Read - 2 minutes
ಕಾರ್ತೀಕ ಮಾಸದಲ್ಲಿ ಶುಕ್ಲಪಕ್ಷ ಪ್ರತಿಪದೆಯಂದು ಬಲಿಪಾಡ್ಯಮಿ ಹಬ್ಬ. ಬಲಿ ಚಕ್ರವರ್ತಿ ಮಹಾನ್ ದೈವ ಭಕ್ತ ಹಾಗೂ ದಾನ ಧರ್ಮಕ್ಕೆ ಮತ್ತೊಂದು ಹೆಸರು.
ಈತ ನೂರು ಅಶ್ವ ಮೇಧಯಾಗವನ್ನಾಚರಿಸಿ, ಸುರರ ಚಕ್ರವರ್ತಿ ಇಂದ್ರನಿಗೆ ಸರಿಸಮನಾಗಿ ಬೆಳೆದು ಬಂದ ಮಹಾ ಉದಾರಿ. ಹದಿನಾಲ್ಕು ದಿಕ್ಕುಗಳಲ್ಲಿಯೂ ತನ್ನ ರಾಜ್ಯ ವಿಸ್ತರಿಸಿದ್ದವನು. ಆದರೆ ಶ್ರೀಹರಿಯ ದಶಾವತಾರದಲ್ಲಿ ಐದನೆಯ ಅವತಾರವೆ ಶ್ರೀವಟು ವಾಮನದ್ದು. ಆತ ಬಲಿಯ ಹತ್ತಿರ ಬೇಡಿ ಅವನನ್ನು ಭೂಮಿಗೇ ತುಳಿದವನು. ಆಗ ತನ್ನ ಆ ದಿನವನ್ನು ಭೂ ಲೋಕದ ಜನರು ಬಲಿ ಪಾಡ್ಯಮಿ ಎಂದಾಚರಿಸಲೀ ಎಂದು ವಾಮನನ್ನು ಬೇಡಿದನು. ವಾಮನದೇ ‘ತಥಾಸ್ತು’ ಎಂದು ಆ ವರ ಕೊಟ್ಟ ದಿನವೇ ಬಲಿ ಪಾಡ್ಯ. ಅಥವಾ ಗೋಪಾಡ್ಯ. ಈ ದಿನಗಳಲ್ಲಿ ದಾನ ಧರ್ಮಕ್ಕೇ ಅತಿ ಮಹತ್ವವಿದೆ ದಾನ ಯೋಗ್ಯರಾದವರಿಗೇ ಕೊಡಬೇಕು. ಈ ಜನ್ಮದಲ್ಲಿ ಮಾಡಿದ ಪುಣ್ಯ ಕಾಯಕಗಳು ಮುಂದಿನ ಜನ್ಮಗಳಿಗೂ ಲಭ್ಯ ಎಂಬ ನಂಬಿಕೆ ಇದೆ. ಅಂದಿನ ದಿವಸ ಬಿಳಿ ರಂಗೋಲಿಯಿಂದಲೇ ದ್ವಾದಶ ಪದ್ಮಗಳನ್ನು ಬರೆದು, ಅದರಲ್ಲಿ ದ್ವಿಭಜನದ ಬಲಿಯನ್ನೂ ಬರೆದು, ಈ ಕೆಳಕಂಡ ಮಂತ್ರದಿಂದಲೇ ಪೂಜಿಸಬೇಕು.
ಬಲಿರಾಜ ಮಸ್ತುಭ್ಯಂ ವಿರೋಜನ ಸುತ ಪ್ರಭೋ |
ಭವಿಷ್ಯೇಂದ್ರ ಸುರಾರತ್ಯೆ ಪೂಜ್ಯೋಮಂ ಪ್ರತಿ ಗ್ರಹ್ಯಾತಾಮ್|
ಮತ್ತೇ ಈ ದಿನಸದಂದು ದಾನಕ್ಕೆ ಯೋಗ್ಯ ರೆನ್ನಿಸಿದವರಿಗೇ ತೈಲ ಭ್ಯಂಗದಾನವನ್ನು ಕೊಡಬೇಕು. ಅಂದು ಗೋ ಪೂಜೆ, ಲಕ್ಷ್ಮೀಪೂಜೆ, ಗೋವರ್ಧನ ಪೂಜೆ ಮಾಡಬೇಕು. ಈ ಮಾಸದ ಅಧಿದೇವ ಇಂದಿರಾ ಪದ್ಮನಾಭದೇವರು, ಈ ಮಾಸದಲ್ಲಿಯೇ ಹುಣ್ಣಿಮೆಯಂದು ನಲ್ಲಿ ಗಿಡದ ಕೆಳಗೆ ದಾಮೋದರನನ್ನು ಪೂಜಿಸಿ ವನಭೋಜನ ಮಾಡಬೇಕು. ಹಾಗೆ ಮಠಮಂದಿರದಲ್ಲೂ ಆಚರಿಸುವ ಈ ಹೋಮಕ್ಕೆ ಧಾತ್ರಿ ಹೋಮ ಎಂದು ಕರೆಯುತ್ತಾರೆ. ಬಲಿಯ ನೆನಪಿಗಾಗಿ ಕೆಲವರು ಹೆಚ್ಚಿನ ಅಥವಾ ಗೋಮಯದ ‘ಕೆರಕ’ನನ್ನು ಮಾಡಿ ಅವಕ್ಕೆ ಚಂಡು ಹೂವನ್ನು ಸಿಗಿಸಿ ಪೂಜೆ ಮಾಡುತ್ತಾರೆ. ಆಗ ಹೊಲಗಳಲ್ಲಿ ಕೈಗೆ ಬಂದ ರಾಗಿ, ಭತ್ತ, ಕಬ್ಬು, ಗೋಧಿ ತೆನೆಗಳನ್ನು ತಂದು ಪೂಜಿಸುವ ವಾಡಿಕೆ ಇದೆ.
