ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯುವ ಸಮೂಹದಲ್ಲಿನ ನಾವಿನ್ಯಯುತ ಚಿಂತನೆಗಳಿಂದ ಭವಿಷ್ಯದಲ್ಲಿ ಭಾರತ ವಿಶ್ವಗುರುವಾಗಿ ಹೊರಹೊಮ್ಮಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಕುಲಪತಿಗಳಾದ ಪ್ರೊ.ಬಿ.ಪಿ ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಶಿಕ್ಷಕರಿಗಾಗಿ ಏರ್ಪಡಿಸಿದ್ದ ನೂತನ ಎನ್ಇಪಿ ಮೂಲಕ ಶಿಕ್ಷಕರ ಶೈಕ್ಷಣಿಕ ವಿಧಾನಗಳ ಪರಿಷ್ಕರಣೆ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ದೇಶದ ಶಿಕ್ಷಣ ಮತ್ತು ಅರ್ಥವ್ಯವಸ್ಥೆಗೆ ಅವಿನಾಭಾವ ಸಂಬಂಧವಿದೆ. ಹಾಗಾಗಿಯೇ ಯುವ ಸಮೂಹದಲ್ಲಿನ ಉತ್ತಮ ಶಿಕ್ಷಣ ಮತ್ತು ನಾವಿನ್ಯ ಚಿಂತನೆಗಳಿಂದ ದೇಶದ ಆರ್ಥಿಕತೆಗೆ ಅತ್ಯದ್ಬುತ ಬಲ ತುಂಬಲು ಸಾಧ್ಯ. ಯುವಕರು ಕೇವಲ ಪ್ರಾದೇಶಿಕ ಸೀಮಿತತೆಗೆ ಒಳಗಾಗದೇ ಲಭ್ಯವಿರುವ ಎಲ್ಲಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಮೂಲಕ ಉತ್ತಮ ತಾಂತ್ರಿಕ ಮತ್ತು ವ್ಯಕ್ತಿತ್ವ ಕೌಶಲ್ಯಗಳೊಂದಿಗೆ ರೂಪಗೊಳ್ಳಿ ಎಂದು ಕರೆ ನೀಡಿದರು.
ಸರ್ಕಾರ ನೂತನವಾಗಿ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸುತ್ತಿರುವುದು ಉತ್ತಮ ನಿರ್ಧಾರವಾಗಿದ್ದು, ಪ್ರಾದೇಶಿಕವಾಗಿ ಪರಿಣಾಮಕಾರಿ ಶಿಕ್ಷಣ ನೀಡುವಲ್ಲಿ ಸಹಕಾರಿಯಾಗಲಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಕೆಲವೊಂದು ಗೊಂದಲಗಳು ಸಹಜವಾಗಿದ್ದು, ಅನೇಕ ಸುಧಾರಣಾ ಕ್ರಮಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಿದರು.
Also read: ಭಾರತದ ಅನನ್ಯ ನೃತ್ಯ ಪ್ರಾಕಾರಗಳನ್ನು ಕಲಾರಸಿಕರಿಗೆ ಪರಿಚಯಿಸುವುದೇ ನಮ್ಮ ಗುರಿ: ಸಹನಾ ಚೇತನ್
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ ತಾಂತ್ರಿಕತೆಯ ಮೂಲಕ ಅನೇಕ ಹೊಸ ಬದಲಾವಣೆಗಳನ್ನು ತರಲಾಗುತ್ತಿದೆ. ಅದರಲ್ಲಿ ಶಿಕ್ಷಣ ಕ್ಷೇತ್ರವು ಹೊರತಾಗಿಲ್ಲ. ಕಂಪನಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ತಯಾರಿ ಮಾಡಬೇಕಾಗಿದ್ದು, ಬೋಧನಾ ವಿಧಾನಗಳಲ್ಲಿ ಡಿಸೈನ್ ಥಿಂಕಿಂಗ್ ನಂತಹ ಕ್ರಮಗಳನ್ನು ಅನುಷ್ಟಾನಗೊಳಿಸುವ ಅವಶ್ಯಕತೆಯಿದೆ. ಇದರಿಂದ ಹೊಸತನದ ಬುದ್ದಿಮತ್ತೆಯುಳ್ಳ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಒಡಮೂಡಲು ಅನುವು ಮಾಡಿಕೊಡಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ವಿಶ್ವವಿದ್ಯಾಲಯ ಡೀನ್ ಪ್ರೊ.ಜಗನ್ನಾಥ ದಾಂಗೆ, ಡಾ.ಸಿ.ಗೀತಾ, ಪ್ರಾಂಶುಪಾಲರಾದ ಡಾ. ಎನ್.ಕೆ.ಚಿದಾನಂದ, ಕಾರ್ಯಕ್ರಮ ಸಂಯೋಜಕರಾದ ಡಾ. ಸಿ.ಇ.ಲಾವಣ್ಯ, ಡಾ.ಎನ್.ಡಿ.ಮಂಜು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post