ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ 60 ಹಿರಿಯ ಸಹಕಾರಿಗಳಿಗೆ 2021ನೇ ಸಾಲಿನ ‘ಸಹಕಾರ ರತ್ನ’ Sahakara Rathna ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜೊತೆಗೆ ನಟ ಪುನೀತ್ ರಾಜ್ ಕುಮಾರ್ Puneeth Rajkumar ಹಾಗೂ ಕರೇಗೌಡ ಸಿದ್ಲಿಂಗಪ್ಪಗೌಡ ಸಣ್ಣ ಗೌಡ್ರ ಅವರಿಗೆ ಮರಣೋತ್ತರ ಪ್ರಶಸ್ತಿ ಘೋಷಣೆ ಮಾಡಲಾಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ಮತ್ತು ಸಹಕಾರ ಇಲಾಖೆ ವತಿಯಿಂದ ಕೆಂಗೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಹಕಾರಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ CM Basavaraja Bommai ಅವರು, ದೇಶದಲ್ಲಿ ಹಸಿರುಕ್ರಾಂತಿಯಾಗಿದೆ, ಆದರೆ ಕೃಷಿಗೆ ತಕ್ಕಂತೆ ರೈತ ಬೆಳೆದಿಲ್ಲ. ಯಶಸ್ವಿನಿ ಯೋಜನೆ ಮರು ಜಾರಿ ಮಾಡುವುದರ ಜೊತೆಗೆ, ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಇದರಿಂದ ರೈತರ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಯಶಸ್ವಿನಿ ಯೋಜನೆ ಮರು ಜಾರಿಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ 300 ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ. ರಾಜ್ಯಾದ್ಯಂತ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು. ರೈತರಿಗೆ ಯಂತ್ರೋಪಕರಣಕ್ಕೆ ಅಗತ್ಯವಿರುವ ಡೀಸಲ್, ಪೆಟ್ರೋಲ್ ಗೆ 500 ಕೋಟಿ ರೂ. ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದೆ ಎಂದು ಹೇಳಿದರು.
33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರೂ. ಸಾಲ ವಿತರಣೆ ಮಾಡಲಾಗುವುದು. ಕೃಷಿಯಲ್ಲಿ ಬಂಡವಾಳ ಹೂಡಿಕೆ ಆಗಬೇಕು. ಕೃಷಿ ಆರ್ಥಿಕತೆಯ ಮೂಲ. ರೈತರು ಕೇವಲ ಉತ್ಪಾದಕರಲ್ಲ, ಅವರು ಬಳಕೆದಾರರು ಕೂಡ ಎಂದು ಹೇಳಿದರು.
Also read: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ತಡೆಗಟ್ಟಲು ಎಲ್ಲರ ಸಹಕಾರ ಅಗತ್ಯ: ಡಿಸಿ ಡಾ. ಸೆಲ್ವಮಣಿ
ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಹಕಾರ ಕ್ಷೇತ್ರಕ್ಕೆ ಸಾಕಷ್ಟು ಒತ್ತು ಕೊಟ್ಟಿದ್ದಾರೆ. ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದರು.
ಸಹಕಾರ ರತ್ನ ಪ್ರಶಸ್ತಿಗೆ ಯಾವುದೇ ಪ್ರಭಾವ ಬಳಸಬಾರದು, ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಬೇಕು ಎಂಬ ಮುಖ್ಯಮಂತ್ರಿಗಳ ಆದೇಶದಂತೆ 60 ಸಹಕಾರಿಗಳನ್ನು ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಯಶವಂತಪುರ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾಕಷ್ಟು ಅನುದಾನ ನೀಡಿದ್ದಾರೆ. 21 ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ, ಒಳಚರಂಡಿ ಕಾಮಗಾರಿ ಏಪ್ರಿಲ್ ಗೆ ಮುಕ್ತಾಯವಾಗಲಿದೆ ಎಂದರು.
2021ನೇ ಸಾಲಿನಲ್ಲಿ 20810 ಕೋಟಿ ರೂ. ಶೂನ್ಯ ಬಡ್ಡಿ ಸಾಲ ನೀಡುವ ಗುರಿ ನೀಡಲಾಗಿದ್ದು ಈಗಾಗಲೇ 16 ಸಾವಿರ ಕೋಟಿ ರೂ. ಹಣ ವಿತರಣೆಯಾಗಿದೆ. ತಿಂಗಳ ಅಂತ್ಯದ ವೇಳೆಗೆ ನಿಗದಿತ ಗುರಿ ತಲುಪಲಾಗುವುದು ಎಂದು ಹೇಳಿದರು.
ಸಹಕಾರಿಗಳ ಬೇಡಿಕೆಯಂತೆ ಯಶಸ್ವಿನಿ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜಾರಿಗೊಳಿಸಿದರು. ಸಹಕಾರ ರತ್ನ ಪ್ರಶಸ್ತಿಗೆ ಪ್ರಭಾವ ಬಳಸಬಾರದು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಅದರಂತೆ ಸಹಕಾರಿ ರತ್ನ ಪ್ರಶಸ್ತಿಗೆ ಸಹಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಇದೇ ಸಮಾರಂಭದಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಪೊಲೀಸ್ ಠಾಣೆಗಳ ಕಟ್ಟಡ ನಿರ್ಮಾಣ ಕಾಮಗಾರಿಗೆ ವರ್ಚ್ಯುವಲ್ ಮೂಲಕ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಗೃಹ ಸಚಿವ ಅರಗ ಜ್ಞಾನೆಂದ್ರ, ಆರೋಗ್ಯ ಸಚಿವ ಡಾ. ಕೆ. ಸುಧಾಕರ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಅಬಕಾರಿ ಸಚಿವ ಗೋಪಾಲಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಂಸದ ಡಿ. ವಿ. ಸದಾನಂದಗೌಡ, ಸಹಕಾರ ಮಹಾಮಂಡಳ ಅಧ್ಯಕ್ಷ ಜಿ. ಟಿ. ದೇವೇಗೌಡ ಮತ್ತು ವಿವಿಧ ಸಹಕಾರ ಮಂಡಳಿಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post