ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಕಲ್ಲಹಳ್ಳಿಯಲ್ಲಿ ನೆಲೆಸಿರುವ ಭೂವರಾಹನಾಥ ಸ್ವಾಮಿ ಭಕ್ತರ ಪಾಲಿನ ಕರುಣಾಸಿಂಧು, ಬೇಡಿ ಬಂದವರಿಗೆ ಕರುಣೆಯ ಕಾಮಧೇನು. ಇಂತಹ ಶ್ರೀಸ್ವಾಮಿಯ ಸನ್ನಿಧಾನದ ಕುರಿತಾಗಿ ತಿಳಿಸುವ ಪ್ರಯತ್ನದ ಭಾಗವಾಗಿ ಶ್ರೀಕ್ಷೇತ್ರದ ಆಡಳಿತಾಧಿಕಾರಿ ಶ್ರೀನಿವಾಸನ್ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದ ವಿಚಾರ ಇಲ್ಲಿದೆ.
ಕಲ್ಪನ್ಯೂಸ್: ರೇವತಿ ಅಭಿಷೇಕಂ ಅಂದರೆ ಏನು ?
ಶ್ರೀನಿವಾಸನ್: ರೇವತಿ ನಕ್ಷತ್ರದಲ್ಲಿ ಅಭಿಷೇಕಾ ಪ್ರದರ್ಶನ ನೀಡಲಾಗುವುದು. ಪ್ರತಿ ತಿಂಗಳು ರೇವತಿ ನಕ್ಷತ್ರದಲ್ಲಿ ಶ್ರೀಮಹಾವಿಷ್ಣು ಪ್ರವೇಶಿಸುತ್ತಾನೆ. ದಶಾವತಾರ ಸರಣಿಯಲ್ಲಿ ಮೂರನೇ ಅವತಾರ ವರಾಹಾವತಾರ, ವರಾಹ ಅಂದರೆ ಕಾಡು ಹಂದಿ ಎಂದರ್ಥ! ವರಾಹಾವತಾರ; ಭೂರಕ್ಷಣೆ, ಭೂದೇವಿಯನ್ನು ರಕ್ಷಿಸಲು ಕಾಡುಹಂದಿ ರೂಪದಲ್ಲಿ ಲೋಕಕಂಟಕ ಹಿರಣ್ಯಾಕ್ಷನ ವಧೆ ಮಾಡುತ್ತಾನೆ.
ಕಲ್ಪನ್ಯೂಸ್: ಭಗವಂತನ ಶಿಲಾ ಮೂರ್ತಿ ದರ್ಶನದ ಕುರಿತು?
ಶ್ರೀನಿವಾಸನ್: ಹರಕೆ ಹೊತ್ತು ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರ ಇಷ್ಠಾರ್ಥಗಳನ್ನು ಕರುಣಿಸಿ ಆಶೀರ್ವಧಿಸುತ್ತಿರುವ ಭೂವರಾಹಸ್ವಾಮಿಯ ಉತ್ಸವ ಮೂರ್ತಿಯನ್ನು ಮಾತ್ರ ದರ್ಶನ ಪಡೆಯಲು ಭಕ್ತರಿಗೆ ಸಾಮಾಜಿಕ ಅಂತರ ಕಾಪಾಡುತ್ತಲೇ, ಅವಕಾಶ ಹಾಗೂ ಬರುವ ಭಕ್ತರು ಮಾಸ್ಕ್ ಧರಿಸಿ ಬರಬೇಕು ಹಾಗೂ ದೇವಾಲಯದ ಮುಂಭಾಗದಲ್ಲಿ ಅವರ ಕೈ ಮತ್ತು ಕಾಲುಗಳಿಗೆ ಸ್ಯಾನಿಟೈಸರ್ ಸಿಂಪಡಿಸಿ ದರ್ಶನ ಪಡೆಯಲು ಅವಕಾಶವನ್ನು ನೀಡಲಾಗುತ್ತದೆ, ಕೋವಿಡ್ 19, ಕೊರೋನಾ ಪೆಡಂಭೂತವಿರುವ ಕಾರಣ ಭಗವಂತನ ಶಿಲಾ ಮೂರ್ತಿ ದರ್ಶನ ಇರುವುದಿಲ್ಲ.
