ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಹೊಸಭಾಷ್ಯ ಬರೆಯಲು ಈಗಾಗಲೇ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಇದರ ಭಾಗವಾಗಿ ಭದ್ರಾವತಿಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯಕ್ಕೆ ಹೊಸ ಕಾಯಕಲ್ಪ ನೀಡಲು ಅವರು ಮುಂದಾಗಿದ್ದಾರೆ.
ಹೌದು… ಇಲ್ಲಿನ ಹಳೇನಗರದಲ್ಲಿರುವ 12ನೆಯ ಶತಮಾನದಲ್ಲಿ ಹೊಯ್ಸಳರಿಂದ ನಿರ್ಮಾಣವಾದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಶಿಲಾ ದೇಗುಲವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಉತ್ತಮ ಧಾರ್ಮಿಕ ಪ್ರವಾಸಿ ತಾಣವನ್ನಾಗಿಸಲು ನಿರ್ಧರಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು, ಇದಕ್ಕಾಗಿ ಬರೋಬ್ಬರಿ 3.5 ಕೋಟಿ ರೂ.ಗಳ ಅನುದಾನ ನೀಡಿದ್ದು, ಈಗಾಗಲೇ ಮೊದಲ ಹಂತದಲ್ಲಿ 50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಎರಡು ದಿನದ ಹಿಂದೆ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿ, ದೇವಾಲಯದ ಪರಿಶೀಲನೆಯನ್ನೂ ಸಹ ಸ್ವತಃ ಸಂಸದರು ನಡೆಸಿದ್ದಾರೆ.
ಇನ್ನು, ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸೋದ್ಯಮ ಕಾರ್ಯಪಡೆ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿ, ಮೈಸೂರು ವಿಭಾಗದ ಪುರಾತತ್ವ ಇಲಾಖೆಯ ಇಂಜಿನಿಯರ್ ಶಿವಾನಂದ್, ಶಿವಮೊಗ್ಗ ಕ್ಯೂರೇಟರ್ ಚೇತೇಶ್ವರ್, ಟೂರಿಸಂ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ಅವರುಗಳು ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಪುರಾತತ್ವ ಇಲಾಖೆಯ ಹೆಸರಿನಲ್ಲಿದ್ದ ಜಾಗವನ್ನು ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ತೆರವುಗೊಳಿಸಿದ್ದು, ಈ ಸ್ಥಳವನ್ನು ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಯ ನಡೆಸಲು ನೀಲ ನಕ್ಷೆ ಸಿದ್ಧಪಡಿಸಲಾಗಿದೆ.
ಏನೆಲ್ಲಾ ಅಭಿವೃದ್ಧಿಯಾಗಲಿದೆ?
ಶುದ್ಧ ನೀರು, ಶೌಚಾಲಯ, ಡಾರ್ಮಿಟರಿ ನಿರ್ಮಾಣ ಮಾಡಲು ಪ್ರವಾಸೋದ್ಯಮ ಇಲಾಖೆ ಯೋಜನೆ ಸಿದ್ದಪಡಿಸಿದ್ದು, ಇದಕ್ಕಾಗಿ 50 ಲಕ್ಷ ಮಂಜೂರಾಗಿದೆ.
ಇನ್ನು, ದೇವಾಲಯದ ಆವರಣದಲ್ಲಿ ಸ್ವಚ್ಛತೆಯನ್ನು ಸಂಪೂರ್ಣವಾಗಿ ಕಾಪಾಡಲು ಯೋಜನೆ ರೂಪಿಸಲಾಗಿದ್ದು, ಒಳಾಂಗಣದ ಪುನರ್ ನಿರ್ಮಾಣ, ನೆಲಹಾಸುಗಳು, ವಾಹನ ನಿಲುಗಡೆ ಜಾಗವನ್ನು ಅಭಿವೃದ್ಧಿಪಡಿಸಲಾಗುತ್ತದೆ.
Get in Touch With Us info@kalpa.news Whatsapp: 9481252093
Discussion about this post