ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬಿಜೆಪಿಯಲ್ಲಿ ಪಕ್ಷ ಮತ್ತು ಕಮಲದ ಚಿಹ್ನೆಯೇ ಅಭ್ಯರ್ಥಿ ಬೇರೆ ಪಕ್ಷಗಳು ಮೊದಲೇ ಅಭ್ಯರ್ಥಿ ಘೋಷಿಸುತ್ತದೆ. ಬಿಜೆಪಿಗೆ ಹಿಂದೆ 108 ಕ್ಷೇತ್ರದಲ್ಲಿ ಗೆಲುವು ಸಿಕ್ಕಿತು. ಈ ಬಾರಿ 140ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಬಿಜೆಪಿ ಸಂಘಟನೆ ಮಾಡುತ್ತಾ ಪಕ್ಷವನ್ನು ಸದೃಡಗೊಳಿಸುತ್ತಾ ಮುಂದುವರೆಯುತ್ತದೆ. ಇಲ್ಲಿ ಯಾರು ನಿಂತರೂ ಜಯಗಳಿಸುತ್ತಾರೆ. ಅದಕ್ಕಾಗಿಯೇ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಬೂತ್‌ಗಳಲ್ಲೂ ವಿಜಯ ಸಂಕಲ್ಪ ಅಭಿಯಾನ ಮಾಡುತ್ತಿದ್ದೇವೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಹೇಳಿದ್ದಾರೆ.
ನಗರದ 162ನೇ ಬೂತ್‌ನಲ್ಲಿ ಇಂದಿನಿಂದ ಜ.29ರವರೆಗೆ ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಮನೆಗೆ ಭೇಟಿ ನೀಡಿ ಕರಪತ್ರ ಹಂಚಿ ಮಿಸ್‌ಕಾಲ್ ಮಾಡುವುದರ ಮೂಲಕ ಬಿಜೆಪಿ ಸದಸ್ಯತ್ವ ನೋಂದಣಿ ಮಾಡಿ ಸ್ಟಿಕ್ಕರ್ ಅಂಟಿಸಿ ಗೋಡೆ ಬರಹದ ಮೂಲಕ ರಾಜ್ಯಾದ್ಯಂತ ಈ ಆಭಿಯಾನ ಪ್ರಾರಂಭವಾಗಿದೆ. ಫೆ.5ರಂದು ಬೆಳಿಗ್ಗೆ ನಗರದ ಎನ್‌ಇಎಸ್ ಮೈದಾನದಲ್ಲಿ 7600 ಪೇಜ್ ಪ್ರಮುಖರ ಬೃಹತ್ ಸಭೆ ನಡೆಯಲಿದೆ. ಕಾರ್ಯಕರ್ತರಿಗೆ ಸ್ಪೂರ್ತಿ ನೀಡಲು ನಳಿನ್‌ಕುಮಾರ್ ಕಟೀಲ್ ಬರುತ್ತಿದ್ದಾರೆ ಎಂದರು.
ಡಿಕೆಶಿ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡಿ, ಬಿಜೆಪಿಯಿಂದ ಅನೇಕರು ವಲಸೆ ಬರುತ್ತಿದ್ದಾರೆ ಎಂದು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಯಾರೂ ಕೂಡ ಸಾಯುವಂತಹ ಪಕ್ಷಕ್ಕೆ ಹೋಗುವುದಿಲ್ಲ. ಆ ಪಕ್ಷ ಮುಳುಗುತ್ತಿರುವ ಹಡಗು ಅಲ್ಲಿಂದಲೆ ನಮ್ಮೆಡೆಗೆ ಬರುತ್ತಿದ್ದಾರೆ. 17 ಜನ ಸಚಿವರು ಹಿಂದೆ ನಮ್ಮಲ್ಲಿಗೆ ಯಾಕೆ ಬಂದರು. ಆ ಪಕ್ಷದಲ್ಲಿ ಒಳಜಗಳ, ಗುಂಪುಗಾರಿಕೆ ಇದೆ ಎಂದು ಅಲ್ಲಿಯವರೆ ನಮ್ಮ ಪಕ್ಷಕ್ಕೆ ಬರುತ್ತಾರೆ ಎಂದರು.
Also read: ಬಳ್ಳಾರಿ ಉತ್ಸವದ ವೈಭವದಲ್ಲಿ ಮೆಹಂದಿ ಸ್ಪರ್ಧೆಯ ಮೆರುಗು ಹೇಗಿತ್ತು ಗೊತ್ತಾ?