ಕಲ್ಪನ್ಯೂಸ್: ಪುಣ್ಯಕ್ಷೇತ್ರದ ವಿಶಿಷ್ಟತೆಯ ಬಗ್ಗೆ?
ಶ್ರೀನಿವಾಸನ್: ವರಾಹಾವತಾರದ ವಿಷ್ಣುವಿನ ಆಜಾನುಬಾಹು ದೇಹ, ಬಲಿಷ್ಠ ತೋಳುಗಳು, ಎತ್ತರವಾದ ನಿಲುವಿನ ಭಂಗಿಯಲ್ಲಿರುವ ಮೂರ್ತಿ, ಎಡತೊಡೆಯ ಮೇಲೆ ಪತ್ನಿ ಲಕ್ಷ್ಮೀ ಭೂದೇವಿಯನ್ನು ಕೂರಿಸಿಕೊಂಡಿರುವ ಭಂಗಿಯಲ್ಲಿದೆ. ಕೈಯಲ್ಲಿ ಕಮಲದ ಹೂವು. ವರಾಹಸ್ವಾಮಿಯ ಒಂದು ಕೈಯಲ್ಲಿ ಚಕ್ರ, ಮತ್ತೊಂದು ಕೈಯಲ್ಲಿ ಶಂಖ, ಎಡತೊಡೆಯ ಮೇಲೆ ಕುಳಿತಿರುವ ಪತ್ನಿ ಲಕ್ಷ್ಮಿಯನ್ನು (ಭೂದೇವಿ) ಎಡಗೈನಿಂದ ತಬ್ಬಿಕೊಂಡಿರುವಂತೆ ಕೆತ್ತಿರುವ ವಿಗ್ರಹವಿದು. 15 ಅಡಿ ಎತ್ತರದ ಸಾಲಿಗ್ರಾಮದ ಏಕಶಿಲೆಯಿಂದ ಕೆತ್ತಿದ್ದಾರೆ. ದೇವಾಲಯ ಪ್ರವೇಶಿಸುತ್ತಲೇ ಸಭಾ ಮಂಟಪದ ಎದರು ಗರ್ಭಗುಡಿ ಇದೆ. ಒಳಗಡೆ ಪೀಠದ ಮೇಲೆ ವರಾಹಸ್ವಾಮಿ ವಿಗ್ರಹವಿದೆ.
ಕಲ್ಪನ್ಯೂಸ್: ಭಕ್ತರ ನಂಬಿಕೆ; ಮನೆ ಕಟ್ಟಲು ಅಭಯ ನೀಡುವ ಸ್ವಾಮಿ ಕುರಿತಾಗಿ ತಿಳಿಸಿ?
ಶ್ರೀನಿವಾಸನ್: ಭಕ್ತಿ ಭಾವದಿಂದ ಬೇಡಿದರೆ – ಮನೆ ಕಟ್ಟಲು ಅಭಯ ನೀಡುವ ಸ್ವಾಮಿ, ಈ ಭೂವರಾಹಸ್ವಾಮಿಗೆ ಹರಕೆ ಹೊತ್ತರೆ, ಭೂವಿವಾದಗಳು ಇತ್ಯರ್ಥವಾಗುತ್ತವೆ. ಮರಳು, ಮಣ್ಣು ಅಥವಾ ಇಟ್ಟಿಗೆಯನ್ನು ದೇವರ ಮುಂದಿಟ್ಟು ಪೂಜೆ ಸಲ್ಲಿಸಿ, ದೇವಾಲಯದ ಪಕ್ಕದಲ್ಲಿ ಅದೇ ಸಾಮಗ್ರಿಗಳಿಂದ ಗೂಡು ಕಟ್ಟಿ ಹರಿಕೆ ಸಲ್ಲಿಸಿದರೆ, ಗೃಹನಿರ್ಮಾಣದ ಬಯಕೆ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.
