Read - 2 minutes
ಬೆಂಗಳೂರು, ಸೆ.7: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಾದ ಸೃಷ್ಠಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಕಾಶವಾಣಿಯಲ್ಲಿ ಮಾತನಾಡಿದ್ದು, ರಾಜ್ಯದ ಜನತೆಗೆ ಸಂದೇಶ ನೀಡಿದ್ದಾರೆ. ಅದು ಮುಖ್ಯಾಂಶಗಳು ಇಂತಿವೆ:
* ಕಾವೇರಿಯ ತವರೂರು ಕರ್ನಾಟಕ. ತಲಕಾವೇರಿಯಲ್ಲಿ ಹುಟ್ಟಿ ಮುಂದಕ್ಕೆ ಹರಿಯುವ ಕಾವೇರಿ ಜತೆ ನಮಗೆ ಕರುಳುಬಳ್ಳಿಯ ಸಂಬಂಧ ಇದೆ. ನಮ್ಮ ರೈತರ ಪಾಲಿನ ಜೀವನದಿ ಇದು. ನದಿ ಉಕ್ಕಿ ಹರಿದಾಗ ಸಂಭ್ರಮಿಸುವ ನಮ್ಮ ರೈತರು ಸಮುದಾಯ ಬತ್ತಿಹೋದಾಗ ಸಂಕಟಪಡುತ್ತಾರೆ.
* ಮಳೆಯ ಜೂಜಾಟಕ್ಕೆ ಸಿಕ್ಕಿ ನಮ್ಮ ರೈತಬಂಧುಗಳು ಆಗಾಗ ಇಂತಹ ಸಂಕಷ್ಟಕ್ಕೆ ಸಿಲುಕುತ್ತಲೇ ಬಂದಿದ್ದಾರೆ. ಈ ವರ್ಷ ಅಂತಹದ್ದೊಂದು ಭೀಕರವಾದ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವಿದ್ದೇವೆ.
* ಈ ವರ್ಷದ ಜೂನ್ ತಿಂಗಳಿನಿಂದ ಆಗಸ್ಟ್ ಅಂತ್ಯದ ವರೆಗಿನ ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶ ಮಳೆಯ ತೀವ್ರ ಅಭಾವಕ್ಕೆ ತುತ್ತಾಗಿದೆ.
* ನಮ್ಮ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹಾರಂಗಿ, ಹೇಮವಾತಿ ಮತ್ತು ಕಬಿನಿ ಆಗಸ್ಟ್ ಅಂತ್ಯದ ವರೆಗೆ ಸಾಮಾನ್ಯ ವರ್ಷದಲ್ಲಿ 215.70 ಟಿಎಂಸಿ ನೀರು ಹರಿದುಬರಬೇಕಾಗಿತ್ತು. ಆದರೆ ಮಳೆಯ ಅಭಾವದಿಂದಾಗಿ ಈ ವರ್ಷ ಹರಿದು ಬಂದಿರುವ ನೀರು ಕೇವಲ 114.66 ಟಿಎಂಸಿ ಮಾತ್ರ.
* ಕೃಷಿ ಚಟುವಟಿಕೆಗಾಗಿ 47.71 ಟಿಎಂಸಿ, ಕುಡಿಯುವ ನೀರು ಪೂರೈಕೆಗಾಗಿ 28.08 ಟಿಎಂಸಿ ಮತ್ತು ಕೆರೆ ತುಂಬಿಸುವುದಕ್ಕಾಗಿ 11.58 ಹೀಗೆ ಒಟ್ಟು 87.37 ಟಿಎಂಸಿ ನಮಗೆ ಬೇಕಾಗಿದೆ. ನಮ್ಮ ನಾಲ್ಕು ಜಲಾಶಯಗಳಲ್ಲಿ ಲಭ್ಯ ಇರುವ ನೀರಿನ ಸಂಗ್ರಹ 58.78 ಟಿಎಂಸಿ ಮಾತ್ರ.
