Read - 2 minutes
ಮಡಿಕೇರಿ, ಅ.14: ಅರಣ್ಯಗಳಲ್ಲಿ ನೆಲೆಸಿರುವ ಪ್ರತಿ ಬುಡಕಟ್ಟು ಕುಟುಂಬಕ್ಕೆ ತಲಾ 5 ಏಕರೆ ಜಾಗವನ್ನು ನೀಡುವುದರೊಂದಿಗೆ, 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಜಿಲ್ಲೆಯಾದ್ಯಂತ ಜಾರಿಗೊಳಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾಧ್ಯಕ್ಷ ಜೆ.ಪಿ. ರಾಜು ಒತ್ತಾಯಿಸಿದರು.
ತಲೆ ತಲಾಂತರಗಳಿಂದ ಅರಣ್ಯ ಪ್ರದೇಶಗಳಲ್ಲಿ ನೆಲೆಯೂರಿರುವ ಆದಿವಾಸಿ ಸಮುದಾಯಗಳಿಗೆ ಅನುಕೂಲ ಕಲ್ಪಿಸಲು 2006 ರಲ್ಲಿ ಜಾರಿಗೆ ಬಂದಿರುವ ಆದಿವಾಸಿ ಅರಣ್ಯ ಹಕ್ಕು ಮಸೂದೆಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು ಮತ್ತು ಹಾಡಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಬುಡಕಟ್ಟು ಕೃಷಿಕರ ಸಂಘ ನಗರದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಆದಿವಾಸಿಗಳನ್ನು ಕಡೆಗಣಿಸಲಾಗುತ್ತಿದ್ದು, ನ್ಯಾಯಯುತವಾಗಿ ಸಿಗಬೇಕಾದ ಯಾವುದೇ ಹಕ್ಕುಗಳು ಸಿಗುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. 2006ರಲ್ಲೇ ಅರಣ್ಯ ಹಕ್ಕು ಮಸೂದೆ ಜಾರಿಯಾಗಿದ್ದರೂ ಜಿಲ್ಲೆಯಲ್ಲಿ ಕಾಯ್ದೆ ಅನುಷ್ಟಾನಗೊಳ್ಳುತ್ತಿಲ್ಲ. ಹಾಡಿಯಲ್ಲಿರುವ ಗಿರಿಜನರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಭೂಮಿಯ ಹಕ್ಕು ಪತ್ರ ನೀಡದೆ ಸತಾಯಿಸಲಾಗುತ್ತಿದೆ. ಕುಡಿಯುವ ನೀರು, ಪೌಷ್ಟಿಕ ಆಹಾರ, ಆರೋಗ್ಯ ಸಂಬಂಧಿತ ಸೌಲಭ್ಯಗಳು, ಶಿಕ್ಷಣ, ಉದ್ಯೋಗ ಇತ್ಯಾದಿ ಸೌಲಭ್ಯಗಳಿಂದಲೂ ವಂಚಿತರಾಗಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯ ಪ್ರಕಾರ ತಲಾ 10 ಏಕರೆ ಭೂಮಿಯನ್ನು ಮಂಜೂರು ಮಾಡಬೇಕೆನ್ನುವ ನಿಯಮವಿದ್ದರೂ ನಾಗರಹೊಳೆ ವ್ಯಾಪ್ತಿಯಲ್ಲಿ ಕೇವಲ ಮನೆ ನಿರ್ಮಿಸಲು ಅಗತ್ಯವಿರುವಷ್ಟು ಜಾಗವನ್ನು ಮಾತ್ರ ಮಂಜೂರು ಮಾಡಲಾಗುತ್ತಿದೆ. ಕನಿಷ್ಠ 5 ಏಕರೆ ಭೂಮಿಯನ್ನಾದರೂ ಮಂಜೂರು ಮಾಡಬೇಕು ಮತ್ತು ಅರಣ್ಯ ಹಕ್ಕು ಕಾಯ್ದೆಯ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದು ಜೆ.ಪಿ. ರಾಜು ಒತ್ತಾಯಿಸಿದರು.
ಡಿಸೆಂಬರ್ ಅಂತ್ಯದೊಳಗೆ ಕಾಯ್ದೆ ಅನುಷ್ಟಾನಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆಯಂತೆ ವೈಯಕ್ತಿಕ ಹಾಗೂ ಸಮುದಾಯಯದ ಸಂಪನ್ಮೂಲ ಹಕ್ಕುಗಳನ್ನು ಶೀಘ್ರ ನೀಡಬೇಕು, ಆದಿವಾಸಿಗಳು ವಾಸಿಸುವ ಪ್ರದೇಶಗಳನ್ನು ಅನುಸೂಚಿತ ಬುಡಕಟ್ಟು ಪ್ರದೇಶವೆಂದು ಘೋಷಿಸಲು ರಾಜ್ಯದ ಸಚಿವ ಸಂಪುಟ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ವೈಯಕ್ತಿಕ ಹಕ್ಕಿನ ಕ್ಲೇಮುಗಳ ವಿಚಾರದಲ್ಲಿ ಆದಿವಾಸಿಗಳಿಗೆ ಅನ್ಯಾಯವಾಗುತ್ತಿದ್ದು, ಕಾನೂನು ಮತ್ತು ನ್ಯಾಯಬದ್ಧವಾಗಿ ಹಕ್ಕುಗಳನ್ನು ಮಾನ್ಯ ಮಾಡಬೇಕು ಎಂದರು.