ಕಲ್ಪನ್ಯೂಸ್: ಪುರಾಣದ ಕಥೆ?
ಶ್ರೀನಿವಾಸನ್: ಹಿರಣ್ಯಕಶಿಪುವಿನ ಸೋದರ ಹಿರಣ್ಯಾಕ್ಷನು ಭೂದೇವಿಯನ್ನು ಹೊತ್ತೊಯ್ದು ಸಮುದ್ರದಲ್ಲಿ ಬಂಧಿಸಿಡುತ್ತಾನೆ. ಮಹಾವಿಷ್ಣುವು ವರಾಹಾವತಾರವನ್ನು ತಾಳಿ ಹಿರಾಣ್ಯಾಕ್ಷನನ್ನು ಕೊಂದು ಭೂದೇವಿಯನ್ನು ರಕ್ಷಿಸಿದ ಎಂಬುದು ಪುರಾಣದ ಕಥೆ.
ಕಲ್ಪನ್ಯೂಸ್: ಪೂಜೆ ವಿಶೇಷಗಳು ಹೇಗೆ ನಡೆಯುತ್ತದೆ?
ಶ್ರೀನಿವಾಸನ್: ಭೂವರಾಹಸ್ವಾಮಿ. ಹಾಲು, ಮೊಸರು, ಎಳನೀರು, ಜೇನುತುಪ್ಪ, ಕಬ್ಬಿನಹಾಲು, ಗಂಗಾಜಲ, ಶ್ರೀಗಂಧ, ಅರಿಶಿನ ಕುಂಕುಮ ಸೇರಿದಂತೆ 25 ವಿವಿಧ ಬಗೆಯ ಹೂವುಗಳಿಂದ ಸ್ವಾಮಿಗೆ ವಿಶೇಷ ಅಭಿಷೇಕ ನಡೆಯುತ್ತದೆ. ನರಸಿಂಹ ಜಯಂತಿ, ವೈಕುಂಠ ಏಕಾದಶಿಯಲ್ಲಿ ಮಾತ್ರವಲ್ಲದೆ, ಪ್ರತಿ ಶನಿವಾರ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ಕಲ್ಪನ್ಯೂಸ್: ದೋಣಿ ವಿಹಾರ-ಪ್ರಸಾದದ ವಿತರಣೆ ಬಗ್ಗೆ ತಿಳಿಸಿ?
ಶ್ರೀನಿವಾಸನ್: ದೇವಸ್ಥಾನದ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ದೋಣಿ ವಿಹಾರ, ತೆಪ್ಪದಲ್ಲಿ ದೋಣಿವಿಹಾರ, ದಾಸೋಹ ಭವನದಲ್ಲಿ ಭಕ್ತಾಧಿಗಳಿಗೆ ಉಚಿತ ದಾಸೋಹ ಪ್ರಸಾದದ ವಿತರಣೆ ನಡೆಯುತ್ತದೆ.
ಕಲ್ಪನ್ಯೂಸ್: ಈ ದೇವಾಲಯದ ಆಡಳಿತ?
ಶ್ರೀನಿವಾಸನ್: ಈ ದೇವಾಲಯವು ಮೈಸೂರಿನ ಶ್ರೀಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದಿಂದ ದೇವಾಲಯದ ಆಡಳಿತ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿದೆ.
ಕಲ್ಪನ್ಯೂಸ್: ಅನ್ನ ದಾಸೋಹ?
ಶ್ರೀನಿವಾಸನ್: ಭಕ್ತರಿಗೆ ಪ್ರತಿನಿತ್ಯ ಅನ್ನದಾಸೋಹ ನಡೆಯುತ್ತದೆ.
ಕಲ್ಪನ್ಯೂಸ್: ಪೂಜೆ ಸಮಯ?
ಶ್ರೀನಿವಾಸನ್: ಪ್ರತಿ ನಿತ್ಯ ಬೆಳಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 4ರಿಂದ 7ಗಂಟೆಯವರೆಗೆ ಪೂಜೆ ನಡೆಯುತ್ತದೆ.
