ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರ ರಸ್ತೆಯ ಆಯನೂರು ಗೇಟ್ ಬಳಿಯ ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆಯು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಹಯೋಗದಲ್ಲಿ ಜೂ.9ರಂದು ಬೆಳಿಗ್ಗೆ 9:30ರಿಂದ 12:30ರ ವರೆಗೆ ಆಸ್ಪತ್ರೆಯಲ್ಲಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವೈದ್ಯ ಡಾ. ಪ್ರೀತಂ ಬಿ. ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಲೆಟ್ಸ್ ಡಯಾಬಿಟಿಕ್ ಆಸ್ಪತ್ರೆ ಒಂದೇ ಸೂರಿನಡಿ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಈ ಶಿಬಿರದಲ್ಲಿ ಕಣ್ಣಿನ ಉಚಿತ ತಪಾಸಣೆ ಹಾಗೂ ಕಾಲಿನ ನರಗಳ ಪರೀಕ್ಷೆ ಮಾಡಲಾಗುವುದು. ಜೊತೆಗೆ ಕೇವಲ 300ರೂ.ನಲ್ಲಿ ವಾರ್ಷಿಕ ಹೆಲ್ತ್ ಕಾರ್ಡ್ ವಿತರಿಸಲಾಗುವುದು. ಹಾಗೂ ಡಯಾಬಿಟಿಸ್ ರೋಗಿಗಳಿಗೆ ವಿಶೇಷವಾಗಿ ತಯಾರಿಸಲಾಗಿರುವ ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದರು.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ. ರಾಹುಲ್ ಎನ್.ಎಸ್. ಅವರು ಸರ್ಜರಿ ತಜ್ಞರು. ಅವರು ನಮ್ಮ ಆಸ್ಪತ್ರೆಯಲ್ಲಿ ಲಭ್ಯವಿರುತ್ತಾರೆ. ವೆರಿಕೋಸ್, ಕೈಕಾಲು ನೋವು, ಮಧುಮೇಹದಿಂದ ಕಾಲಿನಲ್ಲಿ ವಾಸಿಯಾಗದ ಗಾಯಗಳು ಗ್ಯಾಂಗ್ರಿನ್ ಸಮಸ್ಯೆ, ಕಾಲಿನ ನರಗಳ ಪರೀಕ್ಷೆಗಳನ್ನು ಮಾಡುತ್ತಾರೆ ಎಂದರು.
ತಿಂಗಳ ಪ್ರತಿ 2ನೇ ಶುಕ್ರವಾರ ಸಮಗ್ರ ಡಯಾಬಿಟಿಸ್ ತಪಾಸಣಾ ಶಿಬಿರವಿರುತ್ತದೆ.ಮಧುಮೇಹಿಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. ಪ್ರಮುಖವಾಗಿ ಮಧುಮೇಹದಿಂದ ಕಣ್ಣಿನ ಸಮಸ್ಯೆ ಹಾಗೂ ಪಾದಗಳ ಸಂರಕ್ಷಣೆ ಇಲ್ಲದೆ ಸಮಸ್ಯೆ ಉಂಟಾಗುತ್ತದೆ. ಇದು ಗ್ಯಾಂಗ್ರಿನ್‍ಗೂ ಕಾರಣವಾಗಬಹುದು. ಕಣ್ಣುಗಳು ಕುರುಡಾಗಬಹುದು. ತಪಾಸಣೆಯಿಂದ ಇದನ್ನು ತಪ್ಪಿಸಲು ಸಾಧ್ಯ. ಹಾಗಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದೆ ಎಂದರು.

ಹೆಲ್ತ್ ಕಾರ್ಡ್ ಮಾಡಿಸುವುದರಿಂದ ವರ್ಷದಲ್ಲಿ ಎಷ್ಟು ಬಾರಿಯಾದರೂ ತಪಾಸಣೆಗೆ ಬರಬಹುದು. ತಪಾಸಣೆಯಲ್ಲಿ ಶೇ.50ರಷ್ಟು ರಿಯಾಯಿತಿ ಇರುತ್ತದೆ. ಮತ್ತು ಒಳರೋಗಿಗಳಿಗೂ ಶೇ.50ರಷ್ಟು ರಿಯಾಯಿತಿ ಇರುತ್ತದೆ ವರ್ಷಕ್ಕೆ ಕೇವಲ 300ರೂ. ಆಗಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಆರ್.ಬಿ. ಪಲ್ಲವಿ, ಡಾ. ಚೇತನ್, ಕುಮಾರ್, ವಿನಯ್ ಇದ್ದರು.



















