ಭರತ ಖಂಡವೇ ಒಂದು ದೇಗುಲ, ಕರ್ನಾಟಕ ದೇವಾಲಯಗಳ ಬೀಡು, ಅದರಲ್ಲೂ ಬೆಂಗಳೂರು ದೇವಸ್ಥಾನಗಳ ಆಗರ. ಸಿಲಿಕಾನ್ ಸಿಟಿ ಸಾಕಷ್ಟು ಮುಂದುವರೆದಿದ್ದರೂ ಇಲ್ಲಿ ಪ್ರಾಚೀನ ದೇವಮಂದಿರಗಳು ಬಹುಸಂಖ್ಯೆಯಲ್ಲಿದೆ. ಅವುಗಳಲ್ಲಿ ಗಣಪತಿ ದೇವಾಲಯಗಳೇ ಹೆಚ್ಚೆನ್ನಬಹುದು. ಇಲ್ಲಿನ ಪ್ರತಿಯೊಂದು ಬಡಾವಣೆಯಲ್ಲೂ ತನ್ನದೇ ಆದ ವೈಶಿಷ್ಟ್ಯಗಳಿಂದ ಕೂಡಿದ ಬೆನಕನ ಸನ್ನಿಧಾನಗಳನ್ನು ನಾವು ಕಾಣಬಹುದು.
ಜನರಲ್ಲಿ ದೈವ ಭಕ್ತಿ , ಧಾರ್ಮಿಕ ಪ್ರಜ್ಞೆ ಮತ್ತು ಸಾಂಸ್ಕೃತಿಕ ಮನೋಭಾವ ಹೆಚ್ಚಿಸಲು ಇದು ಕಾರಣವಾಗುತ್ತದೆ. ಈ ಮಾತಿಗೆ ಜ್ವಲಂತ ಸಾಕ್ಷಿ ಸಿಗಬೇಕಾದರೇ ನೀವು ಒಮ್ಮೆ ಬಸವನಗುಡಿ ಸಮೀಪ ಹನುಮಂತನಗರದ ಗವಿಪುರ (ಪಶ್ಚಿಮ)ದ ಕವಿಕೇಶಿರಾಜ ರಸ್ತೆಯ ಈಶಾನ್ಯಮುಖಿ ಗಣಪತಿ ದೇವಾಲಯಕ್ಕೆ ಭೇಟಿ ನೀಡಲೇಬೇಕು.
ಕೆಂಪೇಗೌಡರ ಕಾಲದಲ್ಲಿ ಬಯಲು ಗಣಪತಿ ಎಂದು ಕರೆಸಿಕೊಳ್ಳುತ್ತಿದ್ದ ಈ ಗಣಪ ಮೂರ್ತಿ ಬೃಹದಾಕಾರವಾದ ಕಲ್ಲಿನಲ್ಲಿ ಒಡಮೂಡಿದ್ದು ಅತ್ಯಾಕರ್ಷಕವಾಗಿದೆ.
ಉದ್ಯಾನ ನಗರಿ ಬೆಂಗಳೂರು ಬೆಳವಣಿಗೆಯನ್ನು ಪ್ರತೀಕ್ಷಿಸಿ ಮಾಗಡಿ ಕೆಂಪೇಗೌಡರ ಕಾಲದಲ್ಲಿ ಅಷ್ಟದಿಕ್ಕುಗಳಲ್ಲು ಸ್ಥಾಪಿಸಿದ್ದ ಗೋಪುರಗಳು, ಪಾಳೆಯಗಾರರ ಗುಪ್ತಚರರು ವಾಸಿಸುತ್ತಿದ್ದ ಗವಿಗಂಗಾಧರೇಶ್ವರ ಗುಡಿಗೆ ಸೇರಿದ ಗುಟ್ಟಹಳ್ಳಿ ಮತ್ತು ಕೆಂಪೇಗೌಡರ ಪ್ರಿಯ ಪತ್ನಿ ಕೆಂಪಾಂಬ ಪ್ರಜೆಗಳ ಹಿತಕ್ಕಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ ಕೆಂಪಾಂಬುಧಿ ಕೆರೆಗೆ ಅನತಿ ದೂರದಲ್ಲಿರುವ ಚಿಕ್ಕ ಗುಡ್ಡದ ಮೇಲೆ ಈ ದೇವಾಲಯವಿದೆ. ಸೇನಾ ಜಮಾವಣೆಯಾಗುತ್ತಿದ್ದ ಈ ಎತ್ತರದ ಸ್ಥಳದಲ್ಲಿ ಸೈನಿಕರು – ಸ್ಥಳೀಯರ ಆರಾಧನೆಗಾಗಿ ಪ್ರಥಮ ಪೂರ್ಜಾಹನೆನಿಸಿದ ಗಣಪನನ್ನು ಪ್ರತಿಷ್ಠಾಪಿಸಿಲಾಯಿತು. ಪುರಾತತ್ವ ಶಾಸ್ತ್ರಜ್ಞ ಡಾ. ಎಸ್ ನಾಗರಾಜು ಮತ್ತು ಇತಿಹಾಸ ತಜ್ಞ ಡಾ ಸೂರ್ಯನಾಥ್ ಕಾಮತ್ ಅವರು ಇದು ಸುಮಾರು 400 ವರ್ಷಗಳ ದೇವಾಲಯವೆಂದು ಅಂದಾಜಿಸಿದ್ದಾರೆ.
