ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉಡುಪಿ: ಶ್ರೀ ಅದಮಾರು ಮಠದ ವತಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಕೊರೋನಾ ಸಂತ್ರಸ್ತರ ನಿಧಿಗೆ 55,55,555.00 ( ಐವತ್ತೈದು ಲಕ್ಷದ ಐವತ್ತೈದು ಸಾವಿರದ ಐನೂರಐವತ್ತೈದು) ರೂಪಾಯಿಗಳ ದೇಣಿಗೆ ನೀಡಲಾಗಿದೆ.
ಶ್ರೀ ಅದಮಾರು ಮಠ ಹಾಗೂ ಮಠದ ಶಿಕ್ಷಣ ಸಂಸ್ಥೆಗಳ ವತಿಯಿಂದ ಈ ದೇಣಿಗೆ ನೀಡಲಾಗಿದ್ದು, ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಂಸದೆ ಶೋಭಾ ಕರಂದ್ಲಾಜೆ, ಜಿಲ್ಲಾಧಿಕಾರಿ ಜಗದೀಶ್, ಉಡುಪಿ ಶಾಸಕರಾದ ರಘುಪತಿ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಇವರ ಮುಖಾಂತರ ನೀಡಿದರು.
ಈ ವೇಳೆ ಅನುಗ್ರಹ ಸಂದೇಶ ನೀಡಿದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಕಾಲ ಕಾಲಕ್ಕೆ ಮಳೆ ಬರಬೇಕು ಮಳೆಯಿಂದ ಬೆಳೆ ಬೆಳೆಯಬೇಕು. ಆದರೆ ಪ್ರಸ್ತುತ ಒಬ್ಬ ಮಾಡಿದ ತಪ್ಪಿನಿಂದ ವಿಶ್ವದ ಪ್ರತಿಯೊಬ್ಬರೂ ತಲೆ ಕೊಡುವ ಪ್ರಸಂಗ ಬಂದು ಜಗತ್ತಿಗೆ ದೊಡ್ಡ ಅನಾಹುತ ಬಂದಿದೆ. ನಮ್ಮ ದೇಶದ ಪ್ರಧಾನಿಗಳು ಸಂಕಷ್ಟದಲ್ಲಿರುವವರ ಪರಿಹಾರಕ್ಕಾಗಿ ಮಾಡುತ್ತಿರುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ನಿಟ್ಟಿನಲ್ಲಿ ನಾವು ನಮ್ಮ ಮಠದಿಂದ ದೇವರಲ್ಲಿ ಪ್ರಾರ್ಥಿಸಿ ಮೊತ್ತವನ್ನು ಪ್ರಸಾದ ರೂಪವಾಗಿ ನೀಡಿದ್ದೇವೆ. ಆದಷ್ಟು ಬೇಗ ಎಲ್ಲರೂ ಆರೋಗ್ಯವಂತರಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ದೇಶದ ಈ ಸಂಕಷ್ಟ ಕಾಲದಲ್ಲಿ ಸರ್ಕಾರಕ್ಕೆ ಯಾವುದೇ ಮೂಲಗಳಿಂದ ತೆರಿಗೆ ರೂಪದ ಆದಾಯವಿರುವುದಿಲ್ಲ. ಆದರೆ ವಿವಿಧ ಇಲಾಖೆಗಳ ಖರ್ಚು ಸಾರ್ವಜನಿಕರ ಆರೋಗ್ಯದ ಖರ್ಚುಗಳು ಇದ್ದೆ ಇರುತ್ತದೆ.ಇದಕ್ಕೆ ನಾವು ವಾರದಲ್ಲಿ ಮೂರೂ ಹೊತ್ತಿನ ಊಟವನ್ನು ಬಿಟ್ಟು ಅದರ ಉಳಿತಾಯವನ್ನು ಕಷ್ಟದಲ್ಲಿರುವವರಿಗೆ ನಾವು ಹಂಚಬಹುದು. ಎಲ್ಲರ ಪರಿಶ್ರಮದಿಂದ ವಿಶ್ವದಲ್ಲಿಯೇ ಭಾರತ ದೇಶವು ಪ್ರಥಮ ಕೊರೋನ ಮುಕ್ತ ದೇಶವಾಗಿ ವಿಶ್ವಗುರುವಾಗಿ ಹೊರಹೊಮ್ಮಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಈ ಹಿಂದೆ ಅದಮಾರು ಮಠದ ವತಿಯಿಂದ 2,00,000.00 ರೂಪಾಯಿಗಳನ್ನು ಪ್ರಧಾನ ಮಂತ್ರಿಯವರ ಕೊರೋನ ಪರಿಹಾರ ನಿಧಿಗೆ ನೀಡಲಾಗಿತ್ತು. ಪರ್ಯಾಯ ಶ್ರೀ ಅದಮಾರು ಮಠ ಶ್ರೀಕೃಷ್ಣ ಮಠದ ವತಿಯಿಂದ ದಿನವಹಿ ಸಾಮಗ್ರಿಗಳ 1000 ಕಿಟ್’ಗಳನ್ನೂ ಹಾಗೂ ಅದಮಾರು ಮಠದ ಆಡಳಿತದಲ್ಲಿರುವ ಕುಂಜಾರುಗಿರಿ ಶ್ರೀ ದುರ್ಗಾದೇವಸ್ಥಾನದಿಂದ 250 ಕಿಟ್’ಗಳನ್ನೂ ನೀಡಲಾಗಿದೆ.
Get in Touch With Us info@kalpa.news Whatsapp: 9481252093
Discussion about this post