ನಿಜವಾಗಿಯೂ ಬಲಿ ಚಕ್ರವರ್ತಿ ಚಾಣಾಕ್ಷ. ತನ್ನ ಅಧಿಕಾರ ಕಳೆದು ಹೋದರೂ ಆತ ಕುಂದದೇ ಆಸ್ತಿಕರ ಗೃಹಗಳಲ್ಲಿ ಸದಾ ರಮಾ ಪತಿಯ ಮಡದಿ ಲಕ್ಷ್ಮೀ ಇರುವಂತೆ ವರ ಕೇಳಿ ಪಡೆದ ಸಜ್ಜನ. ಅಂದು ಜನರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮದಿಂದ ಬಲಿಪೂಜೆ ಮಾಡುತ್ತಾರೆ.
ಹಳ್ಳಿಗಳ ಕಡೆ ಈ ಹಬ್ಬ ತುಂಬಾ ಭಕ್ತಿ-ಭಾವದಿಂದ ಮಾಡುತ್ತಾರೆ. ಮನೆಯೆಲ್ಲಾ ಗೋಮಯದಿಂದ ಶುದ್ಧಗೊಳಿಸಿ ಬಾಗಿಲಿಗೆ ತಳಿರು ತೋರಣ. ರಂಗವಲ್ಲಿಯ ಚಿತ್ತಾರ ಮನೆ ಮುಂದೆ ಬರೆದು ಅದರ ಮೇಲೆ ಐದು ಕೆರಕಗಳನಿಡುತ್ತಾರೆ. ಇವುಗಳಿಗೆ ಪಾಂಡವರು ಎಂದೂ ಕರೆಯುತ್ತಾರೆ. ಸಕಲ ಹೊಸ್ತಿಲುಗಳ ಎರಡೂ ಬದಿಯಲ್ಲೂ ಅದನ್ನಿಡುತ್ತಾರೆ. ದೇವರ ಮುಂದೆ ಐದು ಇಡುವ ಪದ್ಧತಿ ಇದೆ.
ಅಂದು ಗೋವಿಗೆ ಮೈ ತೊಳೆದು ಸುಣ್ಣ ಕೆಮ್ಮಣ್ಣಿನಿಂದ ಮೈಗೆ ಉಂಗುರದಂತೆ ಬರೆಯುತ್ತಾರೆ. ಕೊಂಬಿಗೆ ಚಂಡು ಹೂವಿನಲಂಕಾರ, ಚಂಡುವಿನಹಾರ, ಹರಿದ್ರಾ, ಕುಂಕುಮದಿಂದ ಅದನ್ನು ಮುಖದಿಂದ ಬಾಲದವರೆಗೂ ಪೂಜಿಸಿ ಅದಕ್ಕೆ ಅಂದು ಮಾಡಿದ ಅಡಿಗೆಯನ್ನು ಗೋಗ್ರಾಸವೆಂದು ಹೇಳಿ ಉದರಲ್ಲಿ ಮೂವತ್ತಮೂರು ಕೋಟಿ ದೇವತೆಗಲ ವಾಸವಿದೆ ಎಂಬ ಪ್ರತೀತಿ ನಡೆದು ಬಂದಿದೆ.
ನಿಜವಾಗಿಯೂ ಬಲಿ ಚಕ್ರವರ್ತಿ ಚಾಣಾಕ್ಷ. ತನ್ನ ಅಧಿಕಾರ ಕಳೆದು ಹೋದರೂ ಆತ ಕುಂದದೇ ಆಸ್ತಿಕರ ಗೃಹಗಳಲ್ಲಿ ಸದಾ ರಮಾ ಪತಿಯ ಮಡದಿ ಲಕ್ಷ್ಮೀ ಇರುವಂತೆ ವರ ಕೇಳಿ ಪಡೆದ ಸಜ್ಜನ. ಅಂದು ಜನರು ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮದಿಂದ ಬಲಿಪೂಜೆ ಮಾಡುತ್ತಾರೆ.
ಲೇಖಕರು: ಕೆ.ಎಂ. ಫಲ್ಗು
Discussion about this post