ಜನಪದರಲ್ಲಿ ಗುಡ್ಡೆ ಗಣಪತಿಯೆಂತೆನಿಸಿದ್ದ ಅಜ್ಞಾತವಾಗಿ ಪೊದೆಗಳಿಂದ ಆವೃತವಾಗಿ ಈ ದೇವಾಲಯವಿರುವ ಜಾಗವು ಕೊಳಗೇರಿಯಾಗಿ ಮಾರ್ಪಾಡು ಆಗುವುದನ್ನು ತಪ್ಪಿಸಿ ಇಲ್ಲೊಂದು ಸುಂದರ ದೇವಮಂದಿರ ನಿರ್ಮಾಣವಾಗಲು ಕಾರಣ ಎಂ ಎನ್ ಕಂಬೇಗೌಡ ದೈವ ಶ್ರದ್ಧೆ.
ಮೂರು ದಶಕದ ಹಿಂದೆ ಡಾ. ಸೂರ್ಯನಾಥ್ ಕಾಮತ್ ರವರ ಒಡಗೂಡಿ ಶ್ರೀ ವಿನಾಯಕ ದೇವಾಲಯ ಸಮಿತಿ ಸ್ಥಾಪಿಸಿ , ಸಮಿತಿ ವತಿಯಿಂದ ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಂಡು ಒತ್ತುವರಿ ಜಾಗವನ್ನು ತೆರವು ಗೊಳಿಸಿ , ಆವರಣದಲ್ಲಿ ಸ್ವಾಗತ ಕಮಾನು ರಚಿಸಿ, ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳಿಂದ ಬ್ರಹ್ಮಕಲಶಾಭಿಷೇಕ ನಡೆಸಿ ನಿತ್ಯ ಪೂಜೆಯೊಂದಿಗೆ ಅನೇಕ ಧಾರ್ಮಿಕ, ಸಾಮಾಜಿಕ ಕಾರ್ಯವೇರ್ಪಡಿಸುತ್ತಿದೆ. ಒಂದುವರೆ ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಭಾಭವನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
ಚತುರ್ಭುಜ ಹೊಂದಿರುವ ಸುಮಾರು ಮೂರುವರೇ ಅಡಿ ಎತ್ತರದ ಪ್ರಸನ್ನ ಮುಖಭಾವದ ಈಶಾನ್ಯಮುಖಿ ವಿನಾಯಕನಾಗಿ ಪ್ರಶಾಂತಮಯ ವಾತಾವರಣದಲ್ಲಿ ಕಂಗೊಳಿಸುವ ಈ ದೇವಾಲಯಕ್ಕೆ ಈಗ 18ನೇ ವಾರ್ಷಿಕೋತ್ಸವದ ಸಂಭ್ರಮ. ತದಂಗವಾಗಿ ದಿನಾಂಕ ವಿವಿಧ ಸೇವಾ, ಅಲಂಕಾರ, ಅಷ್ಟದ್ರವ್ಯ ಸಹಿತ ಸಹಸ್ರಮೋದಕ ಮಹಾಗಣಪತಿ ಹೋಮ, ನವಗ್ರಹ ಪೂರ್ವಕ ಮಹಾಮೃತ್ಯಂಜಯ ಹವನ, ನವಚಂಡಿಕಾ ಯಾಗ, ಇತ್ಯಾದಿ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ವಿವರಗಳಿಗೆ 98807 18863ಗೆ ಸಂಪರ್ಕಿಸಬಹುದು.
Discussion about this post