವೆ. ಒಬ್ಬ ವಕೀಲನ ಕೆಲಸಕ್ಕಿರುವಷ್ಟೇ ಗೌರವ ಒಬ್ಬ ಕ್ಷೌರಿಕನ ಕೆಲಸಕ್ಕೂ ಇರುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಾಪು ದೇಶ ಸ್ವತಂತ್ರವಾಗುತ್ತಿದ್ದಂತೆ ಕಣ್ಮರೆಯಾದರು. ಆದರೆ ಅವರ ಕನಸು ನಮ್ಮ ನಡುವೆ ಇದೆ. ಅದನ್ನು ನನಸು ಮಾಡುವ ಹೊಣೆ ನಮ್ಮ ಮೇಲಿಲ್ಲವೇ?
ಸ್ವಾತಂತ್ರ್ಯಾನಂತರ ಭಾರತದಲ್ಲಿ ಜೀವನದ ಮೌಲ್ಯಗಳು ದಿನೇ ದಿನೇ ಕುಸಿಯುತ್ತವೆ. ಜಾಗತೀಕರಣದ ಅಬ್ಬರ, ಜನಸಂಖ್ಯಾ ಸ್ಪೋಟದ ತೀವ್ರತೆ, ಆಂಗ್ಲ ಭಾಷಾ ಮಾಧ್ಯಮದ ವಿಪರೀತ ಮೋಹ, ಅಂಕ ಶಿಕ್ಷಣದ ಗೀಳು, ಆಮಿಷಪೂರ್ವವೂ ವಿವೇಕಹೀನವೂ ಆದ ಮತದಾರನ ಭ್ರಷ್ಟತೆ, ಅಧಿಕಾರಶಾಹಿಯ ತತ್ವರಹಿತ ರಾಜಕೀಯ, ಕೊಳ್ಳುಬಾಕ ಸಂಸ್ಕೃತಿಯ ನಿರಂತರ ಅತೃಪ್ತಿ, ಅಭಿವೃದ್ಧಿ ಹೆಸರಿನ ಬ್ರಹ್ಮರಾಕ್ಷಸ, ಕ್ಯಾನ್ಸ್‌ರ್ ಪೀಡಿತ ಭ್ರಷ್ಟಾಚಾರ, ಆಧುನಿಕತೆಯ ಹುಚ್ಚು ಅಮಲು, ಜಾತಿಯ ಕೊಳಕುತನ, ಕೋಮುವಾದದ ಓಟುಬ್ಯಾಂಕ್, ಲಿಂಗತಾರತಮ್ಯದ ವಿಕೃತಿ, ಭಯೋತ್ಪಾದನಾ ಆತಂಕ ನಕ್ಸಲೈಟ್‌ನ ಹಿಂಸಾಕಾಂಡ ಈ ಒಂದೊಂದು ಸಮಸ್ಯೆಯೂ ಹಲವು ರೋಗದ ಮೂಟೆ. ಮೇಲ್ಕಂಡ ಸಮಸ್ಯೆಗಳ ಸುಳಿಯಲ್ಲಿ ವರ್ತಮಾನದ ಭಾರತ ಪ್ರಕ್ಷುಬ್ದವಾಗಿದೆ, ರೋಗಗ್ರಸ್ತವಾಗಿದೆ.
ಹಿಂದಣ ಹೆಜ್ಜೆಯನ್ನರಿಯದೆ ಮುಂದಣ ಹೆಜ್ಜೆಯನ್ನು ಅರಿಯಬಾರದು ಎನ್ನುತ್ತಾನೆ ಅಲ್ಲಮಪ್ರಭು. ವರ್ತಮಾನದ ಸರಿಯಾದ ಗ್ರಹಿಕೆಗೆ ಭೂತಕಾಲದ ಅರಿವು ಇರಲೇಬೇಕು. ಏಕೆಂದರೆ ಭೂತಕಾಲದ ಮೇಲೆ ವರ್ತಮಾನ ನಿಲ್ಲಬೇಕು ಹಾಗೂ ರೂಪುಗೊಳ್ಳಬೇಕು. ತಾನು ಬದುಕಿದ್ದ ಕಾಲಘಟ್ಟದಲ್ಲಿ ತೀವ್ರವಾಗಿ ಸ್ಪಂದಿಸಿದ ವಿಶೇಷ ವ್ಯಕ್ತಿತ್ವವುಳ್ಳವರೇ ಜನನಾಯಕರೂ, ಮಹಾತ್ಮರೂ ಆಗಿರುತ್ತಾರೆ. ಗಾಂಧೀಜಿಯವರು ಅಂತಹವರಲೊಬ್ಬ ಮಹಾನುಭಾವರು. ಚರಿತ್ರೆಯ ಸಂಘರ್ಷದೊಳಗಿಂದ ಒಡಮೂಡಿದ ಶಿಖರಸದೃಶ್ಯ ವ್ಯಕ್ತಿ ಗಾಂಧೀಜಿಯವರು.
