Read - < 1 minute
ನವದೆಹಲಿ:ಸೆ-25:ಜಮ್ಮು-ಕಾಶ್ಮಿರದ ಉರಿ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಉರಿ ಉಗ್ರರ ದಾಳಿಯನ್ನು ಭಾರತೀಯರು ಎಂದಿಗೂ ಮರೆಯುವುದಿಲ್ಲ, ದಾಳಿಕೋರರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಮತ್ತೊಮ್ಮೆ ಗುಡುಗಿದ್ದಾರೆ.
24 ನೇ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಉರಿ ಸೆಕ್ಟರ್ ಮೇಲಿನ ಉಗ್ರರ ದಾಳಿ, ಪ್ಯಾರಾ ಒಲಂಪಿಯನ್ಸ್ ಸಾಧನೆ, ಸ್ವಚ್ಛ ಭಾರತ ಅಭಿಯಾನ, ನವರಾತ್ರಿ ಹಬ್ಬ ಸೇರಿದಂತೆ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದರು.
ಜಮ್ಮು-ಕಾಶ್ಮೀರದ ಉರಿಯಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ದೇಶ ಬೆಚ್ಚಿಬಿದ್ದಿದೆ. ದಾಳಿಯಲ್ಲಿ ಭಾರತದ 18 ಯೋಧರು ಹುತಾತ್ಮರಾಗಿದ್ದಾರೆ. ಅವರೆಲ್ಲರಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಭಾರತಿಯ ಸೇನೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ದಾಳಿ ಮಾಡಿದ ಉಗ್ರರನ್ನು ನಾವು ಸುಮ್ಮನೆ ಬಿಡುವುದಿಲ್ಲ. ರಾಜಕಾರಣಿಗಳಿಗೆ ಮಾತನಾದಲು, ಪ್ರತಿಕ್ರಿಯೆ ನೀಡಲು ಸಾಕಷ್ಟು ಸಂದರ್ಭಗಳಲ್ಲಿ ಅವಕಾಶಗಳು ಇರುತ್ತವೆ. ಆದರೆ ಭಾರತೀಯ ಸೈನಿಕರು ತಮ್ಮ ಎದುರಾಗಳನ್ನು ಸದೆಬಡಿಯುವಮೂಲಕ ಪ್ರತಿಕ್ರಿಯೆ ನೀಡುತ್ತಾರೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಭದ್ರತೆಯೊದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿರುತ್ತದೆ. ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಮರುಕಳಿಸುವುದಿಲ್ಲ ಎಂಬುದು ಅಲ್ಲಿನ ಜನರಿಗೆ ಅರ್ಥವಾಗಿದೆ. ಕಾಶ್ಮೀರದ ಜನರು ತಮ್ಮ ಮಕ್ಕಳು ಮತ್ತೆ ಶಾಲೆಗೆ ಕಳುಹಿಸಬೇಕೆಂದು ಇಚ್ಛಿಸುತ್ತಿದ್ದಾರೆ. ಏಕತೆ, ಸಾಮರಸ್ಯ ಹಾಗೂ ಶಾಂತಿಯಿಂದ ಸಮಸ್ಯೆಗಳನ್ನು ಬಗೆಹರಿಸಬಹುದು. ಇದರಿಂದ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು. ಈ ನಿಟ್ಟಿನಲ್ಲಿ ಕಾಶ್ಮೀರಿಗಳು ಶಾಂತಿ ಬಯಸುತ್ತಿರುವುದು ಶ್ಲಾಘನೀಯ ಎಂದರು.
ಇದೇ ವೇಳೆ ಪ್ಯಾರಾಒಲಂಪಿಕ್ಸ್ ನಲ್ಲಿ ಸಾಧನೆಗೈದ ಕ್ರೀಡಾಪಟುಗಳನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಕ್ರೀಡಾಪಟುಗಳ ನೆರವಿಗೆ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವುದಾಗಿ ತಿಳಿಸಿದರು.
ಅಕ್ಟೋಬರ್ 2 ರಂದು ನಡೆಯಲಿರುವ ಸ್ವಚ್ಛತಾ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು. ಇದಕ್ಕಾಗಿ 2-4 ಗಂಟೆ ಸಮಯ ನೀಡಬೇಕು ಎಂದು ಮನವಿ ಮಾಡಿದರು. ಸ್ವಚ್ಛ ಭಾರತಕ್ಕೆ ಎರಡು ವರ್ಷ ಪೂರೈಸಲಿದೆ. ಗ್ರಾಮೀಣ ಪ್ರದೇಶದಲ್ಲಿ 2.48 ಕೋಟಿ ಶೌಚಾಲಯ ನಿರ್ಮಾಣವಾಗಿದ್ದು, ಮುಂದಿನ ವರ್ಷ 1.5 ಕೋಟಿಗೂ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಲಾಗುತ್ತದೆ ಎಂದರು.
ಮುಂದಿನವಾರ ದುರ್ಗಾ ಹಾಗೂ ನವರಾತ್ರಿ ಹಬ್ಬವಿದೆ. ದುರ್ಗಾಪೂಜೆಯನ್ನು ದೇಶದ ಶಾಂತಿ, ಏಕತೆ-ವಿಶ್ವಾಸಾರ್ಹತೆಯನ್ನು ಹೆಚ್ಚಿಸಲು ಆಚರಿಸೋಣ ಎಂದು ಕರೆ ನೀಡಿದ ಮೋದಿ, ವಿಜಯದಶಮಿ ದುಷ್ಟಶಕ್ತಿಯ ವಿರುದ್ಧ ಗೆಲುವನ್ನು ನೀಡಲಿ ಎಂದು ಆಶಿಸಿದರು.
Discussion about this post