ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮಕ್ಕಳೇ ಇಲ್ಲಿ ನೋಡಿ ಎಂದು ತಮ್ಮ ಕಂಚಿನ ಕಂಠದಿಂದ ಆರಂಭಿಸಿ ಇಡೀ ತರಗತಿಯ ಗಮನವನ್ನು ಸೆಳೆದು ಸಾಧಾರಣವಾಗಿ ಬೋರ್ ಎನಿಸುವ ರಾಸಾಯನಿಕ ಕ್ರಿಯೆಗಳು ಪಠ್ಯವನ್ನು ಪ್ರಾಯೋಗಿಕವಾಗಿ ಲಘು ಹಾಸ್ಯ ಮಿಶ್ರಿತ ಸ್ವರದೊಂದಿಗೆ ವಿದ್ಯಾರ್ಥಿಗಳ ಆಸಕ್ತಿಯನ್ನು ಕೊನೆಯ ಕ್ಷಣದವರೆಗೂ ಕಾಯ್ದುಕೊಂಡು, ಪಠ್ಯ ಮುಗಿಸಿದ್ದನ್ನು ಕಂಡು ನಮಗೆಲ್ಲರಿಗೂ ಅಚ್ಚರಿಯೋ ಅಚ್ಚರಿ. ಮಕ್ಕಳೊಂದಿಗೆ ನಾವು ಕೂಡ ಮಂತ್ರ ಮುಗ್ದರಾಗಿದ್ದೆವು.
ಇಲ್ಲಿ ತರಗತಿಯ ನಿರೂಪಣೆ ಮಾಡುತ್ತಿದ್ದುದು ಸುಮಾರು 24-25 ವರ್ಷಪ್ರಾಯದ ದೀಕ್ಷಾ ಎಸ್.ಎಂ. ಬ್ರಹ್ಮಾವರ. ಸ್ನೇಹಿತರಿಂದ ನಟ ಭಯಂಕರಿ, ಸಕಲಕಲಾ ವಲ್ಲಭೆ ಎಂದೇ ಕರೆಯಿಸಿಕೊಳ್ಳುವ ಇವರು ಸ್ನೇಹಿತರೊಂದಿಗೆ ಸದಾಕಾಲ ಮುಕ್ತವಾಗಿ ಬೆರೆಯುವ ಮನೋಭಾವ, ಹೇಳಬೇಕಾದ್ದನ್ನು ನೇರವಾಗಿ ಎದುರಿರುವವರಿಗೆ ನೋವುಂಟಾಗದಂತೆ ಹೇಳುವ ಪರಿ, ಸದಾ ಹಾಸ್ಯ ಭರಿತ ಮಾತುಗಳಿಂದ ತರಗತಿಯಲ್ಲಾಗಲೀ, ವೇದಿಕೆಯಲ್ಲಾಗಲೀ ದಿಟ್ಟತನದಿಂದ ವ್ಯವಹರಿಸುವ ರೀತಿ ನೇರ ನಡೆ ನುಡಿ, ಸರಳ ವ್ಯಕ್ತಿತ್ವ ಮತು ರಂಗಭೂಮಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಬಗೆ, ಬೆಂಗಳೂರಿನಿಂದ ಮಂಗಳೂರಿಗೆ ವಿದ್ಯಾಭ್ಯಾಸ ಮಾಡಲು ಹೋದ ನನಗೆ ವಿಶೇಷವಾಗಿ ಕಂಡದ್ದು ಸರಿಯೇ. ಮನಃಶಾಸ್ತ್ರದಲ್ಲಿ ಒಲವುಳ್ಳ ನಾನು ವ್ಯಕ್ತಿಗಳನ್ನು ಅವಲೋಕಿಸುತ್ತಲೇ ಇರುವುದರಿಂದ ದೀಕ್ಷಾರ ಬಗೆಗೆ ಕುತೂಹಲ ಮೂಡಿದ್ದು ಸಹಜವಾಗಿಯೇ ಇತ್ತು.
