ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಭಾರತೀಯ ಮತ್ತು ಅಂತರಾಷ್ಟ್ರೀಯ ಕಲಾ ಪ್ರಕಾರಗಳನ್ನು ಆದರಿಸಿ, ಗೌರವಿಸಿ, ವೇದಿಕೆ ಕಲ್ಪಿಸಿಕೊಡುವ ರಾಜಧಾನಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ‘ದೃಷ್ಟಿ ಆರ್ಟ್ ಫೌಂಡೇಷನ್’. Drushti Art Foundation ಈ ಬಾರಿ 17ನೇ ರಾಷ್ಟ್ರೀಯ ನೃತ್ಯ ಉತ್ಸವಕ್ಕೆ ಸಂಸ್ಥೆ ಅಣಿಯಾಗಿದೆ. ಮಾ. 19ರ ಶನಿವಾರ ಸಂಜೆ ೬ಕ್ಕೆ ಮಲ್ಲೇಶ್ವರದ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ಈ ಒಂದು ವಿಶೇಷ ನೃತ್ಯ ಸಮಾರೋಹಕ್ಕೆ ನವ ವಧುವಿನಂತೆ ಸಿಂಗಾರಗೊಂಡಿದೆ.
ಉತ್ಸವದ 17 ನೇ ಆವೃತ್ತಿಯಲ್ಲಿ ಭರತನಾಟ್ಯ, ಭರತನೃತ್ಯಂ, ಕಥಕ್ ಮತ್ತು ಒಡಿಸ್ಸಿಯಂತಹ ಭಾರತೀಯ ಶಾಸ್ತ್ರೀಯ ನೃತ್ಯ ಶೈಲಿಗಳು ವಿಜೃಂಭಿಸಲಿವೆ. ವಿವಿಧ ಪ್ರಕಾರಗಳಲ್ಲಿ ದೇಶದ ಪ್ರತಿಷ್ಠಿತ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಅನಾವರಣ ಗೊಳಿಸಲಿದ್ದಾರೆ.
ಚರಿತ್ರೆಗೆ ಹಿಡಿಯುವ ಕನ್ನಡಿ:
ದೃಷ್ಯಕಲಾ ಮಾಧ್ಯಮ ಸಮಾಜದ ಮೇಲೆ ಬೀರುವ ಪರಿಣಾಮ ಬಹಳ ದೊಡ್ಡದು. ಭಾರತೀಯ ಇತಿಹಾಸದ ಪ್ರತಿಯೊಂದು ಮಹತ್ತರ ಸಂಗತಿಗಳೂ ಮೊದಲು ಮೂಡಿದ್ದು ಸಾಧಕ ವ್ಯಕ್ತಿಯೊಬ್ಬರ ಅಂತರಂಗದಲ್ಲಿ. ನಂತರವಷ್ಟೇ ಅದು ಈ ಭರತ ಭೂಮಿಯಲ್ಲಿ ಆಚರಣೆಗೆ ಬರಲು ಸಹಕಾರಿಯಾಯಿತು. ಈ ಒಂದು ಪರಿಕಲ್ಪನೆಯನ್ನು ನೃತ್ಯ ಮಾಧ್ಯಮದ ಮೂಲಕ ಕಲಾರಸಿಕರಿಗೆ ಕಟ್ಟಿಕೊಡುವುದು ಈ ಬಾರಿ ದೃಷ್ಟಿ ಉತ್ಸವದ ಮಹದುದ್ದೇಶ. ಹಾಗಾಗಿ ಭಾರತೀಯ ಇತಿಹಾಸದ ಒಂದೊಂದು ಘಟನೆಯನ್ನು ಒಂದೊಂದು ತಂಡದವರು ಪ್ರಸ್ತುತ ಪಡಿಸಲಿರುವುದು ವಿಶೇಷ ಸಂಗತಿಯಾಗಿದೆ.
