ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪುರುಷರಂತೆ ಮಹಿಳೆಯರು ಸಹ ತಮ್ಮದೇ ಆದ ಅನುಹ ಕೊಡುಗೆಗಳನ್ನು ನೀಡುವಲ್ಲಿ ಶ್ರಮಿಸಬೇಕು ಹಾಗೂ ಸಾಮಾಜಿಕ ಮಟ್ಟದಲ್ಲಿ ಎದುರಾಗುವ ಪರೀಕ್ಷೆಗಳನ್ನು ಹೆಚ್ಚಿನ ಆತ್ಮವಿಶ್ವಾಸದಿಂದ ಎದುರಿಸಿ ಅಪ್ರತಿಮ ಸಾಧನೆಯನ್ನು ಮಾಡುವಲ್ಲಿ ಕಾರ್ಯತತ್ಪರರಾಗಬೇಕೆಂದು ಮಹಿಳಾ ವಾಣಿಜ್ಯೋದ್ಯಮಿ ಶಿಲ್ಪಾ ಗೋಪಿನಾಥ್ ಹೇಳಿದರು.
“ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಪ್ರಯುಕ್ತ ನಗರದ ಪಿಇಎಸ್ಐಟಿಎಂ ಕಾಲೇಜಿನ ವಿಮೆನ್ ಎಂಪವರ್ ಮೆಂಟ್ ಸೆಲ್ ನ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಯಾವುದೇ ಒಂದು ದೇಶವು ಸರ್ವಾಂಗೀಣ ಅಭಿವೃದ್ಧಿ ಹೊಂದುವಲ್ಲಿ ಅಲ್ಲಿನ ಮಾನವ ಸಮಾಜವೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಮಾಜಿಕ ಮಟ್ಟದಲ್ಲಿ ಎದುರಾಗುವ ಅನೇಕ ಸವಾಲುಗಳನ್ನು ಹಿಮ್ಮೆಟ್ಟಿಸುವ ಮನೋಭಾವ, ಚಾಕ ಚಕ್ಯತೆ ಹಾಗೂ ತಮ್ಮನ್ನು ತಾವು ತೊಡಗಿಸಿಕೊಳ್ಳುವ ರೀತಿ ಬಹುಮುಖ್ಯವಾದದ್ದಾಗಿದೆ. ಸಾಮಾಜಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ದೇಶವು ಅಪ್ರತಿಮ ಸಾಧನೆಯನ್ನು ಮಾಡುವಲ್ಲಿ ಪುರುಷರಂತೆ ಮಹಿಳೆಯರು ಕೂಡ ಸಮಾನ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳುವಲ್ಲಿ ಪ್ರಯತ್ನಿಸಬೇಕು ಎಂದರು.
ಮಾನವ ಸಮಾಜದಲ್ಲಿ ಕೈಗಾರಿಕಾ, ಆರ್ಥಿಕ, ಸಾಮಾಜಿಕ, ವಾಣಿಜ್ಯ ಹಾಗೂ ಮುಂತಾದ ಎಲ್ಲಾ ವಲಯಗಳಲ್ಲಿ ಪ್ರಸಕ್ತ ಸ್ಥಿತಿಯಲ್ಲಿ ವಿಪುಲ ಅವಕಾಶಗಳು ಮಹಿಳೆಯರಿಗೂ ಕೂಡ ದೊರಕುತ್ತಿದ್ದು, ಅದರ ಸಫಲತೆಯನ್ನು ಅಳವಡಿಸಿಕೊಳ್ಳುವಲ್ಲಿ ಅತ್ಯವಶ್ಯವಿರುವ ಜ್ಞಾನಾರ್ಜನೆ, ಧೈರ್ಯ, ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋ ಸ್ಥಿತಿ ಇತ್ಯಾದಿ ಗುಣಲಕ್ಷಣಗಳನ್ನು ಪ್ರಖರವಾಗಿ ಸಂಪಾದಿಸಿ ಅದ್ವಿತೀಯ ಸಾಧನೆಯನ್ನು ಮಾಡುವಂತೆ ಉಪಸ್ಥಿತರಿದ್ದ ವಿದ್ಯಾರ್ಥಿನಿಯರನ್ನು ಹುರಿದುಂಬಿಸಿ ಮನಮುಟ್ಟುವಂತೆ ನುಡಿದರು. ತಮ್ಮ ಶೈಕ್ಷಣಿಕ ಜೀವನದಲ್ಲಿ ಕೆಲಸವನ್ನು ಪಡೆಯಲಷ್ಟೇ ಆಲೋಚಿಸದೆ, ಕೆಲಸಗಳನ್ನು ಸೃಷ್ಟಿಸಿ; ಸಮಾಜದ ಹಲವು ಮಹಿಳಾ ವರ್ಗಕ್ಕೆ ಆ ಕೆಲಸಗಳನ್ನು ನೀಡುವ ಮೂಲಕ ಆರ್ಥಿಕ ಸಬಲತೆಯನ್ನು ಹೊಂದುವಲ್ಲಿ ಶ್ರಮಿಸಬೇಕೆಂದು ಸೂಚ್ಯವಾಗಿ ಎಂದರು.
ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ ಚೈತನ್ಯಕುಮಾರ್ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಜ್ಞಾನಾರ್ಜನೆಯ ಮಟ್ಟವನ್ನು ವೃದ್ಧಿಸಿಕೊಳ್ಳುವಲ್ಲಿ ಅತ್ಯವಶ್ಯವಿರುವ ತಾಂತ್ರಿಕ ಚಾಕಚಕ್ಯತೆ ಹಾಗೂ ಮುಕ್ತ ಮನಸ್ಸಿನಿಂದ ಬಂದೊದಗುವ ಅವಕಾಶಗಳ ಸದ್ಬಳಕೆಯನ್ನು ಮಾಡಿಕೊಳುವಲ್ಲಿ ಕಾರ್ಯತತ್ಪರರಾಗಬೇಕೆಂದು ತಿಳಿಸಿದರು.
ಭವ್ಯ ಭಾರತ ಸಂಸ್ಕೃತಿಯ ಹಲವು ಮಜಲುಗಳಲ್ಲಿ ಅನ್ವಯ ಸಾಧನೆಗಳನ್ನು ಮಾಡಿದ ಹಲವಾರು ಮಹಿಳಾಮಣಿಯರ ಜೀವನದ ಯಶೋಗಾಥೆಯನ್ನು ಸ್ಪೂರ್ತಿಯ ಚಿಲುಮೆಯಾಗಿ ಸ್ವೀಕರಿಸಿ ತಮ್ಮ ಮುಂದಿನ ಭವ್ಯ ಭವಿತವ್ಯದ ಜೀವನವನ್ನು ರೂಪಿಸುವಲ್ಲಿ ಪ್ರಯತ್ನಿಸಬೇಕೆಂದು ಮನಮುಟ್ಟುವಂತೆ ನುಡಿದರು.
ಪಿಇಎಸ್ಐಟಿಎಂ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಹಾಗೂ ಎಂಟರ್ಪ್ರೈನ್ ಶಿಪ್ ಡೆವಲಪ್ಮೆಂಟ್ ಸೆಲ್ ನ ಮುಖ್ಯಸ್ಥರಾದ ಡಾ ಪ್ರಸನ್ನ ಕುಮಾರ್ ಮಾತನಾಡಿ, ವಿದ್ಯಾರ್ಥಿನಿಯರು ಕೆಲಸಗಳನ್ನು ಸೃಷ್ಟಿಸುವಲ್ಲಿ ಹಾಗೂ ತನ್ಮೂಲಕ ಮಹಿಳಾ ವಿಭಾಗದ ಸಬಲತೆಯನ್ನು ಗಟ್ಟಿಗೊಳಿಸುವಲ್ಲಿ ಅನವರತ ಶ್ರಮಿಸಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಸಾಧಾರಣ ಸಾಧನೆಯನ್ನು ಮಾಡುವಂತೆ ಹಿತ ನುಡಿಗಳನ್ನಾಡಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಆಕಾಂಕ್ಷ ಎನ್ ಪ್ರಾರ್ಥಿಸಿ, ಮಹಿಳಾ ಸಬಲೀಕರಣ ಕೋಶ, ಪಿಇಎಸ್ಐಟಿಎಂನ ಮುಖ್ಯಸ್ಥರಾದ ರಮ್ಯಾ ಸ್ವಾಗತಿಸಿದರು. ಎಂಬಿಎ ವಿಭಾಗದ ಬೋಧಕ ಸಿಬ್ಬಂದಿ ಜ್ಯೋತಿ ಜಿ ಹೆಚ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಪಿಇಎಸ್ಐಟಿಎಂನ ಎಲ್ಲಾ ವಿಭಾಗಗಳ ಮಹಿಳಾ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