ಎಂಎಲ್‌ಸಿ ವಿಶ್ವನಾಥ್ ನಾಮನಿರ್ದೇಶಿತಗೊಂಡವರು ಅವರು ಹೋದಲ್ಲಿ ಬಿಜೆಪಿಗೆ ನಷ್ಟವಿಲ್ಲ. ವಿಶ್ವನಾಥ್ ಅವರು ಹಿಂದೆ ಸಿದ್ಧರಾಮಯ್ಯನವರಿಗೆ ತೆಗಳುತ್ತಾ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ನಮ್ಮ ಪಕ್ಷಕ್ಕೆ ಬಂದವರು. ಈಗ ಯಾವುದೋ ಲಾಭಕ್ಕಾಗಿ ಹೋಗುತ್ತಿದ್ದಾರೆ. ಹಿಂದೆ ಅವರೆ ಸಿದ್ಧರಾಮಯ್ಯನವರು ದ್ರೋಹ ಮಾಡಿದ್ದಾರೆ ಎಂದಿದ್ದರು. ಕೆಸಿಆರ್ ಕಾಂಗ್ರೆಸ್ ಒಡೆಯಲು 500ಕೋಟಿ ನೀಡಿದ್ದಾರೆ ಎಂಬುದು ಕಾಂಗ್ರೆಸ್ಸಿಗರೇ ಸ್ಪಷ್ಟಪಡಿಸಬೇಕು. ನಾವು 224ಕ್ಷೇತ್ರಗಳಲ್ಲೂ ಅಭ್ಯರ್ಥಿ ಹಾಕುತ್ತೇವೆ. ಎಲ್ಲಾ ಕಡೆ ಬಿಜೆಪಿ ಸಂಘಟನಾತ್ಮಕವಾಗಿ ಬಲಶಾಲಿಯಾಗಿದೆ. ಕಾಂಗ್ರೆಸ್ ಶಕ್ತಿಹೀನವಾಗಿದೆ. ಸುಳ್ಳು ಭರವಸೆ ನೀಡುತ್ತಾ ಕಾಂಗ್ರೆಸ್ 70ವರ್ಷ ಕಳೆದಿದೆ. ಜನರಿಗೆ ಸುಳ್ಳು ಯಾವುದು ಎಂಬುದು ಗೊತ್ತಾಗಿದೆ. ಜನ ಕಾಂಗ್ರೆಸ್‌ನ್ನು ನಂಬಲ್ಲ ಎಂದರು.
ಹರಿಪ್ರಸಾದ್ ಟೀಕೆಗೆ ಉತ್ತರಿಸಿದ ಅವರು, ಕಾಲೇಜು ದಿನಗಳಿಂದಲೇ ಹರಿಪ್ರಸಾದ್ ಅವರು ಗೂಂಡಾಗಿರಿ ಮಾಡಿಕೊಂಡು ಬಂದಿದ್ದಾರೆ. ಕನಿಷ್ಟ ಗ್ರಾಮ ಪಂಚಾಯಿತಿ ಚುನಾವಣೆ ಗೆಲ್ಲುವ ಯೋಗ್ಯತೆ ಅವರಿಗಿಲ್ಲ. ಹಿಂಭಾಗಿಲಿನಿಂದ ಸದನ ಪ್ರವೇಶಿಸಿ ಬಿಜೆಪಿಯ ವಿರುದ್ಧ ಟೀಕೆ ಮಾಡುತ್ತಾರೆ. ನಳಿನ್‌ಕುಮಾರ್ ಕಟೀಲ್ ಬಗ್ಗೆಯೂ ಟೀಕೆ ಮಾಡುತ್ತಾರೆ. ಆದರೆ ಕಟೀಲ್ ಅವರು ಜನಾರ್ಧನ್ ಪೂಜಾರಿಯಂತಹ ದೊಡ್ಡ ನಾಯಕರನ್ನು ಸೋಲಿಸಿ ಉತ್ತಮ ಸಂಸದರೆಂದು ಹೆಸರು ಗಳಿಸಿದ್ದಾರೆ ಎಂದರು.
ಹುಣಸೋಡು ಘಟನೆಗೆ ಸಂಬಂಧಿಸಿದಂತೆ ತಾಂತ್ರಿಕ ತೊಂದರೆಯಿಂದಾಗಿ ಸರ್ಕಾರ ಪರಿಹಾರ ನೀಡಲು ಬರುವುದಿಲ್ಲ. ಈ ಬಗ್ಗೆ ಸ್ಥಳೀಯ ನಾಯಕರು ಕೋರ್ಟಿಗೆ ಹೋಗಲು ತೀರ್ಮಾನಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ವಿಭಾಗ ಪ್ರಮುಖ ಗಿರೀಶ್ ಪಟೇಲ್, ಬೂತ್ ಅಧ್ಯಕ್ಷ ಮಾರುತಿ, ಕೆ.ಈ.ಕಾಂತೇಶ್, ಪ್ರಕಾಶ್, ಮೋಹನ್, ವರದರಾಜ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post