ಶಿಕಾರಿಪುರ: ತಾಲೂಕಿನ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಎಂದಿಗೂ ಯಡಿಯೂರಪ್ಪನವರು ನನ್ನ ಬಳಿ ಬರಲಿಲ್ಲ, ಸಚಿವ ಡಿ.ಕೆ. ಶಿವಕಮಾರ್ ಮನೆಗೆ ತೆರಳಿದ್ದು ನೀರಾವರಿ ಯೋಜನೆ ಜಾರಿಗಾಗಿ ಮನವಿ ಸಲ್ಲಿಸಲು ಅಲ್ಲ. ಅವರ ಬಳಿ ಇದ್ದ ಡೈರಿಯನ್ನು ಬಿಡುಗಡೆ ಮಾಡದಂತೆ ಮನವಿ ಸಲ್ಲಿಸಲು ತೆರಳಿದ್ದರು ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ನರಸಪ್ಪ ಬಯಲು ರಂಗಮಂದಿರದಲ್ಲಿ ಮೈತ್ರಿ ಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಿನ ನಿತ್ಯ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿ ಪತನಗೊಳಿಸಿ ಪುನಃ ಮುಖ್ಯಮಂತ್ರಿಯಾಗಲು ಹೆಚ್ಚಿನ ಆಸಕ್ತಿಯನ್ನು ಹೊಂದಿರುವ ಯಡಿಯೂರಪ್ಪನವರಿಗೆ ತಾಲೂಕಿನ ಜನತೆಯ ರೈತರ ಪರವಾಗಿ ಕೆಲಸ ಮಾಡಲು ಸಮಯವಿಲ್ಲವಾಗಿದೆ ಎಂದು ಆರೋಪಿಸಿದರು.
ಮುಂಬೈನಲ್ಲಿ ದೊಡ್ಡ ಹೋಟೆಲ್ ಬುಕ್ ಮಾಡಿ ಶಾಸಕರನ್ನು ಕರೆದುಕೊಂಡು ಹೋಗಿ ಖರೀದಿಸಲು ಸಮಯದ ಅಭಾವವಾಗಿದ್ದು ಇನ್ನು ತಾಲೂಕಿನ ನೀರಾವರಿ ಬಗ್ಗೆ ಯೋಚಿಸಲು ಸಮಯ ಎಲ್ಲಿ ಇತ್ತು ಎಂದು ವ್ಯಂಗ್ಯವಾಡಿದ ಅವರು, ವಿಧಾನಸಭೆಯಲ್ಲಿ ತಂದೆ ದೇವೇಗೌಡ ಹಾಗೂ ಕುಟುಂಬದ ತೇಜೋವಧೆಗಾಗಿ ಬಳಸಿದ ಪದವನ್ನು ಜನತೆ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಯಾಗಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಗೊಬ್ಬರಕ್ಕಾಗಿ ರೈತರ ಮೇಲೆ ಗುಂಡು ಹಾರಿಸಿದ ಯಡಿಯೂರಪ್ಪ ಜಿಲ್ಲೆಯ ಅಭಿವೃದ್ದಿ ನೆಪದಲ್ಲಿ ಸರ್ಕಾರದ ಹಣ ಲೂಟಿ ಮಾಡಿದ್ದಾರೆ. ಮಂಡ್ಯದಲ್ಲಿ ನಿಖಿಲ್ ಗೆಲ್ಲಿಸಲು ಸರ್ಕಾರದ ಖಜಾನೆ ಖಾಲಿಯಾಗಿಸಲಾಗಿದೆ ಎಂದು ಆರೋಪಿಸುವ ಯಡಿಯೂರಪ್ಪನವರೇ ಖಜಾನೆ ಭದ್ರವಾಗಿ ಆತಂಕ ಬೇಡ ಎಂದು ಕುಟುಕಿದರು.
ಅಧಿಕಾರ ದೊರೆತ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾಗೊಳಿಸುವ ವಾಗ್ದಾನದ ರೀತಿ ಈಗಾಗಲೇ 11 ತಿಂಗಳಲ್ಲಿ 11 ಸಾವಿರ ಕೋಟಿ ಮನ್ನಾಗೊಳಿಸಿದ್ದು, ಜನತೆಯ ತೆರಿಗೆ ಹಣದಿಂದ ಹಂತಹಂತವಾಗಿ ಅವಧಿ ಪೂರ್ಣವಾಗುವ ವೇಳೆಗೆ ಪೂರ್ಣ ಸಾಲಮನ್ನಾಗೊಳಿಸುವುದಾಗಿ ತಿಳಿಸಿದರು. ಸರ್ಕಾರ ರೈತರ ಸಾಲಮನ್ನಾಕ್ಕೆ ಮಾತ್ರ ಸೀಮಿತವಾಗಿಲ್ಲ, ಪ್ರತಿ ಕುಟುಂಬಕ್ಕೆ ಆರ್ಥಿಕ ಶಕ್ತಿ ತುಂಬಬೇಕು ಎಂಬ ಗುರಿ ಹೊಂದಿದೆ. ಈ ದಿಸೆಯಲ್ಲಿ ಹಲವು ಯೋಜನೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಸತತ 3 ವರ್ಷ ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕು ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಕ್ರಮ ಕೈಗೊಳ್ಳದೆ, ನಂತರದಲ್ಲಿ ಕೇಂದ್ರ ಸಚಿವ ಗಡ್ಕರಿ ಜತೆ ಚರ್ಚಿಸಿ ಒಪ್ಪಿಸಲಾಗಿದೆ ಎನ್ನಲು ಅವರೇನು ಹಣ ನೀಡುತ್ತಾರಾ ರಾಜ್ಯದ ಮುಖ್ಯಮಂತ್ರಿ ಆರ್ಥಿಕ ಸಚಿವ ನಾನು. ನೀರಾವರಿಗೆ ರಾಜ್ಯ ಸರ್ಕಾರ ಹಣ ನೀಡಬೇಕು ಸಚಿವ ಡಿಕೆಶಿ ಮನೆಗೆ ಯಡಿಯೂರಪ್ಪ ಹೋಗಿದ್ದು ಡೈರಿ ಬಗ್ಗೆ ಪ್ರಸ್ಥಾಪಿಸಿ ಬಿಡುಗಡೆಗೊಳಿಸದಂತೆ ಮನವಿ ಸಲ್ಲಿಸಲು ಮಾತ್ರ ಎಂದು ತಿಳಿಸಿದರು.
