ತುಳುನಾಡಿನ ಜನಪದ ಕಲೆ ಎಂದೆ ಪ್ರಸಿದ್ದಿ ಹೊಂದಿರುವ ಕೋಟಿ ಚೆನ್ನಯ್ಯ ಕಂಬಳ ನಡೆಯುವಂತಹ ಒಂಟಿಕಟ್ಟೆ ಕಡಲಕೆರೆ ನಿಸರ್ಗ ಧಾಮದಲಿ ನಾನು ನೋಡಿದ ಹುಡುಗನೆ ಯಕ್ಷಕುವರ ಮೂಡಬಿದ್ರೆಯ ಮಂದಾರ ಪೂಜಾರಿ ಸಾಧನೆಯಲ್ಲಿ ಯಕ್ಷಗಾನದ ಮುತ್ತು.
ಕಲೆ ಎಂಬುದು ರಕ್ತಗತವಾಗಿ ಬರುತ್ತದೆ ಎಂಬ ಮಾತನ್ನು ಕೇಳಿದ್ದು ಮಾತ್ರವಲ್ಲ, ಇತ್ತೀಚೆಗೆ ಒಂದಷ್ಟು ವಿಡಿಯೋ ತುಣುಕುಗಳು ಸಹ ಮೇಲಿನ ಮಾತನ್ನು ಸತ್ಯವಾಗಿಸಿವೆ. ಅಂತೆಯೇ ಇಂದು ನಾವು ಪರಿಚಯ ಮಾಡುತ್ತಿರುವ ಬಾಲಪ್ರತಿಭೆ ಮಂದಾರ ಪೂಜಾರಿ ಇವನು ಸಹ ತನ್ನ ತಂದೆ-ತಾಯಿಗಿರುವ ಯಕ್ಷಗಾನದ ಮೇಲಿನ ಆಸಕ್ತಿಯಿಂದ ತನ್ನನ್ನು ತಾನು ಯಕ್ಷರಂಗದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಇಂದು ನೂರಾರು ವೇದಿಕೆಗಳಲ್ಲಿ ಬಣ್ಣಹಚ್ಚಿ ಮಿಂಚುತ್ತಿದ್ದಾನೆ.
ಕರಾವಳಿಯ ಗಂಡು ಕಲೆ ಎಂದೇ ನಾಮಾಂಕಿತಗೊಂಡಿರುವ ಯಕ್ಷಗಾನದಲ್ಲಿ ಬಾಲಕ ರಕ್ಷಿತ್ ಪಡ್ರೆಯವರ ಆಶೀರ್ವಾದದಿಂದ ಯಕ್ಷ ಕ್ಷೇತ್ರದಲ್ಲಿ ತನ್ನದೆ ಛಾಪು ಮೂಡಿಸುತ್ತಿದ್ದಾನೆ.
ಮೂಲತಃ ಮೂಡಬಿದ್ರೆಯ ಸುಧಾಕರ್ ಪೂಜಾರಿ ಮತ್ತು ಮಾಯ ಪೂಜಾರಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಮಂದಾರ ಮೊದಲನೆಯ ಸುಪುತ್ರ. ರೋಟರಿ ಆಂಗ್ಲ ಮಾಧ್ಯಮಶಾಲೆಯಲ್ಲಿ 9ನೆಯ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ 13 ವರ್ಷದ ಈ ಬಾಲಕ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಕ್ಷೇತ್ರದಲ್ಲಿ ಅನನ್ಯ ಸಾಧನೆಯನ್ನೂ ಮಾಡಿ ಮಿಂಚುತ್ತಿದ್ದಾನೆ.
ಸರಳ ಸಜ್ಜನಿಕೆಯ ಅತಿ ಶ್ರೇಷ್ಠ ನಾಟ್ಯ ಮಯೂರಿ, ಯಕ್ಷ ಕನ್ನಿಕೆ ತೆಂಕು ಬಡಗು ಎರಡರಲ್ಲೂ ಖ್ಯಾತಿ ಪಡೆದಿರುವ ಪ್ರಸಕ್ತ ಸುಮಾರು 600 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶ್ರೇಷ್ಠ ಗುರುಗಳು ರಕ್ಷಿತ್ ಶೆಟ್ಟಿ ಪಡ್ರೆ ಇವನಿಗೆ ಯಕ್ಷಗಾನ ಗುರುಗಳಾಗಿ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯವೆಂದು ಹೇಳಬಹುದು.
ಸುಮಾರು 500ಕ್ಕೂ ಹೆಚ್ಟಿನ ಯಕ್ಷಗಾನ ವೇದಿಕೆಗಳಲ್ಲಿ ಪ್ರದರ್ಶನ ನೀಡಿರುತ್ತಾನೆ. ಯಾವ ಪಾತ್ರವನ್ನು ಕೊಟ್ಟರು ಸಲಿಸಾಗಿ ಮಾಡುವ ಮಂದಾರ ಪೂಜಾರಿ, ದೇವಿಮಹಾತ್ಮೆ, ಕೋಟಿ ಚೆನ್ನಯ, ಭಕ್ತ ಮಾರ್ಕಂಡೆಯದ ಷಣ್ಮುಖ, ಗುರುದಕ್ಷಿಣೆಯ ಕೃಷ್ಣ, ವೀರ ಮಣಿ ಶುಭಾಂಗ, ನಾಗತಂಬಿಲದ ವಿಜಯ, ಚಾಮುಂಡಿ, ಗುಳಿಗ ಸುದರ್ಶನ ವಿಜಯ ಸುದರ್ಶನ ಹನುಮೋಧ್ಭವದ, ಹನುಮಂತ ಸೇರಿದಂತೆ ಹಲವು ಪಾತ್ರಗಳಿಗೆ ಜೀವ ತುಂಬಿರುತ್ತಾನೆ. ಪ್ರಸ್ತುತ ಧಿಗಿಣ ದಿವಿಜ ಯಕ್ಷ ನಾಟ್ಯ ಕಲಾ ಕೇಂದ್ರ ಮೂಡಬಿದ್ರೆ ತಂಡದ ಸರ್ವ ಸದಸ್ಯರಿಗೂ ಅಚ್ಚುಮೆಚ್ಚಿನ ಹುಡುಗನಾಗಿದ್ದಾನೆ.