ಯಾರಿದು ದೀಕ್ಷಾ? ಅಂತ ನನಗೆ ಅನ್ನಿಸಿದ ಹಾಗೆ ನಿಮಗೂ ಅನ್ನಿಸಿರಬೇಕಲ್ಲವೇ? ಹೇಳ್ತೇನೆ ಕೇಳಿ.
ದೀಕ್ಷಾ ಎಸ್.ಎಂ. ಬ್ರಹ್ಮಾವರ ಅವರು ಮೂಲತಃ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನವರು. ಶ್ರೀಯುತ ಶ್ಯಾಮ್ ಹಾಗೂ ಶ್ರೀಮತಿ ಸುಮಂಗಳರವರ ಪುತ್ರಿ. ತಂದೆ ಎಸ್.ಎಂ. ಪದವಿ ಕಾಲೇಜಿನಲ್ಲಿ ಅಟೆಂಡರ್ ವೃತ್ತಿಯಲ್ಲಿದ್ದು, ತಾಯಿ ಹಿರೇಬೆಟ್ಟು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಇವರು ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಜೊತೆ ಜೊತೆಗೆ ರಂಗಭೂಮಿಯಲ್ಲೂ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಂಗಭೂಮಿಯ ಜೊತೆ ಜೊತೆಗೆ ನೃತ್ಯ, ಭರತನಾಟ್ಯ, ಯಕ್ಷಗಾನ, ಗಾಯನ, ಡಬ್‌ಸ್ಮ್ಯಾಶ್ ಅಭಿನಯ, ಟೈಲರಿಂಗ್, ಸೀರೆಗೆ ಗೊಂಡೆ(ಕುಚ್ಚು) ಹಾಕುವುದು, ಎಂಬ್ರಾಯಿಡರಿ, ಡಾಲ್ ಮೇಕಿಂಗ್, ವಾಲ್ ಪೇಯಿಂಟಿಂಗ್, ಗ್ಲಾಸ್ ಪೇಯಿಂಟಿಂಗ್, ಸ್ಯಾಂಡ್ ಪೇಯಿಂಟಿಂಗ್, ನಿಬ್ ಪೇಯಿಂಟಿಂಗ್, ನಿಟ್ಟಿಂಗ್, AARI WORK, ಕ್ರಾಫ್ಟ್ ತಯಾರಿಕೆ ಆಭರಣ ತಯಾರಿಕೆ, ಸಿಲ್ಕ್ ತ್ರೆಡ್, ಟೆರಕೋಟ, ಗಾರ್ಡನಿಂಗ್ ಬ್ಯೂಟಿಶಿಯನ್, ಫ್ಯಾಶನ್ ಡಿಸೈನ್‌ನಲ್ಲಿಯೂ ಸಮಾನ ಅಭಿರುಚಿ ಹೊಂದಿದ್ದಾರೆ.
ಅಷ್ಟೇ ಅಲ್ಲದೇ ಅಬ್ಬಕ್ಕ ದಾರಗ ಜಾನಪದ ನೃತ್ಯ ತಂಡದಲ್ಲಿ ಭಾಗವಹಿಸಿ ಹೊರಜಿಲ್ಲೆಗಳಲ್ಲಿ ಪ್ರದರ್ಶನ ನೀಡಿ ಬಹುಮಾನಗಳನ್ನೂ ಗಳಿಸಿರುತ್ತಾರೆ, ಜೊತೆಗೆ ಅನಾಥಾಶ್ರಮಕ್ಕೆ ಆಗಾಗ ಭೇಟಿ ನೀಡಿ ತಮ್ಮಿಂದ ಆದಷ್ಟು ಸಹಾಯ ಮಾಡುವುದು, ಬೀದಿ ನಾಯಿಗಳ ಸಂರಕ್ಷಣೆ ಮಾಡುವುದು, ಹೆಬ್ಬುಲಿ ಹುಡ್ಗೀರು ಹಾಗೂ ಕಿಚ್ಚಾಭಿವೃದ್ಧಿ ಸಂಘದಲ್ಲಿದ್ದುಕೊಂಡು ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇವರ ಪ್ರಮುಖ ಹವ್ಯಾಸಗಳು.