ಒಂದು ಕಾಲ-ದೇಶಕ್ಕೆ ಬಂಧಿತವಾದ ಎಷ್ಟೇ ಶ್ರೇಷ್ಠ ವ್ಯಕ್ತಿಯನ್ನು ಕೂಡ ನಾವು ವರ್ತಮಾನಕ್ಕೆ ಯಥಾವತ್ತಾಗಿ ಸ್ವೀಕರಿಸಬಾರದು. ಹಾಗೆ ಮಾಡುವುದು ಅಂಧಾನುಕರಣೆಯ ಆರಾಧಾನಾ ಪ್ರಜ್ಞೆ ಆಗುತ್ತದೆ. ಯಾವುದೇ ಶ್ರೇಷ್ಠ ಮನುಷ್ಯನ ಬದುಕಿನ ರೀತಿಯನ್ನು, ಚಿಂತನಾ ವಿಧಾನವನ್ನು, ರಚನಾತ್ಮಕ ವರ್ತನೆಯನ್ನು ವರ್ತಮಾನಕ್ಕೆ ಅನ್ವಯಿಸಿಕೊಳ್ಳಬೇಕಾದಾಗ ಅರ್ಥಪೂರ್ಣವಾಗಿ ಅನುಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಹೀಗಾದಾಗ ಮಾತ್ರ ಆ ವ್ಯಕ್ತಿಯನ್ನು ನಿಜಾರ್ಥದಲ್ಲಿ ಗೌರವಿಸಿದಂತೆ ಆಗುತ್ತದೆ. ಗಾಂಧೀಜಿಯವರೇ ವರ್ತಮಾನದ ಭಾರತ(ಜಗತ್ತಿಗೆ)ಕ್ಕೆ ಏಕಮೇವ ಪರಿಹಾರೋಪಾಯದ ಸ್ವರೂಪವಾಗಿರುವುದೇಕೆಂದರೆ ಅವರಂತೆ ಭಾರತೀಯರ ನಾಡಿ ಮಿಡಿದವರು, ದೇಶಕ್ಕೇನು ಬೇಕೆಂದು ಆಲೋಚಿಸಿದವರು, ದುಡಿದವರು ಅತಿ ವಿರಳವೇ ಸರಿ. ಅಗಣಿತ ಬುದ್ಧಿಜೀವಿಗಳನ್ನು ಪ್ರಭಾವಿಸಿದ ಇವರ ಚಿಂತನಾಧಾರೆ ಸಮಸ್ಯೆಗಳಿಗೆ ನಿವಾರಣಾ ರೂಪವಾಗಿದೆ ಎಂದು ಅವರೆಲ್ಲಾ ಗಾಂಧಿ ಕಡೆಗೆ ಬೆರಳು ತೋರಿಸುತ್ತಾರೆ. ಇದು ಗಾಂಧೀಯ ಮಹತ್ವ ಹಾಗೂ ಅನಿವಾರ್ಯತೆಯ ದ್ಯೋತಕವಾಗಿದೆ.
ದೇಶದಲ್ಲಿ ಸಕಾರಾತ್ಮಕಾರ್ಥದ ವಿದ್ವಂಸಕತೆ ತಡೆಯಬೇಕಾದರೆ ಭಾರತೀಯರೆಲ್ಲರೂ ಯಾವುದೇ ಜಾತಿ-ಧರ್ಮ-ಸಿದ್ಧಾಂತಗಳ ಭೇದವಿಲ್ಲದೆ ಸರ್ವೋದಯ ಮಾರ್ಗದಲ್ಲಿ ಕ್ರಮಿಸೋಣ. ಗಾಂಧೀಜಿಯವರ ಹಿಂದೆ ನಾವು ಕೂಡ ಶಾಂತಿಯ ಸಿಪಾಯಿಯಾಗಿ, ಕ್ರಾಂತಿಯ ಸಿಪಾಯಿಯಾಗಿ ನಡೆಯೋಣ.
ಗಾಂಧೀಜಿಯ ಜೀವನ ಒಬ್ಬ ಅವತಾರ ಪುರುಷನದಲ್ಲ. ಅವರು ಹುಟ್ಟುತ್ತಾ ಮಹಾತ್ಮರಾಗಿದ್ದವರಲ್ಲ. ಸ್ವಪ್ರಯತ್ನದಿಂದ, ನಿರಂತರ ಸಾಧನೆಯಿಂದ, ದೈವಭಕ್ತಿ, ಸತ್ಯನಿಷ್ಠೆ, ದೈವಾನುಗ್ರಹದಿಂದ ಅವರು ಸಾಮಾನ್ಯ ಮಾನವನಾಗಿ ಜನಿಸಿ ಮಹಾಪುರುಷರಾಗಿ ಪರಿವರ್ತಿತರಾದರು.
(ಇತ್ತೀಚೆಗೆ ಪ್ರಕಟಗೊಂಡ ಯುವ ಲೇಖಕಿ ಸುಮ ಚಂದ್ರಶೇಖರ್ ರವರ ಗಾಂಧಿ ವ್ಯಕ್ತಿತ್ವ ದರ್ಶನ ಸಂಕಲನದ ಸತ್ಯ ಪಥದ ನಿತ್ಯ ಸಂತ ಕೃತಿಯಿಂದ ಆಯ್ದ ಲೇಖನ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post