Read - 2 minutes
ಶಿವಮೊಗ್ಗ, ಸೆ.30: ನಗರದ ಖ್ಯಾತ ಮನೋವೈದ್ಯ ಡಾ. ಅಶೋಕ್ ಪೈ ಇಂದು ಮುಂಜಾನೆ ಸ್ಕಾಟ್ಲೆಂಡ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 68 ವರ್ಷವಾಗಿತ್ತು.
ವೈದ್ಯಕೀಯ ಸಮಾವೇಶದ ನಿಮಿತ್ತ ಸ್ಕಾಟ್ಲೆಂಡ್‌ಗೆ ಅವರು 5 ದಿನಗಳ ಹಿಂದೆಯೇ ಪತ್ನಿ ಡಾ. ರಜನಿ ಪೈ ಜೊತೆ ತೆರಳಿದ್ದರು. ನಿನ್ನೆ ಸಮಾವೇಶ ಮುಗಿಸಿ ವಸತಿ ಹೂಡಿದ್ದ ಕೊಠಡಿಗೆ ಬಂದ ನಂತರ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರೊಳಗಾಗಿಯೇ ಅವರು ಸಾವನ್ನಪ್ಪಿದ್ದರು.
ಇಂದು ಮಧ್ಯಾಹ್ನ ಶವದ ಮರಣೋತ್ತರ ಪರೀಕ್ಷೆ ನಡೆದಿದ್ದು, ನಂತರ ಶವವನ್ನು ಭಾರತಕ್ಕೆ ತರಲು ಎಲ್ಲ ಸಿದ್ಧತೆ ನಡೆದಿದೆ. ನಾಳೆ ಸಂಜೆ ಅಥವಾ ನಾಡಿದ್ದು ಶಿವಮೊಗ್ಗಕ್ಕೆ ಮೃತದೇಹ ಬರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಡಾ ಅಶೋಕ್ ಪೈ ಅವರು ನಗರದ ಖ್ಯಾತ ವಕೀಲರಾಗಿದ್ದ ಕಟೀಲು ಅಪ್ಪುರಾವ್ ಪೈ ಅವರ ಪುತ್ರರ‌್ರಾಗಿದ್ದಾರೆ. ತಾಯಿ ವಿನೋದಿನಿ ಪೈ. ೧೯೪೬ರ ಡಿಸೆಂಬರ್ ೩೦ರಂದು ಅಶೋಕ್ ಪೈ ಜನನ. ಆನಂತರ ಮೇರಿ ಇಮ್ಯಾಕ್ಯುಲೇಟ್ ವಿದ್ಯಾಸಂಸ್ಥೆಯಲ್ಲಿ ಪ್ರ್ರಾಥಮಿಕ ಶಿಕ್ಷಣ ಪಡೆದರು. ಡಿವಿಎಸ್ ಮತ್ತು ಸಹ್ಯಾದ್ರಿ ಕಾಲೇಜಿನಲ್ಲಿ ಓದು ಮುಂದುವರೆಸಿ ಪದವಿ ಪಡೆದರು. ಬೆಳಗಾವಿಯ ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ, ನಿಮ್ಹಾನ್ಸ್‌ನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಸ್ನಾತಕೋತ್ತರ ಅಧ್ಯಯನ ಮಾಡಿದ್ದರು. ಬಿಹೇವಿಯರಲ್ ಮೆಡಿಸಿನ್, ಕೌನ್ಸೆಲಿಂಗ್, ಫಿಸಿಯೋಥೆರಪಿ ಬಗ್ಗೆ ಅಮೆರಿಕದ ಡಲ್ಲಾಸ್‌ನಲ್ಲಿ ಅಧ್ಯಯನ ಮಾಡಿದ್ದಾರೆ.
ಇವರ ಪತ್ನಿ ಡಾ. ರಜಿನಿ ಪೈ ಸಹ ಮಾನಸಾ ಆಸ್ಪತ್ರೆಯಲ್ಲಿ ವೈದ್ಯೆ. ಏಕೈಕ ಮಗಳು ಡಾ. ಪ್ರೀತಿ ಪೈ ಇದೇ ಆಸ್ಪತ್ರೆಯಲ್ಲಿ ಫಿಸಿಯಾಸಿಸ್ಟ್ ಆಗಿದ್ದಾರೆ.ಸಹೋದರ ಮುಕುಂದ್ ಪೈ, ಮೊಮ್ಮಕ್ಕಳು ಮತ್ತು ಅಪಾರ ಬಂಧುವರ್ಗ, ಮಿತ್ರರನ್ನು ಅಶೋಕ್ ಪೈ ಅಗಲಿದ್ದಾರೆ.
ಮನೋವೈದ್ಯ ಅಶೋಕ್ ಪೈ ಅವರ ನಿಧನ ಇಡೀ ದೇಶಕ್ಕಾದ ನಷ್ಟ ಎಂದು ಚಿತ್ರನಟ ರಮೇಶ್ ಭಟ್ ಅಭಿಪ್ರಾಯಪಟ್ಟರು.