* ಇಂತಹ ಪರಿಸ್ಥಿತಿಯಲ್ಲಿ ಕಾವೇರಿ ನೀರು ಬಿಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಂದಿನ ಹತ್ತು ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 15000 ಕ್ಯುಸೆಕ್ಸ್ ನೀರು ಹರಿಸುವಂತೆ ಆದೇಶ ನೀಡಿದೆ..
* ನಮಗೆ ಕುಡಿಯುವ ನೀರಿಗೂ ತತ್ವಾರ ಇರುವಂತಹ ಸ್ಥಿತಿಯಲ್ಲಿ ತಮಿಳುನಾಡಿನ ಸಾಂಬಾ ಬೆಳೆಗೆ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿರುವುದು ನಮಗೆ ಆಘಾತವನ್ನುಂಟುಮಾಡಿದೆ.
* ಈ ರೀತಿಯ ಇಕ್ಕಟ್ಟಿನ ಪರಿಸ್ಥಿತಿಯನ್ನು ಕರ್ನಾಟಕ ಎದುರಿಸಿರುವುದು ಇದೇ ಮೊದಲ ಬಾರಿಯೇನಲ್ಲ. 2012-13ರ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ಇದೇ ರೀತಿಯ ಪರಿಸ್ಥಿತಿ ಉದ್ಭವವಾಗಿತ್ತು.
* ಆಗಲೂ ತಮಿಳುನಾಡಿನ ಮೊರೆಯನ್ನು ಆಲಿಸಿದ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ ಹನ್ನೆರಡರಿಂದ ಸೆಪ್ಟೆಂಬರ್ 2ರ ವರೆಗೆ 9 ದಿನಗಳ ಕಾಲ ಪ್ರತಿದಿನ 10,000 ಕ್ಯುಸೆಕ್ಸ್ ನಂತೆ ಕಾವೇರಿ ನೀರನ್ನು ಆ ರಾಜ್ಯಕ್ಕೆ ಹರಿಸುವಂತೆ ಆದೇಶ ನೀಡಿತ್ತು. ಆಗ ಆಡಳಿತ ನಡೆಸುತ್ತಿದ್ದ ಸರ್ಕಾರ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಅಷ್ಟು ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಸಿತ್ತು ಎನ್ನುವುದನ್ನು ವಿನಮ್ರತೆಯಿಂದ ವಿರೋಧಪಕ್ಷಗಳ ನಾಯಕರಿಗೆ ನೆನಪಿಸಬಯಸುತ್ತೇನೆ.
* ಪ್ರಜಾಸತ್ತಾತ್ಮಕ ವ್ಯವಸ್ಥೆಯ ಭಾಗವಾಗಿರುವ ನಾವು ನ್ಯಾಯಾಲಯದ ಆದೇಶಕ್ಕೆ ತಲೆಬಾಗಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇದ್ದೇವೆ. ಆದೇಶವನ್ನು ಪಾಲಿಸದೆ ಇದ್ದರೆ ನ್ಯಾಯಾಂಗದ ನಿಂದನೆಯ ಆರೋಪವನ್ನು ಎದುರಿಸಬೇಕಾಗುತ್ತದೆ. ಅಂತಹ ದುಸ್ಸಾಹಸಕ್ಕೆ ಇಳಿಯುವುದು ಜಾಣತನದ ನಡೆಯೂ ಅಲ್ಲ.
