ಶಿವಮೊಗ್ಗ: ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ 28,805 ಮಂದಿಯನ್ನು ಸೇರಿಸಲಾಗಿದ್ದು, ಇದೇ ಅವಧಿಯಲ್ಲಿ ಮರಣ ಇತ್ಯಾದಿ ಕಾರಣಗಳಿಂದಾಗಿ 22,275 ಮಂದಿಯನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದರಿಂದಾಗಿ ಒಟ್ಟು 6530 ಮಂದಿ ಮತದಾರರ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರ್ಪಡೆಯಾದಂತಾಗಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾಗಿರುವ ಶಾಲಿನಿ ರಜನೀಶ್ ತಿಳಿಸಿದರು.
ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಮತದಾರರ ಸಂಖ್ಯೆ 14,18,455 ಇತ್ತು. ಇದೀಗ 14,28,985 ಆಗಿದೆ. ಜಿಲ್ಲೆಯ ಜನಸಂಖ್ಯೆ 18,49,268 ಇದ್ದು, ಮತದಾರರ ಸಂಖ್ಯೆ ಮತ್ತು ಜನಸಂಖ್ಯೆ ನಡುವಣ ಅನುಪಾತ ಶೇ.77ರಷ್ಟಿದೆ. ಇದು ರಾಜ್ಯದ ಅನುಪಾತಕ್ಕಿಂತ ಹೆಚ್ಚಿದ್ದು, ಮೃತ ಮತದಾರರು, ವಲಸೆ ಹೋಗಿರುವವರು ಇತ್ಯಾದಿ ಮತದಾರರನ್ನು ತೆಗೆದು ಹಾಕುವ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡಲು ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದವರು ಹೇಳಿದರು.
ಯುವ ಮತದಾರರ ಸೇರ್ಪಡೆ:
ಜನಸಂಖ್ಯೆಗೆ ಅನುಗುಣವಾಗಿ 18-19ವಯೋಮಾನದ ಹೊಸ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಕಾರ್ಯ ನಿರೀಕ್ಷೆಯಂತೆ ಆಗಿಲ್ಲ. 11,464 ಹೊಸ ಮತದಾರರನ್ನು ಸೇರ್ಪಡೆಗೊಳಿಸಲಾಗಿದ್ದು, ಕಳೆದ ಮೂರು ವರ್ಷಗಳ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಂಕಿಅಂಶಗಳನ್ನು ತಾಳೆ ಹಾಕಿದರೆ ಇನ್ನೂ ಸುಮಾರು 15ಸಾವಿರದಷ್ಟು ಹೊಸ ಮತದಾರರನ್ನು ಸೇರ್ಪಡೆಗೊಳಿಸುವ ಅವಕಾಶ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಯುವ ಮತದಾರರನ್ನು ಸೇರ್ಪಡೆಗೊಳಿಸಲು ಶಾಲಾ ಕಾಲೇಜುಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದವರು ಹೇಳಿದರು.
ಪರಿಶೀಲನೆ:
ಅಧಿಕಾರಿಗಳ ಸಭೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಪರಿಶೀಲನೆ ನಡೆಸಿದ ಶಾಲಿನಿ ರಜನೀಶ್ ಅವರು, ನಗರ ವ್ಯಾಪ್ತಿಯಲ್ಲಿ ಯುವ ಮತದಾರರ ಸೇರ್ಪಡೆ ನಿಗದಿತ ಪ್ರಮಾಣದಲ್ಲಿ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಯುವಕ ಸಂಘಗಳು, ಸ್ತ್ರೀ ಶಕ್ತಿ ಸಂಘಗಳಲ್ಲಿ ಮತದಾರರ ಪಟ್ಟಿಗೆ ಇನ್ನೂ ಸೇರ್ಪಡೆಯಾಗದಿರುವವರನ್ನು ಸೇರಿಸಲು ಕ್ರಮ ಕೈಗೊಳ್ಳಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ತಾಲೂಕು ಮಟ್ಟದಲ್ಲಿ ಸಭೆಯನ್ನು ನಡೆಸಿ ಪ್ರತಿಯೊಬ್ಬ ಕಾರ್ಮಿಕರು/ನೌಕರರು ಮತದಾನವನ್ನು ಮಾಡಲು ಶಾಸನಾತ್ಮಕ ಅವಕಾಶ ನೀಡುವ ಬಗ್ಗೆ ತಿಳುವಳಿಕೆ ನೀಡಬೇಕು. ಕೈಗಾರಿಕಾ ಇಲಾಖೆ ಅಧಿಕಾರಿಗಳು ಎಲ್ಲಾ ಕೈಗಾರಿಕಾ ಕೇಂದ್ರಗಳಲ್ಲಿ ಜಾಗೃತಿ ಸಭೆಗಳನ್ನು ನಡೆಸಿ ಮತದಾರರ ಪಟ್ಟಿಯಲ್ಲಿ ಹೊಸ ಸೇರ್ಪಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಅಪರ ಜಿಲ್ಲಾಧಿಕಾರಿ ಅನುರಾಧ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ: ಡಾ.ಸುಧೀಂದ್ರ)
Discussion about this post