ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖಾಯಂಗೊಳಿಸುವುದು, ಸಮಾನ ವೇತನಕ್ಕೆ ಒತ್ತಾಯಿಸಿ ಶಿವಮೊಗ್ಗ ಮಹಾನಗರ ಪಾಲಿಕೆಯ ನೀರು ಸರಬರಾಜು ವಿಭಾಗದ 115 ನೌಕರರು ಇಂದಿನಿಂದ ಕೆಲಸ ಸ್ಥಗಿತಮಾಡಿ ಮಹಾನಗರ ಪಾಲಿಕೆ ಆವರಣದಿಂದ ಕೆಇಬಿ ವೃತ್ತದವರೆಗೆ ಮೆರವಣಿಗೆ ನಡೆಸಿ ಕಚೇರಿಯ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡಿದ್ದಾರೆ.
ಎಲ್ಲಾ ನಗರ, ಸ್ಥಳೀಯ ಸಂಸ್ಥೆಗಳ ಗುತ್ತಿಗೆ, ಹೊರ ಗುತ್ತಿಗೆ ಕಾರ್ಮಿಕರು ಈ ಬಜೆಟ್‌ನಲ್ಲಿ ತಮ್ಮ ಸೇವೆಗಳನ್ನು ಖಾಯಂಗೊಳಿಸಲು ಸರ್ಕಾರ ಕ್ರಮವಹಿಸುತ್ತದೆ ಎಂಬ ಆಶಾಭಾವನೆ ಹೊಂದಿತ್ತು. ಆದರೆ ರಾಜ್ಯದ ನೇರ ಪಾವತಿಯಡಿ ದುಡಿಯುತ್ತಿರುವ 24 ಸಾವಿರ ಪೌರ ಕಾರ್ಮಿಕರ ಸೇವೆಗಳನ್ನು ಮಾತ್ರ ಖಾಯಂಗೊಳಿಸುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿದ್ದು, ರಾಜ್ಯ ಸಂಘವು ಇದನ್ನು ಸ್ವಾಗತಿಸುತ್ತದೆ. ಆದರೆ ಇತರ ಗುತ್ತಿಗೆ ಸ್ಥಳೀಯ ಸಂಸ್ಥೆಗಳ ಹೊರ ಗುತ್ತಿಗೆ ಕಾರ್ಮಿಕರ ಬಗ್ಗೆ ಯಾವುದೇ ಕ್ರಮವಹಿಸದೆ ಇರುವುದು ಮಲತಾಯಿ ಧೋರಣೆ ಮತ್ತು ನ್ಯಾಯಸಮ್ಮತವಲ್ಲ ಎಂದರು.
ಫೆ.20ರಂದು ಸರ್ಕಾರಕ್ಕೆ ಮುಷ್ಕರ ನೊಟೀಸ್ ನೀಡಿ ಪತ್ರ ತಲುಪಿದ 14 ದಿನದೊಳಗೆ ನಮ್ಮ ನ್ಯಾಯಬದ್ಧವಾದ ಹಕ್ಕೊತ್ತಾಯಗಳನ್ನು ಪರಿಗಣಿಸದೆ ಹೋದಲ್ಲಿ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗುವುದಾಗಿ ತಿಳಿಸಲಾಗಿತ್ತು. 8 ದಿನಗಳು ಈಗಾಗಲೆ ಕಳೆದಿದ್ದು, ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಸ್ಥಳೀಯ ಸಂಸ್ಥೆಗಳ ನೀರು ಸರಬರಾಜು ವಿಭಾಗದ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದೆ. ಹೊರಗುತ್ತಿಗೆ ಅಡಿಯಲ್ಲಿ ದುಡಿಯುತ್ತಿರುವ ಎಲ್ಲಾ ನೀರು ಸರಬರಾಜು ವಿಭಾಗದ ನೌಕರರ ಸೇವೆಗಳನ್ನು ವಿಶೇಷ ನೇಮಕಾತಿಯಡಿ ಖಾಯಂಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ದಿನದಲ್ಲಿ 8 ಗಂಟೆ ಕೆಲಸ, ಹೆಚ್ಚುವರಿ ಕೆಲಸಕ್ಕೆ ಕಾನೂನುಬದ್ಧ ವೇತನ, ಸಂಬಳಸಹಿತ ವಾರದ ರಜೆ, ಹಬ್ಬಗಳ ರಜೆ, ಗಳಿಕೆ ರಜೆ, ಅನಾರೋಗ್ಯ ರಜೆ, ಹತ್ತಾರು ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿ/ಮರಣಹೊಂದುವ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು/ಅವಲಂಬಿತರಿಗೆ ಉಪಧನ ನೀಡುವ ಸಂಬಂಧ ಸ್ಪಷ್ಟ ಆದೇಶವನ್ನು ಸರ್ಕಾರ ಹೊರಡಿಸಬೇಕು. ಪಿಎಫ್‌ಐ ಹಾಗೂ ಇಎಸ್‌ಐಗಳನ್ನು ಗುತ್ತಿಗೆದಾರರು ನೌಕರರಿಂದ ಕಟಾಯಿಸಿದ್ದು, ಸರಿಯಾಗಿ ಪಾವತಿಸದಿರುವ ಹಗರಣಗಳು ನಡೆದಿದ್ದು, ಇದನ್ನು ತಡೆಯಲು ಮೂಲ ಮಾಲೀಕರಾದ ಸ್ಥಳೀಯ ಸಂಸ್ಥೆಗಳೇ ನಿರ್ವಹಿಸಬೇಕು.
ಎಲ್ಲಾ ಹೊರಗುತ್ತಿಗೆ ನೀರು ಸರಬರಾಜು ವಿಭಾಗದ ಕಾರ್ಮಿಕರು ಅಲ್ಪವೇತನದಲ್ಲಿ ಬದುಕುತ್ತಿರುವ ಕಾರಣ ಎಲ್ಲರಿಗೂ ಸರ್ಕಾರದ ಗೃಹಭಾಗ್ಯ ಯೋಜನೆಯಡಿಯಲ್ಲಿ ಉಚಿತ ನಿವೇಶನ ನೀಡಬೇಕೆಂದು ಸಂಘ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಹೊರಗುತ್ತಿಗೆ ನೀರು ಸರಬರಾಜು ನೌಕರರ ಸಂಘದ ಗೌರವಾಧ್ಯಕ್ಷ ಮೋಹನ್‌ಕುಮಾರ್, ಅಧ್ಯಕ್ಷರಾದ ನಾಗರಾಜ್ ಹೆಚ್.ಎಸ್., ಪ್ರಧಾನ ಕಾರ್ಯದರ್ಶಿ ಕಿರಣ್‌ಕುಮಾರ್, ಉಪಾಧ್ಯಕ್ಷರಾದ ಕೆ.ರಘುರಾಮ್, ಜೆ.ವಿನಯ್, ಎಲ್.ರಘು, ಪರಮೇಶ್, ವಿನಾಯಕ್ ಮೊದಲಾದವರಿದ್ದರು.
ಗೃಹ, ಅಡಿಗೆ, ಕ್ಷೌರಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ವಿಸ್ತರಿಸಿ
ವಿದ್ಯಾನಿಧಿ ಯೋಜನೆಯನ್ನು ಗೃಹ, ಅಡಿಗೆ, ಕ್ಷೌರಿಕರ ಮತ್ತು ಇತರೆ ನೊಂದಾಯಿತ ಅಸಂಘಟಿತ ಕಾರ್ಮಿಕರ ಮಕ್ಕಳಿಗೆ ವಿಸ್ತರಿಸಬೇಕು ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಕೇಶವಮೂರ್ತಿ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಯಾವ ಸೌಲಭ್ಯವನ್ನೂ ನೀಡಿಲ್ಲ. ಸಾಮಾಜಿಕ ಭದ್ರತಾ ಮಂಡಳಿಯನ್ನು ರಚನೆ ಮಾಡಿಲ್ಲ. ಹೀಗೆ ರಚನೆ ಮಾಡಿದ್ದರೆ ಚಾಲಕರು ಮತ್ತು ಇತರ ಕಾರ್ಮಿಕರಿಗೆ ಸೌಲಭ್ಯಗಳು ಸಿಗುತ್ತಿದ್ದು, ವಿದ್ಯಾನಿಧಿ ಯೋಜನೆಯನ್ನು ನೇಕಾರರಿಗೆ ಮಾತ್ರ ನೀಡಲಾಗಿದೆ. ಆದರೆ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆ ತಲುಪುತ್ತಿಲ್ಲ ಎಂದು ಆರೋಪಿಸಿದರು.
