ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕೇಂದ್ರದಿಂದ ಅನುಮತಿ ಪಡೆದು ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ, ಇದರಲ್ಲಿ ಯಾವುದೇ ರೀತಿಯಲ್ಲಿ ರಾಜಿಯಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
75ನೆಯ ಸ್ವಾತಂತ್ರೋತ್ಸವದ ಅಂಗವಾಗಿ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದಲ್ಲಿ 11 ಅಮೃತ ಯೋಜನೆಗಳನ್ನು ಘೋಷಣೆ ಮಾಡಿದ ಮುಖ್ಯಮಂತ್ರಿಗಳು ಇದಕ್ಕಾಗಿ 720 ಕೋಟಿ ರೂ.ಗಳನ್ನು ಮೀಸಲಾಗಿಡುತ್ತಿದ್ದೇವೆ. ನಾಡಿನ ಕಟ್ಟ ಕಡೆಯ ಕುಟುಂಬ, ಪ್ರತಿಯೊಬ್ಬರ ಬದುಕು ಬೆಳವಣಿಗೆ ಆಗಬೇಕು, ಸುಖ ಶಾಂತಿ ಆರೋಗ್ಯ ಸಿಗಬೇಕೆಂಬ ಸದ್ದುದ್ದೇಶದಿಂದ ಕೆಲಸ ಮಾಡುತ್ತಿದ್ದೇನೆ. ಇನ್ನು 20 ತಿಂಗಳು ಮಾತ್ರ ಅವಕಾಶ ಇದೆ ಎಂಬುದು ನನಗೆ ತಿಳಿದಿದೆ. ಇದನ್ನೆಲ್ಲ ಮಾಡಲು ದೀರ್ಘಾವಧಿ ಸಮಯ ಬೇಕು. ಅಲ್ಪಾವಧಿಯಲ್ಲಿ ಏನು ಕಾರ್ಯಕ್ರಮ ಕೊಡಬೇಕು ಅದನ್ನ ಮಾಡುತ್ತಿದ್ದೇವೆ. ಜನರು ಕಚೇರಿಗಳು ಅಲೆಯದಂತೆ ಮಾಡಬೇಕು, ತಾಲೂಕು ಕಚೇರಿ, ಸಬ್ ರಿಜಿಸ್ಟ್ರಾರ್ ಕಚೇರಿ ಜನ ಅಲೆಯದಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದರು.
ಹೊಸ ಚಿಂತನೆ, ಹೊಸ ದಾರಿ, ಹೊಸ ದಿಕ್ಸೂಚಿ, ಮಾನವ ಸಂಪನ್ಮೂಲ ಬಳಸಿಕೊಂಡು ಹೊಸ ತಂತ್ರಜ್ಞಾನ ಬಳಕೆ ಮಾಡಿ, ವೈಜ್ಞಾನಿಕವಾಗಿ ಕೃಷಿ, ಸೇವಾ ವಲಯವನ್ನ ಮಾಡಲು ಸಂಕಲ್ಪ ಮಾಡಿದ್ದೇವೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ. 11ನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರು ಹೇಳಿದ ಮಾತಿದು. ಇವತ್ತಿನ ಕಾಲದಲ್ಲಿ ಆಳುವವರು ಆಡಳಿತ ಮಾಡುತ್ತಿದ್ದಾರೆ. ಆಡಳಿತ ಮಾಡುವವರು ಆಳುತ್ತಿದ್ದಾರೆ. ನಾಡಿನ ಕೊನೆ ಹಂತದ ಜನತೆಗೆ ನಮ್ಮ ಕಾರ್ಯಕ್ರವನ್ನು ಮುಟ್ಟುವರೆಗೆ ನಾವು ಕೆಲಸ ಮಾಡುತ್ತೇವೆ ಎಂದರು.
