ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಪ ಮುಕ್ತನಾದರೂ ಸಚಿವ ಸ್ಥಾನ ನೀಡದಿರುವುದರ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಈಶ್ವರಪ್ಪ, K S Eshwarappa ಮತ್ತೆ ಸಚಿವ ಸ್ಥಾನ ನೀಡುವ ವಿಚಾರವಾಗಿ ತಾವು ಯಾರನ್ನೂ ಭೇಟಿಯಾಗಿಲ್ಲ. ತೀರ್ಮಾನ ಮಾಡಬೇಕಾದವರು ಮುಖಂಡರು ಅವರನ್ನೇ ಕೇಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಮುಕ್ತನಾಗಿದ್ದರೂ ಇನ್ನೂ ಏಕೆ ತಮಗೆ ಸಚಿವ ಸ್ಥಾನ ನೀಡಿಲ್ಲವೆಂದು ಗೊತ್ತಿಲ್ಲ. ಅದು ತಮ್ಮ ಕೈಯಲ್ಲಿಲ್ಲ. ಈ ಬಗ್ಗೆ ನಮ್ಮ ನಾಯಕರಾದ ಯಡಿಯೂರಪ್ಪ, ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು, ಕೇಂದ್ರದ ನಾಯಕರು ತೀರ್ಮಾನ ಮಾಡಬೇಕಿದೆ ಎಂದರು.
ವೈಭವೀಕರಿಸಿ ಯಾವುದೇ ಹುಟ್ಟುಹಬ್ಬ ಆಚರಿಸಬಾರದು ಎಂದು ಬಿಜೆಪಿ ಮುಖಂಡರು ಹೇಳಿರುವುದು ಬೇರೆ ಪಕ್ಷಗಳಿಗೆ ಮಾದರಿಯಾಗಿದೆ. ೭೫ ಕೋಟಿ ರೂ. ಖರ್ಚು ಮಾಡಿ ಸಿದ್ಧರಾಮಯ್ಯ ಅವರು ೭೫ನೇ ಹುಟ್ಟುಹಬ ಆಚರಿಸಿಕೊಂಡು ವ್ಯಕ್ತಿ ವೈಭವೀಕರಣ ಮಾಡಿದ್ದರು. ಆದರೆ, ವಿಶ್ವನಾಯಕ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದ ಅಂಗವಾಗಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಅಂತೆಯೇ ಪ್ರತೀ ಬಡವರಿಗೂ ಅನುಕೂಲವಾಗಲೆಂದು ಜನ ಸೇವಾ ಚಟುವಟಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಬಡವರ ಪರವಾಗಿದೆ ಎಂದು ತೋರಿಸಿಕೊಳ್ಳಲು ಇಂತಹ ಸೇವಾ ಕಾರ್ಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
Also read: ಗಮನಿಸಿ! ಸೆ.20ರಂದು ಶಿವಮೊಗ್ಗ ನಗರದ ಹಲವೆಡೆ ವಿದ್ಯುತ್ ಇರುವುದಿಲ್ಲ
ತಮ್ಮ ಒಬ್ಬರ ನಾಯಕತ್ವದಿಂದಲೇ ಹಿಂದುಳಿದ ವರ್ಗದ ಮತ ಬರುತ್ತದೆ ಎಂಬುದು ಸತ್ಯಕ್ಕೆ ದೂರವಾದದ್ದು. ದಲಿತರು, ಹಿಂದುಳಿದ ವರ್ಗದವರು, ಮುಂದುವರೆದವರು ಎಲ್ಲರ ಬೆಂಬಲದಿಂದ ಬಿಜೆಪಿ ಹೆಚ್ಚಿನ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸ್ಥಾನ ಗಳಿಸಲು ನಮ್ಮ ಮುಖಂಡರು ಚಿಂತನೆ ನಡೆಸಿದ್ದಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post