ಮೈಸೂರು, ಸೆ.1: ನಗರದ ಮಾನಂದವಾಡಿ ರಸ್ತೆಯಲ್ಲಿರುವ ಎನ್ ಐಇ ಕಾಲೇಜು ಹಿಂಭಾಗದ ರಸ್ತೆಯಲ್ಲಿ ಚರಂಡಿ ಕಾಮಗಾರಿಗಾಗಿ ತೆರೆದಿರುವ ಗುಂಡಿ ಮರಗಳ ಜೀವಕ್ಕೆ ಕುತ್ತು ತಂದಿಟ್ಟಿದೆ. ಇದು ಕೇವಲ ಮರದ ಪ್ರಾಣಕ್ಕೆ ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಅಪಾಯ ತಂದಿಡುವ ಆತಂಕ ಎದುರಾಗಿದೆ!
ಎನ್ ಐಇ ಕಾಲೇಜು ಹಿಂಭಾಗದಲ್ಲಿ ನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಜೆಸಿಬಿಯಿಂದ ದೊಡ್ಡ ಗುಂಡಿ ತೊಡಲಾಗಿದೆ. ಹೀಗಾಗಿ ಅಕ್ಕಪಕ್ಕದಲ್ಲಿದ್ದ ಮರಗಳ ಬೇರುಗಳು ಸಡಿಲಗೊಂಡಿದ್ದು, ಯಾವಾಗಬೇಕಾದರೂ ಮುರಿದು ಬೀಳುವ ಆತಂಕ ಎದುರಾಗಿದೆ. ಈ ರಸ್ತೆಯಲ್ಲಿ ಐವತ್ತಕ್ಕೂ ಹೆಚ್ಚು ವರ್ಷದ ಹಿಂದಿನ ನಾಲ್ಕೈದು ಮರಗಳಿದ್ದು, ಪಾಲಿಕೆ ವತಿಯಿಂದ ಕೈಗೊಂಡಿರುವ ಕಾಮಗಾರಿಯಿಂದ ಬುಡ ಸಮೇತ ಮುರಿದು ಬೀಳುವ ಸ್ಥಿತಿಯಲ್ಲಿವೆ.
ಮರದ ಪಕ್ಕದಲ್ಲೇ ಚರಂಡಿ ಕಾಮಗಾರಿಗಾಗಿ ತೋಡಿರುವ ಗುಂಡಿಯಿಂದಾಗಿ ಬೇರುಗಳು ಸಡಿಲಗೊಂಡಿದ್ದು, ವಾಹನ ಸವಾರರು ಅಥವಾ ಪಾದಚಾರಿಗಳು ತಿರುಗಾಡುವ ವೇಳೆ ಮುರಿದು ಬಿದ್ದರೆ ಪ್ರಾಣಾಪಾಯ ಕಟ್ಟಿಟ್ಟ ಬುತ್ತಿ. ಪಕ್ಕದಲ್ಲೇ ಎನ್ ಐಇ ಕಾಲೇಜು ವಿದ್ಯಾರ್ಥಿ ನಿಲಯ ಇದ್ದು, ಇದರ ಗೇಟ್ ಬಳಿಯೂ ಒಂದು ಮರ ಅಪಾಯದ ಸ್ಥಿತಿಯಲ್ಲಿದೆ. ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಮರಗಳನ್ನು ತೆರವುಗೊಳಿಸುವ ಮೂಲಕ ಪ್ರಾಣಾಪಾಯ ತಪ್ಪಿಸಬೇಕಿದೆ.ಮರದ ಒಂದು ಭಾಗ ಕುಸಿದು ಡಿ ಗ್ರೂಪ್ ನೌಕರನಿಗೆ ಗಾಯ:
ಎನ್ ಐಇ ಕಾಲೇಜು ಕಾಂಪೌಂಡ್ ಗೆ ಹೊಂದಿಕೊಂಡಂತಿರುವ ಮರದ ಒಂದು ಭಾಗ ಮುರಿದ ಪರಿಣಾಮ ಎನ್ ಐಇ ಡಿ ಗ್ರೂಪ್ ನೌಕರರೊಬ್ಬರು ಗಾಯಗೊಂಡಿದ್ದಾರೆ. ಬೆಳಗ್ಗೆ 8 ಗಂಟೆ ವೇಳೆಗೆ ಮರ ಕುಸಿದು ಬಿದ್ದಿದ್ದು ಈ ವೇಳೆ ಗಾಯಗೊಂಡಿದ್ದ ಅವರನ್ನು ಇಎಸ್ ಐ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ನಾರಾಯಣ ಹೃದಯಾಲಯದಲ್ಲಿ ಶಸ್ತ್ರ ಚಿಕಿತ್ಸೆ ಕೊಡಿಸಲಾಗಿದೆ. ಇದೇ ವೇಳೆ ಬೈಕ್ ನಲ್ಲಿ ಬರುತ್ತಿದ್ದ ಕೌಟಿಲ್ಯ ವಿದ್ಯಾಲಯದ ಶಿಕ್ಷಕರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಅವರ ಬೈಕ್ ಮುಂಭಾಗ ಜಖಂಗೊಂಡಿದೆ.
News by: ಪುನೀತ್ ಜಿ. ಕೂಡ್ಲೂರು
Discussion about this post