ಇವರು ಸಾಗಿಬಂದ ಜೀವನ ಶೈಲಿಯನ್ನೊಮ್ಮೆ ನೋಡುವುದಾದರೆ ತಂದೆ ತಾಯಿಯವರ ಮುದ್ದು ಮಗಳಾದ ಇವರಿಗೆ ಚಿಕ್ಕಂದಿನಿಂದಲೇ ಪ್ರವೃತ್ತಿಯಲ್ಲಿ ಯಕ್ಷಗಾನ, ರಂಗಭೂಮಿಯಂತಹ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವುದೇ ಸ್ಪೂರ್ತಿ ಜೊತೆಗೆ ಮಗಳ ಈ ಮಟ್ಟಿಗಿನ ಬೆಳವಣಿಗೆಯಲ್ಲಿ ಅವರ ಬೆಂಬಲವೂ ಇದೆ.
ಇವರು ತಮ್ಮ ಶಿಕ್ಷಣವನ್ನು 1ರಿಂದ 2ನೆಯ ತರಗತಿಯವರೆಗೆ ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ತೋಕೂರು ಹಳೆಯಂಗಡಿಯಲ್ಲಿ ಮುಗಿಸಿ 3ರಿದ 4ರವರೆಗೆ ನಿರ್ಮಲ ಶಾಲೆ ಬ್ರಹ್ಮಾವರದಲ್ಲಿ ನಂತರ 5ರಿಂದ 7ರವರೆಗೆ ಪುನಃ ಶ್ರೀ ಸುಬ್ರಹ್ಮಣ್ಯ ಹಿರಿಯ ಪ್ರಾಥಮಿಕ ಶಾಲೆ ತೋಕೂರು ಹಳೆಯಂಗಡಿ ಇಲ್ಲಿ ಮುಗಿಸಿ 8ರಿಂದ 12ರವರೆಗೆ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರದಲ್ಲಿ ಮುಗಿಸಿದರು. ನಂತರದ ಪದವಿಯನ್ನು (BSc-CBZ) ಪೂರ್ಣ ಪ್ರಜ್ಞ ಕಾಲೇಜು ಉಡುಪಿಯಲ್ಲಿ ಪಡೆದಿದ್ದಾರೆ. ಅನಂತರ ಮಂಗಳೂರು ವಿಶ್ವವಿದ್ಯಾನಿಲಯ ಕೊಣಜೆಯಲ್ಲಿ ಜೀವ ರಸಾಯನಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಜೊತೆಗೆ ಅಮ್ಮನಂತೆ ಶಿಕ್ಷಕಿಯಾಗಿ ವಿದ್ಯಾದಾನ ಮಾಡಬೇಕೆಂಬ ಪ್ರಬಲ ಆಕಾಂಕ್ಷೆ ಹೊಂದಿದ್ದು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರಿನಲ್ಲಿ ಆಉ ಪದವಿಯನ್ನು ಪಡೆದಿರುತ್ತಾರೆ.