ಗುರುಪುರ ಕೈಕಂಬದ ತಕಧಿಮಿತ ತಂಡದಲ್ಲಿ ರಕ್ಷಿತ್ ಪಡ್ರೆಯವರಿಂದ ನಾಟ್ಯ ತರಬೇತಿಯನ್ನು ಪಡೆದು ನಾರಾಯಣ ಬೈಪಾಡಿಯವರಿಂದ ಚೆಂಡೆ ಮೃದಂಗವನ್ನು ಕಲಿತು ಬಜಪೆಯ ವಿಜಯ ವಿಠಲ ಯಕ್ಷ ಕಲಾರಂಗದಲ್ಲಿ ಕೃಷ್ಣ ಭಟ್ ನಂದಳಿಕೆ ಮತ್ತು ದಯಾನಂದ ಕೊಡಿಕಲ್ ಬಳಿ ಚೆಂಡೆ , ಮೃದಂಗ ಹಾಗೂ ಭಾಗವತಿಕೆಯನ್ನು ಕಲಿತಿರುತ್ತಾನೆ. ಒಡಹುಟ್ಟಿದ ಅಣ್ಣನ ನೋಡಿಕೊಂಡು ತಂಗಿಯೂ ಕೂಡ ಯಕ್ಷಗಾನ ಕಲಿಯುತ್ತಿರುವುದ್ದನ ನೀವು ವೀಡಿಯೋ ತುಣುಕೊಂದರಲ್ಲಿ ನೋಡಬಹುದು.
ಯಕ್ಷಗಾನ ಮಾತ್ರವಲ್ಲದೇ ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿ 2 ಚಿನ್ನದ ಪದಕ ಹಾಗೂ ಬೆಳ್ಳಿಯ ಪದಕ ಪಡೆದು ಕೊಂಡಿದ್ದಾರೆ. ಇವರ ಕಲಾ ಪ್ರತಿಭೆಯನ್ನು ಗುರುತಿಸಿ ಕಲಾ ಪೋಷಕರು ಯಕ್ಷರಂಗದ ಸುಂದರ ಒಂಟಿಕಟ್ಟೆಯ ಮಂದಾರ ಎಂಬ ಬಿರುದನಿತ್ತು ಗೌರವಿಸಿದ್ದಾರೆ.
ಯಕ್ಷನಂದನ ಎಂಬ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾನೆ.
ಪ್ರಸುತ್ತ ಸುಂಕದ ಕಟ್ಟೆ ಮೇಳದಲ್ಲಿ ಹವ್ಯಾಸಿ ಕಲಾವಿದರಾಗಿದ್ದು ಕಟೀಲು, ಇರುವೈಲು, ಧರ್ಮಸ್ಥಳ ಇತರ ಮೇಳಗಳಲ್ಲೂ ಹವ್ಯಾಸಿ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ಇವರಲ್ಲಿರುವ ಕಲಾ ಪ್ರತಿಭೆಯನ್ನು ಕಂಡು ಸದಾ ಪ್ರೋತ್ಸಾಹ ನೀಡುತ್ತಿರುವವರು ತಂದೆ ತಾಯಿ, ಶಾಲಾ ಮುಖ್ಯೋಪಾಧ್ಯಾಯರಾದ ವಿನ್ಸೆಂಟ್ ಡಿಕೋಸ್ತ, ಗಜಾನನ ಮರಾಠೆ, ನಾಟ್ಯ ಗುರು ರಕ್ಷಿತ್ ಪಡ್ರೆ, ಕುಮುದಾಕ್ಷ ಕೊಟ್ಯಾನ್, ಸುಪ್ರಿತ್ ರೈ ಕೊಲ್ಯ ನಿತೀನ್ ತೆಂಕಕಾರಂದೂರ್, ಮಾಧವ ಕೊಯ್ತಮಜಲ್, ಜಗದೀಶ್, ಕರುಣಾಕರ್ ಶೆಟ್ಟಿಗಾರ್, ಪುಷ್ಪರಾಜ್ ಕೈಕಂಬ, ಚರಣ್ ರಾಜ್ ಇವರೆಲ್ಲರ ಸದಾ ಪ್ರೋತ್ಸಾಹ ಮತ್ತು ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ್ಯ ದೈವಗಳ ಹಾಗೂ ನಾರಾಯಣ ಗುರುಗಳ ಆರ್ಶಿವಾದದಿಂದ ಮಿನುಗುತ್ತಿರುವ ಇವರು ಪ್ರತಿ ಕ್ಷೇತ್ರದಲ್ಲಿ ಇನ್ನಷ್ಟೂ ಎತ್ತರಕ್ಕೆ ಬೆಳೆದು ಸಾಧನೆಯ ಗುರಿ ಮುಟ್ಟಲಿ ಎಂಬುವುದೇ ನಮ್ಮ ಆಶಯ.

(ಲೇಖನ, ಚಿತ್ರಕೃಪೆ, ವೀಡಿಯೋ: ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ)

