* ಈ ಹಿನ್ನೆಲೆಯಲ್ಲಿ ಸಂಭವನೀಯ ಪರಿಸ್ಥಿತಿಯ ಸಾಧಕ-ಬಾಧಕಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ ಆದೇಶವನ್ನು ಭಾರವಾದ ಮನಸ್ಸಿನಿಂದ ಪಾಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಇದರಿಂದಾಗಿ ಕಾವೇರಿ ಕಣಿವೆಯ ರೈತರು ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ. ನ್ಯಾಯಾಂಗದ ಹೋರಾಟದಲ್ಲಿ ಯಾವುದೇ ರೀತಿಯ ರಾಜಿಮಾಡಿಕೊಳ್ಳದೆ ರಾಜ್ಯದ ಹಿತಾಸಕ್ತಿಯ ರಕ್ಷಣೆಗಾಗಿ ನಮ್ಮೆಲ್ಲ ಶಕ್ತಿ-ಯುಕ್ತಿಯನ್ನು ಬಳಸಿಕೊಳ್ಳಲಾಗುವುದು.
* ನಾಲ್ಕು ದಿನಗಳೊಳಗೆ ಮೇಲುಸ್ತುವಾರಿ ಸಮಿತಿ ಮುಂದೆ ಹೋಗುವಂತೆ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ನಾವು ತಡಮಾಡದೆ ಮೇಲುಸ್ತುವಾರಿ ಸಮಿತಿ ಮುಂದೆ ಹಾಜರಾಗಿ ರಾಜ್ಯದ ಸಂಕಷ್ಟದ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತೇವೆ. ಇದರ ಜತೆಗೆ ಸುಪ್ರೀಂ ಕೋರ್ಟ್ ಆದೇಶವನ್ನು ಮಾರ್ಪಾಡು ಮಾಡುವಂತೆ ಕೋರಿ ಅರ್ಜಿಯನ್ನು ಕೂಡಾ ಸಲ್ಲಿಸಲಾಗುವುದು.
* ಸುಪ್ರೀಂಕೋರ್ಟ್ ಆದೇಶಕ್ಕೆ ರಾಜ್ಯದಲ್ಲಿ ವ್ಯಕ್ತವಾದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೂಡಾ ಗಮನಿಸಿರಬಹುದು ಇದರ ಜತೆಗೆ ರಾಜ್ಯದ ಜನರು ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತದೆ ಎಂಬ ಭರವಸೆ ನನಗಿದೆ
* ಕಾನೂನು ತಜ್ಞರೂ ಮತ್ತು ಅನುಭವಿಗಳನ್ನೊಳಗೊಂಡಿರುವ ನಮ್ಮ ರಾಜ್ಯದ ವಕೀಲರ ತಂಡ ಸಮರ್ಥವಾಗಿ ನದಿನೀರು ವಿವಾದವನ್ನು ನಿರ್ವಹಿಸುತ್ತಾ ಬಂದಿದೆ. ಮುಂದೆಯೂ ನಮ್ಮ ವಕೀಲರು ನಮ್ಮೆಲ್ಲರ ನಿರೀಕ್ಷೆ ಹುಸಿಯಾಗದ ರೀತಿಯಲ್ಲಿ ಕೆಲಸ ಮಾಡುತ್ತಾರೆಂಬ ನಂಬಿಕೆ ನಮಗಿದೆ. ರಾಜ್ಯದ ಜನತೆ ಕೂಡಾ ಅವರ ಮೇಲೆ ಭರವಸೆ ಇಡಬೇಕೆಂದು ನಾನು ಕೋರಿಕೊಳ್ಳುತ್ತೇನೆ.
* ಕಾವೇರಿ ಕಣಿವೆಯ ಸುಮಾರು 2.9 ಲಕ್ಷ ಎಕರೆ ಭೂಮಿಯಲ್ಲಿ ಬೆಳೆ ಇದೆ. ಇದನ್ನು ರಕ್ಷಿಸಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ. ಈ ಬೆಳೆಪ್ರದೇಶಕ್ಕೆ ಸೆಪ್ಟೆಂಬರ್ ಹತ್ತರಿಂದ ನೀರು ಹರಿಸಬೇಕೆಂದು ಇತ್ತೀಚೆಗೆ ನಡೆದ ನೀರಾವರಿ ಸಲಹಾ ಸಮಿತಿ ನಿರ್ಧರಿಸಿತ್ತು. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಮನಗಂಡು ನಾಳೆಯಿಂದ ಅಂದರೆ ಸೆಪ್ಟೆಂಬರ್ ಎಂಟರಿಂದಲೇ ನೀರು ಹರಿಸಲು ಸರ್ಕಾರ ತೀರ್ಮಾನಿಸಿದೆ.