ದೃಷ್ಟಿ ಸಂಸ್ಥೆಯ ಕಲಾ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್ ಮತ್ತು ತಂಡದಿಂದ ವಿನೂತನ ಶೈಲಿಯ ಭರತನಾಟ್ಯ ಅನಾವರಣವಾಗಲಿದೆ. ಈ ಪ್ರಸ್ತುತಿಯಲ್ಲಿ ಕುಮಾರ ಕಂಪಣ್ಣ ರಾಜ (ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕ ಬುಕ್ಕನ ಪುತ್ರ) ತಮಿಳು ನಾಡಿನ ನೂರಾರು ದೇಗುಲಗಳನ್ನು ಪುನರುತ್ಥಾನ ಮಾಡಿದ ಇತಿಹಾಸ ಪಡಮೂಡಲಿದೆ. ಅದರಲ್ಲೂ ವಿಶೇಷವಾಗಿ ಮಧುರೆಯ ಮೀನಾಕ್ಷಿ ದೇವಾಲಯದ ಪೂಜಾ ಪದ್ಧತಿಗಳು (ಆಕ್ರಮಣದ ನಂತರದ ಕಾಲದಲ್ಲಿ) ಹೊಸತನದಿಂದ ಚಿಗುರಿದ ಪರಿ ವಿಭಿನ್ನವಾಗಿ ತೆರೆದುಕೊಳ್ಳಲಿದೆ. ಅಪ್ಪಟ ಕನ್ನಡ ನಾಡಿನ ಕುಮಾರ ಕಂಪಣ್ಣ ಕೇವಲ ರಾಜನಾಗಿ ಮಾತ್ರ ಆಳ್ವಿಕೆ ಮಾಡದೇ ನಮ್ಮ ಇತಿಹಾಸ ಮತ್ತು ಪರಂಪರೆ ಸಾರುವ ದೇಗುಲಗಳ ಪುನರುತ್ಥಾನಕ್ಕೆ ಮಹೋನ್ನತ ಕೊಡುಗೆ ನೀಡಿರುವುದು ಅನೇಕ ಕನ್ನಡಿಗರಿಗೇ ಗೊತ್ತಿಲ್ಲದಾಗಿದೆ. ಇಂತಹ ಸಂಗತಿಗಳ ಮೇಲೆ ದಿವ್ಯ ಬೆಳಕನ್ನು ಚೆಲ್ಲುವ ನಿಟ್ಟಿನಲ್ಲಿ ವಿದುಷಿ ಅನುರಾಧಾ ಅವರ ತಂಡ ಕಲಾಭಿವ್ಯಕ್ತಿಗೆ ಕನ್ನಡಿ ಹಿಡಿಯುವ ಸೇವೆಗೆ ಅಣಿಯಾಗಿದೆ.
ಖ್ಯಾತ ವಾಗ್ಗೇಯಕಾರ ಮುತ್ತುಸ್ವಾಮಿ ದೀಕ್ಷಿತರ ಕೃತಿಗಳನ್ನು ಇಲ್ಲಿ ಸಂದರ್ಭಕ್ಕೆ ತಕ್ಕಂತೆ ಸೊಗಸಾಗಿ ಬಳಸಿಕೊಳ್ಳಲಾಗಿದೆ. ಪ್ರಖ್ಯಾತ ವಿದುಷಿ ಪದ್ಮಾ ಸುಬ್ರಹ್ಮಣ್ಯ ನೃತ್ಯ ಸಂಯೋಜನೆ ಇರುವುದು ವಿಶೇಷದಲ್ಲಿ ವಿಶೇಷವಾಗಿದೆ.
ನವದೆಹಲಿಯ ವಿದುಷಿ ರಮಾ ವೈದ್ಯನಾಥನ್-ಭರತನಾಟ್ಯದಲ್ಲಿ ಮಹಾನ್ ಕವಿ ಕಾಳಿದಾಸ ಮತ್ತು ರವೀಂದ್ರ ನಾಥ ಟ್ಯಾಗೋರ್ ಅವರ ಕಾವ್ಯಭಾಗದಲ್ಲಿ ಅಡಗಿರುವ ಮುಖ್ಯ ಭಾಗಗಳನ್ನು ಅನಾವರಣಗೊಳಿಸಲಿದ್ದಾರೆ.
ಬೆಂಗಳೂರಿನ ನಾದಂ ನೃತ್ಯ ಮೇಳದಿಂದ (ನಂದಿನಿ ಮೆಹ್ತಾ- ಮುರಳಿ) ಕಥಕ್ ನೃತ್ಯ ಪ್ರಕಾರದಲ್ಲಿ ಧೀರೋದ್ದಾತೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಜೀವನ ಗಾಥೆಯನ್ನು ನಿರೂಪಿಸಲಿದ್ದಾರೆ.
