ಕಲ್ಪ ಮೀಡಿಯಾ ಹೌಸ್ | ಮೈಸೂರು |
ವಿದ್ಯೆ ಮತ್ತು ಗುರು ಪರಂಪರೆಗೆ ಗೌರವಿಸುವವರಿಗೆ ಮಾತ್ರ ಕಲೆ ಸಿದ್ಧಿಸುತ್ತದೆ ಎಂದು ಹಿರಿಯ ಮೃದಂಗ ವಿದ್ವಾಂಸ ಸಿ. ಚೆಲುವರಾಜು ಹೇಳಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಪಿಜಿಎಲ್ ಸಂಸ್ಮರಣಾ ವೇದಿಕೆ ಆಯೋಜಿಸಿದ್ದ 17ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ವಾರ್ಷಿಕ ಪ್ರಶಸ್ತಿ `ನಾದಲಯ ವಿಶಾರದ’ ಸ್ವೀಕರಿಸಿ ಮಾತನಾಡಿದರು.
ಭಜನೆ ಸಂಪ್ರದಾಯ ಮತ್ತು ಹರಿಕಥೆಗಳಿಗೆ ಮೃದಂಗ ನುಡಿಸುತ್ತಲೇ ಪಕ್ಕವಾದ್ಯ ಕಲಾವಿದನಾದೆ. ಜವನದ ಕಷ್ಟ ನಷ್ಟಗಳನ್ನು ಎದುರಿಸಿ, ಗುರುಗಳ ಅನುಗ್ರಹದಿಂದ ಸಾಧನೆ ಮಾಡಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳು ನನಗೆ ಗೌರವಿಸಿವೆ ಎಂದರೆ ಅದಕ್ಕೆ ಗುರು ಅನುಗ್ರಹವೇ ಕಾರಣ ಎಂದು ಅವರು ಹೇಳಿದರು.
Also read: ಈ ಸ್ಟೋರ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ಕ್ರಮಕ್ಕೆ ಆಗ್ರಹಿಸಿ ಜಿಲ್ಲಾರಕ್ಷಣಾಧಿಕಾರಿಗಳಿಗೆ ಮನವಿ
ಕಲಾರಂಗದ ವಿದ್ಯಾರ್ಥಿಗಳಿಗೆ ಸೌಜನ್ಯ ಮತ್ತು ಸಂಯಮ ಇರಬೇಕು. ವಿದ್ಯೆ ಕಲಿಸುವ ಗುರುವಿಗೆ ಎಂದಿಗೂ ಬದ್ಧರಾಗಿರಬೇಕು ಎಂದು ಅವರು ಕಿವಿಮಾತು ಹೇಳಿದರು. ಪ್ರಖ್ಯಾತ ವಿದ್ವಾಂಸರಾಗಿದ್ದ ಪಿ.ಜಿ. ಲಕ್ಷ್ಮೀನಾರಾಯಣ ಅವರ ಹೆಸರಿನಲ್ಲಿ ನನಗೆ ಇಂದು ಗೌರವ, ಸನ್ಮಾನ ನೀಡಿರುವುದು ಜೀವನದ ಸುಕೃತ ಎಂದವರು ಭಾವುಕರಾಗಿ ನುಡಿದರು.
ಹಿರಿಯ ಪಿಟೀಲು ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ ಮಾತನಾಡಿ, ಕಿರಿಯ ಕಲಾವಿದರಿಗೆ ಬೆನ್ನುತಟ್ಟಿ ಬೆಳೆಸುವ ಗುಣ ಹಿರಿಯ ವಿದ್ವಾಂಸರಿಗೆ ಭೂಷಣ. ಇದು ಪಿ.ಜಿ. ಲಕ್ಷ್ಮೀನಾರಾಯಣ ಮತ್ತು ಚೆಲುವರಾಜು ಅವರಲ್ಲಿ ಢಾಳಾಗಿದೆ. ಹಾಗಾಗಿ ಪಿ.ಜಿ. ಲಕ್ಷ್ಮೀನಾರಾಯಣರ ಹೆಸರಿನ ಪ್ರಶಸ್ತಿಗೆ ಚೆಲುವರಾಜು ಅರ್ಹ ವಿದ್ವಾಂಸರಾಗಿದ್ದಾರೆಂದರು. ನಾದಬ್ರಹ್ಮ ಸಂಗೀತ ಸಭಾ ಗೌರವ ಕಾರ್ಯದರ್ಶಿ ಕೆ.ಎಸ್.ಎನ್. ಪ್ರಸಾದ್, ಸಂಸ್ಮರಣಾ ವೇದಿಕೆ ಮುಖ್ಯಸ್ಥ ಮತ್ತು ಮೃದಂಗ ವಿದ್ವಾಂಸರಾದ ಪ್ರೊ. ಜಿ.ಎಸ್. ರಾಮಾನುಜನ್ ಉಪಸ್ಥಿತರಿದ್ದರು.
ನಂತರ ವಿದ್ವಾನ್ ಸಂಪಗೋಡು ವಿಘ್ನರಾಜ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಿತು. ಪಕ್ಕವಾದ್ಯದಲ್ಲಿ ವಿದುಷಿ ಸಿಂಧೂ ಸುಚೇತನ (ವಯೋಲಿನ್), ವಿದ್ವಾನ್ ಚೆಲುವರಾಜು (ಮೃದಂಗ) ಮತ್ತು ವಿದ್ವಾನ್ ಶರತ್ ಕೌಶಿಕ್ (ಘಟ) ಸಹಕಾರ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post