* ಕಾವೇರಿ ನದಿನೀರು ಹಂಚಿಕೆಯ ವಿಚಾರದಲ್ಲಿ ಕರ್ನಾಟಕ ಅನ್ಯಾಯಕ್ಕೆ ಈಡಾಗುತ್ತಲೇ ಬಂದಿರುವುದಕ್ಕೆ ದೀರ್ಘ ಇತಿಹಾಸ ಇದೆ. ಆದರೆ ಕರ್ನಾಟಕದ ಜನತೆ ಸಹನಶೀಲರು ಮತ್ತು ಶಾಂತಿಪ್ರಿಯರು. ತಮ್ಮ ನೋವನ್ನು ನುಂಗಿಕೊಂಡು ಅತ್ಯಂತ ಸಂಯಮದಿಂದ ಪ್ರತಿಕೂಲದ ಪರಿಸ್ಥಿತಿಯನ್ನು ಎದುರಿಸುತ್ತಾ ಬಂದಿದ್ದಾರೆ. ನ್ಯಾಯಾಂಗದ ಬಗ್ಗೆ ನಂಬಿಕೆ ಹೊಂದಿರುವ ನಾವು ಎಂದೂ ಅದರ ಗೌರವಕ್ಕೆ ಚ್ಯುತಿ ತರುವಂತಹ ಕೆಲಸ ಮಾಡಿಲ್ಲ.
* ಕೃಷಿಯನ್ನೇ ನಂಬಿ ಬದುಕುವ ರೈತರ ಪಾಲಿಗೆ ನೀರು ಎನ್ನುವುದು ಜೀವಕ್ಕೆ ಸಮವಾದುದು. ಇದರಿಂದಾಗಿ ನೀರಿಲ್ಲದೆ ಬಿತ್ತಿದ ಬೆಳೆ ಒಣಗತೊಡಗಿದಾಗ ಸಹಜವಾಗಿಯೇ ಆತನಿಗೆ ನೋವಾಗುತ್ತದೆ. ರೈತರ ಭಾವುಕ ಪ್ರತಿಕ್ರಿಯೆ ಅರ್ಥವಾಗುವಂತಹದ್ದು. ಆದರೆ ಭಾವನೆಗಳಲ್ಲಿ ತೇಲಿಹೋಗಿ ಅನಾಹುತಕ್ಕೆ ದಾರಿಮಾಡಿಕೊಡಬಾರದು.
* ಸಾರ್ವಜನಿಕ ಆಸ್ತಿಗೆ ಹಾನಿಮಾಡುವ ಇಲ್ಲವೇ ಶಾಂತಿ-ಸುವ್ಯವಸ್ಥೆಯನ್ನು ಕದಡುವ ಅತಿರೇಕಕ್ಕೆ ಹೋಗಬಾರದು. ಸಂಯಮದಿಂದ ವರ್ತಿ ಸಿ ರಾಜ್ಯದಲ್ಲಿ ಶಾಂತಿ ಕಾಪಾಡಲು ನೆರವಾಗಬೇಕು. ಸರ್ಕಾರದ ಮೇಲೆ, ನನ್ನ ಮೇಲೆ ಭರವಸೆ ಇಡಿ. ರೈತನ ಮಗನಾದ ನಾನು ರೈತರಿಗೆ ಅನ್ಯಾಯವಾಗಲು ಅವಕಾಶ ಖಂಡಿತ ನೀಡುವುದಿಲ್ಲ.
Discussion about this post