ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಯುವ ನಾಯಕರು ಹಾಗೂ ಕಾರ್ಯಕರ್ತರು ಸಂಘಟನಾತ್ಮಕವಾಗಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಎಚ್.ಪಿ. ಗಿರೀಶ್ ಹಾಗೂ ಎಲ್ಲಾ ನೂತನ ಬ್ಲಾಕ್ ಅಧ್ಯಕ್ಷರುಗಳು, ಪದಾಧಿಕಾರಿಗಳು ಬೆಂಗಳೂರಿನ ಅವರ ನಿವಾಸದಲ್ಲಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ ವೇಳೆ ಅವರು ಮಾತನಾಡಿದರು.
ಆಂತರಿಕ ಚುನಾವಣೆಯಲ್ಲಿ ಗೆದ್ದಂತಹ ಎಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿದ ಸಿದ್ದರಾಮಯ್ಯನವರು, ಯುವ ಕಾಂಗ್ರೆಸ್ ಬಲಿಷ್ಠವಾಗಿ ಪಕ್ಷ ಸಂಘಟನೆಯನ್ನು ಮಾಡುವುದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿ, ರೈತ, ಕಾರ್ಮಿಕ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಾ ಪಕ್ಷವನ್ನು ಜಿಲ್ಲೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಸಂಘಟಿಸಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಕರೆ ನೀಡಿದರು.

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ. ರಂಗನಾಥ್, ಯುವ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷರಾದ ಎಂ. ಪ್ರವೀಣ್ ಕುಮಾರ್, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಆರ್. ಕಿರಣ್, ಶಿವಮೊಗ್ಗ ಉತ್ತರ ಬ್ಲಾಕ್ ಅಧ್ಯಕ್ಷ ಬಿ. ಲೋಕೇಶ್, ಶಿವಮೊಗ್ಗ ಗ್ರಾಮಾಂತರ ಹೊಳೆಹೊನ್ನೂರು ಬ್ಲಾಕ್ ಅಧ್ಯಕ್ಷ ಈ.ಟಿ. ನಿತಿನ್, ಭದ್ರಾವತಿ ನಗರ ಬ್ಲಾಕ್ ಅಧ್ಯಕ್ಷ ಜಿ. ವಿನೋದ್ ಕುಮಾರ್, ಭದ್ರಾವತಿ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಬಾಳೆಗುಂಡಿ, ಗಣೇಶ್, ಎ.ಪಿ. ವರುಣ್, ಮಹೇಂದ್ರ ಜೈನ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















