ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸಂಗೀತ ಸಮಾರಾಧನೆಗೆ ಹೆಸರಾದ ಉಡುಪ ಪ್ರತಿಷ್ಠಾನ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿರುವ ಉಡುಪ ಸಂಗೀತೋತ್ಸವ 5ನೇ ಆವೃತ್ತಿಗೆ ಪ್ರತಿಷ್ಠಿತ ಗ್ರಾೃಮಿ ಅವಾರ್ಡ್ ಪುರಸ್ಕೃತ ಜಾಗತಿಕ ತಬಲಾ ಮಾಂತ್ರಿಕ ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾ ದಿಗ್ಗಜರು ತಮ್ಮ ಅದ್ಭುತ ಪ್ರೌಢಿಮೆಯನ್ನು ಒರೆಗೆ ಹಚ್ಚಲು ಮತ್ತು ಕಲಾ ರಸಿಕರಿಗೆ ರಸದೌತಣ ನೀಡಲು ಉಡುಪ ಪ್ರತಿಷ್ಠಾನ ಬಹುದೊಡ್ಡ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಈ ನಿಟ್ಟಿನಲ್ಲಿ ಖ್ಯಾತ ಘಟಂ ವಿದ್ವಾಂಸ ಗಿರಿಧರ ಉಡುಪ ಅವರ ಸೇವೆ ಬಹಳ ದೊಡ್ಡದು ಎಂದು ಉಸ್ತಾದ್ ಝಾಕೀರ್ ಹುಸೇನ್ ಶ್ಲಾಘಿಸಿದರು.
ಉಡುಪ ಉತ್ಸವ ಎಂಬುದು ಅಂತಾರಾಷ್ಟ್ರೀಯ ಮಟ್ಟದ ಉತ್ಸವ ಆಗಬೇಕು. ಶ್ರೋತೃವರ್ಗದಲ್ಲಿ ಕರ್ನಾಟಕ- ಹಿಂದುಸ್ತಾನಿ ಸಂಗೀತ ಮತ್ತು ವಾದ್ಯ ತರಂಗದ ವಿನೂತನ ಪ್ರಯೋಗಗಳು ಮನೆ ಮಾಡಬೇಕು. ಸಂಗೀತದಿಂದ ವಿಶ್ವ ಸಾಮರಸ್ಯ ಸಾಧ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.
Also read: ಸೊರಬ | ಸಾರೆಕೊಪ್ಪದ ಶತಾಯುಷಿ ಗೆಂಡ್ಲದ ಗಿಡ್ಡಜ್ಜ ನಿಧನ
ಖ್ಯಾತ ಮೃದಂಗ ವಿದ್ವಾಂಸ, ಪದ್ಮ ವಿಭೂಷಣಉಮಯಾಳ್ಪರಂ ಕೆ. ಶಿವರಾಮನ್, ಘಟಂ ವಾದಕಿ ಸುಕನ್ಯಾ ರಾಮಗೋಪಾಲ್, ವೀಣಾ ವಿದುಷಿ ಜಯಂತಿ ಕುಮರೇಶ್, ಪಿಟೀಲು ವಿದ್ವಾಂಸ ಕುಮರೇಶ್, ಸಿತಾರ್ ವಾದಕ, ಪಂಡಿತ್ ನೀಲಾದ್ರಿ ಕುಮಾರ್ ಮತ್ತು ಉತ್ಸವ ಆಯೋಜಕ ವಿದ್ವಾನ್ ಗಿರಿಧರ ಉಡುಪ ಇದ್ದರು.
ಮನ ಸೆಳೆದ ಕಛೇರಿ:
ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್ ತಬಲಾ ಮತ್ತು ಪಂಡಿತ್ ನೀಲಾದ್ರಿ ಕುಮಾರ್ ಸಿತಾರ್ ವಾದನ ನೆರೆದಿದ್ದ ಪ್ರೇಕ್ಷಕರ ಮನ ಸೆಳೆಯಿತು. ಹಲವು ರಾಗಗಳನ್ನು ನುಡಿಸಿದ ಇಬ್ಬರು ದಿಗ್ಗಜರ ಜುಗಲ್ ಬಂದಿಗೆ ಶ್ರೋತೃವರ್ಗ ತಲೆದೂಗಿತು. 3 ತಾಸುಗಳ ಕಛೇರಿಯಲ್ಲಿ ಉಪಸ್ಥಿತರಿದ್ದ ಸಂಗೀತ ಕಲಾ ರಸಿಕರು ಮಂತ್ರಮುಗ್ಧರಾದರು.
ಬೆಂಗಳೂರಿನ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಉಡುಪ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಉಡುಪ ಸಂಗೀತೋತ್ಸವ 5ನೇ ಆವೃತ್ತಿಗೆ ಚಾಲನೆ ನೀಡಲಾಯಿತು. ಪ್ರತಿಷ್ಠಿತ ಗ್ರಾೃಮಿ ಅವಾರ್ಡ್ ಪುರಸ್ಕೃತ ಜಾಗತಿಕ ತಬಲಾ ಮಾಂತ್ರಿಕ ಪಂಡಿತ್ ಉಸ್ತಾದ್ ಝಾಕೀರ್ ಹುಸೇನ್, ಪದ್ಮ ವಿಭೂಷಣ ಉಮಯಾಳ್ಪರಂ ಕೆ. ಶಿವರಾಮನ್, ಘಟಂ ವಾದಕಿ ಸುಕನ್ಯಾ ರಾಮಗೋಪಾಲ್, ವೀಣಾ ವಿದುಷಿ ಜಯಂತಿ ಕುಮರೇಶ್, ಪಿಟೀಲು ವಿದ್ವಾಂಸ ಕುಮರೇಶ್, ಪಂಡಿತ್ ನೀಲಾದ್ರಿ ಕುಮಾರ್ ಮತ್ತು ವಿದ್ವಾನ್ ಗಿರಿಧರ ಉಡುಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post