ಭುವನೇಶ್ವರದ ರಾಹುಲ್ ಆಚಾರ್ಯ ಒಡಿಸ್ಸಿ ನೃತ್ಯ, ಮುಂಬೈನ ಪವಿತ್ರಾ ಭಟ್ ಅವರಿಂದ ವಿಶೇಷ ಭರತನಾಟ್ಯ ಪ್ರಸ್ತುತಿಯಲ್ಲಿ ಭಾರತದ ದೇಗುಲಗಳಲ್ಲಿ ಆಗಮ ಶಾಸ್ತ್ರದ ಸೇವೆ (ಶಿಲ್ಪ- ಪೂಜೆ) ಪರಿಕಲ್ಪನೆ ಸಂಪನ್ನಗೊಳ್ಳಲಿದೆ.
ದೃಷ್ಟಿ ಪುರಸ್ಕಾರ:
ನೃತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ನವದೆಹಲಿಯ ವಿದುಷಿ ರಮಾ ವೈದ್ಯನಾಥನ್ ಅವರಿಗೆ ಇದೇ ಸಂದರ್ಭ ‘ದೃಷ್ಟಿ ಪುರಸ್ಕಾರ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಗಣ್ಯರ ಉಪಸ್ಥಿತಿ:
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸೆಂಚುರಿ ರಿಯಲ್ ಎಸ್ಟೇಟ್ ಸಂಸ್ಥೆ ಅಧ್ಯಕ್ಷ ಮತ್ತು ಉದ್ಯಮಿ ಡಾ. ದಯಾನಂದ ಪೈ, ಬೆಂಗಳೂರಿನ ಪ್ರಖ್ಯಾತ ನೃತ್ಯ ಸಂಸ್ಥೆ ‘ನೂಪುರ’ ದ ಹಿರಿಯ ಭರತನಾಟ್ಯ ಗುರು ಲಲಿತಾ ಶ್ರೀನಿವಾಸನ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಉಚಿತ ಪ್ರವೇಶವಿದ್ದು, ಕಲಾಸಕ್ತರು ಭಾಗವಹಿಸಲು ಕೋರಲಾಗಿದೆ.
ದೃಷ್ಟಿ ಬೆಳೆದುಬಂದ ಹಾದಿ:
ಹೆಸರಾಂತ ಭರತನಾಟ್ಯ ನೃತ್ಯಗಾರ್ತಿ ಅನುರಾಧಾ ವಿಕ್ರಾಂತ್ ಮತ್ತು ಅವರ ಪತಿ ಟಿ.ಎಂ.ವಿಕ್ರಾಂತ್ ಅವರ ಕನಸಿನ ಕೂಸಾಗಿ ಜನ್ಮ ತಾಳಿದ ದೃಷ್ಟಿ ಸಂಸ್ಥೆ ಬೆಂಗಳೂರಿನ ಸಹಕಾರ ನಗರದಲ್ಲಿ ನೆಲೆಗೊಂಡಿದ್ದು, ಈವರೆಗೆ ನೂರಾರು ಭರತನಾಟ್ಯ ಕಲಾವಿದೆಯರನ್ನು ನಾಡಿಗೆ ನೀಡಿದ ಖ್ಯಾತಿಗೆ ಪಾತ್ರವಾಗಿದೆ. ಪ್ರತಿ ವರ್ಷವೂ ನಾಡಿನ, ಹೊರ ನಾಡಿನ ಅಪ್ರತಿಮ ಕಲಾವಿದರನ್ನು ಆಹ್ವಾನಿಸಿ, ಅವರ ಕಲಾವಂತಿಕೆ ಪ್ರದರ್ಶನದ ರಸದೌತಣ ಉಣ ಬಡಿಸಲು ‘ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ’ ಆಯೋಜಿಸುತ್ತಿದೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳ ಸ್ಮರಣಾರ್ಥ (ಆಜಾದಿ ಕಾ ಅಮೃತ ಮಹೋತ್ಸವ್) ಸಂದರ್ಭದಲ್ಲಿ ಈ ಬಾರಿಯ ನೃತ್ಯ
ಉತ್ಸವವು ಭಾರತದ ಕಾಲಾತೀತ ಕಲೆಯ ಪುಷ್ಟೀಕರಣ, ಪುನರುಜ್ಜೀವನ ಮತ್ತು ಬಲವರ್ಧನೆಗೆ ಕೊಡುಗೆಯಾಗಲಿದೆ ಎನ್ನುತ್ತಾರೆ ಸಂಸ್ಥೆ ನಿರ್ದೇಶಕಿ, ವಿದುಷಿ ಅನುರಾಧಾ ವಿಕ್ರಾಂತ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post