ಈಗ ಅಸಂಘಟಿತ ಕಾರ್ಮಿಕ ವಲಯದಲ್ಲಿ ಕೇವಲ 11 ವಲಯಗಳು ಮಾತ್ರ ಇವೆ. ಇವುಗಳ ಜೊತೆಗೆ ಅಡಿಗೆ ಕಾರ್ಮಿಕರು, ಮಾಂಸದ ಅಂಗಡಿಗಳಲ್ಲಿ ಕೆಲಸ ಮಾಡುವವರು, ಕಲ್ಯಾಣ ಮಂಟಪಗಳಲ್ಲಿ ಕೆಲಸ ಮಾಡುವವರು, ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವವವರು, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವವರನ್ನು ಕೂಡ ಸೇರಿಸಬೇಕು ಎಂದು ಒತ್ತಾಯಿಸಿದ ಅವರು, ಚಾಲಕರು ಮತ್ತು ಇತರ ಕಾರ್ಮಿರಕ ಮಂಡಳಿಯನ್ನು ಸರ್ಕಾರ ರಚಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿರ ಮಂಡಳಿ ರಚಿಸುವುದರಿಂದ ಸಮಾರು 25 ಲಕ್ಷ ಕುಟುಂಬಗಳಿಗೆ ಮೂಲಭೂತ ಸೌಲಭ್ಯಗಳು ದೊರಕಿದಂತಾಗುತ್ತದೆ. ಆದರೆ ಸರ್ಕಾರ ಇದನ್ನು ಮಾಡಿಲ್ಲ. ಈ ಹಿಂದೆ ಚಾಲಕರು ಮತ್ತು ನಿರ್ವಾಹಕರಿಗೆ ಇದ್ದ ಅಪಘಾತ ವಿಮೆಯನ್ನು ಕ್ಲೀನರ್ ಮತ್ತು ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ವಿಸ್ತರಿಸಿದ್ದಾರೆ ಅಷ್ಟೆ. ಆದರೆ ಇದನ್ನೇ ಮಂಡಳಿಯನ್ನಾಗಿ ಮಾಡಿದರೆ ಇನ್ನೂ ಉತ್ತಮ ಸೌಲಭ್ಯ ಸಿಗುತ್ತಿತ್ತು. ಸರ್ಕಾರ ಕೂಡಲೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಕುಪೇಂದ್ರ ಆಯನೂರು, ಪದಾಧಿಕಾರಿಗಳಾದ ಕೆ. ಪೇಟ್ಕರ್, ಪ್ರದೀಪ ಹೊನ್ನಪ್ಪ, ಮೇಘಮೋಹನ ಜೆಟ್ಟಿ, ಚೇತನ್ ಲಕ್ಕಪ್ಪ, ಜಿ.ಕೆ. ಮಾಧವಮೂರ್ತಿ, ಸುರೇಖಾ ಪಾಲಾಕ್ಷಪ್ಪ ಇದ್ದರು.
ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆ: ಜೆಡಿಎಸ್ ಪ್ರತಿಭಟನೆ
ಕೇಂದ್ರ ಸರ್ಕಾರ ಅಡಿಗೆ ಅನಿಲ, ದೈನಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಹೆಚ್ಚಿಸುತ್ತಿರುವುದರಿಂದ ಮಧ್ಯಮ ವರ್ಗ ಮತ್ತು ಜನಸಾಮಾನ್ಯರ ಬದುಕು ಅತ್ಯಂತದುಸ್ತರವಾಗಿದೆ ಎಂದು ಆರೋಪಿಸಿ ಶಿವಮೊಗ್ಗ ಮಹಾನಗರ ಜಾತ್ಯತೀತ ಜನತಾದಳ ವತಿಯಿಂದ ಇಂದು ಜೆಡಿಎಸ್ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮುಂಭಾಗ ರಸ್ತೆಯಲ್ಲಿ ಸೌದೆ ಒಲೆಯಲ್ಲಿ ಅಡಿಕೆ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು.
ಪದೇಪದೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿರುವುದರಿಂದ ಬಡವರು, ಕೂಲಿ ಕಾರ್ಮಿಕರು ಮತ್ತು ಅಸಹಾಯಕ ಜನರ ಗೋಳು ನಿತ್ಯವೂ ಹೇಳತೀರದು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಆಡಳಿತ ಹದಗೆಟ್ಟಿದ್ದು ಶ್ರೀಸಾಮಾನ್ಯನ ಬದುಕಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಂದ ಶೇ.40ರಷ್ಟು ಕಮಿಷನ್ನಿನ ಅವಾಂತರದಿಂದಾಗಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಈಗಾಗಲೇ ಒಬ್ಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಇತ್ತೀಚೆಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಪುತ್ತ ಕಮಿಷನ್ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆದು ಕೋಟಿ ಕೋಟಿ ಹಣ ಸಿಕ್ಕಿದ್ದು, ಪ್ರಕರಣದ ಎ-೧ಆರೋಪಿಯಾದ ಶಾಸಕರನ್ನು ಈವರೆಗೂ ಬಂಧಿಸಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಲಂಚದ ಹಾವಳಿಯಿಂದಾಗಿ ಯಾವ ಕೆಲಸವೂ ಆಗುತ್ತಿಲ್ಲ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ ಎಂದು ಆರೋಪಿಸಿದರು.
ರಾಜ್ಯಪಾಲರು ಕೂಡಲೇ ಮಧ್ಯ ಪ್ರವೇಶಿಸಿ ಭ್ರಷ್ಟಾಚಾರದ ನಿಯಂತ್ರಣದ ಬಗ್ಗೆ ಮತ್ತು ಅಗತ್ಯ ಬೆಲೆ ಕೂಡಲೇ ಇಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡುವುದರ ಮೂಲಕ ಸಂಪೂರ್ಣ ಅಧೋಗತಿಗೆ ತಲುಪಿರುವ ಶ್ರೀಸಾಮಾನ್ಯನ ಬದುಕಿಗೆ ನೆರವಾಗುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ನಾಗರಾಜ್ ಕಂಕಾರಿ, ಸತ್ಯನಾರಾಯಣ ರಾವ್, ಪ್ರಮುಖರಾದ ಗೋವಿಂದಪ್ಪ, ಸಿದ್ದಪ್ಪ, ಎಂ. ರಾಜಣ್ಣ, ಬಿ.ಎಸ್ .ವಿನಯ್, ಹೆಚ್.ಆರ್. ತ್ಯಾಗರಾಜ್, ಡಾ.ಶಾಂತಾ ಸುರೇಂದ್ರ, ಎಸ್.ಕೆ. ಭಾಸ್ಕರ್, ಗೀತಾ ಸತೀಶ್, ಎಸ್.ಟಿ. ಪುಷ್ಪಾವತಿ, ಉಷಾ ನಾಯಕ್, ಹೆಚ್.ಎಂ. ಸಂಗಯ್ಯ ಇನ್ನಿತರರು ಇದ್ದರು.
ಭೂನಕ್ಷೆ ಪರಿಶೀಲನೆಗೆ ವಿಶೇಷ ತಂಡ ರಚಿಸಿ: ಕರವೇ ಆಗ್ರಹ
ಶಿವಮೊಗ್ಗ: ಶಿವಮೊಗ್ಗದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಇಲಾಖೆಯ ಸರ್ವೆ ನಕ್ಷೆಗಳನ್ನು ತನಿಖೆಗೊಳಪಡಿಸಲು ವಿಶೇಷ ತಂಡ ರಚಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ವತಿಯಿಂದ ಇಂದು ಬಸ್ ನಿಲ್ದಾಣದ ಬಳಿಯ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆ ಪ್ರತಿಭಟನಾ ಮೆರವಣಿಗೆ ನಡೆದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ವೆ ಅಧಿಕಾರಿಗಳು ಮೂಲ ನಕ್ಷೆಯನ್ನು ಪರಿಗಣಿಸದೆ ಭೂ ಸರ್ವೆ ಕಾಯಿದೆಯನ್ನು ಉಲ್ಲಂಘಿಸಿ ಸ್ವತಃ ಸಿದ್ಧಪಡಿಸಿದ ಓರಲ್ ನಕ್ಷೆಯನ್ನು ಅನುಮೋದಿಸುತ್ತಿರುವ ಡಿಡಿಎಲ್‌ಆರ್, ಎಡಿಎಲ್‌ಆರ್ ಹಾಗೂ ಸೂಪರ್‌ವೈಸರ್‌ಗಳನ್ನು ಅಮಾನತು ಗೊಳಿಸಬೇಕೆಂದು ಪ್ರತಿಭಟನಕಾರರು ಆಗ್ರಹಿಸಿದರು.
ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಸರ್ವೆ ಅಧಿಕಾರಿಗಳ ಅಧಿಕಾರ ದುರುಪಯೋಗಕ್ಕೆ ಸಾರ್ವಜನಿಕ ವಲಯ ಆತಂಕಗೊಳ್ಳುವಂತೆ ಮಾಡಿದೆ. ಅಲ್ಲದೆ ಕಳೆದ 10 ವರ್ಷಗಳಿಂದ ಸರ್ವೆ ಅಧಿಕಾರಿಗಳು ಖುದ್ದು ಸ್ಥಳಕ್ಕೆ ತೆರಳಿ ಭೂಮಾಪನಾ ನಿಯಮದಂತೆ ಸರ್ವೆ ಪರಿಶೀಲನೆ ನಡೆಸದೆ ಸದರೀ ವೇಳೆಯಲ್ಲಿ ಮೂಲ ಗ್ರಾಮ ನಕ್ಷೆಗಳ ಪ್ರಕಾರವನ್ನು ಅನುಸರಿಸದೆ ಓರಲ್ ನಕ್ಷೆಯನ್ನು ನಿಂತ ಜಾಗದಲ್ಲೆ ಸಿದ್ಧಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಆದ್ದರಿಂದ ಕಳೆದ ಹತ್ತು ವರ್ಷಗಳಿಂದ ನೀಡಲಾಗಿರುವ ಭೂನಕ್ಷೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ವಿಶೇಷ ತನಿಖಾ ತಂಡ ರಚನೆಗೆ ಕೂಡಲೇ ಆದೇಶಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಯುವಸೇನೆ ಜಿಲ್ಲಾಧ್ಯಕ್ಷ ಹೆಚ್.ಎಸ್. ಕಿರಣ್‌ಕುಮಾರ್ ಪ್ರಮುಖರಾದ ಎಸ್.ಪಿ. ಶಿವಕುಮಾರ್, ಡಿ.ಸಿ. ನಿರಂಜನ್, ಕೆ. ಸಂದೀಪ್, ರಾಮು, ಸಿ. ಸುರೇಶ್, ಅರುಣ್, ಮಲ್ಲೇಶ್, ಕಿರಣ್ ಇನ್ನಿತರರು ಇದ್ದರು.
ಹೊರಗುತ್ತಿಗೆ ನೌಕರರಿಗೆ ನೇರಪಾವತಿ ವ್ಯವಸ್ಥೆ ಜಾರಿಗೆ ಆಗ್ರಹ
ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರನ್ನು ನೇರಪಾವತಿಗೆ ಒಳಪಡಿಸಬೇಕು ಎಂದು ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌರರ ಸಂಘ ಆಗ್ರಹಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎಂ.ಬಿ. ನಾಗಣ್ಣ ಗೌಡ ಪೌರ ಕಾರ್ಮಿಕರ ನಡುವೆಯೇ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೇವಲ ಕಸ ಗುಡಿಸುವವರಿಗೆ ಮಾತ್ರ ಖಾಯಂ ಮತ್ತು ಇದರೆ ಸೌಲಭ್ಯಗಳನ್ನು ನೀಡಿದೆ ಇದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಅವರಂತೆಯೇ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಕಸ ಸಾಗಿಸುವ ವಾಹನ ಚಾಲಕರು, ಲೋಡರ್ಸ್, ಕ್ಲೀನರ್ಸ್. ಹೆಲ್ಪರ್ಸ್, ಯುಜಿಡಿ ಕಾರ್ಮಿಕರು, ನೀರು ಸರಬರಾಜು ಸಹಾಯಕರನ್ನೂ ಕೂಡ ಖಾಯಂ ಮಾಡಬೇಕು ಮತ್ತು ಪೌರ ಕಾರ್ಮಿಕರ ಮಾದರಿಯಲ್ಲಿಯೇ ನೇರ ಪಾವತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಪೌರ ಕಾರ್ಮಿಕರಲ್ಲಿಯೇ ತಾರತಮ್ಯ ಮಾಡಿ ಕಾರ್ಮಿಕರನ್ನು ಒಡೆದಾಳುವ ನೀತಿಗೆ ತಳ್ಳುತ್ತಿದೆ. ನೇರ ಪಾವತಿ ಮಾಡವುದರಿಂದ ಸರ್ಕಾರಕ್ಕೆ ಶೇ.18ರ ಜಿಎಸ್ಟಿ ಉಳಿತಾಯ ವಾಗುತ್ತದೆ. ಆದರೆ ರಾಜ್ಯ ಸರ್ಕಾರ ಗುತ್ತಿಗೆ ಏಜೆನ್ಸಿಗಳ ಲಾಬಿಗೆ ಬಲಿಯಾಗಿ ಹೊರಗುತ್ತಿಗೆ ನೌಕರರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ. ಮಾ.10ರೊಳಗೆ ಹೊರಗುತ್ತಿಗೆ ನೌಕರರಿಗೆ ನೇರಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಮಾ. 13ರಿಂದ ರಾಜ್ಯಾದ್ಯಂತ 330 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸವನ್ನು ಸ್ಥಗಿತಗೊಳಿಸುತ್ತೇವೆ. ಹಾಗೂ ಮುಖ್ಯಮಂತ್ರಿಗಳ ಮನೆ ಮುಂದೆ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಬಸವರಾಜ್, ಎಂ.ಎನ್ ಚಂದ್ರು, ಸುರೇಶ್, ಮನು ಇದ್ದರು.
ರಸ್ತೆ ಸಂಪರ್ಕಕ್ಕೆ ಗ್ರಾಮಸ್ಥರ ಆಗ್ರಹ
ಮನೆಕಟ್ಟಲು ಮತ್ತು ಓಡಾಡಲು ಸಾರ್ವಜನಿಕ ನಕಾಶೆಯಂತೆ ಇರುವ ರಸ್ತೆಯನ್ನು ತೆರವುಗೊಳಿಸಿಕೊಡಬೇಕೆಂದು ಒತ್ತಾಯಿಸಿ ಹೊಸನಗರ ತಾಲ್ಲೂಕು ಕೆರೆಹಳ್ಳಿ ಹೋಬಳಿ ಕುಸುಕುಂಡಿ ಗ್ರಾಮದ ಸಂತ್ರಸ್ತ ಗ್ರಾಮಸ್ಥರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕುಸುಕುಂಡಿ ಗ್ರಾಮದ ಸರ್ವೆ ನಂ.10ರಲ್ಲಿ 70 ವರ್ಷಗಳಿಗಿಂತ ಹಿಂದಿನಿಂದಲೂ ಸ್ವಂತ ಜಮೀನಿನಲ್ಲಿ ಬದುಕನ್ನು ಕಟ್ಟಿಕೊಂಡು 3 ಕುಟುಂಬಗಳು ವಾಸಿಸುತ್ತಿದ್ದು, ಸ್ವಂತ ಮನೆಯಿಲ್ಲದೆ ನಿರಾಶ್ರಿತರಾಗಿದ್ದೇವೆ. ಗ್ರಾಮ ಪಂಚಾಯಿತಿನಿಂದ ಮನೆಕಟ್ಟಲು 5ಲಕ್ಷ ರೂ.ಗಳು ಮಂಜೂರಾಗಿರುತ್ತದೆ. ಆದರೆ ಮನೆಕಟ್ಟಲು ಸಾಮಾನು, ಸರಂಜಾನುಗಳನ್ನು ತರಲು ರಸ್ತೆಯೇ ಇಲ್ಲವಾಗಿದೆ. ಸಾರ್ವಜನಿಕ ನಕಾಶೆ ಕಂಡ ರಸ್ತೆಯು ಕುಸುಗುಂಡಿ ಗ್ರಾಮದ ಸರ್ವೆ ನಂ.