ನಮ್ಮ ತಾಯಿಯಂದಿರ ಶಕ್ತಿ ನಮ್ಮ ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ಇದೆ. ಅವರಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಲಿದೆ. ಎಸ್ಸಿ-ಎಸ್ಟಿ ಮಹಿಳೆಯರ ಜೊತೆಗೆ ಶ್ರೀ ಶಕ್ತಿಯನ್ನ ಬಲಪಡಿಸುವ ಕೆಲಸ ಮಾಡುತ್ತೇವೆ. ರೈತ ವಿಧ್ಯಾನಿಧಿ ಕಾರ್ಯಕ್ರಮವನ್ನು ಘೋಷಿಸಿದ್ದೇವೆ. ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಾರ್ಷಿಕ ರೂ. 2500 ಗಳಿಂದ ರೂ.11 ಸಾವಿರ ವರೆಗೆ ವಿದ್ಯಾರ್ಥಿ ವೇತನ ನೀಡಲು ಆದೇಶ ಮಾಡಿದ್ದೇನೆ. ಇದರಿಂದ 17 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ ಎಂದರು.
ರಾಜ್ಯದಲ್ಲಿ ಇಂದಿನಿಂದ ನವ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ ಮಾಡುತ್ತಿದ್ದೇವೆ. ನಾಡು, ನುಡಿ, ಭಾಷೆ, ಜಲದ ಸಮಗ್ರ ಅಭಿವೃದ್ಧಿಯ ಪರ್ವ ಆರಂಭವಾಗುತ್ತಿದೆ. ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯದೊಂದಿಗೇ ನಮ್ಮ ರಾಜ್ಯದ ಸಮಗ್ರ ಅಭಿವೃದ್ಧಿ ಮಾಡುತ್ತೇವೆ ಎಂದರು.
ಮೇಕೆದಾಟು ಯೋಜನೆ ವಿಚಾರದಲ್ಲಿ ಎಲ್ಲ ರೀತಿಯ ಕಾನೂನು ಹೋರಾಟಕ್ಕೆ ನಾವು ಸಿದ್ದರಿದ್ದೇವೆ. ಜಲ ವಿವಾದದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕೇಂದ್ರದಿಂದ ಅನುಮತಿ ಪಡೆದು ಯೋಜನೆ ಜಾರಿ ಮಾಡಿಯೇ ತೀರುತ್ತೇವೆ ಎಂದರು.
ಕೊರೋನಾ ಸಾಂಕ್ರಾಮಿಕ ನಮಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಸಂದರ್ಭದಲ್ಲಿ ನಮ್ಮ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನಾನು ನೆನಪು ಮಾಡಿಕೊಳ್ಳುತ್ತೇನೆ. ಕೋವಿಡ್ ನಿರ್ವಹಣೆಗೆ ಸಾಕಷ್ಟು ಅನುದಾನ ನೀಡಿದರು. ಅವರ ಅಭಿವೃದ್ಧಿ ಕಾರ್ಯಕ್ರಮ ನಮಗೆ ಮಾರ್ಗದರ್ಶನವಾಗಿದೆ. ನಾನು ಅಧಿಕಾರಕ್ಕೆ ಬಂದ ಕೂಡಲೇ ಕೋವಿಡ್ ನಿರ್ವಹಣೆಗೆ ಹೆಚ್ಚಿನ ಮಹತ್ವ ಕೊಟ್ಟಿದ್ದೇನೆ. ಕೇರಳ ಮಹಾರಾಷ್ಟ್ರದಲ್ಲಿ ಹೆಚ್ಚಿನ ಸೋಂಕು ಇದೆ, ಹೀಗಾಗಿ ನಾನೇ ಗಡಿ ಜಿಲ್ಲೆಗಳಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಜನತೆ ಕೋವಿಡ್ ನಿಯಮ ಪಾಲಿಸಿದರೆ, ನಾವು ತಂತ್ರಜ್ಞಾನ ಬಳಸಿಕೊಂಡು ನಮ್ಮ ನಾಡಿನ ಜನತೆಯನ್ನು ರಕ್ಷಿಸುತ್ತೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post