ತಾಲೂಕಿನ ಸಮಗ್ರ ನೀರಾವರಿ ಯೋಜನೆಗೆ ಅಭ್ಯರ್ಥಿ ಮಧು ಹಾಗೂ ಸ್ಥಳೀಯ ಜೆಡಿಎಸ್, ಕಾಂಗ್ರೆಸ್, ರೈತ ಮುಖಂಡರ ಒತ್ತಡ ಮುಖ್ಯ ಕಾರಣವಾಗಿದ್ದು 6-8 ತಿಂಗಳಲ್ಲಿ ಯೋಜನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ ಅವರು, ಪದೇಪದೇ ಚುನಾವಣಾ ಫಲಿತಾಂಶದ ನಂತರ ರಾಜ್ಯ ಸರ್ಕಾರ ಪತನಗೊಳ್ಳಲಿದೆ. ಮೇ 24 ನಂತರ ಮುಖ್ಯಮಂತ್ರಿಯಾಗುವೆ ಎಂದು ಹಗಲು ಕನಸು ಕಾಣಲು ಯಾವ ಜ್ಯೋತಿಷಿ ಹೇಳಿದ್ದಾರೆ ಎಂದು ಪ್ರಶ್ನಿಸಿದರು. ಅವರಿಗೆ ಅಧಿಕಾರ ಮುಂಬೈ ದೆಹಲಿಯಲ್ಲಿ ಹೋಟೆಲ್ ಇಂಜಿನಿಯರ್ ಕಾಲೇಜು ನಿರ್ಮಿಸಲು ನಮಗೆ ಬಡವರ ಹಿಂದುಳಿದವರ ಅಭಿವೃದ್ದಿಗಾಗಿ ಮಾತ್ರ ಎಂದು ತಿಳಿಸಿದರು.
ಬೀದಿ ಬದಿ ಸಣ್ಣ ಸಣ್ಣ ಹಣ್ಣು ಹೂವು ವ್ಯಾಪಾರಿಗಳಿಗೆ 10 ಸಾವಿರದವರೆಗೆ ಬಡ್ಡಿ, ಜಾಮೀನು ರಹಿತ ಸಾಲ ನೀಡುವ ಯೋಜನೆ ಜಾರಿಗೊಳಿಸಿದ್ದು, 60 ವರ್ಷ ಮೀರಿದ ಹಿರಿಯರಿಗೆ ಮಾಸಿಕ 2 ಸಾವಿರದಿಂದ 5 ಸಾವಿರ ರೂ. ಮಾಸಾಶನ ಹೆಚ್ಚಳಗೊಳಿಸಲಾಗಿದೆ ಎಂದು ತಿಳಿಸಿದರು.
ಅಭ್ಯರ್ಥಿ ಮಧು ಬಂಗಾರಪ್ಪ ಮಾತನಾಡಿ, ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಅಂತರ 52 ಸಾವಿರಕ್ಕೆ ಕುಗ್ಗಲು ಕಾರಣಕರ್ತರಾದ ತಾಲೂಕು ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಆಮದು ಅಭ್ಯರ್ಥಿ ಎಂದು ಟೀಕಿಸುವ ಬಿಜೆಪಿಗೆ ಈ ಬಾರಿ ರಾಘವೇಂದ್ರರನ್ನು ರಫ್ತು ಮಾಡಲು ಮತದಾರರು ಸಿದ್ದರಾಗಿದ್ದಾರೆ. ಬರಗಾಲದಲ್ಲಿ ಬಂಗಾರಪ್ಪ ನೀಡಿದ ಅಕ್ಕಿ ಗೊಬ್ಬರದ ಋಣ ಮರೆಯದೆ ತಾಲೂಕಿನ ಜನತೆ ಶಕ್ತಿ ನೀಡಿದ್ದಾರೆ ಪುಕ್ಕಟೆ ವಿದ್ಯುತ್ ಉಪಯೋಗ ಯಡಿಯೂರಪ್ಪ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಪ ಸದಸ್ಯ ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್, ಮುಖಂಡ ತೀ.ನಾ ಶ್ರೀನಿವಾಸ್, ಬಿ.ಎನ್. ಮಹಾಲಿಂಗಪ್ಪ, ಮಂಜುನಾಥಗೌಡ, ಎಚ್.ಟಿ. ಬಳಿಗಾರ್, ನಗರದ ಮಹಾದೇವಪ್ಪ, ಗೋಣಿ ಮಾಲತೇಶ, ಮಹೇಶ್ ಹುಲ್ಮಾರ್, ನರಸಿಂಗನಾಯ್ಕ, ದರ್ಶನ್ ಉಳ್ಳಿ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಪ್ರತಿನಿಧಿ, ಶಿಕಾರಿಪುರ)
Discussion about this post