೧೦ರಲ್ಲಿ ಹಾದುಹೋಗಿರುತ್ತದೆ. ಆದರೆ ಈ ಸರ್ವೆ ನಂ.ನಲ್ಲಿ ಹೊನಗಲಿ ಮಂಜಪ್ಪನವರ ಜಮೀನಿನ ಪಕ್ಕ ಸರ್ಕಾರಿ ಜಾಗದಲ್ಲಿ ಕೋಡೂರು ಗ್ರಾ.ಪಂ. ವ್ಯಾಪ್ತಿಯಿಂದ ಎಂಜಿಎನ್‌ಆರ್‌ಜಿಎ ಅಡಿಯಲ್ಲಿ ಸಾರ್ವಜನಿಕ ರಸ್ತೆ ಸಂಪರ್ಕಕ್ಕಾಗಿ ರೂ.೮ ಲಕ್ಷ ಅಂದಾಜಿನ ಮೋರಿಯನ್ನು ಕಟ್ಟಿರುತ್ತಾರೆ. ಆದರೆ ಕೆಲವು ತಿಂಗಳಿಂದ ಕೆಲವು ದುಷ್ಕರ್ಮಿಗಳು ಈ ರಸ್ತೆಯನ್ನು ಒತ್ತುವರಿ ಮಾಡಿ ಮನೆಕಟ್ಟಲು ತೊಂದರೆಕೊಡುತ್ತಿದ್ದು, ಸಾಮಗ್ರಿಗಳನ್ನು ಸಾಗಿಸಲು ಬಿಡುತ್ತಿಲ್ಲ. ಕೊಲೆಬೆದರಿಕೆಯನ್ನು ಹಾಕಿರುತ್ತಾರೆ.
ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಸಣ್ಣ ಕಾಲುದಾರಿಯಲ್ಲೇ 3 ಕಿ.ಮೀ. ನಡೆದುಕೊಂಡೆ ಮುಖ್ಯ ರಸ್ತೆಗೆ ಹೋಗಬೇಕಾಗಿದೆ. ಅನಾರೋಗ್ಯ ಸಂಭವಿಸಿದರೆ ಶುಶ್ರೂಷೆ ಮಾಡಲು ಅಥವಾ ರೋಗಿಯನ್ನು ಕರೆದುಕೊಂಡು ಹೋಗಲು ವಾಹನ ಬರಲು ರಸ್ತೆಯೇ ಇಲ್ಲವಾಗಿದೆ. ಸಂಪರ್ಕವಿಲ್ಲದ ಕುಗ್ರಾಮದಂತಾಗಿದ್ದು, ೩ ಕುಟುಂಬದ ಅವಸ್ಥೆ ಶೋಚನೀಯವಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ತಹಶೀಲ್ದಾರ್ ಹಾಗೂ ಪಂಚಾಯಿತಿಗೆ ಹಲವು ಬಾರಿ ದೂರು ನೀಡಲಾಗಿದೆ. ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಆದರೆ ಪಕ್ಕದ ಜಮೀನಿನ ಮಾಲೀಕರ ಮರ್ಜಿಗೆ ಒಳಗಾಗಿದ್ದು, ರಾಜಕೀಯ ಮುಖಂಡರ ಕೈವಾಡ ಕೂಡವಿದ್ದು, ಬಡ ಸಂತ್ರಸ್ತ ಕುಟುಂಬಗಳಿಗೆ ರಸ್ತೆಯಿಲ್ಲದೆ ಪರದಾಡುವಂತಾಗಿದ್ದು, ಕೂಡಲೆ ಜಿಲ್ಲಾಧಿಕಾರಿಗಳು ನಕಾಶೆಯಂತೆ ಅಕ್ರಮಿತ ರಸ್ತೆಯನ್ನು ತೆರವುಗೊಳಿಸಿ 3 ಕುಟುಂಬಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಸಂಪರ್ಕ ಮಾಡಿಕೊಡಬೇಕೆಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರೇವತಿ, ಸಾವಿತ್ರಿ, ಮಂಜುನಾಥ್‌ಗೌಡ, ಶಿಲ್ಪ, ಕುಚೇಲ, ಸುಮುಖ, ವಾಸುಕಿ, ಜಯಲಕ್ಷ್ಮಿ ಮೊದಲಾದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post