ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಹೋಳಿ ಆಚರಿಸುವ ಪದ್ಧತಿ
ಹೋಳಿ ಹಬ್ಬವು ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಆಚರಿಸಲ್ಪಡುವ ಬಣ್ಣಗಳ ಆನಂದೋತ್ಸವ! ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ 5-6 ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.
ಹೋಳಿ ಅಥವಾ ಹೋಲಿಕೆ ಎಂದರೆ ಒಂದು ದೇವಿಯೇ. ಅರಿಷಡ್ವರ್ಗಗಳ ಮೇಲೆ ಜಯಗಳಿಸುವ ಕ್ಷಮತೆಯು ಈ ಹೋಲಿಕೆಯಲ್ಲಿರುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳ ನಾಶವಾಗಲೆಂದು ಹೋಲಿಕಾ ದೇವಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತದೆ.

ಹೋಳಿ ಎಂದರೆ ಅಗ್ನಿ ದೇವತೆಯ ಉಪಾಸನೆಯ (ಪೂಜೆಯ) ಒಂದು ಅಂಶವಾಗಿದೆ. ಹೋಳಿಯ ದಿನದಂದು ಅಗ್ನಿ ದೇವತೆಯ ತತ್ತ್ವವು ಶೇ. ೨ ರಷ್ಟು ಕಾರ್ಯನಿರತವಾಗಿರುತ್ತದೆ. ಅಗ್ನಿ ದೇವತೆಯ ಉಪಾಸನೆಯಿಂದ ಮನುಷ್ಯನಲ್ಲಿ ತೇಜ ತತ್ತ್ವವು ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ರಜ-ತಮ ಇವುಗಳ ಪ್ರಮಾಣವು ಕಡಿಮೆಯಾಗುತ್ತದೆ. ಆದುದರಿಂದ ಹೋಳಿಯ ದಿನದಂದು ಅಗ್ನಿ ದೇವತೆಗೆ ಪೂಜೆಯನ್ನು ಸಲ್ಲಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಹೋಳಿ ಹಬ್ಬ. ಹೋಳಿ ಹೇಗೆ ಏಕೆ ಆಚರಿಸುತ್ತೇವೆ ಹೋಳಿ ಹಬ್ಬದ ಇತಿಹಾಸ ಹಿಂದಿನ ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ರಾಕ್ಷಸಿಯು ಒಂದೂರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು; ಆದರೆ ಅವಳು ಹೋಗಲಿಲ್ಲ. ಆಗ ನಾರದಮುನಿಗಳು ಸಾಮ್ರಾಟ್ ಯುಧಿಷ್ಠಿರನಿಗೆ ಒಂದು ಉಪಾಯವನ್ನು ಹೇಳಿದರು, ಅದೇ ಹೋಲಿಕಾ ಮಹೋತ್ಸವ. ಜನರು ಹೋಳಿ ಹೊತ್ತಿಸಿ, ವಾದ್ಯಗಳನ್ನು ಬಾರಿಸುತ್ತಾ ಆ ರಾಕ್ಷಸಿಯನ್ನು ಊರಿನಿಂದ ಓಡಿಹೋಗುವಂತೆ ಮಾಡಿದರು. (ಸ್ಮೃತಿಕೌಸ್ತುಭ- ಭವಿಷ್ಯೋತ್ತರ ಪುರಾಣ).
ಉತ್ತರ ಭಾರತದಲ್ಲಿ ಹೋಳಿಯ ಮೊದಲ ಮೂರು ದಿನ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಮತ್ತು ಅವನ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಗೆ ಪೂತನಾ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ.

ಹೋಳಿ ಹಬ್ಬವನ್ನು ಆಚರಿಸುವ ಪದ್ಧತಿ
ಸ್ಥಾನ ಮತ್ತು ಸಮಯ ದೇವಸ್ಥಾನದ ಮುಂದೆ ಅಥವಾ ಅನುಕೂಲತೆ ಇರುವಲ್ಲಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸಬೇಕು. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.
ಹೋಳಿಯ ರಚನೆ
1. ಹೋಳಿಯನ್ನು ಆಚರಿಸುವ ಸ್ಥಳವನ್ನು ಸೂರ್ಯಾಸ್ತವಾಗುವ ಮೊದಲು ಗುಡಿಸಿ ಸಾರಿಸಿಕೊಳ್ಳಬೇಕು.
2. ಅಲ್ಲಿ ಸೆಗಣಿಯ ನೀರುವ ಚಿಮುಕಿಸಬೇಕು.
3. ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡ, ಅಡಿಕೆ ಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಯಾವುದು ಸುಲಭವಾಗಿ ಸಿಗುತ್ತದೆಯೋ ಅದನ್ನು ಉಪಯೋಗಿಸಬಹುದು.
4. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ರಚಿಸುತ್ತಾರೆ. ಕಟ್ಟಿಗೆಗಳ ಎತ್ತರ ಸಾಧಾರಣ ೪-೬ ಅಡಿಯಿರಬೇಕು.

1. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ ಹೋಳಿಯ ಮುಂದೆ ಮಣೆಯ ಮೇಲೆ ಕುಳಿತುಕೊಳ್ಳಬೇಕು.
2. ಆಚಮನ ಮಾಡಿ ದೇಶಕಾಲದ ಕಥನ ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಪೂಜೆಯ ಸಂಕಲ್ಪ ಮಾಡಬೇಕು. (ದೇಶಕಾಲಕ್ಕಾಗಿ ಪಂಚಾಂಗವನ್ನು ನೋಡಿ)
3. ಗಂಧ-ಪುಷ್ಪ ಅರ್ಪಿಸಿ ಕಲಶ ಹಾಗೂ ಘಂಟೆಯ ಪೂಜೆ ಮಾಡಬೇಕು.
4. ತುಲಸಿ ದಳದಿಂದ ಪೂಜೆಯ ಸಾಹಿತ್ಯದ ಮೇಲೆ ನೀರು ಪ್ರೋಕ್ಷಣೆ ಮಾಡಬೇಕು.
5. ಕರ್ಪೂರ ಬಳಸಿ ‘ಹೋಲಿಕಾಯೈ ನಮಃ|’ ಎಂದು ಹೇಳಿ ಹೋಳಿಯನ್ನು ಹೊತ್ತಿಸಬೇಕು.
6. ಹೋಳಿಗೆ ಗಂಧ, ಅರಿಸಿನ, ಕುಂಕುಮವನ್ನು ಅರ್ಪಿಸಿ ಪೂಜೆಯನ್ನು ಆರಂಭಿಸಬೇಕು. ಹೂವುಗಳನ್ನು ಅರ್ಪಿಸಿ, ಊದುಬತ್ತಿ ಹಾಗೂ ದೇಪವನ್ನು ತೋರಿಸಬೇಕು.
7. ಹೋಳಿಯಲ್ಲಿ ಹೋಳಿಗೆಯ ನೈವೇದ್ಯವನ್ನು ಅರ್ಪಿಸಬೇಕು.
8. ಹೋಳಿಯ ಮೇಲೆ ಹಾಲು-ತುಪ್ಪದ ಮಿಶ್ರಣವನ್ನು ಪ್ರೋಕ್ಷಣೆ ಮಾಡಬೇಕು.
9. ಹೋಳಿ ಹೊತ್ತಿದ ನಂತರ ಅದರ ಸುತ್ತ ೩ ಬಾರಿ ಪ್ರದಕ್ಷಿಣೆ ಹಾಕಬೇಕು.
10. ಪ್ರದಕ್ಷಿಣೆ ಹಾಕಿದ ನಂತರ ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು.
11. ಎಲ್ಲರೂ ಸೇರಿ ಅಗ್ನಿಯ ಭಯದಿಂದ ರಕ್ಷಣೆಗಾಗಿ ಪ್ರಾರ್ಥನೆ ಸಲ್ಲಿಸಿ. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಸಿಹಿಕಂಚಿ (ಚಕೋತ) ಮುಂತಾದ ಹಣ್ಣುಗಳನ್ನು ಹಂಚಬೇಕು. ಆ ರಾತ್ರಿಯನ್ನು ನೃತ್ಯಗಾಯನ ಗಳಲ್ಲಿ ಕಳೆಯಬೇಕು.
12. ಮರುದಿನ ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು.
ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ, ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ.
ಸಂಗ್ರಹ : ಶ್ರೀ. ವಿನೋದ ಕಾಮತ್, ರಾಜ್ಯ ವಕ್ತಾರರು ಸನಾತನ ಸಂಸ್ಥೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post