ನನಗೆ ಚಿಕ್ಕಂದಿನಲ್ಲೇ ಹಾಡು, ನೃತ್ಯ ಅಂತೆಲ್ಲ ಆಸಕ್ತಿಯಿತ್ತು. ತನ್ನ 3ನೆಯ ವಯಸ್ಸಿನಲ್ಲಿ ಹಾರಾಡಿ ಶಾಲೆಯ ಗಣೇಶೋತ್ಸವದ ವೇದಿಕೆಯಲ್ಲಿ ನೃತ್ಯ ಕಾರ್ಯಕ್ರಮ ನೀಡಿದರು. ಆಗ ಶಾಲೆಯ ಸಂಚಾಲಕರಾದ ಮತ್ತು ಊರಿನ ಹಿರಿಯರಾದ ಶ್ರೀಯುತ ಮೋನಪ್ಪ ಶೆಟ್ಟಿಯವರು ತುಂಬು ಹೃದಯದಿಂದ ಹಾರೈಸಿ ಇದೇ ರೀತಿ ಎಲ್ಲಾ ತರಹದ ವೇದಿಕೆ ಕಾರ್ಯಕ್ರಮದಲ್ಲಿ ಬೆಳೆದು ಬಾ ಮಗುವೆ ಎಂದು ಹಾರೈಸಿದ ಹಿರಿಯರ ಸವಿ ನುಡಿಯ ಫಲವೇ ತನ್ನ ಬೆಳವಣಿಗೆಗೆ ಬುನಾದಿ ಎಂದು ಯಾವಾಗಲೂ ಮೆಲುಕು ಹಾಕುತ್ತಾರೆ. ಇವರು ಅನಂತರ ಭಾಗವಹಿಸಲು ಸಾಧ್ಯವಾದ ಕಡೆಗಳಲೆಲ್ಲ ಅತ್ಯುತ್ತಮ ಭಾಗವಹಿಸುವಿಕೆಯ ಜೊತೆಗೆ ಬಹುಮಾನಗಳನ್ನು ಪಡೆದು ವಿದ್ಯಾಸಂಸ್ಥೆಯ ಕೀರ್ತಿ ಪತಾಕೆಯನ್ನು ಹಾರಿಸಿರುತ್ತಾರೆ. ಛದ್ಮವೇಷ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದವರೆಗೆ ಭಾಗವಹಿಸಿದ್ದು, ವಿ.ವಿಮಟ್ಟದ ಸ್ಪರ್ದೆಯಲ್ಲಿನ ಏಕಪಾತ್ರಾಭಿನಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ನಿರ್ಣಾಯಕರ ಮನಸ್ಸು ಗೆದ್ದಿರುತ್ತಾರೆ. ಜೊತೆಗೆ ಇನ್ನೂ ಅನೇಕ ಬಹುಮಾನಗಳನ್ನು ಪಡೆದದ್ದು, ಜೊತೆಗೆ ತಮ್ಮದೇ ನಿರ್ದೇಶನದಲ್ಲಿ ಬದುಕಲು ಬಿಡಿ ನಾಟಕವನ್ನು ಪ್ರದರ್ಶಿಸಿದ್ದು ಸ್ಮರಣೀಯ ಕ್ಷಣಗಳೆಂದು ಅಭಿಪ್ರಾಯ ಪಡುತ್ತಾರೆ. ಜೊತೆಗೆ KSPL ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಗಳಿಸಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಇವರು ಸಿನಿಮಾ ನಟನಾ ತರಬೇತಿಯನ್ನು FILM AMBITHನಲ್ಲಿ, ರಂಗಭೂಮಿ ತರಬೇತಿಯನ್ನು ಕೋಶಿಕಾ (ಚೇರ್ಕಾಡಿ) ಸಂಸ್ಥೆಯಲ್ಲೂ ಹಾಗೂ ಇನ್ನಿತರ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ರಂಗಭೂಮಿಗೆ ಪಾದಾರ್ಪಣೆ ಮಾಡಿ ಸುಮರು 5-6 ವರ್ಷ ಸಂದಿದೆ. ಈ ಅವಧಿಯಲ್ಲಿ ವಿದ್ಯಾಭ್ಯಾಸದ ಜೊತೆಯಲ್ಲಿ ಕುಂದಾಪುರ ಕನ್ನಡ ಮಾತ್ರವಲ್ಲದೆ ತುಳು ಭಾಷೆಯಲ್ಲಿಯೂ ಕೂಡ ನಾಟಕಗಳನ್ನು ಮಾಡಿದ್ದಾರೆ.ಈ ಮೂಲಕ ಸುಮಾರು 50ಕ್ಕೂ ಪ್ರಯೋಗಗಳಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ಕೋಳಿಕಳ್ಳ, ಗಿರ್ಗಿಟ್ಲಿ, ವಠಾರ, ಈ ಪೊರ್ಲು ತೂವೊಡ್ಚಿ, ಇಲ್ಲ್ ಇಲ್ಲದ ಕಥೆ, ಕಥೆ ಏರ್ ಬರೆರ್ಪೆ, ಏರ್ ತಾಂಕುರ್ವೆ, ಹುಚ್ಚಾಪುರ ಸಂಸ್ಥಾನದಲ್ಲಿ ಪ್ಲೇಗ್ ಇಲ್ಲ, ಸಾಹೇಬರು ಬರುತ್ತಾರೆ, ಕಿತಾಪತಿ ಕಿಟ್ಟ ಹೀಗೆ ಅನೇಕ ನಾಟಕಗಳಲ್ಲಿ ಪ್ರವೇಶ ಪಡೆದಿರುತ್ತಾರೆ.
