ಜಿನಿವಾ, ಸೆ.27: ವಿಶ್ವದ ಶೇ.90ರಷ್ಟು ಜನರು ಕೆಟ್ಟ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂಬ ಆತಂಕಕಾರಿ ಸಂಗತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಗೊಳಿಸಿದೆ. ಒಂದು ವರ್ಷದಲ್ಲಿ ಆರು ದಶಲಕ್ಷಕ್ಕೂ ಹೆಚ್ಚು ಸಾವಿಗೆ ಕಾರಣವಾಗುತ್ತಿರುವ ವಾಯು ಮಾಲಿನ್ಯದ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದೂ ಕರೆ ನೀಡಿದೆ.
ಜಾಗತಿಕವಾಗಿ 10 ಜನರಲ್ಲಿ 9 ಮಂದಿ ವಿಷಪೂರಿತ ಗಾಳಿಯನ್ನೇ ಸೇವಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ತುಂಬಾ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಕೂಡ ಪರಿಸ್ಥಿತಿ ಹದಗೆಟ್ಟಿದೆ ಎಂದು ಡಬ್ಲ್ಯೂಎಚ್ಒ ಹೇಳಿದೆ.
ವಿಶ್ವಸಂಸ್ಥೆಯ ಜಾಗತಿಕ ಆರೋಗ್ಯ ಸಂಸ್ಥೆಯ ವರದಿಯೊಂದರಲ್ಲಿನ ಹೊಸ ಅಂಕಿ ಅಂಶವು ಈ ಸಂಗತಿಯನ್ನು ಬಹಿರಂಗಗೊಳಿಸಿದೆ. ಈ ಸಾಂಖ್ಯಿಕ ದತ್ತಾಂಶ ಮಾಹಿತಿಯು ನಾವೆಲ್ಲ ಎಂಥ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ ಎಂಬುದನ್ನು ತೋರಿಸಲು ಸಾಕ್ಷಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ವಿಭಾಗದ ಮುಖ್ಯಸ್ಥೆ ಮಾರಿಯಾ ನೀರಾ ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಹೊಂದಿದ ದೇಶಗಳಿಗಿಂತ ಬಡ ರಾಷ್ಟ್ರಗಳಲ್ಲಿ ಮಾಲಿನ್ಯ ಅತ್ಯಂತ ಅಪಾಯಕಾರಿ ಮಟ್ಟದಲ್ಲಿ ಹದಗೆಟ್ಟಿದೆ. ಇದು ಎಲ್ಲ ದೇಶಗಳ ಮತ್ತು ಎಲ್ಲ ರಾಜಯಗಳ ಮೇಲೂ ಗಂಭೀರ ಪರಿಣಾಮ ಉಂಟು ಮಾಡಿದೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.















