ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) #KarnatakaPublicSchool ತೆರೆಯಲಾಗುವುದು ಎಂದು ಶಾಲಾ ಶಿಕ್ಷಣ ಸಮಿತಿ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ #MadhuBangarappa ಹೇಳಿದರು.
ಅವರು ಇಂದು ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬದಲಾದ ಪರೀಕ್ಷಾ ಪದ್ಧತಿ ಕುರಿತ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಚಿವರಾದ ಮೇಲೆ ಅನೇಕ ಸವಾಲುಗಳನ್ನು ಎದುರಿಸಿದ್ದೇನೆ. ಪರಿಹಾರ ನೀಡಬಹುದಾದ ಸಮಸ್ಯೆಗಳು ಇಲ್ಲಿವೆ. ಹಲವು ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ಮಕ್ಕಳಿಗೆ ತೊಂದರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ 43 ಸಾವಿರ ಅತಿಥಿ ಶಿಕ್ಷಕರು ಹಾಗೂ 13 ಸಾವಿರ ಖಾಯಂ ಶಿಕ್ಷಕರ ನೇಮಕವಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಉದ್ದೇಶವಿದೆ. ಇವೆಲ್ಲವೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಬೇಕು ಎಂಬ ಉದ್ದೇಶ ಇದೆ. ಮಕ್ಕಳಿಗೆ ಪಾಠ ಹೇಳುವುದು ಪುಣ್ಯದ ಕೆಲಸ ಎಂದು ಶಿಕ್ಷಕರು ತಿಳಿಯಬೇಕು ಎಂದರು.
ರಾಜ್ಯದಲ್ಲಿ ಮೂರು ಸಾವಿರ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗುವುದು. ಈ ವರ್ಷ ಸುಮಾರು 300 ಶಾಲೆಗಳನ್ನು ತೆರೆಯಲಾಗುವುದು. ಈ ಶಾಲೆಗಳು ಎಲ್ಕೆಜಿಯಿಂದ ಹಿಡಿದು 12ನೆಯ ತರಗತಿವರೆಗೆ ಇರುತ್ತದೆ ಮತ್ತು ಪ್ರಥಮ ಹಾಗೂ ದ್ವಿತೀಯ ಭಾಷೆಯಾಗಿ ಕನ್ನಡ ತೆಗೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.ಕನ್ನಡ ಮಾಧ್ಯಮ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಎಸ್’ಎಸ್’ಎಲ್’ಸಿ ಪರೀಕ್ಷೆಯನ್ನು ಮೂರು ಹಂತದಲ್ಲಿ ಮಾಡುವುದನ್ನು ಸಮರ್ಥಿಸಿಕೊಂಡ ಸಚಿವರು, ಇದರಿಂದ ಮಕ್ಕಳಿಗೆ ಒಂದು ಅವಕಾಶವನ್ನು ನೀಡಿದಂತಾಗುತ್ತದೆ. ಪ್ರಸಕ್ತ ವರ್ಷದಲ್ಲಿ ಈ ಅವಕಾಶ ಬಳಸಿಕೊಂಡ ಸುಮಾರು 42 ಸಾವಿರ ಮಕ್ಕಳು ಶೈಕ್ಷಣಿಕ ವರ್ಷವನ್ನು ನಷ್ಟ ಮಾಡಿಕೊಳ್ಳದೆ ವ್ಯಾಸಂಗದಲ್ಲಿದ್ದಾರೆ ಎಂದರು.
ಸ್ವಾಗತ ಮತ್ತು ಪ್ರಾಸ್ತಾವಿಕ ಮಾತನಾಡಿದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿ ಎನ್. ರಮೇಶ್, ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಒತ್ತು ನೀಡುತ್ತಿದೆ. ಹಲವು ಬದಲಾವಣೆಗಳನ್ನು ತರುತ್ತಿದೆ. ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಅನುದಾನ ಕೂಡ ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಶಾಲೆಗಳೂ ಶೈಕ್ಷಣಿಕ ಸುಧಾರಣೆಗಾಗಿ ಕಾರ್ಯಕ್ರಮಗಳನ್ನು ನಿಯೋಜಿಸಬೇಕಾಗಿದೆ. ನಮ್ಮ ಶಾಲೆ ಕೂಡ ಶಿಕ್ಷಣ ಕ್ಷೇತ್ರಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಡಿಪಿಐ ಪರಮೇಶ್ವರಪ್ಪ, ಶಿಕ್ಷಣ ತಜ್ಞ ನಿವೃತ್ತ ಪ್ರೊಫೆಸರ್ ಚಂದ್ರಕಾಂತ್, ಡಯೆಟ್’ನ ಡಾ. ಹರಿಪ್ರಸಾದ್, ಉಪನಿರ್ದೇಶಕ ಬಸವರಾಜಪ್ಪ, ಕಾಂಗ್ರೆಸ್ ಮುಖಂಡ ಕಲಗೋಡು ರತ್ನಾಕರ್, ಕೃಷ್ಣಪ್ಪ ಸೇರಿದಂತ ಹಲವರಿದ್ದರು. ಕಾರ್ಯಾಗಾರದಲ್ಲಿ ಸುಮಾರು 600ಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post