ಜೊತೆಗೆ ಕಿರುಚಿತ್ರಗಳಿಗೆ ಧ್ವನಿ ನೀಡಿರುವುವುದರೊಂದಿಗೆ ಪಶ್ಚಾತ್ತಾಪ ಎಂಬ ಕಿರುಚಿತ್ರದಲ್ಲಿ ಅಭಿನಯ ಮಾಡಿರುತ್ತಾರೆ. ನಾಟಕ ತಂಡಕ್ಕೆ ಪಾದಾರ್ಪಣೆ ಗೈಯಲು ತಾಯಿಯ ಸ್ನೇಹಿತೆಯಾದ ಶ್ರೀಮತಿ ನಿರ್ಮಲ ಮತ್ತು ಆನಂದ ಪೆರ್ಡೂರು ರವರ ಸಹಕಾರವೇ ಕಾರಣ ಎಂದು ಹೇಳುತ್ತಾರೆ. ಇತ್ತೀಚೆಗೆ ಅನೇಕ ನಾಟಕ ತಂಡದವರು ನನ್ನನ್ನು ಗುರುತಿಸಿ ಅತಿಥಿ ಕಲಾವಿದೆಯಾಗಿ ಆಹ್ವಾನಿಸಿ ಸನ್ಮಾನಿಸಿದ್ದಾರೆ ಎಂದು ಹರ್ಷಿಸುತ್ತಾರೆ.
ಇವರು ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಉಮಾಶ್ರೀ ಮತ್ತು ಕಿಚ್ಚ ಸುದೀಪ್ ಅವರ ಅಭಿಮಾನಿ. ಉಮಾಶ್ರೀ ಅಮ್ಮನಂತೆ ಹಾಸ್ಯ ನಟನೆಯಲ್ಲಿ ಹೆಸರು ಮಾಡಬೇಕು, ನಟ ಸುದೀಪರಂತೆ ಮಿಂಚಬೇಕು ಅನ್ನೋದು ಇವರ ಬಹು ದೊಡ್ಡ ಕನಸು. ಈ ನಿಟ್ಟಿನಲ್ಲಿ ದೀಕ್ಷಾರವರ ಸಾಧನೆ ಪ್ರಗತಿದಾಯಕವಾಗಿರಲಿ ಇವರಿಂದ ರಂಗಭೂಮಿಯಲ್ಲಿ ಮತ್ತಷ್ಟು ಹೊಸ ಹೊಸ ಪ್ರಯೋಗಗಳಾಗಲಿ ಆ ದೇವರು ಇವರಿಗೆ ಹಾಗೂ ಇವರ ಕುಟುಂಬದವರಿಗೆ ಆಯಸ್ಸು ಆರೋಗ್ಯದ ಜೊತೆಗೆ ಕಲಾಕ್ಷೇತ್ರವನ್ನು ಶ್ರೀಮಂತಗೊಳಿಸುವ ಹೆಚ್ಚಿನ ಅವಕಾಶಗಳನ್ನು ಕೊಡಲಿ ಅಂತ ನಾನಂತೂ ಪ್ರಾರ್ಥಿಸುತ್ತೀನಿ ಮತ್ತೆ ನೀವು?
ಭಾಷೆಯ ಜೊತೆಗೆ ಕಲಾಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಇಂತಹ ಕಲಾವಿದರಿಗೆ ಬೆಂಬಲ ಕೊಡುವ ಮೂಲಕ ನಮ್ಮ ಪರಂಪರೆಯನ್ನು ಉಳಿಸೋಣ ಮತ್ತು ಬೆಳೆಸೋಣ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post