ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಾಂಸ್ಕೃತಿಕ ನಗರಿ ಮೈಸೂರು #Mysore ನವರಾತ್ರಿ ವೈಭವಕ್ಕೆ #Navaratri ವಿಶ್ವವಿಖ್ಯಾತವಾಗಿವಾಗಿದ್ದು, ಇಲ್ಲಿನ ಮನೆಮನೆಯಲ್ಲೂ ದಸರಾ #Dasaraವೈಭವ ಮನೆ ಮಾಡಿರುತ್ತದೆ.
ಹೌದು… ಇಂತಹ ವೈಭವಕ್ಕೆ ಪೂರಕವಾಗಿ ಇಲ್ಲೊಂದು ಕುಟುಂಬ ಪ್ರತಿ ವರ್ಷ ಅತ್ಯಂತ ಸುಂದರ ಹಾಗೂ ವೈಭವಯುತವಾಗಿ ದಸರಾ ಗೊಂಬೆ ಅಲಂಕಾರ ಮಾಡಿಕೊಂಡು ಬರುತ್ತಿದ್ದು, ಮೈಸೂರಿಗರ ಮನಸೆಳೆಯುತ್ತಿದೆ.
ಇಲ್ಲಿನ ಶ್ರೀರಾಂಪುರ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಅಥರ್ವ ನಿಲಯದ ಬನಶಂಕರಿ ಬೊಂಬೆ ಮನೆಯಲ್ಲಿ ಶ್ರೀಮತಿ ಪೂಜಾ ಪುನೀತ್ ರವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ದಸರಾ ಬೊಂಬೆ ಪ್ರದರ್ಶನ ಏರ್ಪಡಿಸಿದ್ದಾರೆ.
ಏನೆಲ್ಲಾ ವಿಶೇಷವಿದೆ?
ಧಾರ್ಮಿಕ, ಸಾಮಾಜಿಕ, ಪೌರಾಣಿಕ, ಶೈಕ್ಷಣಿಕ ಬೊಂಬೆಗಳನ್ನು ಒಳಗೊಂಡಂತೆ 350 ಕ್ಕೂ ಹೆಚ್ಚು ಬೊಂಬೆಗಳನ್ನು ಪ್ರದರ್ಶನ ಮಾಡಲಾಗಿದೆ.
ಅಯೋಧ್ಯೆಯ ಶ್ರೀರಾಮಮಂದಿರ, ವಿವಾಹ ವೈಭವ, ಗಜಪಡೆ, ಶೃಂಗೇರಿಯ ಶಾರದಾ ಪೀಠ, ಕಾಶ್ಮೀರದಲ್ಲಿ ಶಾರದ ಪೀಠದ ಸ್ಥಾಪನೆ, ಸ್ವಾತಂತ್ರದ ಅಮೃತ ಮಹೋತ್ಸವ, ಸಮುದ್ರ ಮಂಥನ, ಕಾರ್ಟೂನ್ ಗೊಂಬೆಗಳು, ತಲಕಾಡು ಪಂಚಲಿಂಗ ದರ್ಶನ, ಬೇಡರ ಕಣ್ಣಪ್ಪ, ಘಟೋದ್ಗಜ, ಆತ್ಮ ನಿರ್ಭರ ಭಾರತ, ಸ್ವದೇಶಿ ಜಾಗೃತಿ, ಅರಣ್ಯ ರಕ್ಷಣೆ ಸೇರಿದಂತೆ ಹಲವಾರು ಸಾಮಾಜಿಕ ಸಂದೇಶ ಸಾರುವ ಬೊಂಬೆಗಳ ಪ್ರದರ್ಶನ ಮಾಡಿದ್ದಾರೆ.
ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾದ ಈ ಗೊಂಬೆ ಪ್ರದರ್ಶನ ಈಗಾಗಲೇ ಕಳೆದ ವರ್ಷಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವುದು ಇಲ್ಲಿ ಸ್ಮರಿಸಬಹುದು.
ಕೆ. ಆರ್. ಗಣೇಶ್, ಸರಸ್ವತಿ, ಪೂಜಾ, ಪುನೀತ್ ಹಾಗೂ ಚಿ. ಪೃಥು ಪಿ ಅದ್ವೈತ್ ಹಲವಾರು ದಿನಗಳ ಪರಿಶ್ರಮದಿಂದ ದಸರಾ ಬೊಂಬೆ ಪ್ರದರ್ಶನ ಯಶಸ್ವಿಯಾಗಿದೆ. ಇದರೊಂದಿಗೆ ಸಂಜೆ ಸಮಯ ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮ, ಸೌಂದರ್ಯ ಲಹರಿ, ಸಂಗೀತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಈ ಬೊಂಬೆ ಪ್ರದರ್ಶನದ ಭಾಗವಾಗಿದೆ.
ಕಳೆದ ವರ್ಷ ಸುಮಾರು 250 ಕ್ಕೂ ಹೆಚ್ಚು ಜನ ಭೇಟಿ ನೀಡಿದ್ದರು. ಈ ಬಾರಿ ಅದಕ್ಕಿಂತ ಹೆಚ್ಚು ಜನರು ಬನಶಂಕರಿ ಬೊಂಬೆ ಮನೆಯ ದಸರಾ ಬೊಂಬೆ ವೀಕ್ಷಣೆಗೆ ಬರುವ ನಿರೀಕ್ಷೆಯಿದೆ ಎಂದು ಮನೆಯೊಡತಿ ಪೂಜಾ ಪುನೀತ್ ತಿಳಿಸಿದ್ದಾರೆ.
Discussion about this post