ಕಲ್ಪನ್ಯೂಸ್: ದೋಷಗಳಿಗೆ ಪರಿಹಾರ?
ಶ್ರೀನಿವಾಸನ್: ರಾಹು – ಕೇತುಗಳ ದೋಷಗಳಿಗೆ ಸ್ವಾಮಿಯ ಅನುಗ್ರಹದಿಂದ ಪರಿಹಾರ ಶತ ಸಿದ್ದ! ವಿವಾಹ ಹಾಗೂ ಸಂತಾನ ಭಾಗ್ಯ ಲಭಿಸುತ್ತದೆ.
ಕಲ್ಪನ್ಯೂಸ್: ಶ್ರೀ ಕ್ಷೇತ್ರದ ವಿಶೇಷತೆ ಕುರಿತು?
ಶ್ರೀನಿವಾಸನ್: ಇಲ್ಲಿರುವ ಮೂರ್ತಿ ಅತ್ಯಂತ ಮನಮೋಹಕವಾಗಿದ್ದರೂ ಇತರ ಹೊಯ್ಸಳರ ಕಾಲದ ದೇವಾಲಯಗಳಂತೆ ಶಿಲ್ಪಕಲಾ ಶ್ರೀಮಂತಿಕೆಯಿಂದ ಕೂಡಿಲ್ಲ. ಈಗ ಹಳೆಯ ಗುಡಿಯನ್ನು ಕೆಡವಿ ಹೊಸ ದೇಗುಲವನ್ನು ನಿರ್ಮಿಸಲಾಗಿದೆ. ಹೊಯ್ಸಳ ರಾಜ ಸ್ಥಾಪಿಸಿದ ದೇಗಲವನ್ನು ಮುಂದೆ ಚೋಳರು, ವಿಜಯನಗರದ ಅರಸು ಪೋಷಿಸುತ್ತಾರೆ, ಬಳಿಕ ಮೈಸೂರು ಅರಸರ ಆಳ್ವಿಕೆಗೆ ಒಳಪಡುತ್ತದೆ, ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಉಸ್ತುವಾರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಶ್ರೀ ಕ್ಷೇತ್ರ.
ಎಲ್ಲಿದೆ ಶ್ರೀಕ್ಷೇತ್ರ?
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯ ಕಲ್ಲಹಳ್ಳಿ ಊರಿನ ದೇವಾಲಾಪುರದಲ್ಲಿದೆ ಈ ದೇಗುಲ. ಶಾಸನವೊಂದರ ಪ್ರಕಾರ ಹೊಯ್ಸಳರ ಮುಮ್ಮುಡಿ ಬಲ್ಲಾಳನ ಕಾಲದಲ್ಲಿ ಹೇಮಾವತಿಯ ನದಿಯ ದಂಡೆಯ ಮೇಲೆ ಪುಟ್ಟದಾಗಿ ನಿರ್ಮಾಣವಾದ ದೇವಾಲಯವಿದು. ಸುಮಾರು ಕ್ರಿ.ಶ. 1334ರಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದು ಎಂದು ಹೇಳಲಾಗುತ್ತದೆ.
ಬೆಂಗಳೂರಿನಿಂದ 180 ಕಿಮೀ, ಮೈಸೂರಿನಿಂದ 53 ಕಿಮೀ, ಕೆ.ಆರ್.ಪೇಟೆ ಮಾರ್ಗವಾಗಿ 18 ಕಿಮೀ ದೂರದಲ್ಲಿ ಈ ದೇವಾಲಯವಿದೆ. ಕೆ.ಆರ್.ಪೇಟೆ ಮೇಲುಕೋಟೆ – ಕಲ್ಲಹಳ್ಳಿಗೆ ಬಸ್ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ಬರುವವರು ಈ ದೇವಾಲಯ ಭೇಟಿಯೊಂದಿಗೆ ಸುತ್ತಲಿನ ಪ್ರವಾಸಿ ತಾಣಗಳಿಗೂ ಭೇಟಿ ನೀಡಬಹುದು.
Get In Touch With Us info@kalpa.news Whatsapp: 9481252093
Discussion about this post