ಪೈ ಅವರ ನಿಧನದ ಹಿನ್ನೆಲೆಯಲ್ಲಿ ಟೈಮ್ಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಬೆಳ್ಳಂಬೆಳಗ್ಗೆ ಸುದ್ಧಿ ತಿಳಿದು ಆಘಾತವಾಯಿತು. ಅಶೋಕ್ ಪೈ ಓರ್ವ ಉತ್ಸಾಹಿ ವ್ಯಕ್ತಿತ್ವದವರು. ಎಂತಹ ಜಡ ವ್ಯಕ್ತಿತ್ವದಲ್ಲೂ ಚೈತನ್ಯ ಮೂಡಿಸುವ ವ್ಯಕ್ತಿಯಾಗಿದ್ದರು. ವೃತ್ತಿಯಲ್ಲಿ ಮನೋವೈದ್ಯರಾಗಿದ್ದರೂ ತಮ್ಮ ವೃತ್ತಿಯ ಹೊರತಾಗಿ ಸಾಮಾಜಿಕ, ಸಾಂಸ್ಕೃತಿಕ, ಸಿನಿಮಾ, ಕಲೆ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಇವರ ಸಾಧನೆ ಇಡೀ ರಾಜ್ಯಕ್ಕೇ ಸ್ಪೂರ್ತಿದಾಯಕವಾದುದು ಎಂದರು. ತಮ್ಮಲ್ಲಿ ಬರುವ ಮಾನಸಿಕ ಅಸ್ವಸ್ಥರನ್ನು ಗುಣಪಡಿಸಿ, ಆನಂತರ ಅವರಿಗೊಂದು ಬದುಕು ಕಟ್ಟಿಕೊಡುತ್ತಿದ್ದ ಪೈ ಅವರ ಸೇವೆಗೆ ಸರಿಸಾಟಿಯಲ್ಲ ಎಂದರೆ ಅತಿಶಯೋಕ್ತಿಯಲ್ಲ ಎಂದರು.
ಒಮ್ಮೆ ಅವರ ಜೊತೆ ಮಾತನಾಡಿದರೆ ಸಾಕು, ಜೀವನದ ಕೊನೆಯವರೆಗೂ ಎಂತಹವರಲ್ಲೂ ಆತ್ಮವಿಶ್ವಾಸ, ಭರವಸೆ ಮಾಡಿಸುವ ವ್ಯಕ್ತಿತ್ವವನ್ನು ಹೊಂದಿದ್ದ ಪೈ ಅವರ ನಿಧನ ನಿಧನ ರಾಜ್ಯಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ತುಂಬಲಾರದ ನಷ್ಟ ಎಂದು ತೀವ್ರ ದುಃಖ ವ್ಯಕ್ತಪಡಿಸಿದರು.
ಅಶೋಕ್ ಪೈ ಅವರೊಂದಿಗೆ ಮೊನ್ನೆ ಮಾತನಾಡಿದ್ದೆ. ಮನಮಂಥನ ಚಿತ್ರ ಬಿಡುಗಡೆ ಕುರಿತು ಬಹಳ ಸಮಯ ಚರ್ಚೆ ನಡೆಸಿದ್ದೆ. ಆದರೆ, ಇಂದು ಅವರಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಚಿತ್ರ ನಟ ಹಾಗೂ ನಿರ್ದೇಶಕ ಸುರೇಶ್ ಹೆಬ್ಳಿಕರ್ ಅಶೋಕ್ ಪೈ ಅವರನ್ನು ನೆನದರು.
ಟೈಮ್ಸ್ ಕನ್ನಡದೊಂದಿಗೆ ಮಾತನಾಡಿದ ಅವರು, ಪೈ ಅತ್ಯಂತ ಸ್ನೇಹ ಜೀವಿಯಾಗಿದ್ದರು. ವೈದ್ಯರಾಗಿ ಅವರ ಸಾಮಾಜಿಕ ಕಳಕಳಿ ಇಡೀ ದೇಶಕ್ಕೇ ಮಾದರಿಯಾದುದು. ಇಂತಹ ವ್ಯಕ್ತಿಗಳು ಸಮಾಜದಲ್ಲಿ ತೀರಾ ವಿರಳ. ಮಾನಸ ಆಸ್ಪತ್ರೆಯಲ್ಲಿ ಪ್ರತಿದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಯಲ್ಲಿ, ಗುಣಮುಖರಾದ ನಂತರ ಅವರಿಗೊಂದು ಬದುಕು ಕಟ್ಟಿಕೊಡುವ ಕಾರ್ಯ ಮಾಡುತ್ತಿದ್ದ ಪೈ, ಆಶಾ ಕಿರಣದ ಮೂಲಕವೂ ತಮ್ಮ ಸಮಾಜ ಸೇವೆ ಮಾಡುತ್ತಿದ್ದುದು ಮಾದರಿಯಾಗಿದೆ ಎಂದರು.
ಕಾವೇರಿ ವಿಚಾರ ಸರಿಯಾದ ನಂತರ ಅಕ್ಟೋಬರ್ ವೇಳೆಗೆ ಚಿತ್ರ ಬಿಡುಗಡೆ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದೆವು. ಆದರೆ, ಈಗ ಅವರ ಅಗಲಿಕೆ ನಮ್ಮನ್ನು ದುಃಖ ಕಡಲಿನಲ್ಲಿ ತಳ್ಳಿದೆ ಎಂದು ದುಃಖಿಸಿದರು.
Discussion about this post