ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಂದು ವಿಶ್ವವನ್ನೇ ಕಾಡುತ್ತಿರುವ ಹವಾಮಾನ ವೈಪರೀತ್ಯವನ್ನು ತಡೆಯುವ ಪ್ರಯತ್ನದ ಭಾಗವಾಗಿ ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಗಿಡ ನೆಟ್ಟು ಪೋಷಿಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಲತಾ ನಾಗೇಂದ್ರ ಕರೆ ನೀಡಿದ್ದಾರೆ.
ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ Subbaiah Medical College ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯ ಇಂದು ವಿಶ್ವವನ್ನೇ ಕಾಡುತ್ತಿದೆ. ಪರಿಸರ ಅಸಮತೋಲನದ ಪರಿಣಾಮ ನೇರವಾಗಿ ನಮ್ಮ ಮೇಲೆ ಬೀರುತ್ತದೆ. ಇದನ್ನು ಸರಿಪಡಿಸುವ ತುರ್ತು ಅಗತ್ಯವಿದೆ. ಹೀಗಾಗಿ, ಪರಿಸರದ ಮೇಲಿನ ಪ್ರೀತಿ ನಿತ್ಯನಿರಂತರವಾಗಿರಿಸುವ ಮೂಲಕ ಹೆಚ್ಚು ಹೆಚ್ಚು ಗಿಡ ನೆಟ್ಟು, ಬೆಳೆಸಬೇಕು. ಇದು ಪ್ರತಿ ನಾಗರಿಕರ ಕರ್ತವ್ಯವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
Also read: ಭದ್ರಾವತಿ: ಕೂಡ್ಲಿಗೆರೆ ಗ್ರಾಪಂ ಉಪಾಧ್ಯಕ್ಷರಾಗಿ ನಾಗರಾಜ್ ಗೌಡ್ರು ಅವಿರೋಧವಾಗಿ ಆಯ್ಕೆ
ದಂತ ವೈದ್ಯಕೀಯ ಕಾಲೇಜಿನ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವಿನಯಾ ಶ್ರೀನಿವಾಸ್ ಅವರು ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಹಣ, ಆಸ್ತಿ ಸಂಪತ್ತು ಸಂಪಾದನೆಯ ಹಿಂದೆ ಬಿದ್ದು ನೆಮ್ಮದಿಯನ್ನೇ ಹಾಳು ಮಾಡಿಕೊಳ್ಳುತ್ತಿದ್ದೇವೆ. ಆದರೆ, ನಮ್ಮ ಸುತ್ತಲಿನ ಪರಿಸರವನ್ನು ಬೆಳೆಸುವುದು, ಕಾಪಾಡುವುದೂ ಸಹ ನಮ್ಮ ಸಂಪತ್ತು ಎನ್ನುವುದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಿಷಾದಿಸಿದರು.
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನವನ್ನು ಕೊಂಡೊಯ್ಯುವ ಸಂಸ್ಕೃತಿ ಮಾನವೀಯ ಮೌಲ್ಯಗಳನ್ನು ವಿನಾಶಕ್ಕೆ ತಳ್ಳುವ ಮೂಲಕ ಎಲ್ಲಾ ಖಾಯಿಲೆಗಳನ್ನು ಬರಮಾಡಿಕೊಳ್ಳುತ್ತಿದ್ದೇವೆ. ಮುಂದಿನ ಪೀಳಿಗೆಗೆ ಪರಿಸರದ ಮಹತ್ವವನ್ನು ತಿಳಿಸದೇ ಹೋದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಲೇಜಿನ ಡೀನ್ ಡಾ.ಕೃಷ್ಣಪ್ರಸಾದ್ ಮಾತನಾಡಿ, ಮಕ್ಕಳು ಚಿಕ್ಕವಯಸ್ಸಿನಿಂದಲೇ ಹಸಿರಿನ ಬಗ್ಗೆ ಒಲವು ಮೂಡಿಸಿಕೊಳ್ಳಬೇಕು. ನೆಟ್ಟ ಗಿಡಗಳನ್ನು ರಕ್ಷಣೆ ಮಾಡಬೇಕು. ದೇಶವು ಕೊರೋನಾ ಮಹಾಮಾರಿಯಂತಹ ಕಾಯಿಲೆಯಿಂದ ನಲುಗಿ ಹೋಗಿದೆ. ಸಂಕಷ್ಟದ ದಿನಗಳನ್ನು ಎದುರಿಸಿದೆ. ಮುಂದಿನ ದಿನಗಳಲ್ಲಿ ಎಲ್ಲರೂ ಆರೊಗ್ಯವಂತರಾಗಿ, ಹಸನಾಗಿ ಬಾಳಬೇಕು. ವರ್ಷವಿಡೀ ವನಮಹೋತ್ಸವ ಆಚರಣೆ ಮಾಡಿದರೂ ಸಾಲದು. ಬರೀ ಗಿಡ ನೆಡುವುದಷ್ಟೆ ಜವಾಬ್ದಾರಿಯಲ್ಲ, ನೆಟ್ಟ ಗಿಡಗಳನ್ನು ಜಾಗೃತಿಯಿಂದ ರಕ್ಷಿಸುವುದೇ ನಿಜವಾದ ಪರಿಸರ ಪೂರಕ ಚಟುವಟಿಕೆಗಳು ಎಂಬುದನ್ನು ನೆನಪಿನಲ್ಲಿಡಬೇಕು ಎಂದರು.
ಕಾಲೇಜಿನ ವೈದ್ಯರು, ವೈದ್ಯಕೀಯೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post