ಆದಿವಾಸಿ ಹಾಗೂ ಪಾರಂಪರಿಕ ಅರಣ್ಯವಾಸಿಗಳು ನೆಲೆಸಿರುವ ಪಶ್ಚಿಮ ಘಟ್ಟದಲ್ಲಿರುವ ಪ್ರದೇಶಗಳನ್ನು ಸ್ಥಳೀಯರ ಒಪ್ಪಿಗೆ ಪಡೆಯದೆ ಹಾಗೂ ಗ್ರಾಮ ಅರಣ್ಯ ಹಕ್ಕು ಸಮಿತಿ ಸಭೆಯ ನಿರ್ಣಯವಿಲ್ಲದೆ ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಿರುವುದು ಅನುಸೂಚಿತ ಬುಡಕಟ್ಟು ಕಾಯ್ದೆಯ ಉಲ್ಲಂಘನೆಯಾಗುವುದರಿಂದ ತಕ್ಷಣ ಈ ಘೋಷಣೆಯನ್ನು ಹಿಂದಕ್ಕೆ ಪಡೆಯಬೇಕು, ಅನುಸೂಚಿತ ಬುಡಕಟ್ಟು ಕಾಯ್ದೆ 2006ರ ಅನ್ವಯ ಸಮುದಾಯ ಹಾಗೂ ವೈಯಕ್ತಿಕ ಹಕ್ಕನ್ನು ಮಾನ್ಯ ಮಾಡುವುದಕ್ಕೆ ಮುಂಚಿತವಾಗಿ ಘೋಷಿಸಿರುವಂತಹ ಎಲ್ಲಾ ಹುಲಿ ಸಂರಕ್ಷಣೆ ಸೂಕ್ಷ್ಮ ಪ್ರದೇಶಗಳು ಹಾಗು ಆನೆ ಕಾರಿಡಾರ್ಗಳನ್ನು ತಕ್ಷಣ ರದ್ದುಪಡಿಸಬೇಕು, ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಫಾರಂ ನಂ.50 ಮತ್ತು 53 ಅರ್ಜಿಗಳನ್ನು ತಕ್ಷಣ ಮಂಜೂರು ಮಾಡಿ ಭೂ ಹೀನ ಬಡವರಿಗೆ ಭೂಮಿಯ ಹಕ್ಕು ಪತ್ರ ವಿತರಿಸಬೇಕು, ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅರ್ಜಿ ಸಲ್ಲಿಸದ ದಲಿತ, ಆದಿವಾಸಿ, ಬಡವರು ಮತ್ತು ಸಣ್ಣ ರೈತರಿಗೆ ಪುನಃ ಅರ್ಜಿ ಸಲ್ಲಿಸಲು ಸರ್ಕಾರ ಆದೇಶ ಹೊರಡಿಸಬೇಕು, ಆದಿವಾಸಿ, ಜೇನು ಕುರುಬ, ಎರವ, ಕೊರಗ, ಸೋಲಿಗರಂತೆ ಜಿಲ್ಲೆಯಲ್ಲಿರುವ ಕುಡಿಯ ಜನಾಂಗದವರು ಕೂಡ ಕೊಡಗಿನ ಮೂಲ ನಿವಾಸಿಗಳಾಗಿದ್ದು, ಇವರನ್ನು ಗಿರಿಜನರ ಪೌಷ್ಟಿಕ ಆಹಾರ ಯೋಜನೆಗೆ ಸೇರ್ಪಡೆಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೊಡಗಿನಲ್ಲಿ ಈ ಹಿಂದೆ ಮೂರು ವಿಧಾನ ಸಭಾ ಕ್ಷೇತ್ರಗಳಿದ್ದು, ಇದರಲ್ಲಿ ಒಂದು ಆದಿವಾಸಿ ಮೀಸಲು ಕ್ಷೇತ್ರವಾಗಿತ್ತು. ಆದರೆ, ಮೂರು ಕ್ಷೇತ್ರಗಳನ್ನು ಎರಡಕ್ಕೆ ಸೀಮಿತಗೊಳಿಸಲಾಗಿದ್ದು, ಇದನ್ನು ವಿರೋಧಿಸುವುದಾಗಿ ತಿಳಿಸಿದ ಪ್ರಮುಖರು ಹಿಂದಿನಂತೆ ಮೂರು ಕ್ಷೇತ್ರಗಳನ್ನು ಅಸ್ತಿತ್ವಕ್ಕೆ ತಂದು ಒಂದು ಕ್ಷೇತ್ರವನ್ನು ಆದಿವಾಸಿಗಳಿಗೆ ಮೀಸಲಿಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ನೀಡಿದ ಪ್ರತಿಭಟನಾಕಾರರು ಡಿಸೆಂಬರ್ ತಿಂಗಳಿನೊಳಗೆ ಬೇಡಿಕೆಗಳು ಈಡೇರದಿದ್ದಲ್ಲಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲೆಯ ಮೂರೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ವಿವಿಧ ಹಾಡಿಗಳ ನಿವಾಸಿಗಳು ನಗರದ ಫೀ.ಮಾ.ಕೆ.ಎಂ. ಕಾರ್ಯಪ್ಪ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಡಳಿತ ಭವನದ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು ಆಡಳಿತ ವ್ಯವಸ್ಥೆಯ ವಿಳಂಬ ಧೋರಣೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬುಡಕಟ್ಟು ಕೃಷಿಕರ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಕುಡಿಯರ ಮುತ್ತಪ್ಪ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಆರ್.ಕೆ. ಚಂದ್ರು, ವೀರಾಜಪೇಟೆ ತಾಲ್ಲೂಕು ಅಧ್ಯಕ್ಷ ಜೆ.ಕೆ. ರಾಮು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ವಿವಿಧ ಹಾಡಿಗಳ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
—>
News by: ಇಂದ್ರೇಶ್, ಮಡಿಕೇರಿ
Discussion about this post